ನೆಲ್ಯಾಡಿ: ಕಳೆದ ಕೆಲ ದಿನಗಳಿಂದ ನೆಲ್ಯಾಡಿ ಭಾಗದಲ್ಲಿ ವಂಚನಾ ಜಾಲವೊಂದು ಸಕ್ರೀಯವಾಗಿದ್ದು ಕೆಲ ವರ್ತಕರಿಂದ ಹಣ ದೋಚಲು ವಿಫಲ ಯತ್ನ ನಡೆದಿರುವ ಘಟನೆ ನಡೆದಿರುವುದು ವರದಿಯಾಗಿದೆ.
ಎರಡು ದಿನದ ಹಿಂದೆ ನೆಲ್ಯಾಡಿಯ ಶುಚಿ ಚಿಕನ್ ಸೆಂಟರ್ ಮಾಲಕ ಚೇತನ್ ಪಿಲವೂರು ಅವರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ ವಂಚನೆಗೆ ಯತ್ನಿಸಿರುವ ಘಟನೆಯೊಂದು ನಡೆದಿದೆ. ನ.4ರಂದು ರಾತ್ರಿ ಚೇತನ್ ಅವರಿಗೆ ಕರೆ ಮಾಡಿದ ಅಪರಿಚಿತ ಹಿಂದಿಯಲ್ಲಿ ಮಾತನಾಡಿ, ನಾನು ಸೈನಿಕ. ನಾಳೆ ನೆಲ್ಯಾಡಿಯಲ್ಲಿ ಆರ್ಮಿ ಕ್ಯಾಂಪ್ ಇದೆ. ನಮಗೆ ಬಿರಿಯಾನಿಗೆ 10 ಕೆ.ಜಿ.ಕೋಳಿ ಮಾಂಸ ಅಗತ್ಯವಿದ್ದು ರೆಡಿ ಮಾಡಿ ಇಡಿ. ಬೆಳಿಗ್ಗೆ ಬರುತ್ತೇವೆ ಎಂದು ಹೇಳಿದ್ದ. ನ.5ರಂದು ಬೆಳಿಗ್ಗೆ 7.30ಕ್ಕೆ ಕರೆ ಮಾಡಿದ ಅಪರಿಚಿತ ಮಾಂಸ ರೆಡಿ ಆದ ಮೇಲೆ ಫೋನ್ ಮಾಡಿ ವಾಹನ ಕಳಿಸುತ್ತೇನೆ ಎಂದು ಹೇಳಿ ಫೋನ್ ಕಟ್ ಮಾಡಿದ. ಬಳಿಕ ಮತ್ತೆ ಫೋನ್ ಮಾಡಿದ ಅಪರಿಚಿತ 10 ರೂ.ನಿಮ್ಮ ಫೋನ್ ಪೇಗೆ ಹಾಕಿದ್ದೇನೆ. ಬಂದಿದೆಯಾ ಎಂದು ಕೇಳಿದ್ದಾನೆ. ಚೇತನ್ ಅವರು ಬಂದಿದೆ ಎಂದು ತಿಳಿಸಿದ ನಂತರ 10 ಕೆ.ಜಿ.ಕೋಳಿ ಮಾಂಸದ ಮೊತ್ತವೆಷ್ಟು ಎಂದು ಕೇಳಿ, ಅಂಗಡಿ ಮಾಲಕರು ರೂ.2290 ಎಂದು ತಿಳಿಸಿದ್ದು ರೂ.2290ರ ಬದಲು 2300 ರೂ.ಹಾಕುತ್ತೇನೆ ಎಂದು ಹೇಳಿ ಫೋನ್ ಕಟ್ ಮಾಡಿದ್ದಾನೆ. ನಂತರ ಚೇತನ್ ಅವರ ಫೋನ್ ಇನ್ಬಾಕ್ಸ್ಗೆ 23,೦೦೦ ರೂ.ಜಮೆ ಆಗಿರುವ ಮೇಸೆಜ್ ಬಂದಿದೆ. ಇದನ್ನು ಗಮನಿಸಿದ ಚೇತನ್ ಅವರು ರೂ.23,೦೦೦ ಬಂದಿದೆ ಎಂದು ಅಪರಿಚಿತನಿಗೆ ತಿಳಿಸುತ್ತಿದ್ದಂತೆ ಆತ ತಪ್ಪಿ 1 ಸೊನ್ನೆ ಹೆಚ್ಚಾಗಿ ನಮೂದಿಸಿದ್ದೇನೆ. ಹೆಚ್ಚುವರಿ ಬಂದ 20 ಸಾವಿರ ಹಿಂತಿರುಗಿಸುವಂತೆ ಕೇಳಿಕೊಂಡಿದ್ದಾನೆ. ಆದರೆ ಚೇತನ್ ಅವರು ಫೋನ್ ಪೇ ಪರಿಶೀಲಿಸಿದಾಗ ಯಾವುದೇ ಹಣ ಜಮೆಯಾಗಿರುವುದು ಕಂಡುಬಂದಿಲ್ಲ. ಈ ವಿಚಾರವನ್ನು ಅಪರಿಚಿತನಿಗೆ ತಿಳಿಸಿದಾಗ ನೀವು ನನಗೆ ಹಣ ವರ್ಗಾಯಿಸಿ, ಆಗ ನಿಮ್ಮ ಖಾತೆಗೆ ನಾನು ಕಳಿಸಿದ ಹಣ ಜಮೆಯಾಗಿರುವುದು ಗೋಚರಿಸುತ್ತದೆ ಎಂದು ಹೇಳಿ ನಂಬಿಸಲು ಯತ್ನಿಸಿದ್ದ. ನಮ್ಮ ಖಾತೆಯಲ್ಲಿ ಅಷ್ಟೊಂದು ಹಣ ಇಲ್ಲ ಎಂದು ಚೇತನ್ ಹೇಳಿದರೂ ಕೇಳದ ಅಪರಿಚಿತ ಬೇರೆಯವರಿಂದ ಪಡೆದು ಇದ್ದಷ್ಟು ಹಣ ವರ್ಗಾವಣೆ ಮಾಡುವಂತೆಯೂ ಕೇಳಿಕೊಂಡಿದ್ದ. ನಾನು ಬ್ಯುಸಿಯಾಗಿದ್ದೇನೆ. ನೀವು ರಿಕ್ಷಾ ಕಳಿಸಿ ಆ ಮೇಲೆ ನಾನು ಕ್ಲಿಯರ್ ಮಾಡುತ್ತೇನೆ ಎಂದು ಹೇಳಿ ಚೇತನ್ ಅವರು ಫೋನ್ ಕಟ್ ಮಾಡಿದ್ದಾರೆ. ಬಳಿಕ ಆತ ಮೊಬೈಲ್ ಸಂಪರ್ಕಕ್ಕೂ ಸಿಕ್ಕಿಲ್ಲ. ಇದೇ ರೀತಿಯಾಗಿ ನೆಲ್ಯಾಡಿಯ ಅಲ್ಯುಮಿನಿಯಂ ಅಂಗಡಿ, ಬೇಕರಿಯೊಂದಕ್ಕೂ ಕರೆ ಮಾಡಿದ ಅಪರಿಚಿತನೊಬ್ಬ ವರ್ತಕರನ್ನು ಯಾಮಾರಿಸಲು ಪ್ರಯತ್ನಿಸಿರುವುದಾಗಿ ವರದಿಯಾಗಿದೆ.
ಬ್ಯಾಂಕ್ ಮುಂದೆ ಸುತ್ತಾಡುತ್ತಿದ್ದ ಅಪರಿಚಿತ..!

ಎರಡುಮೂರು ದಿನದ ಹಿಂದೆ ಬೆನ್ನಿನಲ್ಲಿ ಬ್ಯಾಗ್ ನೇತಾಡಿಸಿಕೊಂಡ ಮೊಬೈಲ್ನಲ್ಲಿ ಮಾತನಾಡುತ್ತಾ ಅಪರಿಚಿತ ವ್ಯಕ್ತಿಯೋರ್ವ ನೆಲ್ಯಾಡಿಯ ಬ್ಯಾಂಕ್ಗಳ ಮುಂದೆ ಅನುಮಾನಸ್ಪಾದವಾಗಿ ಕಾಣಿಸಿಕೊಳ್ಳುತ್ತಿದ್ದ. ಈತ ಬ್ಯಾಂಕ್ನ ಮುಂಭಾಗ ಅತ್ತಿಂದಿತ್ತ ಅನುಮಾನಸ್ಪದವಾಗಿ ಓಡಾಟ ನಡೆಸುತ್ತಿರುವುದು ಬ್ಯಾಂಕ್ಗಳ ಸಿಸಿಟಿವಿಯಲ್ಲಿ ಕಾಣಿಸಿಕೊಂಡಿತ್ತು. ಇದನ್ನು ನೆಲ್ಯಾಡಿಯ ವರ್ತಕ ಹಾಗೂ ಇನ್ನಿತರ ವಾಟ್ಸಫ್ ಗ್ರೂಫ್ಗಳಿಗೆ ಶೇರ್ ಮಾಡಿ ಈತನ ಬಗ್ಗೆ ಮಾಹಿತಿ ದೊರೆತಲ್ಲಿ ನೆಲ್ಯಾಡಿ ಹೊರಠಾಣೆಗೆ ತಿಳಿಸುವಂತೆ ಮಾಹಿತಿ ಹಂಚಿಕೊಳ್ಳಲಾಗಿತ್ತು.