ಬೆಟ್ಟಂಪಾಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇಲ್ಲಿನ ಎನ್ಎಸ್ಎಸ್ ಘಟಕದ ವತಿಯಿಂದ ಯುವ ಉದ್ಯಮಶೀಲತೆಗಾಗಿ ಸ್ವಯಂಸೇವಕರಿಗೆ ಮಾಹಿತಿ ಕಾರ್ಯಾಗಾರವನ್ನು ನಡೆಸಲಾಯಿತು. ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಲಾಯಿತು.
ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಕೆ ಕರುಣಾಕರ ಜೈನ್ ಸ್ವಯಂ ಸೇವಕರಿಗೆ ಸ್ವ ಉದ್ಯೋಗ ಹೇಗೆ ಮಾಡುವುದು ಎಂಬುದರ ಬಗ್ಗೆ ತಿಳಿಸಿದರು. ಮೂಲ ಸೌಕರ್ಯಗಳ ಸೌಲಭ್ಯವನ್ನು ಪರಿಚಯ ಮಾಡಿದರು ಮತ್ತು ಮಹಿಳೆಯರಿಗೆ ಮನೆಯಲ್ಲಿ ಕುಳಿತು ತಯಾರಿಸುವ ಕೆಲವು ಉದ್ಯೋಗಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು. ಜೊತೆಗೆ ಈ ಸಂಸ್ಥೆಯು ಹಣಕಾಸಿನ ವ್ಯವಸ್ಥೆ ಹಾಗೂ ಸಬ್ಸಿಡಿ ನೀಡುವುದರ ಮೂಲಕ ಜನರಿಗೆ ಸಹಕಾರಿಯಾಗುವುದು ಹೇಗೆ ಎಂಬುದನ್ನು ಕೆ ಕರುಣಾಕರ ಜೈನ್ ಮನಮುಟ್ಟುವ ರೀತಿಯಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಯೋಜನಾಧಿಕಾರಿಗಳಾದ ಡಾ. ಯೋಗೀಶ್ ಎಲ್ ಎನ್ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದ ಅಧ್ಯಕ್ಷರಾದ ಡಾ.ವರದರಾಜ ಚಂದ್ರಗಿರಿ ಮಾತನಾಡಿ ಸ್ವ ಉದ್ಯೋಗದ ಕುರಿತು ಮಾಹಿತಿ ನೀಡಿ ಸ್ವಯಂಸೇವಕರಿಗೆ ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಕರುಣಾಕರ ಜೈನ್ ಇವರ ವ್ಯಕ್ತಿ ಪರಿಚಯವನ್ನು ಸ್ವಯಂಸೇವಕಿ ಚೈತ್ರ ಇವರು ಮಾಡಿಕೊಟ್ಟರು. ಈ ಕಾರ್ಯಕ್ರಮಕ್ಕೆ ಆಂತರಿಕ ಗುಣಮಟ್ಟ ಭರವಸಕೋಶ ಇದರ ಸಂಚಾಲಕ ಡಾ.ಕಾಂತೇಶ್ ಎಸ್, ಮಂಜುನಾಥ್ ದೇವಿ ಇವರುಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ವಂದಿತಾ ಇವರು ಸ್ವಾಗತಿಸಿ, ಮನೀಶ್ ಇವರು ವಂದಿಸಿ, ಅಂಕಿತ ಇವರು ನಿರೂಪಿಸಿದರು.