ನೆಲ್ಯಾಡಿ: ವಾರದ ಹಿಂದೆ ವಿಷ ಸೇವಿಸಿ ಅಸ್ವಸ್ಥರಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಕೌಕ್ರಾಡಿಯ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮಾ.25ರಂದು ಸಂಜೆ ಮೃತಪಟ್ಟಿದ್ದಾರೆ.
ಕೌಕ್ರಾಡಿ ಗ್ರಾಮದ ಆರೆಂಬಿ ನಿವಾಸಿ ಸುಬ್ಬಣ್ಣ ಗೌಡರವರ ಪುತ್ರ ರವಿ ಎ.(32ವ.)ಮೃತಪಟ್ಟವರಾಗಿದ್ದಾರೆ. ಅವಿವಾಹಿತರಾಗಿದ್ದ ರವಿ ಅವರು ನಾಲ್ಕೈದು ವರ್ಷಗಳಿಂದ ಫಿಡ್ಸ್ ಖಾಯಿಲೆಯಿಂದ ಬಳಲುತ್ತಿದ್ದರು. ಇವರು ಈ ಮೊದಲು ಟ್ಯಾಂಕರ್‌ನಲ್ಲಿ ಕೆಲಸ ಮಾಡಿಕೊಂಡಿದ್ದು ಬಳಿಕ ಸೌತಡ್ಕ ದೇವಸ್ಥಾನದಲ್ಲಿ ಕೆಲಸ ಮಾಡಿಕೊಂಡಿದ್ದರು. ಕಳೆದ 3 ವರ್ಷಗಳಿಂದ ಮನೆಯಲ್ಲಿಯೇ ಇದ್ದು ಆಗಾಗ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಆರೇಳು ವರ್ಷಗಳಿಂದ ವಿಪರೀತ ಅಮಲು ಪದಾರ್ಥ ಸೇವನೆ ಮಾಡುತ್ತಿದ್ದರು. ಮಾ.18ರಂದು ಮಧ್ಯಾಹ್ನ ಮನೆಯಲ್ಲಿ ಮಲಗಿದ್ದ ರವಿ ಅವರ ಬಾಯಿಯಲ್ಲಿ ನೊರೆ ಬರುತ್ತಿರುವುದನ್ನು ತಾಯಿ ರೇವತಿಯವರು ಗಮನಿಸಿದ್ದು ವಿಷ ಪದಾರ್ಥದ ವಾಸನೆ ಬರುತಿತ್ತು. ಈ ಹಿನ್ನೆಲೆಯಲ್ಲಿ ರವಿ ಅವರನ್ನು ಅವರ ಸಹೋದರರು ಕಾರಿನಲ್ಲಿ ನೆಲ್ಯಾಡಿ ಅಶ್ವಿನಿ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ನೀಡಿ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಅತ್ತಾವರ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ರವಿ ಅವರಿಗೆ ಚಿಕಿತ್ಸೆ ಸರಿಯಾಗಿ ಫಲಿಸದೇ ಇದ್ದುದರಿಂದ ಅಲ್ಲಿಂದ ಬಿಡುಗಡೆಗೊಳಿಸಿ ಮಾ.22ರಂದು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮಾ.25ರಂದು ರವಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ರವಿ ಅವರ ಅಣ್ಣ ಕುಶಾಲಪ್ಪ ಗೌಡ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.