ಪುತ್ತೂರು: ಕಲಿಕೆ ಒಂದು ನಿರಂತರ ಪ್ರಕ್ರಿಯೆ. ಕ್ಷಣ ಕ್ಷಣಕ್ಕೂ ಬದಲಾಗುತ್ತಿರುವ ವಿಷಯಗಳನ್ನು ಕಲಿತುಕೊಂಡು ಅದನ್ನು ವಿದ್ಯಾರ್ಥಿಗಳಿಗೆ ಬೋಧಿಸುವುದು ಪ್ರತಿಯೊಬ್ಬ ಅಧ್ಯಾಪಕನ ಕರ್ತವ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಇಂಡಸ್ಟ್ರಿಯಲ್ ಕೆಮಿಸ್ಟ್ರಿ ವಿಭಾಗದ ಪ್ರೊಫೆಸರ್ ಡಾ.ಸರೋಜಿನಿ.ಬಿ.ಕೆ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಮೂಲ ವಿಜ್ಞಾನ ವಿಭಾಗದ ಆಶ್ರಯದಲ್ಲಿ ಶ್ರೀರಾಮ ಸಭಾಭವನದಲ್ಲಿ ನಡೆಯುತ್ತಿರುವ 3 ದಿನಗಳ ಅಧ್ಯಾಪಕರ ಕೌಶಲಾಭಿವೃದ್ಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸೂಕ್ಷ್ಮ ಸನ್ನಿವೇಶದಲ್ಲಿ ಸಮಾಜದಲ್ಲಿ ಬರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡುವುದು ಆವಶ್ಯಕವಾಗಿದೆ ಎಂದರು. ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನವನ್ನು ನೀಡಿ ವಿದ್ಯೆಯ ಜತೆ ನೈತಿಕ ಶಿಕ್ಷಣವನ್ನೂ ನೀಡಿ ಎಂದರು.
ಪ್ರಭಾರ ಪ್ರಾಂಶುಪಾಲ ಡಾ.ಶ್ರೀಕಾಂತ್ ರಾವ್ ಮಾತನಾಡಿ ಜ್ಞಾನವನ್ನರಸಿ ಬರುವ ವಿದ್ಯಾರ್ಥಿಗಳ ಭವಿಷ್ಯವನ್ನು ಪುನರ್ರಚಿಸುವ ಮಹತ್ತರ ಜವಾಬ್ಧಾರಿ ಶಿಕ್ಷಕರ ಮೇಲಿದೆ. ವಿದ್ಯಾರ್ಥಿಯ ಆಸಕ್ತಿಯನ್ನು ಗಮನಿಸಿ ಸರಿಯಾದ ಪಥವನ್ನು ನಿರ್ದೇಶಿಸಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಕೋಶಾಧಿಕಾರಿ ಮುರಳೀಧರ ಭಟ್ ಬಂಗಾರಡ್ಕ ಮಾತನಾಡಿ, ಪ್ರತಿಫಲಾಪೇಕ್ಷೆ ಇಲ್ಲದೆ ದುಡಿಯುವವನು ಗುರು. ವಿದ್ಯಾರ್ಥಿಗಳು ಕಲಿತು ಶ್ರೇಷ್ಟರಾದಾಗ ಸಂತೋಷಪಡುವವನು ಅಧ್ಯಾಪಕ, ಅಂತಹ ಶ್ರೇಷ್ಟವಾದ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದೀರಿ ಎಂದರು. ಬದಲಾದ ಕಾಲಘಟ್ಟದಲ್ಲಿ ಎಲ್ಲರೂ ತಂತ್ರಜ್ಞಾನದೊಂದಿಗೆ ಹೆಜ್ಜೆ ಹಾಕುವ ಅನಿವಾರ್ಯತೆ ಇದೆ ಹಾಗಾಗಿ ಇಂತಹ ಕೌಶಲಾಭಿವೃದ್ದಿ ಕಾರ್ಯಾಗಾರದಲ್ಲಿ ಭಾಗವಹಿಸಿ ತಮ್ಮ ಜ್ಞಾನವನ್ನು ಒರೆಗೆ ಹಚ್ಚಬೇಕಾಗುತ್ತದೆ ಎಂದರು.
ಸಂಪನ್ಮೂಲ ವ್ಯಕ್ತಿ ವಿವೇಕಾನಂದ ಪದವಿ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ.ಮಾಧವ ಭಟ್, ಸಲಹಾ ಸಮಿತಿಯ ಸದಸ್ಯ ಸಂತ ಫಿಲೋಮಿನಾ ಕಾಲೇಜಿನ ವಿಶ್ರಾಂತ ಪ್ರೊಫೆಸರ್ ಡಾ.ಎ.ಪಿ.ರಾಧಾಕೃಷ್ಣ, ಮೂಲ ವಿಜ್ಞಾನ ವಿಭಾಗ ಮುಖ್ಯಸ್ಥ ಪ್ರೊ.ರಮಾನಂದ ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರೌಢ ಶಾಲೆ, ಪದವಿಪೂರ್ವ, ಪದವಿ, ಇಂಜಿನಿಯರಿಂಗ್ ಮತ್ತು ಬಿಎಡ್ ಕಾಲೇಜುಗಳ 73 ಉಪನ್ಯಾಸಕರು ಇದರಲ್ಲಿ ಭಾಗವಹಿಸುತ್ತಿದ್ದಾರೆ.
ವಿದ್ಯಾರ್ಥಿನಿಯರಾದ ಜಾಹ್ನವಿ.ಡಿ.ಐ, ಅರುಂಧತಿ ಮತ್ತು ಶ್ರದ್ಧಾ ಪ್ರಾರ್ಥಿಸಿದರು. ಕಾರ್ಯಕ್ರಮ ಸಂಯೋಜಕಿ ಡಾ.ಶ್ವೇತಾಂಬಿಕ.ಪಿ ಸ್ವಾಗತಿಸಿ ಪ್ರಾಸ್ತಾವನೆಗೈದರು. ಇನ್ನೋರ್ವ ಸಂಯೋಜಕಿ ಪ್ರೊ.ಲತಾ ಮೋಹನ್ ಶೆಟ್ಟಿ ವಂದನಾರ್ಪಣೆಗೈದರು. ಪ್ರೊ.ಮಾದವಿ ಪೈ ಕಾರ್ಯಕ್ರಮ ನಿರ್ವಹಿಸಿದರು.