ರೋಟರಿ ಸಿಟಿಯಿಂದ ಕ್ರಿಸ್ಮಸ್, ಹೊಸ ವರ್ಷಾಚರಣೆ-ಕರುಣೆ, ಅನುಕಂಪ, ಪ್ರೀತಿ, ತ್ಯಾಗ, ಕ್ಷಮೆ ಬೋಧಿಸಿದವರು ಯೇಸುಕ್ರಿಸ್ತರು-ರೆ|ವಿಜಯ ಹಾರ್ವಿನ್

0

ಪುತ್ತೂರು: ಯಾರು ಕೆಟ್ಟತನವನ್ನು ಮಾಡುತ್ತಾನೋ ಅವರನ್ನು ಹಿಂಬಾಲಿಸುತ್ತಾರೆ, ಯಾರು ಒಳ್ಳೆಯದನ್ನು ಮಾಡುತ್ತಾರೋ ಅವರನ್ನು ಹಿಂಬಾಲಿಸದಿರುವುದು ಇಂದಿನ ಸನ್ನಿವೇಶವಾಗಿದೆ. ಎಲ್ಲಿ ಅಸಮಾನತೆ ಇದೆಯೋ ಅಲ್ಲಿ ಶಾಂತಿ ನೆಲೆಸದು. ಯೇಸುಕ್ರಿಸ್ತರು ಸಮಾಜದಲ್ಲಿ ಸಮಾನತೆಯನ್ನು ಸೃಷ್ಟಿಸಲು ಓರ್ವ ರಕ್ಷಕನಾಗಿ ಭೂಮಿಗೆ ಬಂದು ಕರುಣೆ, ಅನುಕಂಪ, ಪ್ರೀತಿ, ತ್ಯಾಗ ಹಾಗೂ ಕ್ಷಮೆಯನ್ನು ಬೋಧಿಸಿದವರಾಗಿದ್ದಾರೆ ಎಂದು ಸುದಾನ ವಸತಿಯುತ ಶಾಲೆಯ ಸಂಚಾಲಕ ರೆ|ವಿಜಯ ಹಾರ್ವಿನ್‌ರವರು ಹೇಳಿದರು.

ಜ.22 ರಂದು ರೋಟರಿ ಮನೀಷಾ ಸಭಾಂಗಣದಲ್ಲಿ ರೋಟರಿ ಕ್ಲಬ್ ಪುತ್ತೂರು ಸಿಟಿ ವತಿಯಿಂದ ಜರಗಿದ ಕ್ರಿಸ್ಮಸ್ ಹಬ್ಬ ಹಾಗೂ ಹೊಸ ವರ್ಷಾಚರಣೆ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ಭಾರತ ದೇಶದ ಸಂಸ್ಕೃತಿಯ ಮೂಲ ಅಡಗಿರುವುದೇ ಶಾಂತಿಯ ಮೇಲೆ. ಎಲ್ಲಾ ಧರ್ಮಗಳು ಸಾರುವುದು ಶಾಂತಿಯನ್ನೇ. ಎಲ್ಲಿ ಶಾಂತಿ ನೆಲೆಸುತ್ತದೆಯೋ ಅಲ್ಲಿ ನಮ್ಮಲ್ಲಿ ಸಹೋದರತ್ವ ಮೂಡಲು ಸಾಧ್ಯವಾಗುತ್ತದೆ ಎಂದರು.

ಭಾರತೀಯ ಸೇನೆ/ರೋಟರಿ ಸೇವೆ ಅನನ್ಯ-ವಿಕ್ರಂ ದತ್ತ:
ರೋಟರಿ ಜಿಲ್ಲಾ ಗವರ್ನರ್ ವಿಕ್ರಂ ದತ್ತ ಮಾತನಾಡಿ, ಸಮಾಜಕ್ಕೋಸ್ಕರ ಸೇವೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಸೇವೆ ಅನ್ನುವುದು ಅದಕ್ಕೆ ಅದರದ್ದೇ ಆದ ಅರ್ಥವಿದೆ. ನಾನು ಕಂಡುಕೊಂಡಂತೆ ಮಿಲಿಟರಿ ಸೇವೆಯಲ್ಲಿ ಭಾರತೀಯ ಸೇನೆಯು ಸಲ್ಲಿಸುವ ಸೇವೆ ಹಾಗೂ ದೇಶದ ಶಾಂತಿಗಾಗಿ ಅಂತರ್ರಾಷ್ಟ್ರೀಯ ರೋಟರಿ ಸಂಸ್ಥೆಯು ಸಲ್ಲಿಸುವ ಸೇವೆಯು ಅನನ್ಯವಾದುದು. ಎಲ್ಲಿ ಕುಟುಂಬವು ಎಲ್ಲರ ಒಗ್ಗೂಡುವಿಕೆಯಿಂದ ಕೆಲಸ ಮಾಡುತ್ತದೋ ಅಲ್ಲಿ ಶಾಂತಿಯು ನೆಲೆಸುತ್ತದೆ. ಆದ್ದರಿಂದ ನಾವೆಲ್ಲಾ ಶಾಂತಿ ನೆಲೆಸಲು, ಸಮಾಜದ ಉನ್ನತಿಗಾಗಿ ಸೇವೆಗೈಯಲು ನಮ್ಮ ಜೀವನ ಮುಡುಪಾಗಿಡೋಣ ಎಂದರು.

ನಮ್ಮಲ್ಲಿ ಆಂತರಿಕ ಪರಿವರ್ತನೆ ಆಗದಿದ್ದರೆ ಯಾವುದೇ ಕೆಲಸಗಳು ವ್ಯರ್ಥ-ಸತೀಶ್ ಬೋಳಾರ್:
ರೋಟರಿ ಜಿಲ್ಲಾ ಗವರ್ನರ್ ನಾಮಿನಿ ಸತೀಶ್ ಬೋಳಾರ್ ಮಾತನಾಡಿ, ರೋಟರಿಯಲ್ಲಿ ಆಯಾ ಧರ್ಮದವರು ಅವರುಗಳ ಹಬ್ಬವನ್ನು ಎಲ್ಲರೊಂದಿಗೆ ಆಚರಿಸುವ ಮೂಲಕ ರೋಟರಿ ಸಂಸ್ಥೆಯ ಕಳೆಯನ್ನು ಹೆಚ್ಚಿಸಿದ್ದಾರೆ. ಯುದ್ಧ ಆರಂಭವಾಗುವುದು ಮನಸ್ಸಿನ ಮೂಲಕ. ಈ ನಮ್ಮ ಮನಸ್ಸನ್ನು ಹತೋಟಿಯಲ್ಲಿಟ್ಟಾಗ ಯಾವುದೇ ಅಹಿತಕರ ಘಟನೆಗಳು ಸಂಭವಿಸದು. ಯಾವುದೇ ಸಂಘ-ಸಂಸ್ಥೆಗಳಾಗಲಿ ನಮ್ಮಲ್ಲಿ ಆಂತರಿಕ ಪರಿವರ್ತನೆ ಆಗದಿದ್ದರೆ ನಾವು ಮಾಡುವ ಯಾವುದೇ ಕೆಲಸಗಳು ವ್ಯರ್ಥವಾಗುತ್ತದೆ ಎಂದರು.

ಕ್ರಿಶ್ಚಿಯನ್ ಮಿತ್ರರಿಂದ ಹಬ್ಬದ ವಿಜ್ರಂಭಣೆ-ಮೊಹಮದ್ ಸಾಹೇಬ್:
ಅಧ್ಯಕ್ಷತೆ ವಹಿಸಿದ ರೋಟರಿ ಸಿಟಿ ಅಧ್ಯಕ್ಷ ಮೊಹಮದ್ ಸಾಹೇಬ್ ಮಾತನಾಡಿ, ರೋಟರಿ ಸಿಟಿಯಲ್ಲಿ ಕ್ಲಬ್‌ನ ಕ್ರಿಶ್ಚಿಯನ್ ಮಿತ್ರರಿಂದ ಕ್ರಿಸ್ಮಸ್ ಹಬ್ಬವನ್ನು ವಿಜ್ರಂಭಣೆಯಿಂದ ಆಚರಿಸುತ್ತಿದ್ದು ನಮ್ಮಲ್ಲಿನ ಒಗ್ಗಟ್ಟನ್ನು ಎತ್ತಿ ತೋರಿಸುತ್ತದೆ. ಕ್ಲಬ್ ಕ್ರಿಸ್ಮಸ್ ಮಾತ್ರವಲ್ಲ ಆಟಿದ ಕೂಟ, ಈದ್ ಹಬ್ಬಗಳನ್ನು ಕೂಡ ಎಲ್ಲರೊಂದಿಗೆ ಆಚರಿಸಿಕೊಂಡು ಬರುತ್ತಿದ್ದೇವೆ ಎಂದರು.

ಸಹಕಾರ ಮನೋಭಾವನೆಯಿದ್ದಾಗ ಯಾವುದೇ ಆಚರಣೆಗಳಿಗೆ ಅರ್ಥ ಬರುತ್ತದೆ-ಜಯರಾಂ ರೈ:
ರೋಟರಿ ಅಸಿಸ್ಟೆಂಟ್ ಗವರ್ನರ್ ಜಯರಾಮ್ ರೈ ಮಾತನಾಡಿ, ಯಾವುದೇ ಜಾತಿ ಕೂಡ ಶಾಂತಿಯನ್ನು ಬಯಸುತ್ತದೆ. ಆದರೆ ಪ್ರಸ್ತುತ ದಿನಗಳಲ್ಲಿ ರಾಜಕೀಯದಿಂದಾಗಿ ಸಮಾಜದಲ್ಲಿ ಗೊಂದಲದ ವಾತಾವರಣ ಏರ್ಪಟ್ಟಿರುವುದು ಖೇದಕರ. ನಾವೆಲ್ಲಾ ಸಹಕಾರ ಮನೋಭಾವನೆಯೊಂದಿಗೆ ಒಟ್ಟಿಗೆ ಸಾಗಿದಾಗ ನಮ್ಮ ಯಾವುದೇ ಆಚರಣೆಗಳಿಗೆ ಅರ್ಥ ಬರುವುದು ಎಂದರು.

ಪಿ.ಎಚ್.ಎಫ್ ಪದವಿ:
2023-24ರಲ್ಲಿ ಅಂತರರಾಷ್ಟ್ರೀಯ ರೋಟರಿ ಫೌಂಡೇಶನ್‌ಗೆ ದೇಣಿಗೆ ನೀಡುವ ಮೂಲಕ ಪಿ.ಎಚ್.ಎಫ್ ಪದವಿಗೆ ಭಾಜನರಾದ ಕ್ಲಬ್‌ನ ಜೆರೋಮಿಯಸ್ ಪಾಯಿಸ್ ಹಾಗೂ ಜೋನ್ ರೆಬೆಲೋರವರನ್ನು ಡಿ.ಜಿ ವಿಕ್ರಂ ದತ್ತರವರು ರೋಟರಿ ಪಿನ್ ತೊಡಿಸಿ ಗೌರವಿಸಿದರು.

ಗೌರವ:
ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ, ವಲಯ ಐದರ ಜಿಲ್ಲಾ ಗವರ್ನರ್ ನಾಮಿನಿ ಜೊತೆಗೆ ರೋಟರಿ ಸಿಟಿ ಕ್ಲಬ್‌ಗೆ ಮೊದಲ ಬಾರಿ ಭೇಟಿಯಿತ್ತ ಸತೀಶ್ ಬೋಳಾರ್‌ರವರಿಗೆ ಶಾಲು ಹೊದಿಸಿ ಗೌರವಿಸಲಾಯಿತು.
ವಿದ್ಯಾರ್ಥಿನಿಯರ ಪ್ರಾರ್ಥನಾ ನೃತ್ಯದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿದ ಕ್ರಿಶ್ಚಿಯನ್ ಮಿತ್ರರಾದ ಲಾರೆನ್ಸ್ ಗೊನ್ಸಾಲ್ವಿಸ್, ಜೋನ್ ಕುಟಿನ್ಹಾ, ಜೆರೋಮಿಯಸ್ ಪಾಯಿಸ್, ಜೋನ್ ರೆಬೆಲ್ಲೋ, ಲೀನಾ ಪಾಯಿಸ್, ಡೆನ್ನಿಸ್ ಮಸ್ಕರೇನ್ಹಸ್, ವಿಕ್ಟರ್ ಮಾರ್ಟಿಸ್, ಮೈಕಲ್ ಕ್ರಾಸ್ತಾ, ರೋಟರಿ ವಲಯ ಸೇನಾನಿ ಗ್ರೇಸಿ ಗೊನ್ಸಾಲ್ವಿಸ್‌ರವರನ್ನು ಅಭಿನಂದಿಸಲಾಯಿತು.

ರೋಟರಿ ಸಿಟಿ ಮಾಜಿ ಅಧ್ಯಕ್ಷ ಲಾರೆನ್ಸ್ ಗೊನ್ಸಾಲ್ವಿಸ್ ಸ್ವಾಗತಿಸಿ, ಕಾರ್ಯದರ್ಶಿ ರಾಮಚಂದ್ರ ವಂದಿಸಿದರು. ಮಾಜಿ ಅಧ್ಯಕ್ಷರಾದ ಜೆರೋಮಿಯಸ್ ಪಾಯಿಸ್, ಜೋನ್ ಕುಟಿನ್ಹಾ, ಅಬ್ರಹಾಂ ವರ್ಗೀಸ್, ಸದಸ್ಯರಾದ ವಿಕ್ಟರ್ ಮಾರ್ಟಿಸ್, ಡೆನ್ನಿಸ್ ಮಸ್ಕರೇನ್ಹಸ್, ಜೋನ್ ರೆಬೆಲ್ಲೋರವರು ಅತಿಥಿಗಳಿಗೆ ಶಾಲು ಹೊದಿಸಿ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಜೆರೋಮಿಯಸ್ ಪಾಯಿಸ್‌ರವರು ಮುಖ್ಯ ಅತಿಥಿಗಳ ಪರಿಚಯ ಮಾಡಿದರು. ಶ್ರೀಮತಿ ಲೀನಾ ಪಾಯಿಸ್ ಹಾಗೂ ಶ್ರೀಮತಿ ಶಾಂತಿ ಕುಟಿನ್ಹಾರವರು ಕಾರ್ಯಕ್ರಮ ನಿರೂಪಿಸಿದರು.

ಸ್ವೀಕೃತ್ ಆನಂದ್‌ರವರಿಗೆ ಸನ್ಮಾನ..
ಆಷ್ಟ್ರೇಲಿಯಾದ ಕ್ವಿನ್ಸ್‌ಲ್ಯಾಂಡ್‌ನಲ್ಲಿ ನಡೆದ ಮಾಸ್ಟರ್ಸ್ ಸರ್ಫ್ ಬೋಟ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿ ಚಿನ್ನದ ಪದಕ ಹಾಗೂ ಶ್ರೀಲಂಕಾದ ತಲೈಮನ್ನಾರ್ ಗ್ರಾಮದ ಉತ್ತರದಿಂದ ರಾಮಸೇತು(ಆಡಮ್ ಬ್ರಿಡ್ಜ್) ಮೂಲಕ ಭಾರತದಲ್ಲಿ ಧನುಷ್ಕೋಡಿವರೆಗೆ, ಸಮುದ್ರದ ಮೇಲೆ 32ಕಿ.ಮೀ ದೂರವನ್ನು 4 ಗಂಟೆ 28 ನಿಮಿಷಗಳಲ್ಲಿ ಪೂರ್ಣಗೊಳಿಸಿದ ಮೊದಲ ಭಾರತೀಯ ಎಂಬ ಹಿರಿಮೆಗೆ ಪಾತ್ರರಾದ ರೋಟರಿ ಕ್ಲಬ್ ಪುತ್ತೂರು ಎಲೈಟ್ ಸದಸ್ಯ, ಆಸ್ಕರ್ ಆನಂದ್ ಹಾಗೂ ಸೆನೋರಿಟಾ ಆನಂದ್‌ರವರ ಪುತ್ರರಾಗಿರುವ ಸ್ವೀಕೃತ್ ಆನಂದ್‌ರವರನ್ನು ಈ ಸಂದರ್ಭದಲ್ಲಿ ಶಾಲು ಹೊದಿಸಿ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.

ವೀಲ್‌ಚೇರ್ ಹಸ್ತಾಂತರ..
ಮೊಟ್ಟೆತ್ತಡ್ಕ ನಿವಾಸಿ ಕೈರುನ್ನೀಸಾರವರಿಗೆ ಎಪಿಎಂಸಿ ಅಪೂರ್ವ ಟ್ರೇಡರ್ಸ್ ಮಾಲಕರಾದ ಜಯಕುಮಾರ್ ರೈ ಎಂ.ಆರ್ ಹಾಗೂ ಆನಂದ ಉಡುಪರವರ ಪ್ರಾಯೋಜಕತ್ವದಲ್ಲಿ ವೀಲ್‌ಚೇರ್ ಅನ್ನು ಈ ಸಂದರ್ಭದಲ್ಲಿ ಹಸ್ತಾಂತರಿಸಲಾಯಿತು.

ಕ್ರಿಸ್ಮಸ್ ಕ್ಯಾರಲ್ಸ್/ಸಾಂತಾಕ್ಲಾಸ್..
ಸಜಿನಿ ಮಾರ್ಟಿಸ್, ತೆಲ್ಮಾ ಮಸ್ಕರೇನ್ಹಸ್, ಶಾಂತಿ ಕುಟಿನ್ಹಾ, ಲೀನಾ ಪಾಯಿಸ್, ಗ್ರೇಸಿ ಗೊನ್ಸಾಲ್ವಿಸ್‌ರವರಿಂದ ಕ್ರಿಸ್ಮಸ್ ಕ್ಯಾರಲ್ಸ್, ಹಾಡು ಹಾಗೂ ಸಮಾರಂಭದ ಅತಿಥಿಗಳಿಗೆ ಹಾಗೂ ಕಾರ್ಯಕ್ರಮದಲ್ಲಿ ಪ್ರಾರ್ಥನಾ ನೃತ್ಯಗೈಯ್ದ ವಿದ್ಯಾರ್ಥಿನಿಯರಿಗೆ ಕೊನೆಯಲ್ಲಿ ಸಾಂತಾಕ್ಲಾಸ್‌ರವರಿಂದ ಸ್ಮರಣಿಕೆ ನೀಡಲಾಯಿತು.

LEAVE A REPLY

Please enter your comment!
Please enter your name here