ಬಡಗನ್ನೂರು ಶಾಲೆಗೆ ನೂರರ ಸಂಭ್ರಮ- ಉದ್ಘಾಟನೆಗೆ ಸಜ್ಜುಗೊಂಡಿದೆ ಶಾಲಾ ಸಭಾಂಗಣ ʼಅಭಿಮಾನʼ

0

ಬಡಗನ್ನೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಬಡಗನ್ನೂರು, ಶಾಲಾ ಎಸ್.ಡಿಎಂಸಿ ಮತ್ತು ಹಿರಿಯ ವಿದ್ಯಾರ್ಥಿ ಸಂಘ, ಹಿರಿಯ ವಿದ್ಯಾರ್ಥಿಗಳು ಮತ್ತು ದಾನಿಗಳ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೆರವಿನಿಂದ ನಿರ್ಮಾಣಗೊಂಡ ನೂತನ ಸಭಾಂಗಣ ಅಭಿಮಾನ ಇದರ ಉದ್ಘಾಟನಾ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಲರವ ಎ.19ರಂದು ನಡೆಯಲಿದೆ.

ಇತಿಹಾಸ ಪ್ರಸಿದ್ಧ ಪಡುಮಲೆಗೆ ಹೊಂದಿಕೊಂಡಿರುವ ಬಡಗನ್ನೂರು ಶಾಲೆಯು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಿಂದ 25 ಕಿ.ಮೀ ದೂರದಲ್ಲಿರುವ ಬಡಗನ್ನೂರು ಗ್ರಾಮದಲ್ಲಿದೆ. ಈ ಗ್ರಾಮದಲ್ಲಿ ಪ್ರಥಮವಾಗಿ ಆರಂಭವಾದ ವಿದ್ಯಾ ದೇಗುಲ ಇದಾಗಿದ್ದು. ಕೊಯಿಲ-ಪಕ್ಕೋಡು ಎಂಬಲ್ಲಿ 1923ರಲ್ಲಿ ಆರಂಭವಾದ ಸಂಸ್ಥೆಯು ಬಡಗನ್ನೂರು ಪೇಟೆಯ ಹೃದಯ ಭಾಗದಲ್ಲಿ ಆರಂಭವಾದ ಈ ಸಂಸ್ಥೆಗೆ ಶೈಕ್ಷಣಿಕ ವರ್ಷಕ್ಕೆ ನೂರು ವರ್ಷಗಳನ್ನು ಪೂರೈಸುತ್ತಿದೆ.

ಬೆಳ್ಳಿಪ್ಪಾಡಿ ಕಿಂಞಣ್ಣ ರೈ ಪಟೇಲರು 1948ರಲ್ಲಿ ಸುವ್ಯವಸ್ಥಿತವಾದ ಕಟ್ಟಡ ಕಟ್ಟಿಸಿ ಸಾಕಷ್ಟು ಸ್ಥಳಾವಕಾಶ ಒದಗಿಸಿಕೊಟ್ಟಿದ್ದಾರೆ. ಕನ್ನಡ್ಕ ಚೆನ್ನಪ್ಪ ಗೌಡ ಮಾಸ್ತರರು ಪ್ರಥಮ ಗುರುಗಳಾಗಿದ್ದರು. ಈ ಶಾಲೆಗೆ ದಿ| ಪೇರಾಲು ರಾಧಾಕೃಷ್ಣ ರೈಗಳ ಸೇವೆ ಅಪಾರ, ರಾಜ್ಯ ಪ್ರಶಸ್ತಿ ಪುರಸ್ಕೃತ ಮುಖ್ಯ ಗುರುಗಳಾಗಿದ್ದ ಸಿ.ಸಿ ಆಳ್ವ, ಶಾರದಾ ವಿ. ರಾವ್ ಸಹಶಿಕ್ಷಕರಾಗಿದ್ದ ಕನ್ನಡ್ಕ ನಾರಾಯಣ ಗೌಡ, ವೈ ಕೃಷ್ಣ ನಾಯ್ಕ, ನಾರಾಯಣ ಪಾಟಾಳಿ, ಕುಂಞರಾಮ ಮುಂತಾದ ಶಿಕ್ಷಕರ ಸೇವೆಯೊಂದಿಗೆ ಶಾಲೆಯು ಬೆಳೆಯುತ್ತಾ ಬಂದಿರುತ್ತದೆ. 1925ರಲ್ಲಿ ಒಂದರಿಂದ ನಾಲ್ಕನೇ ತರಗತಿ, 1938ರಲ್ಲಿ 5ನೇ ತರಗತಿ, 1972ರಲ್ಲಿ 6 ಮತ್ತು 7ನೇ ತರಗತಿ ಹಾಗೂ 2003ರಲ್ಲಿ 8ನೇ ತರಗತಿ ಮಂಜೂರಾಗಿ ಪ್ರಸ್ತುತ 1ರಿಂದ 8ನೇ ತರಗತಿಯವರೆಗೆ ವಿದ್ಯಾರ್ಜನೆ ನಡೆಯುತ್ತಿದೆ. ಗ್ರಾಮೀಣ ಭಾಗದ ಉನ್ನತೀಕರಿಸಿದ ಶಾಲೆಯೊಂದು ಶೈಕ್ಷಣಿಕವಾಗಿ ತನ್ನದೇ ಛಾಪನ್ನು ಮೂಡಿಸಿಕೊಂಡು ಮುಂದುವರೆಯುತ್ತಿರುವುದು ಸಂತಸದ ವಿಷಯವಾಗಿದೆ. ಶಾಲೆಯ 100 ವರ್ಷದ ಇತಿಹಾಸದಲ್ಲಿ ವಿದ್ಯಾದಾನವನ್ನು ಸ್ವೀಕರಿಸಿದ ಸಾವಿರಾರು ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದು ಬಡಗನ್ನೂರಿನ ಹೆಸರನ್ನು ನಾಡಿನುದ್ದಗಲಕ್ಕೂ ಪಸರಿಸಿದ್ದಾರೆ.

ನೂರರ ಸಂಭ್ರಮ
ಶಾಲೆಯ ನೂರರ ಸಂಭ್ರಮದಲ್ಲಿದ್ದು ಈ ಸಂಭ್ರಮೋತ್ಸವಕ್ಕೆ ಹಿರಿಯ ವಿದ್ಯಾರ್ಥಿ, ಎಸ್‌ಡಿಎಂಸಿ, ದಾನಿಗಳು ಹಾಗೂ ಧರ್ಮಸ್ಥಳ ಯೋಜನೆಯ ನೆರವಿನೊಂದಿಗೆ ಸುಮಾರು 16 ಲಕ್ಷ ರೂ.ವೆಚ್ಚದಲ್ಲಿ ನೂತನ ಸಭಾಂಗಣ ಅಭಿಮಾನ ನಿರ್ಮಾಣಗೊಂಡಿದೆ. 2025 ಡಿಸೆಂಬರ್ ತಿಂಗಳಲ್ಲಿ ಸಭಾಂಗಣದ ಶಿಲಾನ್ಯಾಸ ನೆರವೇರಿಸಿ, ಕಾಮಗಾರಿ ಆರಂಭಗೊಂಡು ಕೇವಲ ನಾಲ್ಕೇ ತಿಂಗಳಲ್ಲಿ ಕಾಮಗಾರಿ ಪೂರ್ತಿಗೊಂಡು ಸುಂದರ ಸಭಾಂಗಣ ಲೋಕಾರ್ಪಣೆಗೆ ಸಜ್ಜಾಗಿ ನಿಂತಿದೆ.

LEAVE A REPLY

Please enter your comment!
Please enter your name here