ಪುತ್ತೂರು; ಕನ್ನಡ ರಾಜ್ಯೋತ್ಸವದ ಅಂಗವಾಗಿ ಧಾರ್ಮಿಕ ಕ್ಷೇತ್ರದ ಸಾಧನೆಗಾಗಿ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸಂಪ್ಯ ಉದಯಗಿರಿ ಶ್ರೀ ವಿಷ್ಣುಮೂರ್ತಿ-ಅನ್ನಪೂರ್ಣೇಶ್ವರ ದೇವಸ್ಥಾನದ ಧರ್ಮದರ್ಶಿಗಳಾಗಿರುವ ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯ ಅವರಿಗೆ ಸಾರ್ವಜನಿಕ ಅಭಿನಂದನಾ ಸಮಾರಂಭವು ನ.5ರಂದು ಸಂಪ್ಯ ಉದಯಗಿರಿ ಶ್ರೀ ವಿಷ್ಣುಮೂರ್ತಿ-ಅನ್ನಪೂರ್ಣೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ಅನ್ನಪೂರ್ಣೇಶ್ವರಿ ಕ್ಷೇತ್ರ ಧಾರ್ಮಿಕ ಶಿಕ್ಷಣ ನೀಡುವ ಕೇಂದ್ರವಾಗಿ ಬೆಳೆಯಲಿ-ಮೋಹನದಾಸ ಸ್ವಾಮೀಜಿ:
ಆಶೀರ್ವಚನ ನೀಡಿದ ಮಾಣಿಲ ಶ್ರೀಮಹಾಲಕ್ಷ್ಮೀ ಕ್ಷೇತ್ರದ ಶ್ರೀಮೋಹನದಾಸ ಸ್ವಾಮಿಜಿಯವರು ಮಾತನಾಡಿ, ವಿಶೇಷ ಗುಣ ಹೊಂದಿರುವ ಪ್ರೀತಂ ಪುತ್ತೂರಾಯ ಅವರು ಸತ್ಕರ್ಮಗಳನ್ನೇ ಮಾಡಿದವರು. ಪೂರ್ವಜರು ಮಾಡಿದ ಪರಂಪರೆ ಉಳಿಸಲು ಪ್ರಯತ್ನಿಸಿದವರು. ಅವರು ಒಬ್ಬಂಟಿಯಾಗಿ ಮಾಡುವ ಕಾರ್ಯಕ್ರಮದಲ್ಲಿ ಒಂದಲ್ಲ ಒಂದು ವೈಶಿಷ್ಠ್ಯತೆಯಿರುತ್ತದೆ. ಅವರು ಧಾರ್ಮಿಕ ಕ್ಷೇತ್ರ ಮಾತ್ರವಲ್ಲದೇ ಸಾಮಾಜಿಕ, ಶೈಕ್ಷಣಿಕವಾಗಿ ಮುನ್ನಡೆಯುವ ಚಾಣಕ್ಷತೆ ಅವರಲ್ಲಿದೆ. ಸಂಪ್ಯ ಅನ್ನಪೂರ್ಣೇಶ್ವರಿ ಕ್ಷೇತ್ರವು ಮಕ್ಕಳಿಗೆ ಧರ್ಮ ಶಿಕ್ಷಣ ನೀಡುವ ಕೇಂದ್ರವಾಗಿ ಪರಿವರ್ತಣೆಯಾಗಬೇಕು. ಎಲ್ಲರನ್ನು ಸೇರಿಸಿಕೊಂಡು ಮಕ್ಕಳಿಗೆ ಸಂಸ್ಕಾರ ನೀಡುವ ಕಾರ್ಯವಾಗಬೇಕು. ಅಂತಹ ಸಾಮಾರ್ಥ್ಯ ಅವರಲ್ಲಿದೆ. ತನ್ನ 51ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಬಂದಿದ್ದು, ಇದಕ್ಕೆ ಸಹಕರಿಸಿದ ಶಾಸಕರಿಗೂ ಸರಕಾರಕ್ಕೂ ಅಭಿನಂದನೆ ಸಲ್ಲಿಸಿದ ಸ್ವಾಮಿಜಿಯವರು ಪ್ರೀತಂ ಪುತ್ತೂರಾಯರಿಂದ ಪ್ರಾರಂಭಗೊಂಡ ದಸರಾ ಇನ್ನಷ್ಟು ವೈಭವದಿಂದ ನಡೆಯಬೇಕು. ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ವಿನಂತಿಸಿದರು.
ಸಮಜಕ್ಕಾಗಿ ಚಿಂತನೆ ಮಾಡುವ ನಿಜವಾದ ವ್ಯಕ್ತಿಗೆ ಈ ಬಾರಿಯ ಜಿಲ್ಲಾ ಪ್ರಶಸ್ತಿ-ಕುಂಟಾರು ರವೀಶ ತಂತ್ರಿ:
ಅಭಿನಂದನಾ ಸಮಿತಿ ಗೌರವಾಧ್ಯಕ್ಷ ಕುಂಟಾರು ರವೀಶ ತಂತ್ರಿಯವರು ಮಾತನಾಡಿ, ಪ್ರೀತಂ ಪುತ್ತೂರಾಯ ಅವರು ಮಾಡಿದ ಕೆಲಸಗಳಲ್ಲಿ ಸಮಾಜಕ್ಕೆ ಪ್ರಯೋಜನವಾಗಿದೆಯೇ ಹೊರತು ಅವರಿಗೆ ವೈಯಕ್ತಿಕ ಯಾವುದೇ ಲಾಭವಿಲ್ಲ. ಸಮಾಜಕ್ಕೆ ಒಳಿತಾಗಿದೆ. ಪವಿತ್ರ ಕ್ಷೇತ್ರ ನಿರ್ಮಾಣದಿಂದ ಸಮಾಜ ಬಾಂಧವರ ಒಟ್ಟು ಸೇರಲು ಸಭಾಂಗಣ ಸಹಕಾರಿಯಾಗಿದೆ. ಸಮಾಜಕ್ಕೆ ಲಾಭವಾಗಿದೆ. ಯಾರೂ ಗುರುತಿಸದವರನ್ನು ಅವರು ಗುರುತಿಸಿ ಗೌರವಿಸಿದ್ದಾರೆ. ಅವರು ಇತರರನ್ನು ಗುರುತಿಸಿದ್ದರೂ ಅವರನ್ನು ಯಾರೂ ಗುರುತಿಸಿರಲಿಲ್ಲ. ಸಮಜಕ್ಕಾಗಿ ಚಿಂತನೆ ಮಾಡುವ ನಿಜವಾದ ವ್ಯಕ್ತಿಗೆ ಈ ಬಾರಿಯ ಜಿಲ್ಲಾ ಪ್ರಶಸ್ತಿ ಸಂದಿದೆ ಎಂದು ಹೇಳಿದರು.
ಸಾಮಾಜಿಕ, ಧಾರ್ಮಿಕ ಕ್ಷೇತ್ರದ ದೊಡ್ಡ ಶಕ್ತಿ ಪ್ರೀತಂ ಪುತ್ತೂರಾಯ-ಸಂಜೀವ ಮಠಂದೂರು:
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ವಿಶಿಷ್ಟ ವ್ಯಕ್ತಿತ್ವದ ವ್ಯಕ್ತಿ ಪ್ರೀತಂ ಪುತ್ತೂರಾಯ ಅವರದ್ದು. ಅವರಷ್ಟು ಎದೆಗಾರಿಕೆಗೆ ಯಾರಿಗೂ ಬರಲು ಸಾಧ್ಯವಿಲ್ಲ. ಯಾವುದೇ ಕಾರ್ಯಕ್ರಮ ಮಾಡುವಾಗಲು ಕೈಚಾಚಿದವರಲ್ಲ. ವಿವಿಧ ಕ್ಷೇತ್ರ ಸಾಧಕರನ್ನು ಗುರುತಿಸುವ ಹೃದಯ ಶ್ರೀಮತಿಕೆ ಅವರಲ್ಲಿದೆ. ಯಾರಿಗೂ ಕಲ್ಪಣೆಗೆ ಬಾರದ ಪುತ್ತೂರು ದಸರಾವನ್ನು ವಿಶಿಷ್ಠ ರೀತಿಯಲ್ಲಿ ಪ್ರಾರಂಭಿಸಿದವರು. ಹೊಸ ಹೊಸ ಕಲ್ಪಣೆಗಳ ಮೂಲಕ ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಪ್ರೀತಂ ಪುತ್ತೂರಾಯ ಪುತ್ತೂರಿನಲ್ಲಿ ದೊಡ್ಡ ಶಕ್ತಿಯಾಗಿದ್ದಾರೆ. ಅರ್ಹ ವ್ಯಕ್ತಿಗೆ ಪ್ರಶಸ್ತಿ ದೊರೆತಿದೆ. ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳ ಹರಿಕಾರನಿಗೆ ಪ್ರಶಸ್ತಿ ಬಂದಿದ್ದು, ನಾವೆಲ್ಲ ಹೆಮ್ಮೆ ಪಡೆವಂತೆ ಮಾಡಿದೆ ಎಂದರು.
ಪ್ರೀತಂ ಪುತ್ತೂರಾಯ ‘ಪುತ್ತೂರ ರಾಯರು’ ಆಗಿದ್ದಾರೆ-ಮಹೇಶ್ ಕಜೆ:
ಅಭಿನಂದನಾ ಭಾಷಣ ಮಾಡಿದ ನ್ಯಾಯವಾದಿ ಮಹೇಶ್ ಕಜೆ ಮಾತನಾಡಿ, ಪುತ್ತೂರಿನ ಧಾರ್ಮಿಕ, ಸಾಮಾಜಿಕ ಕ್ಷೇತ್ರದ ಹಲವು ಪ್ರಥಮಗಳಿಗೆ ಪ್ರೀತಂ ಪುತ್ತೂರಾಯ ಅವರೇ ಕಾರಣರು. ಮಗುವಿನಂತೆ ಮುಗ್ಧ ಮನಸ್ಸಿನ ಗುಣ ಅವರಲ್ಲಿದ್ದು ಎಲ್ಲರಿಗೂ ಆಪ್ತರಾಗುತ್ತಿದ್ದರು. ಅವರ ಮಾತಿನಲ್ಲಿ ಯಾವುದೇ ಆಜ್ಞೆಗಳು ಇರುತ್ತಿರಲಿಲ್ಲ. ಪ್ರೀತಿ, ಅಗ್ರಹಗಳ ಮೂಲಕ ಜನರ ಮನಸ್ಸು ಗೆದ್ದಿರುವ ಪ್ರೀತಂ ಪುತ್ತೂರಾಯ ಅವರು ಪುತ್ತೂರ ರಾಯರಾಗಿದ್ದಾರೆ. ಉನ್ಮುಖವಿಲಾಸಿಯಾದ ಜಾಗೃತ ಜೀವಿಯಾಗಿರುವ ಪ್ರೀತಂರವರಿಗೆ ಯೋಗ ಮತ್ತು ಯೋಗ್ಯತೆಗಳು ಜೊತೆಯಾಗಿ ಬಂದ ಜಿಲ್ಲಾ ಪ್ರಶಸ್ತಿ ಲಭಿಸಿದೆ ಎಂದು ಹೇಳಿದರು.
ಧಾರ್ಮಿಕ ಕ್ಷೇತ್ರದಲ್ಲಿ ಸದ್ದಿಲ್ಲದೆ ಸಾಧನೆ ಮಾಡಿದವರು-ಡಾ.ಸುರೇಶ್ ಪುತ್ತೂರಾಯ:
ಅಭಿನಂದನಾ ಸಮಿತಿ ಗೌರವಾಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ಧಾರ್ಮಿಕ ಕ್ಷೇತ್ರದಲ್ಲಿ ಹಲವು ಸಾಧನೆ ಮಾಡಿರುವ ಪ್ರೀತಂ ಪುತ್ತೂರಾಯ ಅವರು ಅರ್ಯಾಪು ಗ್ರಾಮದಲ್ಲಿ ನಾಲ್ಕೈದು ದೇವಸ್ಥಾನ, ದೈವಸ್ಥಾನಗಳಿಗೆ ಮಾರ್ಗದರ್ಶನ ನೀಡುತ್ತಾ ಧಾರ್ಮಿಕ ನಾಯಕರಾಗಿ ಹೊರ ಹೊಮ್ಮಿದ್ದಾರೆ. ಸದ್ದಿಲ್ಲದೆ ಧಾರ್ಮಿಕ ಶ್ರದ್ದಾ ಕೇಂದ್ರಗಳನ್ನು ತಾನೊಬ್ಬನೆ ಎಲ್ಲರನ್ನೂ ಸೇರಿಸಿಕೊಂಡು ನಿರ್ಮಾಣ ಮಾಡುತ್ತಿರುವುದು ಶ್ಲಾಘನೀಯ ಸಾಧನೆ. ಇಂತಹ ಸಾಧಕರನ್ನು ಗುರುತಿಸುವ ಮೂಲಕ ಶಾಸಕರು ಉತ್ತಮ ಕೆಲಸ ಮಾಡಿದ್ದಾರೆ. ಇದಕ್ಕೆ ಹೇಮನಾಥ ಶೆಟ್ಟಿಯವರ ಪ್ರಯತ್ನವೂ ಇದೆ. ಇಂತಹ ಸಾಧಕರನ್ನು ಅವರ ಅಭಿಮಾನಿಗಳು ಸೇರಿಕೊಂಡು ಅವರ ಹುಟ್ಟು ಹಬ್ಬದ ದಿನವೇ ಆಯೋಜಿಸಲಾಗಿದೆ ಎಂದರು.
ಪ್ರೀತಂ ಪುತ್ತೂರಾಯ ಅವರಿಗೆ ರಾಜ್ಯ ಪ್ರಶಸ್ತಿ ದೊರೆಯವುದರಲ್ಲಿ ಸಂಶಯವೇ ಇಲ್ಲ-ಹೇಮನಾಥ ಶೆಟ್ಟಿ:
ಅಧ್ಯಕ್ಷತೆ ವಹಿಸಿದ್ದ ಅಭಿನಂದನಾ ಸಮಿತಿ ಗೌರವಾಧ್ಯಕ್ಷ ಹೇಮನಾಥ ಶೆಟ್ಟಿ ಕಾವು ಮಾತನಾಡಿ, ಪ್ರೀತಂ ಪುತ್ತೂರಾಯ ಅವರಲ್ಲಿ ವಿಶೇಷವಾಗಿದ್ದ ಸಾಮಾಜಿಕ ಗುಣಗಳಿಗೆ ನಾವೆಲ್ಲ ಒಟ್ಟು ಸೇರಿದ್ದೇವೆ. ತನ್ನ ಸಂಪಾದನೆ ಎಲ್ಲವನ್ನು ಧಾರ್ಮಿಕ ಕಾರ್ಯಗಳಿಗೆ ವಿನಿಯೋಗಿಸಿದವರು. ಯಾವುದೇ ಅಪವಾದ ಬಂದರೂ ಮೆಟ್ಟಿ ನಿಂತವರು. ಹಿಡಿದ ಕಾರ್ಯ ಪೂರ್ಣಗೊಳಿಸುವ ಧೈರ್ಯವಂತರು. ಅವರ ಒಳ್ಖೆ ಗುಣಗಳು ನಮ್ಮನ್ನು ಮತ್ತೆ ಮತ್ತೆ ಆಕರ್ಣಿಸಿದೆ. ಅವರ ಎದೆಗಾರಿಕೆ ಪ್ರಶಸ್ತಿ ಒಳಿದಿದೆ. ಅವರು ಪ್ರಶಸ್ತಿಗಾಗಿ ಪ್ರಯತ್ನ ಮಾಡುವವರಲ್ಲಿ. ಅದರ ಹಿಂದೆ ಹೋಗುವವರು ಅಲ್ಲ. ಜಿಲ್ಲಾ ಪ್ರಶಸ್ತಿ ಬಂದಿರುವುದು ಅವರ ಅರ್ಹತೆಗೆ ಸಂದ ಗೌರವ. ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆಗಳನ್ನು ಮಾಡುವ ಮೂಲಕ ರಾಜ್ಯ ಪ್ರಶಸ್ತಿ ದೊರೆಯವುದರಲ್ಲಿ ಸಂಶಯವೇ ಇಲ್ಲ ಎಂದು ಹೇಳಿದರು.
ನನ್ನನ್ನು ಟೀಕೆ ಮಾಡಿದವರು ಕೈ ಹಿಡಿದು ಸಾಧನೆಯ ಮೆಟ್ಟಿಲು ಹತ್ತಿಸಿದ್ದಾರೆ-ಪ್ರೀತಂ ಪುತ್ತೂರಾಯ:
ಅಭಿನಂದನೆ ಸ್ವೀಕರಿಸಿ ಪ್ರೀತಂ ಪುತ್ತೂರಾಯ ಮಾತನಾಡಿ, ನನ್ನಲ್ಲಿ ಸುಮಾರು 35 ಜನರ ತಂಡವಿದೆ. ಯಾವುದೇ ಕಾರ್ಯಕ್ರಮ ಮಾಡುವಾಗಲೂ ಆ ತಂಡ ಹಾಗೂ ಅನ್ನಪೂರ್ಣೇಶ್ವರಿ ತಂಡದವರು ನನ್ನ ಜೊತೆಯಿದ್ದು ಎಲ್ಲರ ಪರವಾಗಿ ನಾನು ತಗೊಂಡು ಬಂದಿದ್ದೇನೆ. ಈ ಪ್ರಶಸ್ತಿ ಎಲ್ಲರಿಗೂ ಸಂದ ಗೌರವವಾಗಿದೆ ಎಂದರು. ಹಲವು ವರ್ಷಗಳಿಂದ ನಡೆಯುತ್ತಿರುವ ಈ ತಂಡವು ನಿಸ್ವಾರ್ಥ ತಂಡವಾಗಿದೆ. ಸಾರ್ವಜನಿಕ ಕೆಲಸ ಮಾಡಲು ನನಗೆ ನನ್ನ ತಂಡದವರು ಕಾರಣರಲ್ಲ. ನನ್ನನ್ನು ಟೀಕೆ ಮಾಡಿದವರು ಬಹಳಷ್ಟು ಜನರಿದ್ದು ಅವರು ನನ್ನನ್ನು ಸಾಧನೆಯ ಕೈ ಹಿಡಿದು ಮೆಟ್ಟಿ ಹತ್ತಿಸಿದವರು. ಬಹಳಷ್ಟು ಅಪವಾದಗಳು ಬಂದಾಗಲೂ ನನ್ನ ತಂಡದ ಎಲ್ಲರೂ ನನಗೆ ಬೆಂಬಲವಾಗಿದ್ದರು. ಅವರ ಪ್ರೇರಣೆಯಿಂದಾಗಿ ಸಾಮಾಜಿಕ ಕೆಲಸ ಮಾಡಲು ಸಹಕಾರಿಯಾಗಿದೆ. ಪುತ್ತೂರಿನ ಮಹಾಲಿಂಗೇಶ್ವರ ತಂದೆಯಾಗಿ ಸ್ವೀಕರಿಸಿದವನು. ನನ್ನ ಪ್ರಪಂಚವೇ ಮಹಾಲಿಂಗೇಶ್ವರ. ಪುತ್ತೂರಾಯ ಕುಟುಂಬ ಬಂದಿರುವುದೇ ಮಹಾಲಿಂಗೇಶ್ವರನಿಗಾಗಿ. ನನ್ನ ಎಲ್ಲಾ ಕಾರ್ಯಗಳಿಗೆ ಮೂಲ ಪ್ರೇರಣೆ ಮಹಾಲಿಂಗೇಶ್ವರ ಹಾಗೂ ಕುಕ್ಕಾಡಿ ದೇವರೇ ಆಗಿದ್ದು ಅವರ ಪ್ರೇರಣೆಯಂತೆ ಅನ್ನಪೂರ್ಣೇಶ್ವರಿ ದೇವಸ್ಥಾನದ ನನ್ನ ವ್ಯಕ್ತಿತ್ವ ರೂಪಿಸಿದವರು ಎಂದರು.
ಅದ್ಧೂರಿ ಸನ್ಮಾನ:
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪ್ರೀತಂ ಪುತ್ತೂರಾಯ ಅವರನ್ನು ಅಭಿನಂದನಾ ಸಮಿತಿಯಿಂದ ನೀಡಿದ ಬೃಹತ್ ಕಾಲು ದೀಪವನ್ನು ಪ್ರೀತಂ ಪುತ್ತೂರಾಯ ಬೆಳಗಿಸಿ ಸನ್ಮಾನ ಪ್ರಾರಂಭಿಸಿದರು. ನಂತರ ಫಲ, ಪುಷ್ಪ, ಬೃಹತ್ ಹೂವಿನ ಹಾರ ಹಾಗೂ 5 ಅಡಿ ಎತ್ತರ, 3 ಅಡಿ ಅಗಲದ ಬೃಹತ್ ಸನ್ಮಾನ ಪತ್ರ ನೀಡಿ ಅಭಿನಂದಿಸಲಾಯಿತು. ಬಳಿಕ ಹಲವು ಮಂದಿ ಪ್ರೀತಿಂ ಪುತ್ತೂರಾಯ ಅವರನ್ನು ಸನ್ಮಾನಿಸಿ, ಗೌರವಿಸಿದರು.
ಕುಕ್ಕಾಡಿ ಮನೆತನದ ಹಿರಿಯರಾದ ವೆಂಕಟಕೃಷ್ಣ ಪುತ್ತೂರಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಣಮ್ಯ ಪ್ರಾರ್ಥಿಸಿದರು. ಸ್ವಾಗತ ಸಮಿತಿ ಸದಸ್ಯ ರಾಧಾಕೃಷ್ಣ ಬೋರ್ಕರ್ ಸ್ವಾಗತಿಸಿದರು. ಅಭಿನಂದನಾ ಸಮಿತಿ ಕಾರ್ಯದರ್ಶಿ ಉದಯ ಕುಮಾರ್ ರೈ ಎಸ್ ಸನ್ಮಾನ ಪತ್ರ ವಾಚಿಸಿದರು. ಕಾರ್ಯಾಧ್ಯಕ್ಷ ಜಯಂತ ಶೆಟ್ಟಿ ಕಂಬಳತ್ತಡ್ಡ ವಂದಿಸಿದರು. ಬಾಲಕೃಷ್ಣ ಶೆಟ್ಟಿ ಕುಕ್ಕಾಡಿ, ಲೋಕೇಶ್ ಹೆಗ್ಡೆ, ರಾಜಾರಾಮಶೆಟ್ಟಿ ಕೋಲ್ಪೆಗುತ್ತು ಅತಿಥಿಗಳನ್ನು ಶಾಲು ಹಾಕಿ ಸ್ವಾಗತಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಹಭೋಜನ ನೆರವೇರಿತು.