ರಾಮಕುಂಜ: ಅಂಗನವಾಡಿಗಳಿಗೆ ಪೂರೈಕೆಯಾಗುವ ಆಹಾರ ಪದಾರ್ಥಗಳು ಕನಿಷ್ಠ ದರದ್ದಾಗಿದ್ದು ಕಳಪೆಯಾಗಿರುತ್ತದೆ. ಆದ್ದರಿಂದ ಅಂಗನವಾಡಿಗಳಿಗೆ ಗುಣಮಟ್ಟದ ಆಹಾರ ಪೂರೈಸುವಂತೆ ಗ್ರಾಮಸ್ಥರು ಒತ್ತಾಯಿಸಿದ ಘಟನೆ ರಾಮಕುಂಜ ಗ್ರಾಮಸಭೆಯಲ್ಲಿ ನಡೆದಿದೆ.
ಸಭೆ ಫೆ.20ರಂದು ಅಧ್ಯಕ್ಷೆ ಸುಚೇತಾ ಬಿ.,ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. ಕಡಬ ತಾಲೂಕು ಪಂಚಾಯತ್ ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಯಶವಂತ ಬೆಳ್ಚಡ ಅವರು ನೋಡೆಲ್ ಅಧಿಕಾರಿಯಾಗಿದ್ದರು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಗ್ರಾಮಸ್ಥ ಪುರುಷೋತ್ತಮ ಬರೆಂಬೆಟ್ಟು ಅವರು, ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ನೀಡಲು ಅಂಗನವಾಡಿಗಳಿಗೆ ಪೌಷ್ಟಿಕ ಆಹಾರಗಳಾದ ಬೆಲ್ಲ, ಹಾಲಿನಹುಡಿ, ಸಕ್ಕರೆ, ಮಿಲೆಟ್ ಲಡ್ಡು, ಅಕ್ಕಿ, ಹೆಸ್ರುಕಾಳು, ಮೊಟ್ಟೆ ಸೇರಿದಂತೆ ಇತರೇ ಆಹಾರ ಪದಾರ್ಥಗಳು ಪೂರೈಕೆಯಾಗುತ್ತಿವೆ. ಆದರೆ ಅವು ಗುಣಮಟ್ಟದಿಂದ ಕೂಡಿರುವುದಿಲ್ಲ. ಟೆಂಡರ್ ಪಡೆದುಕೊಂಡವರು ಅತೀ ಕಡಿಮೆ ದರದ ಆಹಾರ ಪದಾರ್ಥಗಳನ್ನೇ ಅಂಗನವಾಡಿಗಳಿಗೆ ಪೂರೈಕೆ ಮಾಡುತ್ತಾರೆ. ಕೆಲವೊಂದು ಆಹಾರ ವಸ್ತುಗಳಲ್ಲಿ ಹುಳಗಳೂ ಇರುತ್ತವೆ. ಕಳಪೆ ಗುಣಮಟ್ಟದ ಆಹಾರಗಳಿಂದ ಮಕ್ಕಳು, ಗರ್ಭಿಣಿಯರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು ಈ ಬಗ್ಗೆ ಗಮನಹರಿಸಿ ಗುಣಮಟ್ಟದ ಆಹಾರ ಪೂರೈಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಇದಕ್ಕೆ ಇತರೇ ಗ್ರಾಮಸ್ಥರು ಧ್ವನಿಗೂಡಿಸಿ ಕಳಪೆ ಆಹಾರ ಪದಾರ್ಥಗಳಿಂದ ಮಕ್ಕಳು, ಗರ್ಭಿಣಿಯರ ಆರೋಗ್ಯದ ಮೇಲೆ ಪರಿಣಾಮ ಬೀರುವುದರಿಂದ ಗುಣಮಟ್ಟದ ಆಹಾರ ಪದಾರ್ಥವನ್ನೇ ಪೂರೈಸಲು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು. ಈ ಬಗ್ಗೆ ಇಲಾಖೆಗೆ ಮನವಿ ಮಾಡಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಆಶಾ, ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆ ಈಡೇರಿಸಿ:
ಸೇವೆ ಖಾಯಮಾತಿ, ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಉತ್ತಮ ಸೇವೆ ನೀಡುತ್ತಿದ್ದು ಸರಕಾರ ಅವರ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳಬೇಕೆಂದು ಬಶೀರ್ ಆತೂರು, ರೋಹಿತ್ ಕಂಪ ಹಾಗೂ ಇತರೇ ಗ್ರಾಮಸ್ಥರು ಒತ್ತಾಯಿಸಿದರು. ಈ ಬಗ್ಗೆ ಸಭೆಯ ಕೊನೆಯಲ್ಲಿ ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ಮನವಿಯನ್ನೂ ಸಲ್ಲಿಸಿದರು.
ಕಾಜರೊಕ್ಕು-ಆನ ರಸ್ತೆ ಡಾಮರೀಕರಣಗೊಳಿಸಿ:
ಕಾಜರೊಕ್ಕು-ಆನ ರಸ್ತೆ ಈ ಹಿಂದೆ ಗ್ರಾಮ ಸಡಕ್ ಯೋಜನೆಯಡಿ ಡಾಮರೀಕರಣಗೊಂಡಿತ್ತು. ಆದರೆ ಈಗ ಸದ್ರಿ ರಸ್ತೆಯ ಡಾಮರು ಎದ್ದುಹೋಗಿದ್ದು ಅಲ್ಲಲ್ಲಿ ಹೊಂಡ ಗುಂಡಿಗಳಿಂದ ಕೂಡಿದೆ. ರಸ್ತೆ ಅಗಲವೂ ಕಿರಿದಾಗಿದೆ. ಈ ರಸ್ತೆಯಲ್ಲಿ ದಿನದಲ್ಲಿ ಶಾಲಾ ವಾಹನ, ರಿಕ್ಷಾ, ದ್ವಿಚಕ್ರ ಸೇರಿದಂತೆ ನೂರಾರು ವಾಹನಗಳು ಓಡಾಟ ನಡೆಸುತ್ತಿವೆ. ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ ನಡೆದಾಟ ನಡೆಸಲು ಕಷ್ಟವಾಗುತ್ತಿದೆ. ಆದ್ದರಿಂದ ಸದ್ರಿ ರಸ್ತೆಯ ಡಾಮರೀಕರಣ, ಇಲ್ಲವೇ ಕಾಂಕ್ರಿಟೀಕರಣಕ್ಕೆ ಕ್ರಮ ಕೈಗೊಳ್ಳಬೇಕೆಂದು ರೋಹಿತ್ ಕಂಪ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ಮೋಹನ್‌ಕುಮಾರ್ ಅವರು, ಗ್ರಾಮ ಪಂಚಾಯತ್‌ಗೆ 15ನೇ ಹಣಕಾಸು ಯೋಜನೆಯಡಿ 35 ಲಕ್ಷ ರೂ.ಅನುದಾನ ಬರುತ್ತದೆ. ಸರಕಾರದ ಸುತ್ತೋಲೆಯಂತೆ ಈ ಅನುದಾನ ಬಳಕೆ ಮಾಡಬೇಕಾಗುತ್ತದೆ. 2 ಲಕ್ಷ ರೂ. ಅನುದಾನದೊಳಗೆ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಗ್ರಾ.ಪಂ.ಅವಕಾಶವಿದೆ. ಸದ್ರಿ ರಸ್ತೆ ಅಭಿವೃದ್ಧಿಗೆ ದೊಡ್ಡ ಮೊತ್ತದ ಅನುದಾನ ಬೇಕಾಗಿರುವುದರಿಂದ ಇತರೇ ಇಲಾಖೆಗಳಿಗೆ ಕೇಳಿಕೊಳ್ಳುವ ಎಂದರು. ಈ ಹಿಂದೆ ಸದ್ರಿ ರಸ್ತೆಗೆ 30 ಲಕ್ಷ ರೂ.ಅನುದಾನ ಬಿಡುಗಡೆಗೊಂಡಿತ್ತು. ಅದನ್ನು ಬದಲಾವಣೆ ಮಾಡಿದ್ದಾರೆ ಎಂದು ಗ್ರಾಮಸ್ಥ ಪ್ರವೀಣ್ ದೇರೇಜಾಲು ಆರೋಪಿಸಿದರು.
ಚರಂಡಿ ಮುಚ್ಚಲಾಗಿದೆ:
ಆನ-ಕಾಜರೊಕ್ಕು ರಸ್ತೆಯಲ್ಲಿ ಚರಂಡಿ ದುರಸ್ತಿ ಮಾಡಲಾಗಿತ್ತು. ಈಗ ಚರಂಡಿಯಲ್ಲೇ ಜಲಜೀವನ ಯೋಜನೆಯ ಪೈಪು ಅಳವಡಿಕೆ ಮಾಡಲಾಗಿದೆ. ಇದರಿಂದ ಚರಂಡಿ ಮುಚ್ಚಿಹೋಗಿದ್ದು ಮಳೆಗಾಲದಲ್ಲಿ ನೀರು ರಸ್ತೆಯಲ್ಲೇ ಹರಿದು ಹೋಗಿ ಇದ್ದ ರಸ್ತೆಯೂ ಕೆಟ್ಟು ಹೋಗುವ ಸಾಧ್ಯತೆ ಇದೆ. ಆದ್ದರಿಂದ ಚರಂಡಿ ದುರಸ್ತಿಗೊಳಿಸಬೇಕೆಂದು ಹೇಳಿದರು.
ನೀರಿನ ಸಂಪರ್ಕ ಕಡಿತಗೊಳಿಸಬೇಡಿ:
ರೂ.500ಕ್ಕಿಂತ ಹೆಚ್ಚು ನೀರಿನ ಬಿಲ್ಲು ಬಾಕಿ ಇರಿಸಿಕೊಂಡ ಬಳಕೆದಾರರ ಕುಡಿಯುವ ನೀರಿನ ಸಂಪರ್ಕ ಕಡಿತಗೊಳಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ವರದಿಯಲ್ಲಿ ಉಲ್ಲೇಖಿಸಿರುವ ವಿಚಾರ ಪ್ರಸ್ತಾಪಿಸಿದ ಗ್ರಾಮಸ್ಥ ಬಶೀರ್ ಆತೂರು ಅವರು, 15 ಎಕ್ರೆ ಜಾಗ ಇರುವ ಕೃಷಿಕರು ನಿರಂತರವಾಗಿ ಕೃಷಿಗೆ ಉಚಿತವಾಗಿ ನೀರು ಬಳಕೆ ಮಾಡುತ್ತಾರೆ. ಕುಡಿಯುವ ನೀರು ಬಳಕೆ ಮಾಡುವವರ ಅತೀ ಬಡವರು. ಇಂತಹ ಬಡವರ ಮೂಲಭೂತ ಸೌಕರ್ಯವಾಗಿರುವ ಕುಡಿಯುವ ನೀರಿನ ಸಂಪರ್ಕ ಕಡಿತಗೊಳಿಸಬಾರದು ಎಂದು ಒತ್ತಾಯಿಸಿದರು. ಈ ಬಗ್ಗೆ ಚರ್ಚೆ ನಡೆಯುತ್ತಿದ್ದಂತೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಸುಚೇತಾ ಬಿ.,ಅವರು, 1 ಲೀಟರ್ ನೀರು ಪೂರೈಸಲು ಗ್ರಾಮ ಪಂಚಾಯತ್ ಕನಿಷ್ಠ 5 ರೂ.ಖರ್ಚು ಮಾಡುತ್ತಿದೆ. ಆದರೆ ಬಳಕೆದಾರರಿಗೆ ತಿಂಗಳಿಗೆ ಕನಿಷ್ಠ 200 ರೂ. ದರ ನಿಗದಿಪಡಿಸಲಾಗಿದೆ. ನಾವು ಮೊಬೈಲ್ ರೀಚಾರ್ಜ್‌ಗೆ ಅದಕ್ಕಿಂತ ಹೆಚ್ಚು ಖರ್ಚು ಮಾಡುತ್ತೇವೆ. ಬಳಕೆದಾರರು ಸಕಾಲದಲ್ಲಿ ಬಿಲ್ಲು ಪಾವತಿಸಿ ಸಹಕರಿಸಬೇಕೆಂದು ಹೇಳಿದರು. ವಿದ್ಯುತ್ ಬಿಲ್ಲು, ನೀರು ನಿರ್ವಾಹಕರಿಗೆ ವೇತನ ಪಾವತಿಗೆ ಬಳಕೆದಾರರಿಂದ ಸಂಗ್ರಹಿಸಿದ ಶುಲ್ಕ ಬಳಕೆಯಾಗುತ್ತಿದೆ ಎಂದು ಪಿಡಿಒ ಮೋಹನ್‌ಕುಮಾರ್ ಹೇಳಿದರು. ಮಾರ್ಗದರ್ಶಿ ಅಧಿಕಾರಿಯಾಗಿದ್ದ ಯಶವಂತ ಬೆಳ್ಚಡ ಅವರು ಮಾತನಾಡಿ, ಕುಡಿಯುವ ನೀರು ಉಚಿತವಾಗಿ ನೀಡಲು ಬರುವುದಿಲ್ಲ. ಇದಕ್ಕೆ ಬಳಕೆದಾರರು ಶುಲ್ಕ ಪಾವತಿಸಬೇಕೆಂದು ಹೇಳಿದರು.
ಬೀದಿನಾಯಿಗಳಿಂದ ಸಂಕಷ್ಟ:
ಬೀದಿನಾಯಿ, ಜಾನುವಾರು, ಆಡುಗಳು ರಸ್ತೆಯಲ್ಲಿ ಓಡಾಟ ನಡೆಸುತ್ತಿರುವುದರಿಂದ ಮುಂಜಾನೆ ಮದರಸಕ್ಕೆ ಹೋಗುವ ಮಕ್ಕಳಿಗೆ, ಶಾಲೆಗೆ ಹೋಗುವ ಮಕ್ಕಳಿಗೆ, ಸಾರ್ವಜನಿಕರಿಗೆ, ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬಶೀರ್ ಆತೂರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಾರ್ಗದರ್ಶಿ ಅಧಿಕಾರಿ ಯಶವಂತ ಬೆಳ್ಚಡ ಅವರು, ಬೀದಿನಾಯಿಗಳನ್ನು ಕೊಲ್ಲಲು ಅವಕಾಶವಿಲ್ಲ, ಅವುಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡಬಹುದಾಗಿದೆ. ಈ ಬಗ್ಗೆ ಪಂಚಾಯತ್‌ನಿಂದ ಕ್ರಮ ಕೈಗೊಳ್ಳಬೇಕು. ಜಾನುವಾರು ಹಾಗೂ ಇತರೇ ಸಾಕು ಪ್ರಾಣಿಗಳನ್ನು ರಸ್ತೆಗೆ ಬಿಡದಂತೆ ಅದರ ಮಾಲಕರಿಗೆ ಸೂಚನೆ ನೀಡುವಂತೆಯೂ ಹೇಳಿದರು.
ಡ್ರಗ್ಸ್ ಬಗ್ಗೆ ಜಾಗೃತಿ ಮೂಡಿಸಿ;
ಡ್ರಗ್ಸ್ ಸೇರಿದಂತೆ ಮಾದಕ ವಸ್ತುಗಳ ಬಗ್ಗೆ ಶಾಲೆ ಹಾಗೂ ಇತರೇ ಕಡೆಗಳಲ್ಲಿ ಜಾಗೃತಿ ಮೂಡಿಸಬೇಕೆಂದು ಬಶೀರ್ ಆತೂರು ಒತ್ತಾಯಿಸಿದರು. ಇದಕ್ಕೆ ಪೂರಕವಾಗಿ ಮಾತನಾಡಿದ ಗ್ರಾ.ಪಂ.ಸದಸ್ಯ ಪ್ರಶಾಂತ್ ಆರ್.ಕೆ.ಅವರು, ಮನೆಯವರೂ ಈ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕೆಂದು ಹೇಳಿದರು. ಗ್ರಾ.ಪಂ.ನ ಕೆಲವು ಕಡೆಗಳಲ್ಲಿ ಕಸ ಹಾಕದಂತೆ ನಾಮಫಲಕ ಹಾಕಿದ್ದರೂ ಅದರ ಪಕ್ಕದಲ್ಲೇ ಕಸ ಹಾಕಲಾಗುತ್ತಿದೆ. ಅಲ್ಲಿ ಸಿಸಿಟಿವಿ ಅಳವಡಿಸಬೇಕೆಂದು ಬಶೀರ್ ಆತೂರು ಒತ್ತಾಯಿಸಿದರು.
ಬೈಲಂಗಡಿಯಲ್ಲಿ ಬಸ್‌ನಿಲ್ದಾಣದ ಬೇಕು:
ರಾಮಕುಂಜ-ಗೋಳಿತ್ತೊಟ್ಟು ರಸ್ತೆಯ ಬೈಲಂಗಡಿ ಎಂಬಲ್ಲಿ ಬಸ್‌ನಿಲ್ದಾಣ ಆಗಬೇಕೆಂದು ಕಾಸೀಂ ಬೈಲಂಗಡಿ, ಸುಲೈಮಾನ್ ಬೈಲಂಗಡಿ ಅವರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯೆ ಮಾಲತಿ ಕದ್ರ ಅವರು, ಬೈಲಂಗಡಿಯಲ್ಲಿ ಬಸ್‌ನಿಲ್ದಾಣ ನಿರ್ಮಾಣಕ್ಕೆ ಈ ಹಿಂದೆ ಅನುದಾನ ಮೀಸಲಿಡಲಾಗಿತ್ತು. ಆದರೆ ಜಾಗದ ಕೊರತೆಯಿಂದ ಬಸ್‌ನಿಲ್ದಾಣ ಮಾಡಲು ಆಗಿಲ್ಲ. ಜಾಗ ತೋರಿಸಿಕೊಟ್ಟಲ್ಲಿ ಮುಂದಿನ ಕ್ರಿಯಾಯೋಜನೆ ವೇಳೆ ಬಸ್‌ನಿಲ್ದಾಣ ನಿರ್ಮಾಣಕ್ಕೆ ಅನುದಾನವಿಟ್ಟು ಕ್ರಮ ಕೈಗೊಳ್ಳಲಾಗುವುದು ಎಂದರು.
ಶಾಲಾ ಕೊಠಡಿ ನಿರ್ಮಿಸಿ:
ರಾಮಕುಂಜ ಕ್ಲಸ್ಟರ್ ಸಿಆರ್‌ಪಿ, ರಾಮಕುಂಜ ಸರಕಾರಿ ಹಿ.ಪ್ರಾ.ಶಾಲೆಯ ಮುಖ್ಯಶಿಕ್ಷಕರೂ ಆದ ಮಹೇಶ್ ಅವರು ಮಾತನಾಡಿ, ರಾಮಕುಂಜ ಗ್ರಾ.ಪಂ.ವ್ಯಾಪ್ತಿಯಲ್ಲಿ 7 ಸರಕಾರಿ ಶಾಲೆಗಳಿದ್ದು ಈ ಪೈಕಿ ರಾಮಕುಂಜ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಅತೀ ಹೆಚ್ಚು 145 ಮಕ್ಕಳು ಓದುತ್ತಿದ್ದಾರೆ. ಈ ಶಾಲೆಯಲ್ಲಿ ನಾದುರಸ್ತಿಯಲ್ಲಿದ್ದ 3 ಕೊಠಡಿ ಈಗಾಗಲೇ ನೆಲಸಮಗೊಳಿಸಲಾಗಿದೆ. ಹೊಸ ಕಟ್ಟಡ ನಿರ್ಮಾಣಕ್ಕೆ ಅನುದಾನ ಕೋರಿ ಇಲಾಖೆ, ಸಿಎಸ್‌ಆರ್ ಫಂಡ್‌ಗಳಿಗೆ ಮನವಿ ಮಾಡಲಾಗಿದೆ. ಈಗ 7 ಕೊಠಡಿ ಹಾಗೂ 1 ಮುಖ್ಯಶಿಕ್ಷಕರ ಕೊಠಡಿ ಇದೆ. ಆದರೆ 1 ಕೊಠಡಿಯ ಮೇಲ್ಛಾವಣಿ ನಾದುರಸ್ತಿಯಲ್ಲಿದ್ದು ಮಳೆಗಾಲದಲ್ಲಿ ತರಗತಿ ನಡೆಸಲು ಸಾಧ್ಯವಿಲ್ಲ. ಆದ್ದರಿಂದ ತುರ್ತಾಗಿ ಇದರ ಮೇಲ್ಛಾವಣಿ ದುರಸ್ತಿಗೆ ಕ್ರಮ ಕೈಗೊಳ್ಳಬೇಕು, ಇಲ್ಲದೇ ಇದ್ದಲ್ಲಿ 1 ಕೊಠಡಿ ನಿರ್ಮಾಣ ಮಾಡಿಕೊಡಬೇಕೆಂದು ಹೇಳಿದರು.
ಯಶಸ್ವಿನಿ ಯೋಜನೆ ಸೌಲಭ್ಯ ಪುತ್ತೂರಿನ ಖಾಸಗಿ ಆಸ್ಪತ್ರೆಗಳಲ್ಲೂ ಸಿಗಬೇಕೆಂದು ಕಾಸೀಂ ಬೈಲಂಗಡಿ ಒತ್ತಾಯಿಸಿದರು. ಹಳೆನೇರೆಂಕಿ ಗ್ರಾಮದ ಬರೆಂಬೆಟ್ಟು ಎಂಬಲ್ಲಿ ವಿದ್ಯುತ್ ತಂತಿ ಪದೇ ಪದೇ ತುಂಡಾಗಿ ಬೀಳುತ್ತಿದೆ. ಇಲ್ಲಿ ಅಪಾಯ ಸಂಭವಿಸುವ ಮೊದಲು ತಂತಿ ಬದಲಾವಣೆಗೆ ಕ್ರಮ ಕೈಗೊಳ್ಳಬೇಕೆಂದು ಪುರುಷೋತ್ತಮ ಬರೆಂಬೆಟ್ಟು ಆಗ್ರಹಿಸಿದರು. ವಿವಿಧ ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.
ಸಿಆರ್‌ಪಿ ಮಹೇಶ್, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕೊಲ ಶಾಖಾ ಮೇನೇಜರ್ ಆನಂದ ಗೌಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಂದನ, ಕಿರಿಯ ಪಶುವೈದ್ಯ ಪರೀಕ್ಷಕ ರವಿತೇಜ, ಮೆಸ್ಕಾಂ ಆಲಂಕಾರು ಶಾಖೆಯ ಕಚೇರಿ ಮೇಲ್ವಿಚಾರಕ ಉಮೇಶ್ ಕೆ., ಸಮಾಜ ಕಲ್ಯಾಣ ಇಲಾಖೆಯ ಲೋಕೇಶ್, ಆರೋಗ್ಯ ಇಲಾಖೆಯ ಸಿಎಚ್‌ಒ ಸಂಧ್ಯಾ ಪಿ., ಇಲಾಖಾವಾರು ಮಾಹಿತಿ ನೀಡಿದರು. ಗ್ರಾ.ಪಂ.ಉಪಾಧ್ಯಕ್ಷ ಕೇಶವ ಗಾಂಧಿಪೇಟೆ, ಸದಸ್ಯರಾದ ಪ್ರಶಾಂತ್ ಆರ್.ಕೆ., ಭಾರತಿ ಯಂ., ಭವಾನಿ, ಸುಜಾತ ಕೆ., ರೋಹಿಣಿ ಬಿ., ಮಾಲತಿ ಯನ್.ಕೆ., ಕುಶಾಲಪ್ಪ ಎಂ., ವಸಂತ ಪಿ., ಯತೀಶ್ ಕುಮಾರ್ ಬಿ., ಹೆಚ್.ಅಬ್ದುಲ್ ರಹಿಮಾನ್, ಬಿ.ಸೂರಪ್ಪ ಕುಲಾಲ್, ಪ್ರದೀಪ್ ಬಿ.,ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಿಬ್ಬಂದಿ ದುರ್ಗಾಪ್ರಸಾದ್ ವರದಿ ವಾಚಿಸಿದರು. ಕಾರ್ಯದರ್ಶಿ ಲಲಿತಾ ಜಿ.ಡಿ.,ಸ್ವಾಗತಿಸಿ, ನಿರೂಪಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೋಹನ್‌ಕುಮಾರ್ ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು.