ಪುತ್ತೂರು:‘ ತುಳುನಾಡ್ಡ್ ಕಾರಣಿಕತೆ ಮೆರೆಪುನ ಒಂಜಾತ್ ದೈವೊಲೆನ ನಡುಟು ರಾಜಗುಳಿಗ ದೈವೊಲ ಒಂಜಿ. ಭಕ್ತಿಡ್ ನಂಬಿನ ಭಕ್ತರೆಗ್ ಸದಾ ರಕ್ಷೆ ಆದ್ ಅಭಯೊದ ಮದಿಪು ಕೊರ್ಪುನ ತುಳುನಾಡ್ದ ಸತ್ಯೊಲೆಡ್ ರಾಜಗುಳಿಗಗ್ ಮಲ್ಲಸ್ಥಾನ ಉಂಡು.’ ಇಂತಹ ವಿಶೇಷ ಕಾರಣಿಕತೆಯನ್ನು ಹೊಂದಿರುವ ಭಕ್ತಿಯಿಂದ ನಂಬಿದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಸಂಟ್ಯಾರು ಕಲ್ಲಕಟ್ಟದಲ್ಲಿ ನೆಲೆಯಾಗಿರುವ ಶ್ರೀ ರಾಜಗುಳಿಗ ದೈವದ ಕೋಲ ಫೆ.23ರಂದು ವಿಜೃಂಭಣೆಯಿಂದ ನಡೆಯಿತು.
ದೈವದ ಪ್ರತಿಷ್ಠಾ ಕಾರ್ಯಕ್ರಮದ ಬಳಿಕ ಮೂರನೇ ವರ್ಷದ ನೇಮೋತ್ಸವದ ಅಂಗವಾಗಿ ಬೆಳಿಗ್ಗೆ ಗಣಪತಿ ಹೋಮ, ಶುದ್ಧಕಲಶ, ತಂಬಿಲ ಸೇವೆ ಇತ್ಯಾದಿ ವೈಧಿಕ ಕಾರ್ಯಕ್ರಮಗಳು ನಡೆದು ಪ್ರಸಾದ ವಿತರಣೆ ಬಳಿಕ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಮಧ್ಯಾಹ್ನ 2 ಗಂಟೆಯಿಂದ ಶ್ರೀ ರಾಜಗುಳಿಗ ದೈವದ ನರ್ತನ ಆರಂಭಗೊಂಡು ಸಂಜೆ ಭಕ್ತಾಧಿಗಳಿಗೆ ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ನಡೆಯಿತು. ಆರ್ಯಾಪು, ಕುರಿಯ, ಒಳಮೊಗ್ರು ಗ್ರಾಮದ ಭಕ್ತಾಧಿಗಳು ಸೇರಿದಂತೆ ಊರಪರವೂರ ನೂರಾರು ಭಕ್ತರು ಆಗಮಿಸಿ ಶ್ರೀ ದೈವದ ಗಂಧ ಪ್ರಸಾದ ಹಾಗೂ ಅನ್ನಪ್ರಸಾದ ಸ್ವೀಕರಿಸಿದರು. ಮಧ್ಯಾಹ್ನ ಹಾಗೂ ಸಂಜೆ ಸಾವಿರಕ್ಕೂ ಅಧಿಕ ಮಂದಿಗೆ ಅನ್ನಸಂತರ್ಪಣೆ ನಡೆಯಿತು. ಆಡಳಿತ ಸಮಿತಿಯ ಅಧ್ಯಕ್ಷ ಕೆ.ರಾಧಾಕೃಷ್ಣ ರೈ ಕುರಿಯ ಏಳ್ನಾಡುಗುತ್ತು, ಕಾರ್ಯದರ್ಶಿ ನವೀನ್ ಸಾಲ್ಯಾನ್ ಕಿನ್ನಿಮಜಲು ಮತ್ತು ಸರ್ವ ಸದಸ್ಯರು ಹಾಗೂ ಊರಿನ ಹತ್ತು ಸಮಸ್ತರು ಉಪಸ್ಥಿತರಿದ್ದರು.

ಕಾರಣಿಕದ ರಾಜಗುಳಿಗ
ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಟ್ಯಾರು ಜಂಕ್ಷನ್ನ ಕಲ್ಲಕಟ್ಟ ಎಂಬಲ್ಲಿ ಶ್ರೀ ರಾಜಗುಳಿಗ ಸಾನಿಧ್ಯದಲ್ಲಿ ನೆಲೆಯಾಗಿರುವ ರಾಜಗುಳಿಗ ಅಪಾರ ಕಾರಣಿಕತೆಯನ್ನು ಹೊಂದಿದೆ. ರಾಜಗುಳಿಗನ ಸಾನಿಧ್ಯವು ಸಂಟ್ಯಾರು ಸೇತುವೆಯ ಬಳಿಯಿಂದ ನೂರು ಮೀಟರ್ ದೂರದಲ್ಲಿದೆ. ಇಲ್ಲಿ ಬಂದು ಭಕ್ತಿಯಿಂದ ಬೇಡಿಕೊಳ್ಳುವ ಭಕ್ತನ ಇಷ್ಟಾರ್ಥಗಳನ್ನು ಈಡೇರಿಸುವ ಶಕ್ತಿಯನ್ನು ಹೊಂದಿರುವ ದೈವವಾಗಿದ್ದು ಇದಕ್ಕೆ ಹಲವು ನಿದರ್ಶನಗಳನ್ನು ಕೂಡ ಕಾಣಬಹುದಾಗಿದೆ.