ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮೇಲುಸ್ತುವಾರಿ ಅಬ್ಬಾಸ್, ವಿಭಾಗೀಯ ತಾಂತ್ರಿಕ ಶಿಲ್ಪಿ ನಂದ ಕುಮಾರ್‌ಗೆ ಬೀಳ್ಕೊಡುಗೆ

0

ಪುತ್ತೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ಘಟಕದಲ್ಲಿ ಸಂಚಾರಿ ನಿಯಂತ್ರಕ, ಬಸ್ ನಿಲ್ದಾಣದ ಮೇಲುಸ್ತುವಾರಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಅಬ್ಬಾಸ್ ಕೆ. ಕುಂತೂರು ಹಾಗೂ ಪುತ್ತೂರು ವಿಭಾಗೀಯ ತಾಂತ್ರಿಕ ಶಿಲ್ಪಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ನಂದ ಕುಮಾರ್‌ರವರಿಗೆ ಬೀಳ್ಕೊಡುಗೆ ಸಮಾರಂಭವು ಎ.29ರಂದು ಮುಕ್ರಂಪಾಡಿಯಲ್ಲಿರುವ ಘಟಕದಲ್ಲಿ ನಡೆಯಿತು.


ನಿವೃತ್ತರನ್ನು ಸನ್ಮಾನಿಸಿದ ಪುತ್ತೂರು ಗ್ಯಾರಂಟಿ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ ಮಾತನಾಡಿ, ಶಕ್ತಿ ಯೋಜನೆಯಲ್ಲಿ ಒಟ್ಟು 2.18 ಕೋಟಿ ಮಹಿಳೆಯರು ಪ್ರಯಾಣಿಸಿದ್ದು ರೂ.67 ಕೋಟಿ ಆದಾಯ ಬಂದಿದೆ. ಗ್ಯಾರಂಟಿ ಯೋಜನೆಯ ಬಳಿಕ ಬಸ್‌ನಲ್ಲಿ ಪ್ರಯಾಣಿಸುವವರ ಸಂಖ್ಯೆ ಏರಿಕೆಯಾಗಿದೆ. ನಿರ್ವಾಹಕರಿಗೂ ಸಮಸ್ಯೆಗಳಿದ್ದು ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸೂಕ್ತ ಕಾನೂನು ಮಾಡಬೇಕಿದೆ ಎಂದ ಅವರು , ಸಾಕ್ಷರತೆ ಚಳುವಳಿಯಲ್ಲಿ ಅಬ್ಬಾಸ್‌ರವರ ಜೊತೆಯಾಗಿ ನಾವು ಕೆಲಸ ಮಾಡಿದವರು ಎಂದರು.


ಬಿ.ಸಿ ರೋಡ್ ಘಟಕ ವ್ಯವಸ್ಥಾಪಕ ಇಸ್ಮಾಯಿಲ್ ಮಾತನಾಡಿ, ವಿಭಾಗೀಯ ತಾಂತ್ರಿಕ ಶಿಲ್ಪಿಯಾಗಿದ್ದ ನಂದ ಕುಮಾರ್‌ರವರು ತಾಂತ್ರಿಕವಾಗಿ ಬಸ್‌ಗಳನ್ನು ಉತ್ತಮ ನಿರ್ವಹಣೆ ಮಾಡಿದ್ದರು. ಸಂಚಾರ ನಿಯಂತ್ರಕರಾಗಿದ್ದ ಅಬ್ಬಾಸ್‌ರವರು ತನ್ನ ಮಾತಿನ ಶೈಲಿಯಲ್ಲಿ ಅಪಘಾತ ಪ್ರಕರಣಗಳನ್ನು ರಾಜಿಯಲ್ಲಿ ಇತ್ಯರ್ಥ ಮಾಡಿ ಸಂಸ್ಥೆಗೆ ಸುಮಾರು ರೂ 2-3 ಕೋಟಿ ಉಳಿತಾಯ ಮಾಡಿದ್ದಾರೆ. ಮುಂದೆ ನಿಗಮ ನಿರ್ದೇಶಕ ರಾಗಿ ಬರಲಿ ಎಂದರು.


ಸನ್ಮಾನ ಸ್ವೀಕರಿಸಿದ ಸಂಚಾರ ನಿಯಂತ್ರಕ ಅಬ್ಬಾಸ್ ಮಾತನಾಡಿ, ನಿಗಮದಲ್ಲಿ ಒಟ್ಟು 33 ವರ್ಷಗಳ ಕಾಲ ಒಂದೇ ಘಟಕದಲ್ಲಿ ಸೇವೆ ಸಲ್ಲಿಸಿದ್ದೇನೆ. ತನ್ನ ಅವಧಿಯಲ್ಲಿ ನಿಗಮಕ್ಕೆ ಯಾವುದೇ ಅಪವಾದ ಬಾರದ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ. ಇದಕ್ಕೆ ಅಧಿಕಾರಿಗಳು ಹಾಗೂ ಸಹುದ್ಯೋಗಿಗಳೆಲ್ಲರ ಸಹಕಾರದಿಂದ ಸಾಧ್ಯವಾಗಿದ್ದು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.


ವಿಭಾಗೀಯ ತಾಂತ್ರಿಕ ಶಿಲ್ಪಿ ನಂದ ಕುಮಾರ್ ಮಾತನಾಡಿ, ತನ್ನ ಸೇವಾವಧಿಯಲ್ಲಿ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.


ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ನಿರ್ವಾಹಕ ಕೋಚಣ್ಣ ಪೂಜಾರಿ, ನಿಗಮದ ಎಐಟಿಸಿ ಸಂಘಟನೆಯ ಪ್ರವೀಣ್, ಬಿ.ಸಿ ರೋಡ್ ಘಟಕದ ನಿರ್ವಾಹಕ ಅಯ್ಯೂಬ್ ಮೊದಲಾದವರು ನಿವೃತ್ತರ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ವಿಭಾಗೀಯ ನಿಯಂತ್ರಣ ಅಧಿಕಾರಿ ಅಮಲಿಂಗಯ್ಯ ಬಿ ಹೊಸ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ವಿಭಾಗೀಯ ಕಾರ್ಮಿಕ ಕಲ್ಯಾಣಾಧಿಕಾರಿ ಸೋಮಶೇಖರ್, ಪುತ್ತೂರು ಘಟಕ ವ್ಯವಸ್ಥಾಪಕ ಸುಬ್ರಹ್ಮಣ್ಯ ಪ್ರಕಾಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸನ್ಮಾನ:
ಸಂಚಾರ ನಿಯಂತ್ರಕ, ಬಸ್ ನಿಲ್ದಾಣದ ಮೇಲುಸ್ತುವಾರಿಯಾಗಿದ್ದ ಅಬ್ಬಾಸ್ ಕೆ. ಕುಂತೂರು ಹಾಗೂ ಪುತ್ತೂರು ವಿಭಾಗೀಯ ತಾಂತ್ರಿಕ ಶಿಲ್ಪಿ ನಂದ ಕುಮಾರ್‌ರವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಸಂಚಾರ ನಿಯಂತ್ರಕ ಅಬ್ಬಾಸ್‌ರವರನ್ನು ವಿವಿಧ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಸನ್ಮಾನಿಸಿ, ಗೌರವಿಸಿದರು. ಪಿಯುಸಿಯಲ್ಲಿ ರಾಜ್ಯದಲ್ಲಿ ಎಂಟನೇ ರ‍್ಯಾಂಕ್ ಪಡೆದ ಚಾಲಕ ಅನಂದ ಗೌಡ ಪುತ್ರಿ ಪೃಥ್ವಿ ಎ.ಕೆ. ಸನ್ಮಾಯವರನ್ನು ಸನ್ಮಾನಿಸಲಾಯಿತು. ವಿಭಾಗದ ಮಟ್ಟದ ಕ್ರೀಡಾ ಕೂಟದಲ್ಲಿ ಬಹುಮಾನ ಪಡೆದವರನ್ನು ಗೌರವಿಸಲಾಯಿತು.


ಶ್ರೀ ಶೈಲ ಪ್ರಾರ್ಥಿಸಿದರು. ಚಾಲಕ ಬೋಧಕ ವೆಂಕಟ್ರಮಣ ಭಟ್ ಸ್ವಾಗತಿಸಿದರು. ಗಂಗಾಧರ, ಕೋಚಣ್ಣ ಪೂಜಾರಿ, ಸುಬ್ರಹ್ಮಣ್ಯ ಭಟ್, ರಮೇಶ್ ಶೆಟ್ಟಿ,, ಪೂರ್ಣೇಶ್, ಈಶ್ಚರ, ಅಬ್ದುಲ್ ಅಝೀಝ್, ಅನೀಶ್, ದಿವ್ಯ, ರೇಖಾ, ಪದ್ಮಾವತಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಗ್ಯಾರಂಟಿ ಸಮಿತಿ ಜಿಲ್ಲಾ ಸದಸ್ಯ ಪೂರ್ಣೇಶ್, ತಾಲೂಕು ಸಮಿತಿ ಸದಸ್ಯರಾದ ವಿಶ್ಚಜಿತ್ ಅಮ್ಮುಂಜ, ಸದಸ್ಯ ಅಬ್ಬು ನವಗ್ರಾಮ ಹಾಗೂ ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗೀಯ ಕಛೇರಿ ಹಾಗೂ ಘಟಕದ ಅಧಿಕಾರಿಗಳು ಹಾಗೂ ಸಿಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here