ಕೆ.ಎಸ್.ಆರ್.ಟಿ.ಸಿ ಪುತ್ತೂರು ವಿಭಾಗದ ‘ನೌಕರರ ಕೂಟ ಸಂಘಟನೆ’ ಅಸ್ತಿತ್ವಕ್ಕೆ-ಸ್ಥಾಪಕಾಧ್ಯಕ್ಷರಾಗಿ ಜೀವನ್ ಮಾರ್ಟಿಸ್ ಆಯ್ಕೆ

0

ಪುತ್ತೂರು: ಕೆ.ಎಸ್.ಆರ್.ಟಿ.ಸಿ ಪುತ್ತೂರು ವಿಭಾಗದಲ್ಲಿ ‘ನೌಕರರ ಕೂಟ ಸಂಘಟನೆ’ ಸ್ಥಾಪನೆಯಾಗಿದ್ದು, ಇದರ ಸ್ಥಾಪಕಾಧ್ಯಕ್ಷರಾಗಿ ಜೀವನ್ ಸಂತೋಷ್ ಮಾರ್ಟಿಸ್ ಆಯ್ಕೆಯಾಗಿದ್ದಾರೆ.


ಜ.25 ರಂದು ಮುಖ್ಯರಸ್ತೆಯ ಲಕ್ಷ್ಮೀ ಹೋಟೆಲ್ ನ ಸಭಾಂಗಣದಲ್ಲಿ ನಡೆದ ಸದಸ್ಯರ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು. ಕೆ.ಎಸ್.ಆರ್.ಟಿ.ಸಿ ವಿಶೇಷಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಜೀವನ್ ಸಂತೋಷ್ ಮಾರ್ಟಿಸ್ ಇವರನ್ನು ಪುತ್ತೂರು ವಿಭಾಗದ ನೌಕರರ ಕೂಟದ ಸ್ಥಾಪಕ ಅಧ್ಯಕ್ಷರಾಗಿ ಸರ್ವಾನುತದಿಂದ ಆಯ್ಕೆ ಮಾಡಲಾಯಿತು.

ಉಳಿದಂತೆ ಪ್ರಧಾನ ಕಾರ್ಯದರ್ಶಿಗಳಾಗಿ ಯೋಗೇಂದ್ರ ಬಡಿಗೇರ ಪುತ್ತೂರು ಘಟಕ, ಉಪಾಧ್ಯಕ್ಷರುಗಳಾಗಿ ಮಧು ಗೌಡ ಮಡಿಕೇರಿ ಘಟಕ ಮತ್ತು ರಿಜ್ವಾನ್ ಪಾಷ ಧರ್ಮಸ್ಥಳ ಘಟಕ, ಸಂಘಟನಾ ಕಾರ್ಯದರ್ಶಿಗಳಾಗಿ ಯೋಗೇಶ್ ಗೌಡ ಸುಳ್ಯ ಘಟಕ, ಜಂಟಿ ಕಾರ್ಯದರ್ಶಿಗಳಾಗಿ ಶ್ರೀಧರ್ ಕೆ ಧರ್ಮಸ್ಥಳ ಘಟಕ ಮತ್ತು ರಾಚಪ್ಪ ಮೋದಿ ಬಿ.ಸಿ. ರೋಡ್ ಘಟಕ, ಕೋಶಾಧಿಕಾರಿಯಾಗಿ ರವಿಕುಮಾರ್ ಪುತ್ತೂರು ಘಟಕ ಇವರೆಲ್ಲರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಪುತ್ತೂರು ವಿಭಾಗಕ್ಕೆ ಒಳಪಟ್ಟ ಮಡಿಕೇರಿ, ಧರ್ಮಸ್ಥಳ, ಪುತ್ತೂರು, ಸುಳ್ಯ, ಬಿ.ಸಿ.ರೋಡ್ ಘಟಕವಾರು ಪದಾಧಿಕಾರಿಗಳನ್ನು ಕೂಡ ಆಯ್ಕೆ ಮಾಡಲಾಯಿತು.


ಅಧ್ಯಕ್ಷರಾದ ಜೀವನ್ ಮಾರ್ಟಿಸ್ ರವರು ಪ್ರಾಸ್ತಾವಿಕ ಭಾಷಣ ಮಾಡಿ, ಸತ್ಯ, ಧರ್ಮ, ನಿಷ್ಠೆ ಮತ್ತು ಪ್ರಾಮಾಣಿಕತೆಯ ಧ್ಯೇಯದೊಂದಿಗೆ “ಕರ್ತವ್ಯವೇ ದೇವರು” ಎಂಬ ಘೋಷಣೆಯಿಂದ ಇಂದು ಪುತ್ತೂರಿನಲ್ಲಿ ಸಂಘಟನೆ ಪ್ರಾರಂಭವಾಗಿದೆ. ಪುತ್ತೂರು ವಿಭಾಗದಲ್ಲಿ ಅಧಿಕಾರಿಗಳು ಮತ್ತು ಎಲ್ಲಾ ವರ್ಗದ ಸಿಬ್ಬಂದಿಗಳು ಪರಸ್ಪರ ಸಮನ್ವಯದಿಂದ ಇರಬೇಕು. ಯಾವುದೇ ರೀತಿಯ ಭೃಷ್ಟಚಾರ ಮತ್ತು ಅವೈಜ್ಞಾನಿಕ ವ್ಯವಸ್ಥೆಗಳಿಗೆ ಆಸ್ಪದ ಕೊಡದೆ ಒಬ್ಬರಿಗೊಬ್ಬರು ಗೌರವದಿಂದ ಕರ್ತವ್ಯ ನಿರ್ವಹಿಸಿದರೆ ಪುತ್ತೂರು ವಿಭಾಗ, ಕೇಂದ್ರ ಮಟ್ಟದಲ್ಲಿ ಉನ್ನತ ಸ್ಥಾನಕ್ಕೆ ಹೋಗುವುದರಲ್ಲಿ ಸಂಶಯವೇ ಇಲ್ಲ ಎಂದು ಸದಸ್ಯರಿಗೆ ಧೈರ್ಯ ತುಂಬುವ ಸಂದೇಶವನ್ನು ನೀಡಿದರು.


ಸಭೆಗೆ ಪುತ್ತೂರು ವಿಭಾಗದ ಭದ್ರತಾ ಅಧೀಕ್ಷಕರಾದ ಮಧುಸೂದನ್ ರವರು ಹಾಜಾರಾಗಿ ಪದಾಧಿಕಾರಿಗಳ ಆಯ್ಕೆಯ ವೀಕ್ಷಣೆ ಮಾಡಿದರು. ಹಾಜರಿದ್ದ ಎಲ್ಲಾ ಸದಸ್ಯರು ನೂತನವಾಗಿ ಆಯ್ಕೆಗೊಂಡ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

LEAVE A REPLY

Please enter your comment!
Please enter your name here