ಆಸ್ತಿಯ ವಿಚಾರಕ್ಕಾಗಿ ಕೊಲೆ : ಆರೋಪಿ ಖುಲಾಸೆ

0

ಧರ್ಮಸ್ಥಳ: ರೇಖ್ಯಾ ಗ್ರಾಮದ ಜಾಗದಲ್ಲಿನ ತಕರಾರು ವಿಚಾರಕ್ಕಾಗಿ ತನ್ನ ಸಹೋದರನ ಮಗನನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿಯಾಗಿದ್ದ
ಜಯಚಂದ್ರ ಗೌಡ ಎಂಬಾತನನ್ನು ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಖುಲಾಸೆಗೊಳಿಸಿದೆ.


ಏನಿದು ಪ್ರಕರಣ?

ಬೆಳ್ತಂಗಡಿ ತಾಲೂಕಿನ ರೆಖ್ಯಾ ಗ್ರಾಮದ ದೇವಸ ಎಂಬಲ್ಲಿ ಕೆಂಚಪ್ಪ ಗೌಡರವರ ಕುಟುಂಬ ಮತ್ತು ಆತನ ಸಹೋದರ ಜಯಚಂದ್ರ ಎಂಬವರ ಕುಟುಂಬ ವಾಸವಾಗಿದ್ದು, ಈ ಎರಡು ಕುಟುಂಬಗಳ ನಡುವೆ ಸುಮಾರು ಹತ್ತು ವರ್ಷಗಳಿಂದ ಜಮೀನಿನ ವಿಷಯದಲ್ಲಿ ವಿವಾದ ಉಂಟಾಗಿತ್ತು. ಇದು ಹಲವಾರು ಬಾರಿ ಕುಟುಂಬಸ್ಥರ ನಡುವೆ ತೀರ್ಮಾನಗಳು ನಡೆದರೂ ಸಮಸ್ಯೆ ಬಗೆಹರಿದಿರಲಿಲ್ಲ ಎನ್ನಲಾಗಿದೆ. ಈ ಬಗ್ಗೆ ಹಲವಾರು ಬಾರಿ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರುಗಳು ದಾಖಲಾಗಿದ್ದವು, ಆದರೆ ಸಮಸ್ಯೆ ಬಗೆಹರಿಯಲಿಲ್ಲ. ದಿನಾಂಕ 13/01/2022 ರಂದು ಕೆಂಚಪ್ಪ ಗೌಡರವರ ಮಗ ಶಾಂತಪ್ಪ ಗೌಡ ಕೆಲಸ ಮಾಡುತ್ತಿದ್ದ ಕಂಪೆನಿಗೆ ಕೆಲಸದ ನಿಮಿತ್ತ ಹೋಗುತ್ತಿರುವಾಗ ಜಯಚಂದ್ರನು ಕೆಲಸದವರ ಮುಖಾಂತರ ರಸ್ತೆಯ ಬದಿಯಲ್ಲಿ ಕೆಲಸ ಮಾಡಿಸುತ್ತಿರುವಾಗಇದನ್ನು ನೋಡಿದ ಶಾಂತಪ್ಪ ಗೌಡನು ರಸ್ತೆಯಲ್ಲಿ ಯಾಕೆ ಬಲ್ಲೆ ತೆಗೆಯುತ್ತಿದ್ದೀಯಾ ಎಂದು ಕೇಳಿದಾಗ ಜಯಚಂದ್ರನು ಶಾಂತಪ್ಪ ಗೌಡನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ತನ್ನ ಕೈಯಲ್ಲಿದ್ದ ಕತ್ತಿಯಿಂದ ಹಲ್ಲೆ ನಡೆಸಿದ್ದು, ಘಟನೆಯಿಂದ ಗಾಯಗೊಂಡ ಶಾಂತಪ್ಪ ಗೌಡ ಸ್ಥಳದಲ್ಲಿಯೇ ಬಿದ್ದು ಮೃತಪಟ್ಟಿದ್ದರು.

ಘಟನೆಯನ್ನು ಶಾಂತಪ್ಪ ಗೌಡರ ಅಕ್ಕ ಮೀನಾಕ್ಷಿ, ತಂದೆ ಕೆಂಚಪ್ಪ ಗೌಡ ತಾಯಿ ಕುಂಜ್ಞಮ್ಮ ಹಾಗೂ ಅವರ ಮನೆಯ ಹತ್ತಿರ ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದ ಜೋಸೆಫ್ ಎಂಬವರು ಕಣ್ಣಾರೆ ಕಂಡಿದ್ದರು. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯ ಆಗಿನ ಪಿ.ಎಸ್.ಐ ಕೃಷ್ಣಕಾಂತ ಪಾಟೀಲ್ ಪ್ರಕರಣ ದಾಖಲಿಸಿಕೊಂಡು ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರನ್ನು ಕರೆ ತಂದು ಪರಿಶೀಲಿಸಿ ಜಯಚಂದ್ರ ಗೌಡನನ್ನು ಅರಸಿನಮಕ್ಕಿ ಬಸ್ ನಿಲ್ದಾಣದಲ್ಲಿ ಅದೇ ದಿನ ದಸ್ತಗಿರಿ ಮಾಡಿ, ಆತನು ತೋರಿಸಿಕೊಟ್ಟಂತೆ ಕೃತ್ಯಕ್ಕೆ ಬಳಸಿದ್ದ ಕತ್ತಿಯನ್ನು ವಶಪಡಿಸಿಕೊಂಡಿದ್ದರು.

ಬೆಳ್ತಂಗಡಿ ವೃತ್ತ ನಿರೀಕ್ಷಕರಾದ ಬಿ. ಶಿವಕುಮಾರ್ ಎಂಬುವವರು ತನಿಖೆ ನಡೆಸಿ ದಾಖಲೆಗಳನ್ನು ಸಂಗ್ರಹಿಸಿ ಆರೋಪಿ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣ ಹೆಚ್ಚು ತೀವ್ರ ಸ್ವರೂಪದ್ದಾಗಿದ್ದರಿಂದ ಜಿಲ್ಲಾ ನ್ಯಾಯಾಲಯ ಮತ್ತು ಕರ್ನಾಟಕ ಉಚ್ಛ ನ್ಯಾಯಾಲಯ ಆರೋಪಿಗೆ ಜಾಮೀನು ನಿರಾಕರಣೆ ಮಾಡಿತ್ತು. ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಪ್ರಕರಣದ ಪ್ರತ್ಯಕ್ಷ ಸಾಕ್ಷಿದಾರರಾದ ಮೀನಾಕ್ಷಿ, ಕೆಂಚಪ್ಪಗೌಡ, ಕುಂಜ್ಞಮ್ಮ, ಜೊಸೆಫ್ ಹಾಗೂ ಎಫ್.ಎಸ್.ಎಲ್ ತಜ್ಞರನ್ನು ಹಾಗೂ ಇತರ ಸಾಕ್ಷಿಗಳನ್ನು ಸಾಕ್ಷಿ ವಿಚಾರಣೆಗೆ ಒಳಪಡಿಸಿದ್ದು, ಈ ಪ್ರಕರಣದ ಪ್ರತ್ಯಕ್ಷ ಸಾಕ್ಷಿದಾರರೆಲ್ಲರೂ ಪೂರಕವಾಗಿ ಸಾಕ್ಷಿ ನುಡಿದಿದ್ದರು. ಆದರೆ ಪ್ರಕರಣದಲ್ಲಿ ಆರೋಪವನ್ನು ಸಾಬೀತು ಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ. ಲಭ್ಯವಿದ್ದ ದಾಖಲೆಗಳನ್ನು ಪೊಲೀಸರು ತನಿಖೆ ಸಂದರ್ಭದಲ್ಲಿ ಪಡೆದಿಲ್ಲ ಎಂಬುದನ್ನು ಮನಗಂಡು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರವೀಂದ್ರ ಎಂ. ಜೋಷಿ ರವರು ಆರೋಪಿಯನ್ನು ಖುಲಾಸೆಗೊಳಿಸಿದ್ದಾರೆ. ಆರೋಪಿ ಪರವಾಗಿ ಮಂಗಳೂರಿನ ವಕೀಲರಾದ ವೇಣು ಕುಮಾರ್ ಮತ್ತು ಯುವರಾಜ್ ಕೆ. ಅಮೀನ್‌ರವರು ವಾದಿಸಿದ್ದರು.

LEAVE A REPLY

Please enter your comment!
Please enter your name here