ಉಪ್ಪಿನಂಗಡಿ: ಇಲ್ಲಿನ ನೇತ್ರಾವತಿ ಸೇತುವೆಯಿಂದ ಮೊದಲ್ಗೊಂಡು ಸರ್ಕಲ್ವರೆಗಿನ 255 ಮೀಟರ್ ರಸ್ತೆಗೆ ಮರು ಡಾಮರೀಕರಣ ಮಾಡುವ ಸಲುವಾಗಿ ಒದಗಿಸಲಾದ 10 ಲಕ್ಷ ರೂ. ಅನುದಾನದ ಕಾಮಗಾರಿಗೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಶಿಲಾನ್ಯಾಸ ನೆರವೇರಿಸಿದರು.
ಸರಳ ಕಾರ್ಯಕ್ರಮದಲ್ಲಿ ಕಾಮಗಾರಿಗೆ ತೆಂಗಿನ ಕಾಯಿ ಒಡೆದು ಶಿಲಾನ್ಯಾಸ ನೆರವೇರಿಸಿದ ಶಾಸಕರು, ಪದೇ ಪದೇ ರಸ್ತೆಯಲ್ಲಿ ಹೊಂಡಗುಂಡಿಗಳು ಕಾಣಿಸಿಕೊಂಡು ಈ ಭಾಗದ ಪ್ರಯಾಣಿಕರಿಗೆ ಸಮಸ್ಯೆಯನ್ನುಂಟು ಮಾಡುತ್ತಿದ್ದ ಈ ರಸ್ತೆಯ ಅಭಿವೃದ್ಧಿಗೆ 10 ಲಕ್ಷ ರೂ. ಅನುದಾನವನ್ನು ಇರಿಸಿದ್ದು, ಸುಮಾರು ೨೫೫ ಮೀಟರ್ ಉದ್ದದ ರಸ್ತೆಗೆ ಗುಣಮಟ್ಟದಿಂದ ಡಾಮರೀಕರಣ ನಡೆಸಲು ಸೂಚಿಸಿದ್ದೇನೆ. ಉಪ್ಪಿನಂಗಡಿ – ಗುರುವಾಯನಕೆರೆ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿಸುವ ಪ್ರಯತ್ನದ ನಡುವೆ ಈ ಅನುದಾನದ ಕಾಮಗಾರಿ ತಾತ್ಕಾಲಿಕ ನೆಲೆಯದ್ದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಮುರಳೀಧರ ರೈ ಮಠಂತಬೆಟ್ಟು, ಯು.ಟಿ. ತೌಷಿಫ್, ಶಬೀರ್ ಕೆಂಪಿ, ಅಬ್ದುಲ್ ರಹಿಮಾನ್, ಮಜೀದ್, ಆದಂ ಕೊಪ್ಪಳ, ಶಫೀಕ್ ಅರಫ್ಪಾ, ಮಜೀದ್ ಹಾಗೂ ಲೋಕೋಪಯೋಗಿ ಇಲಾಖಾ ಅಭಿಯಂತರ ಕಾನಿಷ್ಕ ಮತ್ತಿತರರು ಉಪಸ್ಥಿತರಿದ್ದರು.