ಸೈನಿಕನಿಗೆ ಯಾವತ್ತೂ ನಿವೃತ್ತಿಯಿಲ್ಲ: ಸತ್ಯಜಿತ್ ಸುರತ್ಕಲ್
ದೇಶ ಸೇವೆಗೆ ನೂರು ದಾರಿಗಳಿವೆ; ಶ್ರೀ ಕೃಷ್ಣ ಉಪಾಧ್ಯಾಯ
ನೆಲ್ಯಾಡಿ: ಭಾರತೀಯ ಭೂ ಸೇನೆಯಲ್ಲಿ ಸುಮಾರು 17 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಹುಟ್ಟೂರಿಗೆ ಆಗಮಿಸಿದ ಗೋಳಿತ್ತೊಟ್ಟು ಗ್ರಾಮದ ಅಂಬುಡೇಲು ನಿವಾಸಿ ಕರುಣಾಕರ ಶೆಟ್ಟಿಯವರಿಗೆ ಗೋಳಿತ್ತೊಟ್ಟು ರಾಷ್ಟ್ರ ಭಕ್ತರ ವೇದಿಕೆ ವತಿಯಿಂದ ಅದ್ದೂರಿ ಸ್ವಾಗತ ಹಾಗೂ ಅಭಿನಂದನಾ ಸಮಾರಂಭ ಎ.6ರಂದು ನಡೆಯಿತು.
ನಿವೃತ್ತಿಯಾಗಿ ಹುಟ್ಟೂರಿಗೆ ಆಗಮಿಸಿದ ಕರುಣಾಕರ ಶೆಟ್ಟಿಯವರಿಗೆ ನೆಲ್ಯಾಡಿಯಲ್ಲಿ ಸ್ವಾಗತ ಕೋರಿ ಅಲ್ಲಿಂದ ತೆರೆದ ವಾಹನದಲ್ಲಿ ವಾಹನ ಜಾಥಾದೊಂದಿಗೆ ಮೆರವಣಿಗೆಯಲ್ಲಿ ಗೋಳಿತ್ತೊಟ್ಟಿಗೆ ಕರೆ ತರಲಾಯಿತು. ಗೋಳಿತ್ತೊಟ್ಟು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಮಂಗಳೂರು ರಾಷ್ಟ್ರ ಭಕ್ತರ ವೇದಿಕೆ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಅವರು, ಸೈನಿಕನಿಗೆ ಯಾವತ್ತೂ ನಿವೃತ್ತಿ ಇಲ್ಲ. ದೇಶಕ್ಕೆ ಅವಶ್ಯಕತೆ, ಅನಿವಾರ್ಯತೆ ಒದಗಿಬಂದಲ್ಲಿ ದೇಶ ಸೇವೆ ಮಾಡಬೇಕಾಗುತ್ತದೆ. ಇದು ಸೇನೆಯ ನಿಯಮವೂ ಆಗಿದೆ ಎಂದರು. ಈಗಿನ ಸಂದರ್ಭದಲ್ಲಿ ಸೈನಿಕರ ಕುಟುಂಬವೇ ಸೇನೆಗೆ ಸೇರುತ್ತಿರುವುದನ್ನು ನೋಡುತ್ತಿದ್ದೇವೆ. ಸೈನ್ಯಕ್ಕೆ ಸೇರುವಂತೆ ಯುವಕರಿಗೆ ಪ್ರೇರಣೆ ನೀಡಬೇಕು. ಸೈನಿಕನ ಕುಟುಂಬದ ಜೊತೆಗೆ ಸಮಾಜ ನಿಲ್ಲಬೇಕು ಎಂದು ಸತ್ಯಜಿತ್ ಸುರತ್ಕಲ್ ಹೇಳಿದರು.

ದಿಕ್ಸೂಚಿ ಭಾಷಣ ಮಾಡಿದ ಧಾರ್ಮಿಕ ಮುಖಂಡ ಶ್ರೀಕೃಷ್ಣ ಉಪಾಧ್ಯಾಯರವರು, ಜೀವನದಲ್ಲಿ ಪ್ರತಿಯೊಬ್ಬರೂ ಭಗವಂತ ಮೆಚ್ಚುವ ದಾರಿ ಆಯ್ಕೆ ಮಾಡಿಕೊಳ್ಳಬೇಕು. ಈ ರೀತಿ ಯೋಚನೆ ಮಾಡಿದ್ದಲ್ಲಿ ಆ ಊರು ರಾಮರಾಜ್ಯವಾಗಲಿದೆ. ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ ಎಂಬ ಅರಿವಿದ್ದರೂ ಪಾಕಿಸ್ತಾನ ಮತ್ತೆ ಮತ್ತೆ ಭಾರತದ ಮೇಲೆ ದಾಳಿ ಮಾಡುತ್ತಿದೆ. ಆದ್ದರಿಂದ ನಮಗೆ ಸೈನಿಕರು ಅನಿವಾರ್ಯವಾಗಿದ್ದಾರೆ ಎಂದು ಹೇಳಿದ ಅವರು, ದೇಶ ಭಕ್ತಿ ಬಹಳಷ್ಟು ಜನರಲ್ಲಿ ಇಲ್ಲ. ದೇಶ ಸೇವೆಗೆ ನೂರು ದಾರಿಗಳಿವೆ. ತನ್ನ ಪ್ರತಿಭೆಯನ್ನು ದೇಶಕ್ಕೆ ಸಮರ್ಪಿಸಿದಲ್ಲಿ ದೇಶ ರಾಮರಾಜ್ಯವಾಗಲಿದೆ. ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ಕರುಣಾಕರ ಶೆಟ್ಟಿಯವರ ಮುಂದಿನ ಬದುಕು ಬಂಗಾರವಾಗಲಿ ಎಂದು ಹೇಳಿ ಶುಭ ಹಾರೈಸಿದರು.
ಅತಿಥಿಯಾಗಿದ್ದ ಅಂಬಿಕಾ ಪ್ರಭು ಉಡುಪಿ ಮಾತನಾಡಿ, 17 ವರ್ಷ ದೇಶ ಸೇವೆ ಮಾಡಿರುವ ಕರುಣಾಕರ ಶೆಟ್ಟಿ ಅವರ ಜೀವನದ ಇನ್ನೊಂದು ಮಜಲು ಆರಂಭಗೊಂಡಿದೆ. ಮುಂದಿನ ಅವರ ಜೀವನ ಸುಖಮಯವಾಗಿರಲೆಂದು ಹಾರೈಸಿದರು. ಇನ್ನೋರ್ವ ಅತಿಥಿ ತಾ.ಪಂ.ಮಾಜಿ ಸದಸ್ಯೆ ತೇಜಸ್ವಿನಿ ಕಟ್ಟಪುಣಿ ಮಾತನಾಡಿ, ಕರುಣಾಕರ ಶೆಟ್ಟಿ ಅವರು ನೇರ ನಡೆ ನುಡಿಯ ವ್ಯಕ್ತಿತ್ವ ಉಳ್ಳವರು. ದೇಶ ಕಾಯುವ ಪುಣ್ಯ ಎಲ್ಲರಿಗೂ ಸಿಗುವುದಿಲ್ಲ. ಹಿಂದೆ ಸೇನೆಗೆ ಸೇರಲು ಪ್ರೋತ್ಸಾಹ ಸಿಗುತ್ತಿರಲಿಲ್ಲ. ಈಗ ಪ್ರೋತ್ಸಾಹ ದೊರೆತರೂ ಸೇನೆಗೆ ಸೇರುವವರ ಸಂಖ್ಯೆ ಕಡಿಮೆ ಇದೆ. ೧೭ ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾದ ಕರುಣಾಕರ ಶೆಟ್ಟಿ ಅವರ ಜೀವನ ಸುಖಮಯವಾಗಿರಲೆಂದು ಹಾರೈಸಿದರು. ಮನ್ಮಥ ಶೆಟ್ಟಿ ಮಾತನಾಡಿ, ಹುಟ್ಟೂರಿನಲ್ಲಿ ಸಿಗುವ ಸನ್ಮಾನ ಎಲ್ಲಾ ಪ್ರಶಸ್ತಿಗಳಿಗಿಂತಲೂ ಮಿಗಿಲಾಗಿರುವುದು. ಕುಟುಂಬ, ಊರು ಬಿಟ್ಟು ದೇಶ ಸೇವೆ ಮಾಡುವ ಸೈನಿಕರು ಕಣ್ಣಿಗೆ ಕಾಣುವ ದೇವರು ಎಂದು ಹೇಳಿದ ಅವರು, ಕರುಣಾಕರ ಶೆಟ್ಟಿಯವರ ಮುಂದಿನ ಜೀವನ ಸುಖಮಯವಾಗಿರಲೆಂದು ಹಾರೈಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಿರ್ಲೆ ಶ್ರೀ ಮಹಾವಿಷ್ಣು ದೇವಸ್ಥಾನದ ಆಡಳಿತ ಮೊಕ್ತೇಸರರಾದ ಮಾಧವ ಸರಳಾಯ ಮಾತನಾಡಿ, ಮಹಾಭಾರತದ ಕರ್ಣನಂತೆ ಕರುಣಾಕರ ಶೆಟ್ಟಿಯೂ ವಿನಯಶೀಲತೆ, ಧೈರ್ಯವಂತ. ಸೇನೆಯಲ್ಲಿದ್ದರೂ ಹುಟ್ಟೂರಿನೊಂದಿಗೆ ನಿಕಟ ಸಂಪರ್ಕವಿರಿಸಿಕೊಂಡಿದ್ದರು. ಮುಂದೆ ಅವರಿಗೆ ನೆಮ್ಮದಿಯ ಜೀವನ ಸಿಗಲಿ ಎಂದು ಹಾರೈಸಿದರು. ಗೊಳಿತ್ತೊಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಸವಿತಾ ಪುಳಾರ, ನೆಲ್ಯಾಡಿ ವಲಯ ಬಂಟರ ಸಂಘದ ಸಹ ಸಂಚಾಲಕ ಜಯಾನಂದ ಬಂಟ್ರಿಯಾಲ್ ನೆಲ್ಯಾಡಿ, ಗೋಳಿತ್ತೊಟ್ಟು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಜಯಂತಿ ಬಿ.ಎಂ., ಎಸ್‌ಡಿಎಂಸಿ ಅಧ್ಯಕ್ಷ ಗೋಪಾಲ ಗೌಡ ಕುದ್ಕೋಳಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಬ್ದುಲ್ ಹಾರೀಫ್, ಯೋಧ ದೇವಿಪ್ರಸಾದ್ ಮುಗೇರಡ್ಕ, ವಿಶ್ವನಾಥ ಗೌಡ ಪೆರಣ, ಕರುಣಾಕರ ಶೆಟ್ಟಿಯವರ ತಂದೆ ಕೃಷ್ಣ ಶೆಟ್ಟಿ, ತಾಯಿ ಸುಂದರಿ, ಪತ್ನಿ ಭಾಗ್ಯಶ್ರೀ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪುರುಷೋತ್ತಮ ಕುದ್ಕೋಳಿ ಸ್ವಾಗತಿಸಿ, ಪುಷ್ಪಾವತಿ ವಂದಿಸಿದರು. ಸುಧೀರ್‌ಕುಮಾರ್ ನೆಲ್ಯಾಡಿ ಕಾರ್ಯಕ್ರಮ ನಿರೂಪಿಸಿದರು. ಮಧ್ಯಾಹ್ನ ಸಿಹಿ ಭೋಜನ ನೀಡಲಾಯಿತು.
ಸನ್ಮಾನ:
ಅಭಿನಂದನಾ ಸಮಾರಂಭದಲ್ಲಿ ಗೋಳಿತ್ತೊಟ್ಟು ರಾಷ್ಟ್ರಭಕ್ತರ ವೇದಿಕೆ ವತಿಯಿಂದ ಯೋಧ ಕರುಣಾಕರ ಶೆಟ್ಟಿ, ಅವರ ಪತ್ನಿ ಭಾಗ್ಯಶ್ರೀ, ಪುತ್ರ ಶೌರ್ಯ ಶೆಟ್ಟಿ, ತಂದೆ ಕೃಷ್ಣ ಶೆಟ್ಟಿ, ತಾಯಿ ಸುಂದರಿ ಅವರನ್ನು ಸನ್ಮಾನಿಸಲಾಯಿತು. ನೆಲ್ಯಾಡಿ ವಲಯ ಬಂಟರ ಸಂಘ, ಗೋಳಿತ್ತೊಟ್ಟು ಸರಕಾರಿ ಉ.ಹಿ.ಪ್ರಾ.ಶಾಲಾ ಎಸ್‌ಡಿಎಂಸಿ ಹಾಗೂ ಶಿಕ್ಷಕವೃಂದ ಸಹಿತ ವಿವಿಧ ಸಂಘಟನೆಗಳಿಂದಲೂ ಕರುಣಾಕರ ಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಕರುಣಾಕರ ಶೆಟ್ಟಿ ಅವರು ಮಾತನಾಡಿ, ಅಭಿನಂದನಾ ಸಮಾರಂಭ ಆಯೋಜಿಸಿದವರಿಗೆ ಹಾಗೂ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಅದ್ದೂರಿ ಮೆರವಣಿಗೆ:
ನಿವೃತ್ತಿಯಾಗಿ ಹುಟ್ಟೂರಿಗೆ ಆಗಮಿಸಿದ ಕರುಣಾಕರ ಶೆಟ್ಟಿ ಅವರನ್ನು ಬೆಳಿಗ್ಗೆ ನೆಲ್ಯಾಡಿಯಲ್ಲಿ ಹಾರಾರ್ಪಣೆ ಮಾಡಿ ಸ್ವಾಗತಿಸಲಾಯಿತು. ಬಳಿಕ ಅಲ್ಲಿಂದ ತೆರೆದ ವಾಹನದಲ್ಲಿ ವಾಹನ ಜಾಥಾದೊಂದಿಗೆ ಗೋಳಿತ್ತೊಟ್ಟಿಗೆ ಕರೆತರಲಾಯಿತು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಸಾಮಾಜಿಕ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ, ಸತ್ಯಜಿತ್ ಸುರತ್ಕಲ್ ಸೇರಿದಂತೆ ಹಲವು ಗಣ್ಯರು, ವಿವಿಧ ಸಂಘಟನೆಗಳ ಮುಖಂಡರು ಮೆರವಣಿಗೆಯಲ್ಲಿ ಆಗಮಿಸಿದರು. ಸುರೇಶ್ ಪಡಿಪಂಡ ನಿರೂಪಿಸಿದರು.