ಪುತ್ತೂರು: ಬೆಳ್ತಂಗಡಿ ಮತ್ತು ಪುತ್ತೂರು ತಾಲೂಕಿನ ಗಡಿಭಾಗವಾದ ಅರಸಿನಮಕ್ಕಿಯಲ್ಲಿ ನಡೆದಿದ್ದ ನಕ್ಸಲ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಆರೋಪ ಎದುರಿಸುತ್ತಿರುವ ನಕ್ಸಲ್ ನಾಯಕ ಬಿ.ಜಿ.ಕೃಷ್ಣಮೂರ್ತಿ ಮತ್ತು ಕಬಿನಿ ದಳದ ಮುಖ್ಯಸ್ಥೆ ಸಾವಿತ್ರಿಯವರನ್ನು ಕೇರಳದ ತ್ರಿಶೂರ್ ಜೈಲಿನಿಂದ ಬಾಡಿವಾರಂಟ್ ಮೂಲಕ ವಶಕ್ಕೆ ಪಡೆದ ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ವಿಜಯ ಪ್ರಸಾದ್ ನೇತೃತ್ವದ ಪೊಲೀಸರು ಎ.7ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಬಿ.ಜಿ.ಕೃಷ್ಣಮೂರ್ತಿ ಮತ್ತು ಕಳಸದ ಸಾವಿತ್ರಿಯವರನ್ನು ಹೆಚ್ಚಿನ ತನಿಖೆಗಾಗಿ ಮೂರು ದಿನ ಪೊಲೀಸ್ ಕಸ್ಟಡಿಗೆ ಬೆಳ್ತಂಗಡಿ ನ್ಯಾಯಾಲಯದ ನ್ಯಾಯಾಧೀಶ ಸಂದೇಶ್ ಅವರು ಒಪ್ಪಿಸಿ ಆದೇಶಿಸಿದ್ದಾರೆ. ಈ ವೇಳೆ ಬಿ.ಜಿ.ಕೃಷ್ಣಮೂರ್ತಿ ಮತ್ತು ಸಾವಿತ್ರಿ ಪರ ವಕೀಲ ಶಿವಕುಮಾರ್ ಹಾಜರಾಗಿದ್ದರು. ಬೆಳ್ತಂಗಡಿ ತಾಲೂಕು ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಂಧಿತ ನಕ್ಸಲರ ಆರೋಗ್ಯ ತಪಾಸಣೆ ನಡೆಸಿದ ಬಳಿಕ ಪೊಲೀಸರು ಮಹಜರು ಪ್ರಕ್ರಿಯೆ ನಡೆಸಿದ್ದಾರೆ.
ಬಾಡಿವಾರಂಟ್ ಮೂಲಕ ವಶಕ್ಕೆ ಪಡೆದ ಪೊಲೀಸರು:
ಬೆಳ್ತಂಗಡಿ ತಾಲೂಕಿನ ಕುತ್ಲೂರುನಲ್ಲಿ ರಾಮಚಂದ್ರ ಭಟ್ ಎಂಬವರ ಕಾರಿಗೆ ಬೆಂಕಿ ಹಚ್ಚಿರುವ, ಮಿತ್ತಬಾಗಿಲಿನಲ್ಲಿ ಪೊಲೀಸರ ಮೇಲೆ ದಾಳಿ ಮಾಡಿರುವ ಮತ್ತು ಅರಸಿನಮಕ್ಕಿಯಲ್ಲಿ ಮನೆಯೊಂದರ ಗೋಡೆಯ ಮೇಲೆ ನಕ್ಸಲ್ ಪರ ಬರಹ ಬರೆದಿರುವ ಆರೋಪ ಎದುರಿಸುತ್ತಿರುವ ಬಿ.ಜಿ.ಕೃಷ್ಣಮೂರ್ತಿ ಮತ್ತು ಸಾವಿತ್ರಿ ಅವರನ್ನು ಕೇರಳದ ತ್ರಿಶೂರ್ ಜೈಲಿನಿಂದ ಬಾಡಿ ವಾರಂಟ್ ಮೂಲಕ ವಶಕ್ಕೆ ಪಡೆದ ಬಂಟ್ವಾಳ ಡಿವೈಎಸ್ಪಿ ವಿಜಯ ಪ್ರಸಾದ್ ನೇತೃತ್ವದ ಪೊಲೀಸರು ಬೆಳ್ತಂಗಡಿ ನ್ಯಾಯಾಲಯಕ್ಕೆ ಎ.೭ರಂದು ಹಾಜರುಪಡಿಸಿದರು. ಈ ವೇಳೆ ಬಿ.ಜಿ.ಕೃಷ್ಣಮೂರ್ತಿ ಮತ್ತು ಸಾವಿತ್ರಿ ಅವರನ್ನು ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಧೀಶರು ಮೂರು ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿದರು. ಬಿಗಿ ಪೊಲೀಸ್ ಭದ್ರತೆಯಲ್ಲಿ ಕರೆ ತರಲಾಗಿದ್ದ ನಕ್ಸಲರನ್ನು ಬೆಳ್ತಂಗಡಿ ತಾಲೂಕು ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಿದ ನಂತರ ಪೊಲೀಸರು ಮಹಜರು ಪ್ರಕ್ರಿಯೆ ನಡೆಸಿದರು.
2005ರಿಂದ ನಕ್ಸಲ್ ತಂಡದ ನಾಯಕತ್ವ ವಹಿಸಿಕೊಂಡಿದ್ದ ಬಿ.ಜಿ. ಕೃಷಮೂರ್ತಿ ಮತ್ತು ಕೇರಳ ವಯನಾಡಿನ ಕಬಿನಿ ದಳದ ಮುಖ್ಯಸ್ಥೆಯಾಗಿದ್ದ ಸಾವಿತ್ರಿಯವರನ್ನು 2021ರ ನವೆಂಬರ್ 9ರಂದು ಬಂಧಿಸಿ ಕೇರಳದ ತ್ರಿಶೂರ್ ಜೈಲಿನಲ್ಲಿರಿಸಲಾಗಿತ್ತು. ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿರುವ ಈ ಮೂರು ಕೃತ್ಯಗಳ ತನಿಖೆ ನಡೆಸುವ ಹಿನ್ನೆಲೆಯಲ್ಲಿ ಬಾಡಿ ವಾರಂಟ್ ಮೂಲಕ ತ್ರಿಶೂರ್ ಜೈಲಿನಿಂದ ವಶಕ್ಕೆ ಪಡೆದ ಇಲ್ಲಿನ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ ನಂತರ ವಿಚಾರಣೆ ನಡೆಸಿದ್ದಾರೆ. ಬಿ.ಜಿ. ಕೃಷ್ಣಮೂರ್ತಿ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 53 ಕೇಸು ಮತ್ತು ಸಾವಿತ್ರಿ ವಿರುದ್ಧ 22 ಕೇಸ್ ದಾಖಲಾಗಿದೆ.
ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಂ ಗೌಡ(48 ವ) 2024ರ ನ.18ರಂದು ಮಧ್ಯರಾತ್ರಿ ತನ್ನ ಊರಾದ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಕಬ್ಬಿನಾಲೆಯ ಪೀತಬೈಲು ಎಂಬಲ್ಲಿ ಎನ್ಕೌಂಟರ್ಗೆ ಬಲಿಯಾದ ಘಟನೆ ನಡೆದ ಬಳಿಕ ಈ ಭಾಗದಲ್ಲಿ ನಕ್ಸಲ್ ಚಟುವಟಿಕೆ ಸ್ಥಗಿತಗೊಂಡಿದೆ. 2025ರ ಜನವರಿ 8ರಂದು ನಕ್ಸಲ್ ನಾಯಕಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಮುಂಡಗಾರು ಲತಾ, ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುತ್ಲೂರಿನ ಸುಂದರಿ, ವನಜಾಕ್ಷಿ ಬಾಳೆಹೊಳೆ, ಮಾರೆಪ್ಪ ಅರೋಲಿ ಕುತ್ತೂರು, ಕೆ. ವಸಂತ ತಮಿಳುನಾಡು ಮತ್ತು ಟಿ.ಎನ್.ಜಿಷಾ ಕೇರಳ ಅವರು ಏಕಕಾಲದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಎದುರು ಶರಣಾದ ಬಳಿಕ ನಕ್ಸಲ್ ಚಟುವಟಿಕೆ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಆ ನಂತರ ತಲೆಮರೆಸಿಕೊಂಡಿದ್ದ ಶೃಂಗೇರಿಯ ರವೀಂದ್ರ ಮತ್ತು ಕುಂದಾಪುರದ ಲಕ್ಷ್ಮಿ ಶರಣಾದ ನಂತರ ನಕ್ಸಲ್ ಯುಗ ಅಂತ್ಯ ಕಂಡಿದೆ. ಇದೇ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ನಕ್ಸಲ್ ನಿಗ್ರಹ ಪಡೆಯನ್ನು ಬರ್ಖಾಸ್ತುಗೊಳಿಸಿದೆ.