ಪುತ್ತೂರು: ಸಂತ ಫಿಲೋಮಿನ ಅನುದಾನಿತ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ತರಗತಿ ವಿದ್ಯಾರ್ಥಿಗಳಿಗೆ ವಿದಾಯಕೂಟ ಏರ್ಪಡಿಸಲಾಯಿತು.
ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆರಾಲ್ಡ್ ಡಿಸೋಜ ಮಾತನಾಡಿ ವಿದ್ಯಾರ್ಥಿಗಳು ಮುಂದಿನ ಶಿಕ್ಷಣಕ್ಕಾಗಿ ಬೇರೆ ವಿದ್ಯಾಸಂಸ್ಥೆಗೆ ಹೋದರೆ ಈ ಸಂಸ್ಥೆಯ ಮತ್ತು ಹೆತ್ತವರ ಹೆಸರನ್ನು, ಗೌರವವನ್ನು ಉಳಿಸಬೇಕು ಮತ್ತು ಹೆಚ್ಚಿಸಬೇಕು ಎಂದು ಹೇಳಿದರು.

ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷೆ ಸೌಮ್ಯ ಭಟ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಯಕುಮಾರ್ ರೈ ಸಂದರ್ಬೋಚಿತವಾಗಿ ಮಾತನಾಡಿ, ಉತ್ತಮ ಫಲಿತಾಂಶ ಪಡೆಯುವಂತೆ ಶುಭಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಮಾಯ್ ದೆ ದೇವುಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ.ಲಾರೆನ್ಸ್ ಮಸ್ಕರೇನ್ಹಸ್ ಮಾತನಾಡಿ, ಜೀವನದಲ್ಲಿ ಆಶೀರ್ವಾದ ಅಥವಾ ಶಾಪವನ್ನು ಆಯ್ಕೆ ಮಾಡುವ ಅವಕಾಶ ಭಗವಂತ ಪ್ರತಿಯೊಬ್ಬನಿಗೂ ನೀಡಿದ್ದಾನೆ. ಆಯ್ಕೆ ನಿಮ್ಮದು. ಆಶೀರ್ವಾದವನ್ನು ಆರಿಸಿದ್ದಲ್ಲಿ ಜೀವನ ಪಾವನವಾಗುವುದು. ವಿನಯಶೀಲತೆ, ವಿಧೇಯತೆ, ಸರ್ವರನ್ನು ಪ್ರೀತಿಸುವ ವೈಶಾಲ್ಯತೆಯನ್ನು ಬೆಳೆಸಿಕೊಂಡಲ್ಲಿ ಆಶೀರ್ವಾದ ಮತ್ತು ಯಶಸ್ಸನ್ನು ಪಡೆಯುವಿರಿ. ಇತರರೊಂದಿಗೆ ಹೋಲಿಕೆ ಸಲ್ಲದು. ಪರರಿಂದ ಒಳ್ಳೆಯದನ್ನು ಎರವಲು ಪಡೆಯಿರಿ ಮತ್ತು ನಿಮ್ಮ ಸಾಧನೆಯಿಂದ ಸಮಾಜದಲ್ಲಿರುವ ನಿರ್ಗತಿಕರಿಗೆ ಸಹಕಾರ ನೀಡಿರಿ ಎಂದು ಹೇಳಿದರು. ಶಿಕ್ಷಕರ ಪರವಾಗಿ ಆಶಾ ರೆಬೆಲ್ಲೋ ಶುಭಹಾರೈಸಿದರು. ಮುಖ್ಯಗುರು ವಂ. ಮ್ಯಾಕ್ಸಿಮ್ ಡಿಸೋಜ ಮತ್ತು ವಿದ್ಯಾರ್ಥಿ ನಾಯಕ ತರುಣ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಂಗಳಜ್ಯೋತಿ ಕೇಂದ್ರ ಮಂಗಳೂರು ಇವರು ನಡೆಸಿದ ಮೌಲ್ಯ ಶಿಕ್ಷಣ ಮತ್ತು ಕ್ರೈಸ್ತ ಶಿಕ್ಷಣದಲ್ಲಿ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಹತ್ತನೆಯ ವಿದ್ಯಾರ್ಥಿಗಳಿಗೆ ಶುಭಹಾರೈಸುವ ಗೀತೆಯನ್ನು ಹಾಡಲಾಯಿತು. ವಿದ್ಯಾರ್ಥಿಗಳಾದ ಫಾತಿಮಾತ್ ಝುಲ್ಫ ಮತ್ತು ತರುಣ್ ಅನಿಸಿಕೆ ವ್ಯಕ್ತಪಡಿಸಿದರು. ಉತ್ತಮ ಅಂಕ ಹಾಗೂ ಉತ್ತಮ ಭವಿಷ್ಯವನ್ನು ಸಾಧಿಸುವ ಸಲುವಾಗಿ ಮುಖ್ಯಗುರುಗಳು ಹತ್ತನೆಯ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ನೆರವೇರಿಸಿದರು. ಹತ್ತನೆಯ ವಿದ್ಯಾರ್ಥಿಗಳು ಶಾಲೆಗೆ ನೆನಪಿನ ಕಾಣಿಕೆಯನ್ನು ಹಸ್ತಾಂತರಿಸಿದರು.
ಸರ್ವ ಧರ್ಮ ಪ್ರಾರ್ಥನಾ ವಿಧಿಯೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ಮುಖ್ಯಗುರು ವಂ.ಮ್ಯಾಕ್ಸಿಮ್ ಡಿಸೋಜ ಸ್ವಾಗತಿಸಿದರು. ವಿದ್ಯಾರ್ಥಿ ಜೀತನ್ ಕಾರ್ಯಕ್ರಮ ನಿರೂಪಿಸಿ ಶಾಲಾ ವಿದ್ಯಾರ್ಥಿ ಉಪನಾಯಕಿ ಮೋನಿಷಾ ವಂದಿಸಿದರು.