ಉಪ್ಪಿನಂಗಡಿ: ದೇವಾಲಯಗಳ ಅಭಿವೃದ್ಧಿಯು ರಾಜಕೀಯ ರಹಿತವಾಗಿ ನಡೆಯಬೇಕು. ಸರಕಾರ, ವ್ಯವಸ್ಥಾಪನಾ ಸಮಿತಿಗಳು ಬದಲಾದಾಗ ಅವರವರ ಇಚ್ಚೆಗೆ ತಕ್ಕಂತೆ ದೇವಾಲಯದ ರೂಪು ರೇಷೆಗಳು ಬದಲಾಗಬಾರದು. ಆದ್ದರಿಂದ ಭವಿಷ್ಯತ್ತಿನ ಚಿಂತನೆಯನ್ನಿಟ್ಟುಕೊಂಡು ದೇವಾಲಯದ ಅಭಿವೃದ್ಧಿ ಕಾರ್ಯಗಳಾಗಬೇಕು. ಅದಕ್ಕಾಗಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ದೇವಾಲಯದ ಅಭಿವೃದ್ಧಿಗೆ ಮಾಸ್ಟರ್ ಫ್ಲಾನ್ ಸಿದ್ಧಪಡಿಸಿಕೊಳ್ಳಬೇಕೆಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಮಖೆ ಜಾತ್ರೆಯ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ಜ.14ರಂದು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನೀರಿನಲ್ಲಿ ಮುಳುಗಿರುವ ಇಲ್ಲಿನ ಉದ್ಭವ ಲಿಂಗಕ್ಕೆ ತೆರಳಿ ಪೂಜೆ ಮಾಡುವಂತೆ ಕೂಡಲ ಸಂಗಮದ ರೀತಿಯಲ್ಲಿ ಯೋಜನೆಗೆ ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂದಿನ ಬಜೆಟ್ನಲ್ಲಿ ಇದಕ್ಕೆ ಅನುಮೋದನೆ ಸಿಗುವ ಬಗ್ಗೆ ಭರವಸೆ ಇದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಾಗ ಮಾತ್ರ ದೇವಾಲಯವೊಂದರ ಅಭಿವೃದ್ಧಿ ಸಾಧ್ಯ. ಭಕ್ತಾದಿಗಳು ಬರುವಾಗ ಅವರಿಗೆ ಬೇಕಾದ ವ್ಯವಸ್ಥೆಗಳನ್ನು ಕಲ್ಪಿಸಬೇಕು. ಇಲ್ಲಿ ಪಿಂಡ ಪ್ರಧಾನಕ್ಕೆ ಹೆಚ್ಚಿನ ಪ್ರಾಧಾನ್ಯತೆ ಇದ್ದು, ಅದಕ್ಕಾಗಿ ಈಗಾಗಲೇ ಸಿದ್ಧಪಡಿಸಿರುವ ಯೋಜನೆಯಂತೆ ನದಿ ದಡದಲ್ಲಿ ಕಟ್ಟಡ, ವಸತಿ, ಪ್ರತ್ಯೇಕ ಸಭಾಂಗಣ, ಅಡುಗೆ ಕೋಣೆ ಮುಂತಾದ ಕಾಮಗಾರಿಗಳಿಗೆ ಶೀಘ್ರವೇ ಶಿಲಾನ್ಯಾಸ ನೆರವೇರಿಸಿ, ಕಾಮಗಾರಿ ಆರಂಭಿಸಬೇಕು. ರಾಜ್ಯದಲ್ಲಿ ಪ್ರತಿಯೊಂದು ಸರಕಾರಗಳು ಬದಲಾದಾಗ ಆ ಬಳಿಕ ಬರುವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗಳವರು ಆ ಸರಕಾರಕ್ಕೆ ಒಲವುಳ್ಳವರಾಗಿರುತ್ತಾರೆ. ಆಗ ಅವರವರ ಅವಧಿಯಲ್ಲಿ ಅವರಿಗೆ ಇಷ್ಟ ಬಂದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಆದರೆ ಕಾಮಗಾರಿಯೊಂದು ನಡೆದಾಗ ದೂರದೃಷ್ಟಿಯ ಯೋಚನೆಗಳು ಅಗತ್ಯ. ಇಲ್ಲದಿದ್ದಲ್ಲಿ ಮುಂದಕ್ಕೆ ಆ ಕಾಮಗಾರಿಗಳೇ ದೇವಾಲಯದ ಅಭಿವೃದ್ಧಿಗೆ ತೊಡಕುಂಟಾಗುತ್ತವೆ. ದಿನೇ ದಿನೇ ಇಲ್ಲಿ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ಆದ್ದರಿಂದ ಭವಿಷ್ಯತ್ತಿನ ಆಲೋಚನೆಗಳನ್ನಿಟ್ಟುಕೊಂಡು ದೇವಾಲಯದ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಫ್ಲಾನ್ವೊಂದನ್ನು ರೂಪುಗೊಳಿಸಿ, ಇದರಲ್ಲಿ ವಸತಿಗೃಹ, ಸಭಾಂಗಣ, ಅನ್ನಛತ್ರ, ಪಾರ್ಕಿಂಗ್ ವ್ಯವಸ್ಥೆ, ದೇವಾಲಯದ ಜಾತ್ರಾ ಸಂದರ್ಭ ಬೇಕಾಗುವ ಸ್ಥಳಾವಕಾಶದ ಕಲ್ಪನೆಗಳೆಲ್ಲವೂ ಇರಲಿ. ಇದನ್ನು ಭಕ್ತಾದಿಗಳ ಸಭೆ ಕರೆದು, ಅವರ ಮುಂದಿಟ್ಟು ಅಂತಿಮಗೊಳಿಸಿ ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿ ಇಲಾಖೆಯಿಂದ ಅನುಮೋದನೆ ಪಡೆದುಕೊಂಡು ಹಂತಹಂತವಾಗಿ ಕಾಮಗಾರಿ ನಡೆಸಿ, ಮುಂದೆ ಸರಕಾರಗಳು, ಸಮಿತಿಗಳು ಬದಲಾದರೂ, ಇದೇ ಮಾಸ್ಟರ್ ಪ್ಲಾನ್ನಂತೆ ಕಾಮಗಾರಿಗಳು ನಡೆಯಲಿ ಎಂದು ಸಲಹೆ ನೀಡಿದರು.
ದೇವಾಲಯದ ಜಾಗ ವಶಕ್ಕೆ ನಿರ್ಣಯ:
ದೇವಾಲಯದ ಜಾಗ ಅಲ್ಲಲ್ಲಿ ಹಂಚಿಹೋಗಿದ್ದು, ಕೆಲವರು ವರ್ಷದ ತಳಬಾಡಿಗೆಯ ಮೇಲೆ ಅನುಭೋಗಿಸಿಕೊಂಡು ಬರುತ್ತಿದ್ದಾರೆ ಎಂದು ಸಭೆಯಲ್ಲಿ ಚರ್ಚೆಯಾದಾಗ ದೇವಸ್ಥಾನದ ಅಭಿವೃದ್ಧಿ ಸಲುವಾಗಿ ಅದನ್ನು ಅನುಭೋಗಿಸುತ್ತಿರುವವರ ಮನವೊಲಿಸಿ ಜಾಗವನ್ನು ಅವರುಗಳೇ ದೇವಸ್ಥಾನ ಬಿಟ್ಟುಕೊಡುವ ಯಾ ವಶಕ್ಕೆ ಪಡೆದುಕೊಳ್ಳುವ ಬಗ್ಗೆ ನಿರ್ಣಯ ಅಂಗೀಕರಿಸಲಾಯಿತು.
ಫೆ.20ರಿಂದ ಮಾ.25: ಜಾತ್ರಾ ಮಹೋತ್ಸವ:
ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕೆ. ರಾಧಾಕೃಷ್ಣ ನಾೖಕ್ ಮಾತನಾಡಿ, ಈ ವರ್ಷದ ಜಾತ್ರಾ ಮಹೋತ್ಸವವು ಫೆ.20ರಂದು ಅಷ್ಟಮಿ ಮಖೆ ಕೂಟದೊಂದು ಆರಂಭಗೊಂಡು, ಫೆ. 26ರಂದು ಶಿವರಾತ್ರಿ ಮಖೆ ಕೂಟ, ಮಾ.12ರಂದು ಹುಣ್ಣಿಮೆ ಮಖೆ ಕೂಟ ನಡೆಯಲಿದೆ. ಮಾ.21ರಂದು ಮಹಾಕಾಳಿ ಮೆಚ್ಚಿ, ಮಾ.25ರಂದು ದೊಂಪದ ಬಲಿ ನೇಮೋತ್ಸವ ಜರಗಲಿದೆ ಎಂದು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಉಪ್ಪಿನಂಗಡಿ ಕಂದಾಯ ಹೋಬಳಿಯ ಉಪತಹಶೀಲ್ದಾರ್ ಚೆನ್ನಪ್ಪ ಗೌಡ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಡಾ. ರಮ್ಯಾ ರಾಜಾರಾಮ್, ಅನಿತಾ ಕೇಶವ ಗೌಡ, ದೇವಿದಾಸ್ ರೈ, ಗೋಪಾಲಕೃಷ್ಣ ರೈ ಬೆಳ್ಳಿಪ್ಪಾಡಿ, ವೆಂಕಪ್ಪ ಪೂಜಾರಿ ಮರುವೇಲು, ಸೋಮನಾಥ ಉಪಸ್ಥಿತರಿದ್ದರು. ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಕರುಣಾಕರ ಸುವರ್ಣ, ಭಕ್ತಾಧಿಗಳಾದ ಯು. ರಾಮ, ರವಿ ಇಳಂತಿಲ, ರೂಪೇಶ್ ರೈ ಅಲಿಮಾರ್, ಸುನಿಲ್, ಹರಿರಾಮಚಂದ್ರ ಮಾತನಾಡಿ ಸಲಹೆ ಸೂಚನೆ ನೀಡಿದರು.
ಸಭೆಯಲ್ಲಿ ಭಕ್ತಾದಿಗಳಾದ ಗೋಪಾಲ ಹೆಗ್ಡೆ, ಜಯಂತ ಪೊರೋಳಿ, ಕೈಲಾರು ರಾಜಗೋಪಾಲ ಭಟ್, ವಿಶ್ವನಾಥ ಶೆಟ್ಟಿ ಕಂಗ್ವೆ, ಜತೀಂದ್ರ ಶೆಟ್ಟಿ ಅಲಿಮಾರ್, ಜನಾರ್ದನ ಪೂಜಾರಿ, ವಿದ್ಯಾಧರ ಜೈನ್, ಮಾಧವಿ ಬಿ. ರೈ, ಜಯಶೀಲ, ಸಚಿನ್ ಎ.ಎಸ್., ಮುರಳೀಧರ ರೈ, ವಿಕ್ರಂ ಶೆಟ್ಟಿ ಅಂತರ, ಮಿತ್ರದಾಸ್ ರೈ, ಸುಧಾಕರ ಶೆಟ್ಟಿ ಗಾಂಧಿಪಾರ್ಕ್, ದಿನೇಶ್ ಬಿ., ಕಿಶೋರ್ ನೀರಕಟ್ಟೆ, ದೀಪಕ್ ಪೈ, ಹರೀಶ್ ನಾಯಕ್ ನಟ್ಟಿಬೈಲ್, ದಿನೇಶ್ ಬಿ., ಬಾಲಕೃಷ್ಣ ಶೆಟ್ಟಿ ಕಜೆಕ್ಕಾರು, ಪ್ರವೀಣ್ ಕುಮಾರ್ ಕಜೆಕ್ಕಾರುಬೀಡು, ಯು. ರಾಮ, ಅರವಿಂದ ಭಂಡಾರಿ, ಸುದರ್ಶನ್ ನೆಕ್ಕಿಲಾಡಿ, ದಿವಾಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ದೇವಾಲಯದ ವ್ಯವಸ್ಥಾಪಕ ವೆಂಕಟೇಶ್ ರಾವ್ ಸ್ವಾಗತಿಸಿದರು. ಸಿಬ್ಬಂದಿ ಪದ್ಮನಾಭ ವಂದಿಸಿದರು. ದಿವಾಕರ ಸಹಕರಿಸಿದರು.
ರಥ ಪೂಜೆಗೆ ಅವಕಾಶ
ಈ ಬಾರಿ ದೇವರು ರಥಯೇರಿ ಪೂಜೆ ನೆರವೇರಿದ ಬಳಿಕ ದಂಪತಿಗಳಿಗೆ ರಥದ ಕೆಳಗೆ ಕುಳಿತು ರಥ ಪೂಜೆಗೆ ಅವಕಾಶ ಕಲ್ಪಿಸಲಾಗಿದ್ದು, ಅವರಿಗೆ ಬಳಿಕ ತಂತ್ರಿಗಳಿಂದ ಪ್ರಸಾದ ವಿತರಣೆ ನಡೆಯಲಿದೆ. ಇದಕ್ಕೆ ನಿರ್ದಿಷ್ಟ ಮೊತ್ತವನ್ನು ನಿಗದಿಪಡಿಸಲಾಗುವುದು ಎಂದು ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕೆ. ರಾಧಾಕೃಷ್ಣ ನಾೖಕ್ ಸಭೆಗೆ ತಿಳಿಸಿದರು.