ಪುತ್ತೂರು: ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಇಲಾಖೆಯಿಂದ ಅತ್ಯುತ್ತಮ ಶಾಲಾ ನಿರ್ವಹಣೆ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಸಂಬಂಧಿಸಿ ಸಮೀಕ್ಷೆ ನಡೆಸಿದ್ದು .ಈ ಸಮೀಕ್ಷೆಯಲ್ಲಿ ಪುತ್ತೂರು ಕಡಬ ತಾಲೂಕಿನ ವೀರಮಂಗಲ ಪಿಎಂಶ್ರೀ ಶಾಲೆ ಅತ್ಯುತ್ತಮ ಶಾಲೆಯಾಗಿ ಪುಷ್ಠಿ ಗೌರವದೊಂದಿಗೆ ಒಂದು ಲಕ್ಷ ನಗದು ಬಹುಮಾನವನ್ನು ಪಡೆದಿದೆ.
ಪುತ್ತೂರು ಮತ್ತು ಕಡಬ ತಾಲೂಕಿನ ಎಲ್ಲಾ ಕಿರಿಯ ಪ್ರಾಥಮಿಕ ,ಹಿರಿಯ ಪ್ರಾಥಮಿಕ ಹಾಗೂ ಹೈಸ್ಕೂಲ್ ಗಳು ಇಲಾಖೆಯ ವಿದ್ಯಾವಾಹಿನಿ ಪೋರ್ಟಲ್ ನಲ್ಲಿ ಪ್ರಸ್ತಾವನೆ ಸಲ್ಲಿಸಿದ್ದವು. ಆಯಾ ಕ್ಲಸ್ಟರ್ ಸಿ ಆರ್ ಪಿಗಳು ಪರಿಶೀಲಿಸಿ ಮುಂದಿನ ಹಂತಕ್ಕೆ ವರದಿ ಮಾಡಿದ್ದರು.
ಮೊದಲ ಹಂತದಲ್ಲಿ 3 ಪ್ರೌಡಶಾಲೆಗಳು, 3 ಕಿರಿಯ ಪ್ರಾಥಮಿಕ ಶಾಲೆಗಳು ಹಾಗೂ 3 ಹಿರಿಯ ಪ್ರಾಥಮಿಕ ಶಾಲೆಗಳು ತಾಲೂಕು ಹಂತದಲ್ಲಿ ಆಯ್ಕೆಯಾಗಿದ್ದವು. ಆಯ್ಕೆಯಾದ 9 ಶಾಲೆಗಳನ್ನು ಸಮನ್ವಯಾಧಿಕಾರಿ ಗಳು ಬಿ ಆರ್ ಪಿಗಳು ಅತಿ ಸೂಕ್ಷ್ಮವಾಗಿ ಪರಿಶೀಲಿಸಿ ವರದಿ ಮಾಡಿದ್ದರು. ಬಳಿಕ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇರುವ ತಂಡ ಭೇಟಿ ನೀಡಿ ಸಮಗ್ರ ಸಮೀಕ್ಷೆಯನ್ನು ಕೈ ಗೊಂಡಿತ್ತು, ಈ ವರದಿ ಆಧಾರದ ಮೇಲೆ 3 ಶಾಲೆಗಳು ಜಿಲ್ಲಾ ಹಂತಕ್ಕೆ ಆಯ್ಕೆಯಾಗಿತ್ತು.
ಜಿಲ್ಲಾ ಹಂತಕ್ಕೆ ಆಯ್ಕೆಯಾದ ತಾಲೂಕಿನ ಮೂರು ಶಾಲೆಗಳ ಸಮೀಕ್ಷೆಗಾಗಿ ಜಿಲ್ಲಾ ಉಪನಿರ್ದೇಶಕರು ಆಡಳಿತ ಮತ್ತು ಜಿಲ್ಲಾ ಉಪನಿರ್ದೇಶಕರು ಅಭಿವೃದ್ಧಿ ಇವರ ತಂಡವು ಭೇಟಿ ನೀಡಿ ಸಮಗ್ರ ಸಮೀಕ್ಷೆ ಕೈಗೊಂಡಿದ್ದರು.

ಶಾಲೆಯ ಬೆಳವಣಿಗೆಗೆ ಎಸ್ ಡಿ ಎಂ ಸಿ ಯ ಕೊಡುಗೆ, ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಮುಖ್ಯ ಶಿಕ್ಷಕರ ಮತ್ತು ಶಿಕ್ಷಕರ ಕಾರ್ಯಕ್ಷಮತೆ, ಅಡುಗೆ ಸಿಬ್ಬಂಧಿಗಳ ಕಾರ್ಯ ಚಟುವಟಿಕೆ, ಪೋಷಕರ ಪಾಲ್ಗೊಳ್ಳುವಿಕೆ, ಹಿರಿಯ ವಿದ್ಯಾರ್ಥಿಗಳ ಕೊಡುಗೆ ಮತ್ತು ಪಾಲ್ಗೊಳ್ಳುವಿಕೆ ಇತರೆ ,ಸಂಘ ಸಂಸ್ಥೆಯವರ ಕೊಡುಗೆಗಳು ಮತ್ತು ಪಾಲ್ಗೊಳ್ಳುವಿಕೆಯ ಸವಿಸ್ತಾರ ಪರಿಶೀಲನೆ ಮಾಡಿ ರಾಜ್ಯ ಹಂತಕ್ಕೆ ವರದಿ ಮಾಡಿದ್ದರು. 5 ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು,ಸದಸ್ಯರು ಮುಖ್ಯಗುರುಗಳು ಹಿರಿಯ ಶಿಕ್ಷಕರ ಅನುಭವಾತ್ಮಕ ಭೇಟಿ ಸಮಗ್ತ ಪರಿಶೀಲನೆ ಮಾಡಿ ವಿದ್ಯಾಪೋರ್ಟಲ್ ನಲ್ಲಿ ವರದಿ ಸಲ್ಲಿಸಲಾಗಿತ್ತು. ಎಲ್ಲಾ ಸಮೀಕ್ಷೆಯಲ್ಲೂ ವೀರಮಂಗಲ ಪಿಎಂಶ್ರೀ ಶಾಲೆಯ ನಿರ್ವಹಣೆ ಅತ್ಯುತ್ತಮ ಎಂದು ಪರಿಗಣಿಸಿ ಈ ಸಂಸ್ಥೆಗೆ ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ ಒಂದು ಲಕ್ಷ ನಗದು ಬಹುಮಾನ ಮತ್ತು ಪುಷ್ಠಿ ಗೌರವ ವನ್ನು ನೀಡಿ ಅಭಿನಂದಿಸಿದೆ. ಈಗಾಗಲೆ ಕೇಂದ್ರ ಸರ್ಕಾರ ಪುರಸ್ಕೃತ ಪ್ರದಾನ ಮಂತ್ರಿ ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ ಶೀರ್ಷಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಅರ್ಹವಾಗಿಯೇ ಶಾಲೆಗೆ ಪುಷ್ಠಿ ಗೌರವ ದೊರೆತಿದ್ದು, ಪುತ್ತೂರು ತಾಲೂಕಿನ ಅತ್ಯುತ್ತಮ ಎಸ್ ಡಿ ಎಂ ಸಿ ಹಾಗೂ ಉತ್ತಮ ಶಾಲೆಯಾಗಿ ಮೂಡಿ ಬಂದಿರುವುದು ಶ್ಲಾಘನೀಯ.ಶಾಲೆಯು ಉತ್ತಮವಾಗಿ ಶೈಕ್ಷಣಿಕ ಗುಣಮಟ್ಟ ಕಾಪಾಡಿಕೊಂಡು ಬಂದಿದೆ. ಇಲಾಖೆಯ ಕೆಲಸಕಾರ್ಯಗಳು, ಎಸ್ ಡಿ ಎಂ ಸಿ ನಿರ್ವಹಣೆ, ಶಾಲಾ ಮುಖ್ಯಗುರುಗಳ ಕಾರ್ಯಕ್ಷಮತೆ, ಶಿಕ್ಷಕರ ಬದ್ದತೆ, ಮಕ್ಕಳ ಭಾಗವಹಿಸುವಿಕೆ ಹೆಮ್ಮೆ ತಂದಿದೆ.-
ಲೋಕೇಶ್ ಎಸ್ ಆರ್. ಕ್ಷೇತ್ರ ಶಿಕ್ಷಣಾಧಿಕಾರಿ ಪುತ್ತೂರು
ಪುಷ್ಠಿ ಪ್ರಶಸ್ತಿ ಶಿಕ್ಷಕರಿಗೆ ಪೋಷಕರಿಗೆ ಮಕ್ಕಳಿಗೆ ಅರ್ಪಣೆಯಾಗಬೇಕು –
ರವಿಚಂದ್ರ ಅಧ್ಯಕ್ಷರು ಎಸ್ ಡಿ ಎಂ ಸಿ ವೀರಮಂಗಲ
ನಮ್ಮ ಸಂಸ್ಥೆ ನಮಗೆ ಯಾವತ್ತೂ ದಾರಿದೀಪ.ಇಲ್ಲಿನ ಮುಖ್ಯಗುರುಗಳು ಶಿಕ್ಷಕರು ನಮ್ಮನ್ನೆಲ್ಲ ಒಟ್ಟುಗೂಡಿಸಿ ಶಾಲೆಯ ಕಡೆ ಮುಖ ಮಾಡುವಂತೆ ಮಾಡಿದ್ದಾರೆ ನಮಗೆ ತೊಡಗಿಕೊಳ್ಳಲು ಅವಕಾಶ ಸಿಕ್ಕಿದೆ ಎಸ್ ಡಿ ಎಂ ಸಿ ಯವರ ಸಾಧನೆಗೆ ಅಭಿನಂದನೆಗಳು-
ವಸಂತ ವೀರಮಂಗಲ ಅಧ್ಯಕ್ಷರು ಹಿರಿಯ ವಿದ್ಯಾರ್ಥಿ ಸಂಘ
ಊರವರ ಸಹಕಾರದಲ್ಲಿ ಶಾಲೆಗೊಂದು ಸಭಾಮಂದಿರ ನಿರ್ಮಿಸಲು ಸಾಧ್ಯವಾಗಿದೆ.ಶ್ರಮಕ್ಕೆ ಗೌರವ ಸಿಕ್ಕಿದೆ-
ಗೋಪಾಲಕೃಷ್ಣ , ಕಾರ್ಯದರ್ಶಿ ಹಿರಿಯ ವಿದ್ಯಾರ್ಥಿ ಸಂಘ
ಶಾಲೆಯು ನಿರಂತರವಾಗಿ ಅಭಿವೃದ್ಧಿ ಹೊಂದಲು ಇಲಾಖಾಧಿಕಾರಿಗಳ, ಹಿರಿಯ ವಿದ್ಯಾರ್ಥಿಗಳ ಎಸ್ ಡಿ ಎಂ ಸಿ ಯವರ ಮತ್ತು ಪೋಷಕರ ಹಾಗೂ ಮಕ್ಕಳ ಕೊಡುಗೆ ಅನನ್ಯವಾಗಿದೆ. ಈ ಪ್ರೋತ್ಸಾಹ ಶಾಲೆಯಲ್ಲಿ ಮಕ್ಕಳಿಗೆ ಶಿಶುಸ್ನೇಹಿಯಾಗಿ,ಪರಿಸರ ಸ್ನೇಹಿಯಾಗಿ ಕಾರ್ಯನಿರ್ವಹಿಸಲು ನಮಗೆ ಉತ್ತೇಜನ ದೊರೆಯುತ್ತದೆ. ನಮ್ಮ ಜವಾಬ್ದಾರಿ ಹೆಚ್ಚಿದೆ.
ತಾರಾನಾಥ ಸವಣೂರು ಶಾಲಾ ಮುಖ್ಯಗುರು