ಅರಿವಿನ ವಿಸ್ತಾರ ಜ್ಯೋತಿರ್ವರ್ಷಗಳಾಗಲಿ – ಲೋಕೇಶ್ ಎಸ್.ಆರ್
ಪುತ್ತೂರು: ವಿಕಾಸದ ಹಾದಿಯಲ್ಲಿ ಪ್ರಶ್ನೆಯು ಪ್ರಜ್ಞೆಯಾಗಲಿ. ಅರಿವಿನ ವಿಸ್ತಾರವು ಜ್ಯೋತಿರ್ವರ್ಷಗಳಷ್ಟು ದೂರಕ್ಕೆ ವಿದ್ಯಾರ್ಥಿಗಳಲ್ಲಿ ಮೂಡಿ ಬರಲಿ. ದೇಶೀಯ ನಿರ್ಮಿತ ತಂತ್ರಜ್ಞಾನಗಳು ಅಂತರಾಷ್ಟ್ರೀಯ ಬ್ರಾಂಡ್ ಗಳಾಗಿ ರೂಪುಗೊಂಡಾಗ ನಮ್ಮ ದೇಶದ ಜ್ಞಾನ ಶಕ್ತಿಯ ನಿಜವಾದ ಅರಿವು ಉಂಟಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ಆಲೋಚನಾ ಕ್ರಮಗಳನ್ನು ರೂಪುಗೊಳಿಸಬೇಕು ಎಂದು ಪುತ್ತೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ ಆರ್ ಹೇಳಿದರು.
ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜು ಕೊಂಬೆಟ್ಟು ಇಲ್ಲಿನ ಪ್ರೌಢಶಾಲಾ ವಿಭಾಗದಲ್ಲಿ ಫೆ.28ರಂದು ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ” ವೈಜ್ಞಾನಿಕ ಪ್ರಜ್ಞೆಯ ಬದ್ಧತೆಯ ಕಾರಣದಿಂದಾಗಿ ವಿಜ್ಞಾನಿಗಳ ಆವಿಷ್ಕಾರದ ಫಲವನ್ನು ನಾವು ಇಂದು ಬಳಸುತ್ತಿದ್ದೇವೆ. ತನ್ನ ಸಂಶೋಧನಾ ಬದುಕು ತನ್ನ ಜೀವಕ್ಕೆ ಮಾರಕವಾಗುತ್ತದೆ ಎಂಬುದರ ಅರಿವಿದ್ದರೂ ಮೇಡಂ ಕ್ಯೂರಿ ವೈಜ್ಞಾನಿಕ ಬದ್ಧತೆಯನ್ನು ತೋರಿ ಸಾಧನೆಯ ಮೂಲಕ ಅಜರಾಮರರಾಗಿದ್ದಾರೆ ” ಎಂದರು.
ಶಾಲಾ ಉಪ ಪ್ರಾಂಶುಪಾಲ ವಸಂತ ಮೂಲ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ವೇದಿಕೆಯಲ್ಲಿ ತಾಲೂಕು ಬಿ ಐ ಆರ್ ಟಿ ತನುಜ, ಶಾಲಾ ಹಿರಿಯ ಶಿಕ್ಷಕಿ ಮಮತಾ ರೈ ಉಪಸ್ಥಿತರಿದ್ದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಗೀತಾಂಜಲಿ ಹಾಗೂ ಜಾನೆಟ್ ಪ್ರಾರ್ಥಿಸಿದರು. ಗೀತಾಂಜಲಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ವಿಜ್ಞಾನ ಶಿಕ್ಷಕಿ ಸೌಮ್ಯ ಲಕ್ಷ್ಮಿ ವಂದಿಸಿದರು. ಶಿಕ್ಷಕರಾದ ಅಮಿತ ,ರಶ್ಮಿ ಹಾಗೂ ಶಿಕ್ಷಕ ವೃಂದದವರು ಸಹಕರಿಸಿದರು.
ಇದೇ ಸಂದರ್ಭದಲ್ಲಿ ತಂಬಾಕು ಮುಕ್ತ ಸಮಾಜ ನಿರ್ಮಾಣದ ಪ್ರಯುಕ್ತ ನಡೆಸಲಾದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ನಂತರ ನಡೆದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ತಮ್ಮ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿದರು. ಸ್ಥಳೀಯ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿ ವಸ್ತು ಪ್ರದರ್ಶನವನ್ನು ವೀಕ್ಷಿಸಿದರು.