ಯಾವ ಮಗೂ ದಡ್ಡ ಅಲ್ಲ,ಮಗುವಿಗೆ ಸೂಕ್ತ ಶಿಕ್ಷಣ ಕೊಡದ ನಾವೇ ದಡ್ಡರಾಗಿದ್ದೇವೆ- ಶಾಸಕ ಅಶೋಕ್ ರೈ
ಪುತ್ತೂರು: ಮಕ್ಕಳ ಮನಸ್ಸು ಮೃದುವಾಗಿದೆ ಅದು ಏನು ಕೊಟ್ಟರೂ ಸ್ವೀಕಾರ ಮಾಡುತ್ತದೆ, ಅದೇ ಮಕ್ಕಳ ಮನಸ್ಸಲ್ಲಿ ಭಯ ಹುಟ್ಟಿಸಿದರೆ ಮುಂದೆ ಮಕ್ಕಳು ಆ ವಿಚಾರದಲ್ಲಿ ಭಯವನ್ನೇ ಹೊಂದಿರುತ್ತಾರೆ ಈ ಕಾರಣಕ್ಕೆ ಮಕ್ಕಳ ಮನಸ್ಸಲ್ಲಿ ಭಯ ಹುಟ್ಟಿಸುವ ಕೆಲಸವನ್ನು ಯಾರೂ ಮಾಡಬೇಡಿ ಎಂದು ಶಾಸಕ ಅಶೋಕ್ ರೈ ಹೇಳಿದರು.
ಅವರು ಮಿತ್ತೂರು ಸರಕಾರಿ ಉ ಹಿ ಪ್ರಾ ಶಾಲಾ ನೂತನ ಕೊಠಡಿ ಹಾಗೂ ಸಭಾಂಗಣವನ್ನು ಉದ್ಘಾಟಿಸಿ ಮಾತನಾಡಿದರು.
ಕಲಿಕೆಯಲ್ಲಿ ಹಿಂದೆ ಇರುವ ಮಕ್ಕಳನ್ನು ದಡ್ಡ ಎಂದು ಯಾರೂ ಕರೆಯಬಾರದು,ಯಾವ ಮಗೂ ದಡ್ಡ ಅಲ್ಲ,ಮಗುವಿಗೆ ಸೂಕ್ತ ಶಿಕ್ಷಣ ಕೊಡದ ನಾವೇ ದಡ್ಡರಾಗಿದ್ದೇವೆ, ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಕೊಡಿಸುವಲ್ಲಿ ನಾವು ವಿಫಲರಾಗುತ್ತಿದ್ದೇವೆ. ಸರಕಾರಿ ಶಾಲೆಯಲ್ಲೂ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ.ಸರಕಾರಿ ಶಾಲೆಗಳಿಗೂ ಮಕ್ಕಳನ್ನು ದಾಖಲಿಸಿ ಎಂದು ಶಾಸಕರು ಮನವಿ ಮಾಡಿದರು.

ಮಕ್ಕಳ ಜೊತೆ ಬೆರೆಯಿರಿ:
ಪೋಷಕರು ಮಕ್ಕಳ ಜೊತೆ ಬೆರೆಯಬೇಕು,ಬರೇ ಕೆಲಸ ಕೆಲಸ ಎಂದು ಸದಾ ಬ್ಯುಸಿಯಾಗಿದ್ದರೆ ನಿಮ್ಮ ಮಕ್ಕಳ ಜೊತೆ ಬೆರೆಯುವುದಾದರೂ ಹೇಗೆ? ಮಕ್ಕಳ ಜೊತೆ ದಿನಕ್ಕೆ ಕನಿಷ್ಟ 2 ಗಂಟೆಯನ್ನಾದರೂ ಮೀಸಲಿಡಿ ಎಂದು ಸಲಹೆ ನೀಡಿದ ಶಾಸಕರು ನಮ್ಮ ಮಕ್ಕಳಿಗೆ ನಾವೇ ಮಾದರಿಯಾಗಬೇಕು ಎಂದು ಹೇಳಿದರು.
3 ಲಕ್ಷ ಅನುದಾನ ಭರವಸೆ
ಶಾಲೆಯ ನೂತನ ಸಭಾಂಗಣ ನಿರ್ಮಾಣವಾಗಿದ್ದು ಅದರ ಕಾಮಗಾರಿ ಪೂರ್ಣಗೊಂಡಿಲ್ಲ. ಕಾಮಗಾರಿ ಪೂರ್ಣಗೊಳಿಸಲು 3 ಲಕ್ಷ ಅನುದಾನ ನೀಡುವುದಾಗಿ ಶಾಸಕರು ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಶಾಲೆಯ ರಸ್ತೆಯನ್ನೂ ಅಭಿವೃದ್ದಿ ಮಾಡುವುದಾಗಿ ತಿಳಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಎಂಆರ್ ಪಿಲ್ ನ ಪ್ರದೀಪ್ ಕುಮಾರ್, ಇಡ್ಕಿದು ಗ್ರಾಪಂ ಅಧ್ಯಕ್ಷೆ ಮೋಹಿನಿ, ಎಸ್ ಡಿ ಎಂ ಸಿ ಅಧ್ಯಕ್ಷ ಸುಧೀರ್ ಶೆಟ್ಟಿ, ಗ್ರಾ.ಪಂ ಸದಸ್ಯ ರಮೇಶ್ ಪೂಜಾರಿ, ಬಂಟ್ವಾಳ ಬಿಇಒ ಮಂಜುನಾಥ, ಗ್ರಾಪಂ ಸದಸ್ಯ ಸಂಜೀವ ಪೂಜಾರಿ, ಜಯಂತಿ,ಇಡ್ಕಿದು ಪಿಡಿಒ ಗೋಕುಲ್ ದಾಸ್,ಸಮೂಹ ಸಂಪನ್ಮೂಲ ಜ್ಯೋತಿ, ಸಿಎ ಅಧ್ಯಕ್ಷ ಸುಧಾಕರ ಶೆಟ್ಟಿ, ಪ್ರೇರಕಿ ಆಶಾ, ನಾಸಿರ್ ಕೋಲ್ಪೆ, ಅಂಗನವಾಡಿ ಕಾರ್ಯಕರ್ತೆ ಭವಾನಿ ಉಪಸ್ಥಿತರಿದ್ದರು. ಎಚ್ ಎಂ ಸರೋಜ ಸ್ವಾಗತಿಸಿದರು.