ಉಪ್ಪಿನಂಗಡಿ ಶ್ರೀರಾಮ ಶಾಲೆಯಲ್ಲಿ ಕವನ ಸಂಕಲನಗಳ ಚೊಚ್ಚಲ ಕೃತಿಗಳ ಲೋಕಾರ್ಪಣೆ

0

ಪ್ರೋತ್ಸಾಹದ ನುಡಿಗಳ ಪ್ರೇರಣೆಯಿಂದ ಸಾಧನೆ ಸಾಧ್ಯ: ಉಮೇಶ್ ನಾಯಕ್

ಉಪ್ಪಿನಂಗಡಿ: ಎಳೆಯ ಮನಸ್ಸುಗಳನ್ನು ಪ್ರೋತ್ಸಾಹದ ನುಡಿಗಳೊಂದಿಗೆ ಪ್ರೇರಣೆ ನೀಡಿದರೆ ಮಕ್ಕಳಲ್ಲಿನ ಸಾಹಿತ್ಯಾಸಕ್ತಿಯನ್ನು ಅರಳಿಸಿ ಪ್ರಕಾಶಿಸಲು ಸಾಧ್ಯ ಎನ್ನುವುದನ್ನು ಉಪ್ಪಿನಂಗಡಿಯ ಶ್ರೀ ರಾಮ ಶಾಲೆಯ ಸಿರಿಸಿಂಗಾರ ಸಾಹಿತ್ಯ ಸಂಘವು ಸಾಧಿಸಿ ತೋರಿಸಿದೆ ಎಂದು ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ತಿಳಿಸಿದರು.


ಉಪ್ಪಿನಂಗಡಿಯ ಶ್ರೀ ರಾಮ ಶಾಲೆಯಲ್ಲಿ ಸಿರಿಸಿಂಗಾರ ಸಾಹಿತ್ಯ ಸಂಘದ ಆಶ್ರಯದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ರಚಿತವಾದ ಕವನ ಸಂಕಲನಗಳ ಚೊಚ್ಚಲ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕೃತಿಯೊಂದನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.


ಪ್ರಯತ್ನ , ಭಯ , ಆಸೆ, ನಿರಾಸೆ, ಮೊದಲಾದವುಗಳಿಂದ ಕೂಡಿದ ಎಳೆಯ ಮನಸ್ಸುಗಳನ್ನು ಪ್ರೋತ್ಸಾಹದ ಮಾತು ಮತ್ತು ಧನಾತ್ಮಕ ಸ್ಪಂದನೆ ದೊರೆತರೆ ಸಾಧನೆಯತ್ತ ಸಾಗಬಹುದೆನ್ನುವುದಕ್ಕೆ ಶ್ರೀ ರಾಮ ಶಾಲಾ ವಿದ್ಯಾರ್ಥಿನಿಯರಾದ ಕಾವ್ಯಶ್ರೀ ಮತ್ತು ಶಿವಾನಿಯವರ ಚೊಚ್ಚಲ ಕೃತಿಗಳೇ ಸಾಕ್ಷಿ ಎಂದರು.


ಕಾರ್ಯಕ್ರಮದಲ್ಲಿ ಹಿಂಗಾರ ಅರಳಿಸಿ ಕೃತಿಯೊಂದನ್ನು ಬಿಡುಗಡೆಗೊಳಿಸಿದ ಹಿರಿಯ ಸಾಹಿತಿ ಪ್ರೊ. ವಿ.ಬಿ. ಅರ್ತಿಕಜೆ ಮಾತನಾಡಿ, ಮಕ್ಕಳ ಪ್ರತಿಭೆಯನ್ನು ಗುರುತಿಸಿ , ಸೂಕ್ತ ಪ್ರೋತ್ಸಾಹವನ್ನು ನೀಡಿ, ಅವರಲ್ಲಿ ಆತ್ಮವಿಶ್ವಾಸವನ್ನು ತುಂಬಿಸಿದ ಪರಿಣಾಮ ಈ ಎಳೆ ವಯಸ್ಸಿನ ಮಕ್ಕಳಿಂದ ಕವನ ಸಂಕಲನವನ್ನು ರಚಿಸಲು ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಶಾಲೆಯ ಶಿಕ್ಷಕಿಯರ ಪಾತ್ರ ಶ್ಲಾಘನೀಯವೆಂದರು.


ಶಾಲಾಡಳಿತದ ಅಧ್ಯಕ್ಷ ಸುನಿಲ್ ಅನಾವು ರವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಇದರ ವಿಭಾಗ ಸಂಯೋಜಕರಾದ ಸುಂದರ ಶೆಟ್ಟಿ ಎಂಜಿರಪಳಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ಶಾಲಾ ಸಂಚಾಲಕ ಯು.ಜಿ. ರಾಧಾ, ನಿವೃತ್ತ ಉಪನ್ಯಾಸಕ ಮಹಾಲೀಂಗೇಶ್ವರ ಭಟ್, ಶಾಲಾಡಳಿತದ ಉಪಾಧ್ಯಕ್ಷೆ ಅನುರಾಧಾ ಆರ್ ಶೆಟ್ಟಿ, ಪೋಷಕ ಸಂಘದ ಅಧ್ಯಕ್ಷ ಉದಯ ಅತ್ರಮಜಲು, ಪ್ರೌಡಾ ಶಾಲಾ ವಿಭಾಗದ ಮುಖ್ಯ ಗುರು ರಘುರಾಮ ಭಟ್, ಪ್ರಾಥಮಿಕ ವಿಭಾಗದ ಮುಖ್ಯ ಗುರು ವಿಮಲಾ ತೇಜಾಕ್ಷಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಆಂಗ್ಲ ಮಾಧ್ಯಮದಿಂದ ಕನ್ನಡ ಮಾಧ್ಯಮಕ್ಕೆ ಬಂದು ಕವಿಯಾದೆ
‘ನನ್ನೊಳಗಿನ ನಾನು’ ಎಂಬ ಕವನ ಸಂಕಲನವನ್ನು ಬರೆದಿರುವ ಕಾವ್ಯಶ್ರೀ ಮಾತನಾಡುತ್ತಾ, ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿಯುತ್ತಿದ್ದ ನಾನು, ೬ ನೇ ತರಗತಿಗೆ ಕನ್ನಡ ಮಾಧ್ಯಮದ ಈ ಶ್ರೀ ರಾಮ ಶಾಲೆಗೆ ಸೇರ್ಪಡೆಗೊಂಡೆ. ಶಾಲೆಗೆ ಆಗಮಿಸಿದ ದಿನವೇ ನನ್ನನ್ನು ಗಮನಿಸಿದ ಶಾಲಾ ಕನ್ನಡ ಶಿಕ್ಷಕಿ ವಿಮಲಾ ತೇಜಾಕ್ಷಿ ಇಲ್ಲಿ ಸಿರಿಸಿಂಗಾರ ಸಾಹಿತ್ಯಸಂಘದ ಬಗ್ಗೆ ತಿಳಿಸಿ ಕವನ ಬರೆಯಲು ಹೇಳಿದರು. ಅಂದು ಬರೆದ ಕವನ ಮತ್ತು ಅದಕ್ಕೆ ವಿಮಲಾ ತೇಜಾಕ್ಷಿ ನೀಡಿದ ಪ್ರೋತ್ಸಾಹದ ನುಡಿಗಳು ಮತ್ತು ನಿರಂತರ ನೀಡುತ್ತಿದ್ದ ಸಹಕಾರಗಳು ನನ್ನನ್ನು ಈ ವಯಸ್ಸಿನಲ್ಲೇ ಕವಿಯತ್ರಿಯನ್ನಾಗಿಸಿದೆ. ಏನು ಸಾಧಿಸಿದೆಯೋ ಅದು ಶಾಲಾ ಶಿಕ್ಷಕಿ ವಿಮಲಾ ತೇಜಾಕ್ಷಿಯವರಿಂದ ಎಂದಾಗ ಸಭೆಯಲ್ಲಿ ಚಪ್ಪಾಳೆ ಶಬ್ದ ಮೊಳಗಿತ್ತು.

ಕವನ ಬರೆಯುವ ಸಾಮರ್ಥ್ಯವಿದೆ ಎಂಬುದನ್ನು ಶಿಕ್ಷಕಿಯಿಂದ ತಿಳಿದೆ
‘ಕನಸಿನ ಕೂಸು’ ಕವನ ಸಂಕಲನವನ್ನು ಬರೆದಿರುವ ಶಿವಾನಿ ಮಾತನಾಡುತ್ತಾ, ಸಾಹಿತ್ಯ ಕ್ಷೇತ್ರದಲ್ಲಿ ನನ್ನ ಸಾಮರ್ಥ್ಯವನ್ನು ಗುರುತಿಸಿದವರು ನನ್ನ ಶಿಕ್ಷಕಿ ವಿಮಲಾ ತೇಜಾಕ್ಷಿಯವರು. ಅವರ ಮಾರ್ಗದರ್ಶನದಿಂದ ನಾನು ಕವನ ಬರೆಯಲು ಸಾಧ್ಯವಾಯಿತು. ಶಾಲೆಯ ಆಡಳಿತಗಾರರಿಂದ ನನ್ನ ಕವನಗಳು ಕವನ ಸಂಕಲನವಾಗಿ ಪುಸ್ತಕ ರೂಪದಲ್ಲಿ ಪ್ರಕಟವಾಗುವಂತಾಯಿತು. ನನ್ನಂತಹ ವಿದ್ಯಾರ್ಥಿಯಲ್ಲಿ ಅಡಗಿದ ಸಾಹಿತ್ಯಾಸಕ್ತಿಯನ್ನು ಗುರುತಿಸಿ, ಅದನ್ನು ಅರಳಿಸಿ , ಇದೀಗ ಪ್ರಕಾಶಿಸುವಂತೆ ಮಾಡಿದ ಗುರುಗಳಿಗೆ ಮತ್ತು ಶ್ರೀರಾಮ ಶಾಲಾಡಳಿತಕ್ಕೆ ಋಣಿಯಾಗಿದ್ದೇನೆ ಎಂದರು.

LEAVE A REPLY

Please enter your comment!
Please enter your name here