ಉಪ್ಪಿನಂಗಡಿ: ಇಲ್ಲಿನ ಅಡಿಕೆ ಅಂಗಡಿಯೊಳಗಿಂದ 5 ಲಕ್ಷ ರೂ. ಹಣವನ್ನು ಕದ್ದೊಯ್ದ ಘಟನೆಗೆ ಸಂಬಂಧಿಸಿ ಪೊಲೀಸರಿಂದ ಮಹತ್ವದ ಸುಳಿವು ಸಂಗ್ರಹಿಸಲ್ಪಟ್ಟಿದ್ದು, ತನಿಖೆ ಬಿರುಸಿನಿಂದ ಸಾಗಿದೆ.
ಇಲ್ಲಿನ ಗಾಂಧೀಪಾರ್ಕ್ನ ಶ್ರೀ ರಾಮಗೋಪಾಲ್ ಕಾಮತ್ ವಾಣಿಜ್ಯ ಸಂಕೀರ್ಣದಲ್ಲಿರುವ ಉದ್ಯಮಿ ವಸಂತ ಗೌಡ ಎಂಬವರಿಗೆ ಸೇರಿರುವ ಅಡಿಕೆ ಮತ್ತು ಕಾಡುತ್ಪತ್ತಿ ವ್ಯಾಪಾರ ಕೇಂದ್ರವಾದ ‘ಗುಂಡಿಜೆ ಟ್ರೇಡರ್ಸ್’ನಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಅಂಗಡಿಯ ಕ್ಯಾಷ್ ಡ್ರಾವರ್ ಗೆ ಬೀಗ ಹಾಕಿ ಮೂತ್ರ ವಿಸರ್ಜಿಸಲು ಹೋಗಿದ್ದ ಮಾಲಕರು ಹಿಂದುರುಗಿ ಬರುವ ವೇಳೆ ಕ್ಯಾಶ್ ಡ್ರಾವರ್ ಬೀಗ ತೆರೆದು ಅದರಲ್ಲಿದ್ದ 5 ಲಕ್ಷ ರೂ ನಗದು ಹಣವನ್ನು ಹಾಗೂ ಚೆಕ್ ಪುಸ್ತಕವನ್ನು ಹೊಂದಿದ್ದ ಬ್ಯಾಗನ್ನೇ ಎಗರಿಸಿದ್ದರು.
ಸಾರ್ವಜನಿಕ ವಲಯದಲ್ಲಿ ಭಾರೀ ಕಳವಳಕ್ಕೆ ತುತ್ತಾಗಿರುವ ಈ ಕಳವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಅಧಿಕಾರಿಗಳು ಪರಿಸರದ ಎಲ್ಲಾ ಸಿಸಿ ಕ್ಯಾಮಾರಾಗಳನ್ನು ಪರಿಶೀಲನೆಗೆ ಒಳಪಡಿಸುತ್ತಿದ್ದು, ಈ ವೇಳೆ ಮಹತ್ವದ ಸುಳಿವು ದೊರೆತ್ತಿದೆ ಎನ್ನಲಾಗಿದೆ.
ಹಳೆಯ ಬೈಕು: ಬೆಳ್ತಂಗಡಿ ಪ್ರಕರಣಕ್ಕೆ ಸಾಮ್ಯತೆ:
ಸಿಸಿ ಕ್ಯಾಮಾರಾದಲ್ಲಿ ಸಂಶಯಾಸ್ಪದವಾಗಿ ಗೋಚರಿಸಿದ ಹಳೆಯ ಬೈಕೊಂದು ಈ ಪ್ರಕರಣದಲ್ಲಿ ಕೇಂದ್ರ ಬಿಂದುವಾಗಿದ್ದು, ಅದನ್ನು ಆಧರಿಸಿ ತನಿಖೆ ನಡೆಯುತ್ತಿದೆ. ಇಲ್ಲಿ ಕಳ್ಳನು ಬೆಳಗ್ಗೆ 9.30 ಗಂಟೆಯಿಂದ ಕಳ್ಳತನಕ್ಕೆ ಹೊಂಚು ಹಾಕಿ ಈ ಪರಿಸರದಲ್ಲಿ ಕಾದಿದ್ದ ಎನ್ನಲಾಗಿದೆ. ಈ ಪ್ರಕರಣದಲ್ಲಿ ಕಾಣಿಸಿದ ಬೈಕಿಗೂ ಕಳೆದ ತಿಂಗಳಲ್ಲಿ ಬೆಳ್ತಂಗಡಿ ಸಮೀಪ ಘಟಿಸಿದ ಇದೇ ತೆರನಾದ ಕಳವು ಪ್ರಕರಣದಲ್ಲಿ ಕಾಣಿಸಿದ ಬೈಕಿಗೆ ಸಾಮ್ಯತೆ ಇದೆ ಎನ್ನಲಾಗಿದೆ. ಎರಡೂ ಪ್ರಕರಣದಲ್ಲಿ ಭಾಗಿಯಾಗಿರುವ ತಂಡ ಆಗಿರುವ ಸಂಭವವಿದ್ದು, ಈ ನಿಟ್ಟಿನಲ್ಲಿ ಪೊಲೀಸ್ ತನಿಖೆ ಸಾಗುತ್ತಿದೆ.
