ಪುತ್ತೂರು: ಕರ್ನಾಟಕ ಪಬ್ಲಿಕ್ ಸ್ಕೂಲ್ ಕುಂಬ್ರ ಇದರ ಮೂಲಭೂತ ಸೌಕರ್ಯ ವೃದ್ದಿಗೆ ಸರಕಾರದಿಂದ 84.7 ಲಕ್ಷ ರೂ ಅನುದಾನ ಬಿಡುಗಡೆಯಾಗಿದೆ.
ಪುತ್ತೂರು ತಾಲೂಕಿನಲ್ಲಿ ಕುಂಬ್ರ ಮತ್ತು ಕೆಯ್ಯೂರಿನಲ್ಲಿ ಕೆಪಿಎಸ್ ಸ್ಕೂಲ್ ಇದ್ದು ಕುಂಬ್ರದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದೆ. ಎಲ್ ಕೆ ಜಿಯಿಂದ ದ್ವಿತೀಯ ಪಿಯು ತನಕ ಆಂಗ್ಲ ಮತ್ತು ಕನ್ನಡ ಮಾಧ್ಯಮ ತರಗತಿಗಳು ಕೆಪಿಎಸ್ ಸ್ಕೂಲ್ ನಲ್ಲಿ ನಡೆಯುತ್ತಿದೆ. ಶಾಸಕರೆ ಈ ಸ್ಕೂಲ್ ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಾಲೆಯ ಮೂಲಭೂತ ಸೌಕರ್ಯಕ್ಕಾಗಿ ಶಾಸಕ ಅಶೋಕ್ ರೈ ಅವರು ಅನುದಾನ ಒದಗಿಸುವ ಬಗ್ಗೆ ಸರಕಾರಕ್ಕೆ ಮನವಿ ಮಾಡಿದ್ದರು. ಅದರಂತೆ 84.7 ಲಕ್ಷ ರೂ ಅನುದಾನ ಬಿಡುಗಡೆಯಾಗಿದೆ.
ಕಟ್ಟಡ ನಿರ್ಮಾಣಕ್ಕೆ ಬಳಕೆ
ಕುಂಬ್ರ ಕೆಪಿಎಸ್ ಸ್ಕೂಲ್ ಗೆ ಕೊಠಡಿಯ ಕೊರತೆ ಇದ್ದು ಇದಕ್ಕಾಗಿ ಅನುದಾನ ನೀಡುವಂತೆ ನಾವು ಶಾಸಕ ಅಶೋಕ್ ರೈ ಅವರಿಗೆ ಮನವಿ ಮಾಡಿದ್ದು, ಅನುದಾನವೂ ಬಿಡುಗಡೆಯಾಗಿದೆ. ಕಟ್ಟಡವನ್ನು ನಿರ್ಮಾಣ ಮಾಡುವ ಮೂಲಕ ಕೊಠಡಿ ಸಮಸ್ಯೆಯ ನಿವಾರಣೆಗೆ ಅನುದಾನವನ್ನು ಬಳಕೆ ಮಾಡುತ್ತೇವೆ. ಪ್ರಸ್ತುತ ಕುಂಬ್ರ ಕೆಪಿಎಸ್ ಸ್ಕೂಲ್ ನಲ್ಲಿ 800 ವಿದ್ಯಾರ್ಥಿಗಳಿದ್ದಾರೆ.
ರಕ್ಷಿತ್ ರೈ ಮುಗೇರು, ಕಾರ್ಯಾಧ್ಯಕ್ಷರು, ಕುಂಬ್ರ ಕೆಪಿಎಸ್
ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಲ್ಲ, ಕೊಠಡಿಯ ಕೊರತೆ ಇರುವ ಶಾಲೆಗಳಿಗೆ ಅನುದಾನವನ್ನು ನೀಡಲಾಗುತ್ತಿದೆ. ಕುಂಬ್ರ ಕೆಪಿಎಸ್ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು ಈ ಬಾರಿ ಕೊಠಡಿ ನಿರ್ಮಾಣಕ್ಕೆ ಅನುದಾನ ಒದಗಿಸಲಾಗಿದೆ. ಹೆಚ್ಚಾಗಿ ಬಡವರ ಮಕ್ಕಳು ಇರುವ ಸರಕಾರಿ ಶಾಲೆಗಳಲ್ಲಿ ಖಾಸಗಿ ಶಾಲೆಯಷ್ಟೇ ಸೌಕರ್ಯವನ್ನು ಒದಗಿಸುವಲ್ಲಿ ಮುತುವರ್ಜಿ ವಹಿಸಲಾಗುವುದು.
ಅಶೋಕ್ ರೈ ಶಾಸಕರು, ಪುತ್ತೂರು