ಸಂಸದರಿಂದ ಆಲಂಕಾರಿನಲ್ಲಿ ರೂ.2.75 ಕೋಟಿ ರಸ್ತೆ ಕಾಮಗಾರಿಯ ಗುದ್ದಲಿ ಪೂಜೆ

0

ಬ್ಯಾಕ್ ಟು ಊರು ಎನ್ನುವ ಹೆಸರಿನಲ್ಲಿ ದ.ಕ ಜಿಲ್ಲೆಯನ್ನು ಅಭಿವೃದ್ಧಿಪಡಿಸಲಾಗುವುದು- ಕ್ಯಾ.ಬ್ರಿಜೇಶ್ ಚೌಟ


ಆಲಂಕಾರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 2002 ರಲ್ಲಿ ಗುರಾತ್‌ನಲ್ಲಿನ ಅನಿವಾಸಿ ಭಾರತೀಯರನ್ನು ಒಗ್ಗೂಡಿಸಿಕೊಂಡು ಅಭಿವೃದ್ಧಿ ಮಾಡಿದ ಹಾಗೆ ದೇಶವಿದೇಶಗಳಲ್ಲಿ ವಿವಿಧ ಕಂಪೆನಿಗಳಲ್ಲಿ ಉನ್ನತ ಹುದೆಗಳಲ್ಲಿರುವ ಜಿಲ್ಲೆಯ ಮಣ್ಣಿನ ಮಕ್ಕಳ ಮುಖಾಂತರ ನಮ್ಮ ಜಿಲ್ಲೆಯಲ್ಲಿ ಹೂಡಿಕೆಗೆ ಪ್ರೇರಣೆ ನೀಡಿ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಜಿಲ್ಲೆಯನ್ನು ಅಭಿವೃದ್ಧಿ ಪಡಿಸಲಾಗುವುದು, ಇದಕ್ಕೆ ಬ್ಯಾಕ್ ಟು ಊರು ಎನ್ನುವ ಹೆಸರನ್ನಿಡಲಾಗಿದೆ ಎಂದು ದ.ಕ.ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.


ಅವರು ಶುಕ್ರವಾರ ಕಡಬ ತಾಲೂಕಿನ ಆಲಂಕಾರಿನಲ್ಲಿ ಕೇಂದ್ರ ಸರಕಾರದ ಪಿ.ಎಂ.ಜನಮನ್ ಯೋಜನೆ ಬುಡಕಟ್ಟು ಜನಾಂಗದ ಅಭಿವೃದ್ಧಿ ಯೋಜನೆಯಲ್ಲಿ ಬಿಡುಗಡೆಯಾದ
2.75 ಕೋಟಿ ರೂ. ವೆಚ್ಚದಲ್ಲಿ ರಾಮಕುಂಜ, ಪೆರಾಬೆ, ಆಲಂಕಾರು ಗ್ರಾಮ ಪಂಚಾಯತ್ ಸೇರಿಸುವ ಪರಕ್ಕಾಲು ಕೊರಗ ಕಾಲೋನಿ ರಸ್ತೆ ಅಭಿವೃದ್ಧಿಗೆ ನಡೆದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.


ನಾನು ಸಂಸದನಾದ ಬಳಿಕ ಜಿಲ್ಲೆಯ ಅಭಿವೃದ್ಧಿಯ ದೃಷ್ಠಿಯಲ್ಲಿ ಬ್ಯಾಕ್ ಟು ಊರು ಎನ್ನುವ ಕಾರ್ಯಕ್ರಮವನ್ನು ಹಾಕಿಕೊಂಡಿದ್ದೇನೆ. ನಮ್ಮ ಜಿಲ್ಲೆಯಿಂದ ಶಿಕ್ಷಣ ಪಡೆದು ಬೇರೆ ಬೇರೆ ಭಾಗಗಳಲ್ಲಿ ಹೋಗಿ ತಮ್ಮ ಕನಸುಗಳನ್ನು ಸಾಕಾರಗೊಳಿಸಿರುವ ದೇಶ ವಿದೇಶಗಳಲ್ಲಿರುವ ನಮ್ಮ ಮಣ್ಣಿನ ಮಕ್ಕಳು ಉನ್ನತ ಹುದ್ದೆಗಳಲ್ಲಿ ಇದ್ದಾರೆ ಅವರೆಲ್ಲರನ್ನು ಜೋಡಿಸಿಕೊಂಡು ಜಿಲ್ಲೆಯಲ್ಲಿ ಹೊಡಿಕೆ ಮಾಡಲಾಗುವುದು ಇದಕ್ಕೆ ಕೇಂದ್ರ ಸರಕಾರದ ವಿತ್ತ ಸಚಿವರು ಕೂಡ ಬೆಂಬಲ ಸೂಚಿಸಿದ್ದಾರೆ . ಪ್ರಥಮ ಪ್ರಯತ್ನವಾಗಿ ಎರಡು ವಿದೇಶಿ ಕಂಪೆನಿಗಳು ಜಿಲ್ಲೆಯಲ್ಲಿ ಹೂಡಿಕೆ ಮಾಡಲು ಮುಂದೆ ಬಂದಿವೆ, ಇಟಲಿಯ ಒಂದು ಕಂಪೆನಿ 150 ಕೋಟಿ ರೂ ಹೂಡಿಕೆ ಮಾಡಲು ಮುಂದಾಗಿದೆ. ಇನ್ನೊಂದು ಮದ್ಯ ಪ್ರಾಚ್ಯ ಹಾಗೂ ಯೂರೋಪ್ ನಲ್ಲಿರುವ ಕಂಪೆನಿ 27 ತಾರೀಕಿಗೆ ಹೂಡಿಕೆ ಒಪ್ಪಂದಕ್ಕೆ ಸಹಿ ಮಾಡಲಿದೆ. ಇದರಿಂದಾಗಿ ಯುವಕರಿಗೆ ಉದ್ಯೋಗ ಸಿಗಲಿದೆ, ಇನ್ನಷ್ಟು ಅನಿವಾಸಿಯರನ್ನು ಜಿಲ್ಲೆಯಲ್ಲಿ ಹೂಡಿಕೆ ಮಾಡಲು ಪ್ರಯತ್ನಿಸಲಾಗುತ್ತಿದೆ. ಮಂಗಳೂರಿನಲ್ಲಿ ಗ್ಲೋಬಲ್ ಕೆಪೆಬಿಲಿಟಿ ಸೆಂಟರ್ ನಿರ್ಮಾಣ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದ ಬ್ರಿಜೇಶ್ ಚೌಟ 2024ರಿಂದ ಪ್ರಧಾನಮಂತ್ರಿಗಳ ಆಶಯದಂತೆ ದೇಶಾದ್ಯಂತ ಅತೀ ಹಿಂದುಳಿದ 18 ಸಮುದಾಯಗಳನ್ನು ಗುರುತಿಸಿ ಅವರಿಗೆ ಮೂಲ ಸೌಕರ್ಯಗಳನ್ನು ಒದಗಿಸಿ ಕೊಡುವ ಸಲುವಾಗಿ ಪ್ರಧಾನಮಂತ್ರಿ ಜನ ಮನ ಯೋಜನೆಯನ್ನು ಅನುಷ್ಠಾನಗೊಳಿಸಿ ಒಟ್ಟು 24.104 ಸಾವಿರ ಕೋಟಿ ಹಣವನ್ನು ಮೀಸಲು ಇಟ್ಟಿದ್ದಾರೆ. ಇದರಲ್ಲಿ ಕರ್ನಾಟಕದ ಜೇನು ಕುರುಬ ಮತ್ತು ಕೊರಗ ಸಮುದಾಯವನ್ನು ಆಯ್ಕೆಮಾಡಲಾಗಿದೆ. ನಮ್ಮ ಜಿಲ್ಲೆಗೆ 10.50 ಕೋಟಿ ಮೀಸಲಿರಿಸಲಾಗಿದೆ. ಇದರಲ್ಲಿ 2.75 ಕೋಟಿ ಪರಕಾಲು ಕೊರಗ ಕಾಲೋನಿ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.

ಕಳೆದ 60 ವರ್ಷಗಳಿಂದ ಅಳ್ವಿಕೆ ಮಾಡಿದ ಸರಕಾರಗಳು ಕೊರಗ ಸಮುದಾಯವನ್ನು ಕೇವಲ ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದರು ಆದರೆ ಅವರ ಅಭಿವೃದ್ಧಿಯನ್ನು ಮಾಡಿಲ್ಲ.ಆದರೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕೊರಗ ಸಮುದಾಯವನ್ನು ಸರ್ವೆ ಮಾಡಿ ಅವರ ಮನೆ ಬಾಗಿಲಿಗೆ ಕೇಂದ್ರ ಸರಕಾರದ ಸವಲತ್ತುಗಳನ್ನು ನೀಡಲಾಗುತ್ತಿದೆ ಎಂದರು.


ಕೊರಗ ಸಮುದಾಯದ ಪರಕ್ಕಾಲಿನ ಹಿರಿಯ ಮಹಿಳೆ ಚೋಮಕ್ಕ ಎಂಬವರಿಂದ ಸಂಸದರು ದೀಪ ಪ್ರಜ್ವಲನೆ ಮಾಡಿಸಿದರು. ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಮಾಜಿ ಸಂಸದರಾದ ನಳಿನ್ ಕುಮಾರ್ ಕಟೀಲು ,ಮಾಜಿ ಸಚಿವರಾದ ಅಂಗಾರ ಎಸ್ ರವರು ಅಪಾರ ಕೊಡುಗೆಯನ್ನು ನೀಡಿದ್ದಾರೆ. ಅದೇ ರೀತಿ ನಾವು ಕೂಡ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ,ಈ ರಸ್ತೆಯಿಂದ ಮೂರು ಗ್ರಾಮಗಳನ್ನು ಒಂದುಗೂಡಿಸುವ ಕೆಲಸ ಆಗಿದೆ.ಅದಷ್ಟು ಬೇಗ ಕಾಮಗಾರಿ ಮುಕ್ತಾಯಗೊಂಡು ಜನರ ಉಪಯೋಗಕ್ಕೆ ಬರಲಿ ಎಂದು ಶುಭಾಹಾರೈಸಿದರು.

ವೇದಿಕೆಯಲ್ಲಿ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಧರ್ಮಪಾಲ ರಾವ್ ಕಜೆ, ಆಲಂಕಾರು ಗ್ರಾ.ಪಂ ಅಧ್ಯಕ್ಷೆ ಸುಶೀಲ, ರಾಮಕುಂಜ ಗ್ರಾ.ಪಂ ಅಧ್ಯಕ್ಷೆ ಸುಚೇತಾ, ಪೆರಾಬೆ ಗ್ರಾ.ಪಂ ಅಧ್ಯಕ್ಷೆ ಸಂಧ್ಯಾ, ಕೃಷಿಕ ಸಮಾಜದ ಜಿಲ್ಲಾ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ , ಸಹಾಯಕ ಇಂಜಿಯರ್ ಚೇತನ್ ಮತ್ತಿತರರು ಉಪಸ್ಥಿತರಿದ್ದರು.


ಸುಳ್ಯ ಮಂಡಲ ಬಿಜೆಪಿ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ ಸ್ವಾಗತಿಸಿ,ಜಿಲ್ಲಾ ಎಸ್.ಟಿ ಮೋರ್ಚದ ಕಾರ್ಯದರ್ಶಿ ಪೂವಪ್ಪ ನಾಯ್ಕ್ ಎಸ್ ಕಾರ್ಯಕ್ರಮ ನಿರೂಪಿಸಿ,
ಮಂಡಲ ಕಾರ್ಯದರ್ಶಿ ತೇಜಸ್ವಿನಿ ಕಟ್ಟಪುಣಿ ವಂದಿಸಿದರು. ಕಾರ್ಯಕ್ರಮದಲ್ಲಿ ಬಿ.ಜೆ.ಪಿ ಪ್ರಮುಖರು,ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು,ಗ್ರಾ.ಪಂ ಉಪಾದ್ಯಕ್ಷರು,
ಸದಸ್ಯರು,ಊರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here