ಪುತ್ತೂರು: ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯಲ್ಲಿ ಹತ್ತನೆಯ ತರಗತಿಯ ವಿದ್ಯಾರ್ಥಿನಿಯರಿಗೆ ವಿದಾಯ ಸಮಾರಂಭ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಯ್ ದೆ ದೇವುಸ್ ಸಮೂಹ ಸಂಸ್ಥೆಗಳ ಸಂಚಾಲಕ ವಂ| ಲಾರೆನ್ಸ್ ಮಸ್ಕರೇನ್ಹಸ್ ಮಾತನಾಡಿ ನಮ್ಮ ಸಂಸ್ಕಾರ, ನಡತೆ ಚೆನ್ನಾಗಿ ಇರಬೇಕು. ತಂದೆ-ತಾಯಿ, ಶಿಕ್ಷಕರು, ಹಿರಿಯರು ನಮಗೆ ಸಂಸ್ಕಾರ ನೀಡುವ ವ್ಯಕ್ತಿಗಳು ಅವರನ್ನು ಗೌರವ, ಪ್ರೀತಿಯಿಂದ ಕಾಣಬೇಕು. ಒಳ್ಳೆಯ ಚಿಂತನೆಯನ್ನು ಮೈಗೂಡಿಸಿ ಭಯ-ಭಕ್ತಿಯಿಂದ ನಡೆದು ಇತರರಿಗೆ ಒಳಿತು ಮಾಡಬೇಕು. ಸಿಗುವ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಂಡು ಜೀವನದಲ್ಲಿ ಉನ್ನತ ಸ್ಥಾನಕ್ಕೇರಿ ಹೆತ್ತವರಿಗೆ, ಕಲಿತ ಸಂಸ್ಥೆಗೆ ಒಳ್ಳೆಯ ಹೆಸರನ್ನು ತರುವ ವ್ಯಕ್ತಿಗಳಾಗಿ ಬಾಳಬೇಕು” ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಂ|ಫಾ| ಅಶೋಕ್ ರಾಯನ್ ಕ್ರಾಸ್ತಾ ಮಾತನಾಡಿ ಶಾಲಾ ದಿನಗಳು ಸಂತೋಷದಾಯಕ ದಿನಗಳು. ಇಲ್ಲಿ ಕಳೆದ ಕ್ಷಣಗಳು ಮರಳಿ ಬರುವುದಿಲ್ಲ. ಈ ಪ್ರಪಂಚವು ಈಗ ನಾವು SMART ಆಗಿ ಇರಬೇಕು ಎಂದು ಬಯಸುತ್ತದೆ. ಆದುದರಿಂದ ಜೀವನದಲ್ಲಿ ಕನಸು ಇರಬೇಕು.ಆ ಕನಸನ್ನು ಸಾಕಾರಗೊಳಿಸಲು ಕಠಿಣ ಪರಿಶ್ರಮ ಪಡಬೇಕು.ಸೋಲು ಗೆಲುವಿನ ಒಂದು ಭಾಗ. ಸೋತಾಗ ನೋವು ಪಡದೆ, ಗೆದ್ದಾಗ ಅಹಂ ತೋರಿಸದೆ ಜೀವನದಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ನಮ್ಮದಾಗಬೇಕು. ಎಂದು ಶುಭ ಹಾರೈಸಿದರು.
ಮಾಯ್ ದೆ ದೇವುಸ್ ಚರ್ಚ್‌ನ ಸಹಾಯಕ ಧರ್ಮಗುರು ವಂ|ಫಾ|ಲೋಹಿತ್ ಅಜಯ್ ಮಸ್ಕರೇನ್ಹಸ್ ಮಾತನಾಡಿ ಜೀವನದಲ್ಲಿ ಒಳಿತು-ಕೆಡುಕು ಇರುತ್ತದೆ. ಒಳಿತನ್ನು ಆಯ್ಕೆ ಮಾಡಿ ಜೀವನದಲ್ಲಿ ಸಂತೋಷವಾಗಿರಿ. ಜೀವನದಲ್ಲಿ ಬರುವ ಸವಾಲುಗಳನ್ನು ಎದುರಿಸಿ ಮುಂದೆ ಸಾಗಿದಾಗ ಯಶಸ್ಸು ಲಭಿಸುತ್ತದೆ. ಎಂದು ಹೇಳಿದರು. ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಇವಾನ್ ಮಸ್ಕರೇನ್ಹಸ್ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ಕೊಡಲ್ಪಡುವ ವಿದ್ಯಾರ್ಥಿ ವೇತನವನ್ನು ವಿತರಿಸಿ ವಿದ್ಯಾರ್ಥಿನಿಯರನ್ನು ಹಿರಿಯ ವಿದ್ಯಾರ್ಥಿ ಸಂಘಕ್ಕೆ ಸ್ವಾಗತಿಸಿ ಶಾಲಾಭಿವೃದ್ಧಿ ಕಾರ್ಯಕ್ಕೆ ಕೈಜೋಡಿಸಲು ತಿಳಿಸಿದರು. ಮಾಯ್ ದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆರಾಲ್ಡ್ ಡಿಕೋಸ್ಟರವರು ಮಾತನಾಡಿ ದೇವರ ಮೇಲೆ ನಂಬಿಕೆ, ತಂದೆ ತಾಯಿಯ ಮೇಲೆ ಗೌರವ, ನಾವು ಕಲಿತ ಸಂಸ್ಥೆಯ ಮೇಲೆ ಅಭಿಮಾನ ಇರಬೇಕು. ಎಂದು ಶುಭ ನುಡಿದರು. ಶಾಲಾ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ಪಿ.ಎಮ್ ಅಶ್ರಫ್ ಮಾತನಾಡಿ ನಾವು ನಾಳೆಗಾಗಿ ಕಾಯಬಾರದು. ನಮ್ಮ ಕೆಲಸವನ್ನು ಇಂದೇ ಮಾಡಿ ಮುಗಿಸಬೇಕು. ಹೆತ್ತವರನ್ನು, ಶಿಕ್ಷಕರನ್ನು ಇಂದಿನಿಂದಲೇ ಸಂತೋಷವಾಗಿರಿಸಲು ಪ್ರಯತ್ನಿಸಬೇಕು. ಮುಂದಿನ ಜೀವನದಲ್ಲಿ ಒಳಿತಾದಾಗ ನಮ್ಮ ದುಡಿತದ ಒಂದು ಭಾಗವನ್ನು ನಾವು ದಾನ-ಧರ್ಮ ಮಾಡಬೇಕು ಎಂದು ತಿಳಿಸಿದರು. ಶಾಲಾ ನಾಯಕಿ ಸಮೀಕ್ಷಾ ಹಾಗೂ 10ನೇ ತರಗತಿ ವಿದ್ಯಾರ್ಥಿ ಪ್ರತಿನಿಧಿಗಳಾದ ಖತಿಜತುಲ್ ಶಮ್ನ, ಸ್ಪರ್ಶ ಶೆಟ್ಟಿ, ಜೋಸ್ವಿಟ ಪಾಸ್ ಹಾಗೂ ಶ್ರೇಯಾ ಎಂ.ಆರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ಸಹಶಿಕ್ಷಕಿ ಭವ್ಯ ಶಿಕ್ಷಕರ ಪರವಾಗಿ ಶುಭ ಹಾರೈಸಿದರು. ಹತ್ತನೇ ತರಗತಿಯ ವಿದ್ಯಾರ್ಥಿನಿ ಪ್ರತಿನಿಧಿಗಳಾದ ಜೋಸ್ವಿಟ ಪಾಸ್ ಹಾಗೂ ಶ್ರೇಯಾ ಎಂ.ಆರ್. ಅನಿಸಿಕೆ ವ್ಯಕ್ತಪಡಿಸಿದರು. ಶಿಕ್ಷಕಿ ರೀನಾ ರೆಬೆಲ್ಲೊ ಹಾಗೂ ಹರಿಣಾಕ್ಷಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿನಿಯರ ಹೆಸರನ್ನು ವಾಚಿಸಿದರು. ವಾದ್ಯಗೋಷ್ಠಿಯೊಂದಿಗೆ ಕಾರ್ಯಕ್ರಮದ ಗಣ್ಯರನ್ನು ವೇದಿಕೆಗೆ ಬರಮಾಡಿಕೊಳ್ಳಲಾಯಿತು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಾಲಾ ಮುಖ್ಯಗುರು ರೋಸ್‌ಲಿನ್ ಲೋಬೊ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ವಿದ್ಯಾರ್ಥಿನಿಯರು ಉತ್ತಮ ರೀತಿಯಲ್ಲಿ ಪರೀಕ್ಷೆಯನ್ನು ಎದುರಿಸಲು ಮೊಂಬತ್ತಿಯನ್ನು ಹಚ್ಚುವುದರ ಮೂಲಕ ಸಮರ್ಪಣಾ ಪ್ರಾರ್ಥನೆಯನ್ನು ನಡೆಸಿಕೊಟ್ಟರು. ಶಾಲಾ ಉಪನಾಯಕಿ ಮಾನ್ಯ ವಂದಿಸಿದರು. 9ನೇ ತರಗತಿಯ ವಿದ್ಯಾರ್ಥಿನಿಯರಾದ ಧೃತಿ, ಸಮೃದ್ಧಿ ವಿ.ಎಸ್ ಕಾರ್ಯಕ್ರಮ ನಿರೂಪಿಸಿದರು.