ಆಲಂಕಾರು: ರಾಮಕುಂಜ ಗ್ರಾಮದ ಕಾಜರುಕ್ಕು ಆನ ರಸ್ತೆಯು ಬಜತ್ತೂರು ಗ್ರಾಮಕ್ಕೆ ಸಂಪರ್ಕ ರಸ್ತೆಯಾಗಿದ್ದು, ಈ ರಸ್ತೆ ಡಾಮರೀಕರಣಗೊಂಡು ಅಂದಾಜು 25 ವರ್ಷಗಳು ಕಳೆದು ಹೋಗಿದೆ ಎಂದು ಆಭಾಗದ ಗ್ರಾಮಸ್ಥರ ಅಭಿಪ್ರಾಯಿಸಿದ್ದು, ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನ ಮಂತ್ರಿಯಾಗಿದ್ದಾಗ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ಡಾಮರೀಕರಣಗೊಂಡು ನಂತರ ಒಮ್ಮೆ ಮಾತ್ರ ಮರು ಡಾಮರೀಕರಣಗೊಂಡಿದೆ. ಈ ರಸ್ತೆಯು ಸುಮಾರು 700 ಮೀಟರ್ ನಷ್ಟು ರಸ್ತೆ ದುರಸ್ತಿಯಾಗದೇ ಉಳಿದಿದ್ದು, ಈ ರಸ್ತೆಯು ಸುಮಾರು 3 ಕಿಲೋ ಮೀಟರ್ ನಷ್ಟು ಉದ್ದ ವಿದ್ದು ಉಳಿದ ಭಾಗ ಕಾಂಕ್ರೀಟಿಕರಣಗೊಂಡಿದೆ. ಸದ್ರಿ ಈ ರಸ್ತೆಯ ಕಾಜರುಕ್ಕು ಉರ್ಕ ಭಾಗದ ಸುಮಾರು 700 ಮೀಟರ್ ನಷ್ಟು ಉದ್ದದ ರಸ್ತೆ ಇನ್ನೂ ಕೂಡ ದುರಸ್ತಿಯಾಗದೇ ಉಳಿದಿದ್ದು, ಕಳೆದ ವರ್ಷ ಆಭಾಗದ ಗ್ರಾಮಸ್ಥರ ಒತ್ತಡದ ಮೇರೆಗೆ ರಾಮಕುಂಜ ಗ್ರಾಮ ಪಂಚಾಯತ್ ವತಿಯಿಂದ ರಸ್ತೆಗೆ ಮಣ್ಣು ಹಾಕಿ ದುರಸ್ತಿ ಮಾಡಿದ್ದು, ಮಣ್ಣು ಹಾಕಿದ ಸ್ವಲ್ಪ ದಿವಸದ ನಂತರ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಾಗಿ ರಸ್ತೆ ಬದಿಯ ಚರಂಡಿ ಅಗೆದು ಹಾಕಿದ ನಂತರ ರಸ್ತೆ ಮತ್ತಷ್ಟು ಹದಗೆಡುವಂತಾಯಿತು ಎಂದು ಗ್ರಾಮಸ್ಥರು ಅಭಿಪ್ರಾಯಿಸಿದ್ದಾರೆ.
ಕೆಲವು ಕಡೆ ಮೋರಿಗಳನ್ನು ಸಮೆತ ಅಗೆದು ಹಾಕಲಾಗಿದೆ. ಕಳೆದ ಸಾಲಿನ ಮಳೆಗಾಲವು ಬೇಗನೆ ಪ್ರಾರಂಭವಾದ ಕಾರಣ ರಸ್ತೆಯಲ್ಲಿ ಸಂಚರಿಸಲು ತುಂಬಾ ಕಷ್ಟಕರವಾಗಿದೆ ಎಂದು ಈ ಭಾಗದ ರಸ್ತೆಯ ಫಲಾನುಭವಿಗಳು ಆರೋಪಿಸುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷದವರು ರಸ್ತೆ ದುರಸ್ತಿಯ ಬಗ್ಗೆ ಭರವಸೆ ನೀಡುತ್ತಾರೆ ಆದರೆ ನಂತರ ಫಲಶೃತಿ ಕಾಣುವುದಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದು, ಎರಡು ಕಡೆಗಳಲ್ಲಿ ಚುನಾವಣೆ ಮತ್ತು ತೆರಿಗೆ ಬಹಿಷ್ಕಾರದ ಬ್ಯಾನರ್‌ನ್ನು ಅಳವಡಿಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ದಿನಂಪ್ರತಿ ಈ ರಸ್ತೆಯಲ್ಲಿ ವಾಹನಗಳು, ಶಾಲಾ ವಿದ್ಯಾರ್ಥಿಗಳು, ನಡಿಗೆಯಲ್ಲಿ ಶಾಲೆಗೆ ತೆರಳುತ್ತಿದ್ದಾರೆ. ಇದನ್ನು ಮನಗಂಡು ಸರಕಾರ, ಜನಪ್ರತಿನಿಧಿಗಳು, ಅಧಿಕಾರಿ ವರ್ಗದವರು ಗಮನ ಹರಿಸಿ ರಸ್ತೆ ದುರಸ್ತಿಗೊಳಿಸುವಂತೆ ಈ ಭಾಗದ ರಸ್ತೆಯ ಫಲಾನುಭವಿಗಳ ಆಗ್ರಹವಾಗಿದೆ.
