ಅಧ್ಯಕ್ಷರಾಗಿ ಡಾ|ಎಲ್ಯಾಸ್ ಪಿಂಟೊ ಪುನಾರಾಯ್ಕೆ,ಕಾರ್ಯದರ್ಶಿ:ಹೆರಾಲ್ಡ್ ಡಿ’ಸೋಜ, ಕೋಶಾಧಿಕಾರಿ:ಸಿಪ್ರಿಯನ್ ಮೊರಾಸ್
ಪುತ್ತೂರು: ಮಾಯಿದೆ ದೇವುಸ್ ಚರ್ಚ್ ವ್ಯಾಪ್ತಿಗೊಳಪಟ್ಟ ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿ(ಸಿಎಲ್ಸಿ) ಇದರ ೨೦೨೫-೨೬ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಸಂಘದ ಆತ್ಮೀಕ ನಿರ್ದೇಶಕ ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್ರವರ ಮಾರ್ಗದರ್ಶನದಲ್ಲಿ ಮಾ.30 ರಂದು ಜರಗಿತು.
ಪ್ರಸ್ತುತ ಅಧ್ಯಕ್ಷರಾಗಿರುವ ಕೊಂಬೆಟ್ಟು ನಿವಾಸಿ ಹಾಗೂ ಸಂತ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ|ಎಲ್ಯಾಸ್ ಪಿಂಟೊರವರು ಪುನರಾಯ್ಕೆಗೊಂಡಿದ್ದಾರೆ.
ಕಾರ್ಯದರ್ಶಿಯಾಗಿ ಸಂಟ್ಯಾರ್ ನಿವಾಸಿ ಹೆರಾಲ್ಡ್ ಡಿ’ಸೋಜ, ಕೋಶಾಧಿಕಾರಿಯಾಗಿ ಎಪಿಎಂಸಿ ರಸ್ತೆ ನಿವಾಸಿ, ಸುಪ್ರೀಮ್ ಸರ್ವೀಸಸ್ ಮಾಲಕ ಸಿಪ್ರಿಯಾನ್ ಮೊರಾಸ್ರವರು ಆಯ್ಕೆಗೊಂಡಿದ್ದಾರೆ. ಉಳಿದಂತೆ ಉಪಾಧ್ಯಕ್ಷರಾಗಿ ಕ್ರಿಸ್ಟೋಫರ್ ಅರ್ಥ್ಮೂವರ್ಸ್ ಮಾಲಕ ರೋಯ್ಸ್ಟನ್ ಡಾಯಸ್ ಎಪಿಎಂಸಿ ರಸ್ತೆ, ಜೊತೆ ಕಾರ್ಯದರ್ಶಿಯಾಗಿ ಸಂತ ಫಿಲೋಮಿನಾ ಕಾಲೇಜು ಉದ್ಯೋಗಿ ನವೀನ್ ಡಿ’ಸೋಜ ಪದವು, ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಎಂಸಿಸಿ ಬ್ಯಾಂಕ್ ಸಿಬ್ಬಂದಿ ಐವನ್ ವೇಗಸ್ ಬಲ್ನಾಡು, ಲಿತುರ್ಜಿ(ಆಧ್ಯಾತ್ಮಿಕ)ಕಾರ್ಯದರ್ಶಿಯಾಗಿ ಸಂತ ಫಿಲೋಮಿನಾ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ನರೇಶ್ ಲೋಬೊ ಕೊಂಬೆಟ್ಟು, ಸಿ.ಎಲ್.ಸಿ ಸ್ಟಾಲ್ ಮುಖ್ಯಸ್ಥರಾಗಿ ಡೆನ್ನಿಸ್ ಸೆರಾವೋ ಸಾಮೆತ್ತಡ್ಕ, ಆಡಿಟರ್ ಆಗಿ ಸಂತ ಫಿಲೋಮಿನಾ ಪ್ರೌಢಶಾಲೆಯ ನಿವೃತ್ತ ಆಡಳಿತ ಸಿಬ್ಬಂದಿ ವಿಲಿಯಂ ನೊರೋನ್ಹಾ, ಎಸ್ಕೋ ಸದಸ್ಯರಾಗಿ ಇಂಡಿಯನ್ ಬ್ಯಾಂಕ್ ಉದ್ಯೋಗಿ ಜೇಸನ್ ವರ್ಗೀಸ್ ದರ್ಬೆ, ಸಮಿತಿ ಸದಸ್ಯರಾಗಿ ನಿಕಟಪೂರ್ವ ಕಾರ್ಯದರ್ಶಿ ರುಡಾಲ್ಫ್ ಪಿಂಟೊ ಪಾಂಗ್ಲಾಯಿ-ದರ್ಬೆರವರು ನೇಮಕಗೊಂಡಿದ್ದಾರೆ.
ಚುನಾವಣಾಧಿಕಾರಿಯಾಗಿ ಹಿರಿಯ ಸದಸ್ಯ ವಿಲಿಯಂ ನೊರೊನ್ಹಾರವರು ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟು ನೂತನ ಪದಾಧಿಕಾರಿಗಳಿಗೆ ಅಧಿಕಾರವನ್ನು ಹಸ್ತಾಂತರಿಸಿದರು.
ಅಧ್ಯಕ್ಷರ ಪರಿಚಯ:
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಾ|ಎಲ್ಯಾಸ್ ಪಿಂಟೋರವರು ಈ ಹಿಂದೆಯೂ ಮೂರು ಬಾರಿ ಸಿಎಲ್ಸಿ ಸಂಘದ ಅಧ್ಯಕ್ಷರಾಗಿ, ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸಂಘವನ್ನು ಮುನ್ನೆಡೆಸುವ ಅನುಭವ ಹೊಂದಿರುತ್ತಾರೆ. ಎಲ್ಯಾಸ್ ಪಿಂಟೋರವರು ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿ, ಮೈಸೂರು ವಿ.ವಿಯಲ್ಲಿ ಸ್ನಾತಕೋತ್ತರ ಪದವಿಯನ್ನು, ಎಂಫಿಲ್ ಪದವಿ, ಡಾಕ್ಟರೇಟ್ ಪದವಿಯನ್ನು ಪಡೆದಿರುತ್ತಾರೆ ಜೊತೆಗೆ ‘ಡೈಮೆನ್ಶನ್ ಆಫ್ ಯೋಗ ಆಂಡ್ ಹೆಲ್ತಿ ಲಿವಿಂಗ್’ ಕುರಿತಾಗಿ ಪುಸ್ತಕವನ್ನು ಬರೆದಿದ್ದು ರಾಷ್ಟ್ರೀಯ ಜರ್ನಲ್ಸ್ಗಳಲ್ಲಿ ಹಲವಾರು ಪತ್ರಿಕೆಗಳನ್ನು ಪ್ರಕಟಿಸಿರುತ್ತಾರೆ. ಮೈಸೂರು ವಿವಿ ಅಂತರ್ ಕಾಲೇಜು ಅಥ್ಲೆಟಿಕ್ ಸ್ಪರ್ಧೆಯ ಡೆಕತ್ಲಾನ್ ಹಾಗೂ ಜಾವೆಲಿನ್ ತ್ರೋನಲ್ಲಿ ಚಿನ್ನದ ಪದಕ, ಮೈಸೂರು ಅಂತರ್ ಕಾಲೇಜು ಕಬಡ್ಡಿ ಪಂದ್ಯಾಟದಲ್ಲಿ ಚಿನ್ನದ ಪದಕ ಗಳಿಸಿದ್ದ ಇವರು ಪ್ರತಿಷ್ಠಿತ ಕೆಎಸ್ಸಿಎ(ಕರ್ನಾಟಕ ರಾಜ್ಯ ಕ್ರಿಕೆಟ್ ಆಸೋಸಿಯೇಶನ್) ವಲಯ ಮಟ್ಟದ ಕ್ರಿಕೆಟ್ ಆಟಗಾರರಾಗಿರುತ್ತಾರೆ. ವಿಭಾಗ ಮಟ್ಟದ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದ ಎಲ್ಯಾಸ್ ಪಿಂಟೊರವರು ಓರ್ವ ರಾಜ್ಯ ಮಟ್ಟದ ಡ್ಯಾನ್ಸರ್, ಹಾಡುಗಾರರಾಗಿದ್ದು ಈಸ್ಟರ್ನ್ ಹಾಗೂ ವೆಸ್ಟರ್ನ್ ಡ್ಯಾನ್ಸ್ ಪ್ರವೀಣರಾಗಿರುತ್ತಾರೆ. ರೋಟರಿ ಕ್ಲಬ್ ಪುತ್ತೂರು ಯುವದ ಸದಸ್ಯರಾಗಿರುವ ಎಲ್ಯಾಸ್ ಪಿಂಟೊರವರು ಮಡಂತ್ಯಾರು ಸೆಕ್ರೇಡ್ ಹಾರ್ಟ್ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಯುಜಿಸಿ ಅನುದಾನದಲ್ಲಿ ಸುಸಜ್ಜಿತ ಒಳಾಂಗಣ ಕ್ರೀಡಾಂಗಣ, 400ಮೀ. ಟ್ರ್ಯಾಕ್ ಕ್ರೀಡಾಂಗಣದ ಅಭಿವೃದ್ಧಿಯಲ್ಲಿ ಸಂಸ್ಥೆಯ ಆಡಳಿತ ಮಂಡಳಿಯೊಂದಿಗೆ ಕೈಜೋಡಿಸಿರುತ್ತಾರೆ. ಅಂತರ್ರಾಷ್ಟ್ರೀಯ ಕಬಡ್ಡಿಪಟು ರೋಸ್ಮೇರಿ ಪ್ರೆಸಿಲ್ಲಾ, ಪ್ರೊ ಕಬಡ್ಡಿ ಪ್ರಶಾಂತ್ ರೈ, ಡೆಕಾತ್ಲಾನ್ನಲ್ಲಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಕಂಚಿನ ಪದಕ ಪಡೆದ ರಾಮಚಂದ್ರ ಪಾಟ್ಕರ್, ಜಾವೆಲಿನ್ನಲ್ಲಿ ಹರೀಶ್ ಕೆ.ವಿ, ಏಕಲವ್ಯ ಪ್ರಶಸ್ತಿ ಪುರಸ್ಕೃತ ದಿ.ಉದಯ ಚೌಟ ಅಲ್ಲದೆ ಸುಮಾರು ೨೦೦ಕ್ಕೂ ಮಿಕ್ಕಿ ಫಿಲೋಮಿನಾ ಹಾಗೂ ಮಡಂತ್ಯಾರು ಕಾಲೇಜ್ನ ಕ್ರೀಡಾಪಟುಗಳು ಎಲ್ಯಾಸ್ರವರ ಗರಡಿಯಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿರುತ್ತಾರೆ.
ಕಾರ್ಯದರ್ಶಿ/ಕೋಶಾಧಿಕಾರಿ ಪರಿಚಯ:
ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಹೆರಾಲ್ಡ್ ಡಿ’ಸೋಜರವರೋರ್ವ ಶ್ರಮಜೀವಿ. ವಿಶೇಷಚೇತನ ಹುಡುಗಿಯನ್ನು ತನ್ನ ಬಾಳ ಸಂಗಾತಿಯನ್ನಾಗಿ ಸ್ವೀಕರಿಸಿದವರು. ಪ್ರಸ್ತುತ ಅಲ್ಪಸಂಖ್ಯಾತರ ತಾಲೂಕು ಮಾಹಿತಿ ಕೇಂದ್ರ ಪುತ್ತೂರು ‘ಡಿ’ ಗ್ರೂಪ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಜೊತೆಗೆ ತನ್ನ ಪತ್ನಿಯೊಂದಿಗೆ ತಾಲೂಕು ಪಂಚಾಯತ್ ಕಟ್ಟಡದಲ್ಲಿ ಜೆರಾಕ್ಸ್ ಹಾಗೂ ಜನಸೇವಾ ಕೇಂದ್ರ ಹೊಂದಿರುವ ಆಶೀರ್ವಾದ್ ಎಂಟರ್ಪ್ರೈಸಸ್ ಸಂಸ್ಥೆಯನ್ನು ಮುನ್ನೆಡೆಸುತ್ತಿದ್ದಾರೆ. ಕೋಶಾಧಿಕಾರಿಯಾಗಿ ಆಯ್ಕೆಯಾದ ಸಿಪ್ರಿಯಾನ್ ಮೊರಾಸ್ ರವರು ಸಂಘದಲ್ಲಿ ಈ ಹಿಂದೆಯೂ ಕೋಶಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿದವರಾಗಿದ್ದಾರೆ. ಸಿಪ್ರಿಯಾನ್ ಮೊರಾಸ್ರವರು ತಾಲೂಕು ಧ್ವನಿ, ಬೆಳಕು, ಶಾಮಿಯಾನ ಸಂಘದ ಗೌರವ ಸಲಹೆಗಾರರಾಗಿ, ಮಾಯಿದೆ ದೇವುಸ್ ಚರ್ಚ್ನ ಕ್ರಿಸ್ಟೋಫರ್ ಅಸೋಸಿಯೇಶನ್ನ ಸದಸ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.