ಶತಕೋಟಿ ಸಂಭ್ರಮಾಚರಣೆ ಹಾಗೂ ಪುಸ್ತಕ ಲೋಕಾರ್ಪಣೆ

0

ಶ್ರೀ ಸರಸ್ವತಿ ಕ್ರೆಡಿಟ್‌ ಸೌಹಾರ್ದ ಸಹಕಾರಿ ಸಂಘದ ಸಾಮಾಜಿಕ ಕಾರ್ಯ ಶ್ಲಾಘನೀಯ – ಡಾ. ಶ್ರೀಪತಿ ಕಲ್ಲೂರಾಯ


ಪುತ್ತೂರು : ಸಹಕಾರಿ ಸಂಸ್ಥೆ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತ ದರ್ಬೆ ಪುತ್ತೂರು ಇದರ ಪೂರಕ ಸಂಸ್ಥೆ ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ (ರಿ.) ಪುತ್ತೂರು ಇದರ ವತಿಯಿಂದ ಫೆ.19ರಂದು 7ನೆಯ ಕೃತಿ ವೃತ್ತಿ ಬದುಕು ಹೇಗಿರಬೇಕು? ಉದ್ಯೋಗಸ್ಥರಿಗೊಂದು ಮಾರ್ಗದರ್ಶಿ ಕೃತಿಯು ಲೋಕಾರ್ಪಣೆಗೊಂಡಿತು.


ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ವಿವೇಕಾನಂದ ಕಾಲೇಜು(ಸ್ವಾಯತ್ತ) ಆಡಳಿತ ಮಂಡಳಿ ಪುತ್ತೂರು ಇದರ ಅಧ್ಯಕ್ಷರಾದ ಡಾ. ಶ್ರೀಪತಿ ಕಲ್ಲೂರಾಯ ಇವರು ಸರಸ್ವತಿ ಸಹಕಾರಿಯ ಪ್ರಗತಿ ಮತ್ತು ಸೇವಾಕಾರ್ಯಗಳು ಶ್ಲಾಘನೀಯ, ಸಹಕಾರಿ ಕ್ಷೇತ್ರವು ವಿಶೇಷವಾಗಿ ದಕ್ಷಿಣ ಕನ್ನಡ ಭಾಗದಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿವೆ ಎಂದರು.

ಲೋಕಾರ್ಪಣೆಗೊಂಡ ಕೃತಿಯ ಕುರಿತು ಮಾತನಾಡಿದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಆಶಾ ಬೆಳ್ಳಾರೆ ಇವರು ಕೃತಿಯು ಅತ್ಯಂತ ಪರಿಣಾಮಕಾರಿಯಾಗಿ ಮೂಡಿಬಂದಿದ್ದು ಲೇಖಕರು ವೃತ್ತಿ ಬದುಕಿನ ಪ್ರತಿಯೊಂದು ವಿಷಯಗಳ ಮೇಲೆ ಬೆಳಕು ಚೆಲ್ಲುತ್ತಾ ಮಾರ್ಗದರ್ಶನವನ್ನು ನೀಡಿದ್ದಾರೆ ಎಂದು ಹೇಳಿದರು.

ಕೃತಿಯ ಲೇಖಕರಾದ ರಾಜ್ಯ-ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ನಾರಾಯಣ ಭಟ್‌ ಟಿ ರಾಮಕುಂಜ ಇವರು ಮಾತನಾಡಿ, ಲೇಖಕನಿಗೆ ಕೃತಿಯನ್ನು ಓದಿ ಓದುಗರು ಅದನ್ನು ಅನುಷ್ಠಾನಗೊಳಿಸಿಕೊಂಡರೆ ಸಾರ್ಥಕ್ಯವನ್ನು ನೀಡುತ್ತದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಶ್ರೀ ಸರಸ್ವತಿ ಸಹಕಾರಿಯ ಪ್ರಥಮ ಶಾಖೆ ದರ್ಬೆಯು 100ಕೋಟಿ ವ್ಯವಹಾರ ದಾಖಲಿಸಿದ ಪ್ರಯುಕ್ತ ಶತಕೋಟಿ ಸಂಭ್ರಮ ಕಾರ್ಯಕ್ರಮವೂ ನಡೆಯಿತು. ಈ ಪ್ರಯುಕ್ತ ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪುತ್ತೂರಿನ ಬಿರುಮಲೆಯಲ್ಲಿರುವ ಪ್ರಜ್ಞಾ ಆಶ್ರಮವಾಸಿಗಳಿಗೆ ಉಪಹಾರದ ವ್ಯವಸ್ಥೆ ಹಾಗೂ ಪುತ್ತೂರಿನ ಮುಕ್ರಂಪಾಡಿಯಲ್ಲಿರುವ ಆನಂದಾಶ್ರಮವಾಸಿಗಳಿಗೆ ಒಂದು ದಿನದ ಪ್ರಾಯೋಜಕತ್ವವನ್ನು ನೀಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶ್ರೀ ಸರಸ್ವತಿ ಸಹಕಾರಿಯ ಅಧ್ಯಕ್ಷ ಎಸ್ ಆರ್ ಸತೀಶ್ಚಂದ್ರ ಸರಸ್ವತಿ ಸಹಕಾರಿಯು ನಡೆದುಬಂದ ಹಾದಿಯನ್ನು ಸ್ಮರಿಸುತ್ತಾ ದರ್ಬೆ ಶಾಖೆಯು ಶತಕೋಟಿಯ ಮೈಲಿಗಲನ್ನು ದಾಟಲು ಕಾರಣೀಭೂತರಾದ ಸದಸ್ಯ ಬಾಂಧವರಿಗೆ ಹಿತೈಷಿಗಳಿಗೆ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅನೇಕ ಸಾಮಾಜಿಕ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದು, ಇದರ ಒಂದು ಭಾಗವಾಗಿ ಪುಸ್ತಕಗಳನ್ನು ಬಿಡುಗಡೆ ಮಾಡುತ್ತಿದ್ದು ಇದನ್ನು ಓದಿ ಅನುಷ್ಠಾನಗೊಳಿಸಿ ಎಲ್ಲರಲ್ಲೂ ಸುಪ್ತವಾಗಿರುವ ಶಕ್ತಿಯನ್ನು ಜಾಗೃತಗೊಳಿಸಿಕೊಂಡು ಅಸಾಮಾನ್ಯ ವ್ಯಕ್ತಿಗಳಾಗಿ ಬೆಳೆಯುವಂತಾಗಬೇಕು ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು ಉಪಸ್ಥಿತರಿದ್ದರು. ಶ್ರೀ ಸರಸ್ವತಿ ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಸಂತ ನಾಯಕ್ ಎ ಸ್ವಾಗತಿಸಿದರು. ಸಹಕಾರಿಯ ಎಂ ಎಸ್ ರಸ್ತೆ ಶಾಖೆಯ ಸಿಬ್ಬಂದಿ ಸುಷ್ಮಾ ಪ್ರಾರ್ಥಿಸಿದರು. ದರ್ಬೆ ಶಾಖೆಯ ಹಿರಿಯ ವ್ಯವಸ್ಥಾಪಕ ದೇವಿಪ್ರಸಾದ್ ಎ ವಂದಿಸಿದರು. ಆಡಳಿತ ಕಚೇರಿಯ ಸಿಬ್ಬಂದಿ ಬಿಪಿನ್ ಚಂದ್ರ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here