ನಗರಸಭೆ ಸಾಮಾನ್ಯ ಸಭೆ ತ್ಯಾಜ್ಯ ಎಸೆಯುವ ಸಾರ್ವಜನಿಕರಿಗೆ ದಂಡ ವಿಧಿಸಲು, ಏಕಬಳಕೆ ಪ್ಲಾಸ್ಟಿಕ್ ನಿಷೇಧಿಸಲು ಹೊರಗುತ್ತಿಗೆ ಆಧಾರದಲ್ಲಿ ಮಾರ್ಷೆಲ್‌ಗಳ ನೇಮಕ
ಪುತ್ತೂರು:ನಗರಸಭೆ ವ್ಯಾಪ್ತಿಯಲ್ಲಿ ತ್ಯಾಜ್ಯ ಎಸೆಯುವ ಸಾರ್ವಜನಿಕರಿಗೆ ದಂಡ ವಿಽಸಲು ಹಾಗೂ ಏಕಬಳಕೆ ಪ್ಲಾಸ್ಟಿಕ್ ಸಂಪೂರ್ಣ ನಿಷೇಧ ಅನುಷ್ಟಾನವಾಗುವಂತೆ ನೋಡಿಕೊಳ್ಳಲು ಎನ್‌ಜಿಒ ಮೂಲಕ ಮಾರ್ಷೆಲ್‌ಗಳ ನೇಮಕ ವಿಚಾರ ನಗರಸಭೆ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪವಾಗಿ ಸಭೆ ಅನುಮೋದನೆ ನೀಡಿತು.
ನಗರಸಭೆ ಸಾಮಾನ್ಯ ಸಭೆಯು ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಅವರ ಅಧ್ಯಕ್ಷತೆಯಲ್ಲಿ ನಗರಸಭೆ ಸಭಾಭವನದಲ್ಲಿ ಏ.29ರಂದು ನಡೆಯಿತು.ನಗರಸಭೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ,ರಸ್ತೆ ಬದಿಯಲ್ಲಿ, ಚರಂಡಿ,ತೋಡು, ಕಾಲುವೆಗಳಲ್ಲಿ ತ್ಯಾಜ್ಯವನ್ನು ಎಸೆಯುವುದು ಪತ್ರಿಕೆಗಳ ಮೂಲಕ ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ದಾಖಲಾಗುತ್ತಿದ್ದು,ಈ ಬಗ್ಗೆ ನಗರಸಭೆಯು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ನಡೆಸಿದ್ದರೂ ಯಾವುದೇ ಬದಲಾವಣೆ ಆಗಿಲ್ಲ.ಈ ಕಾರಣಕ್ಕಾಗಿ, ನಗರಸಭಾ ವ್ಯಾಪ್ತಿಯಲ್ಲಿ ತ್ಯಾಜ್ಯ ಎಸೆಯುವ ಸಾರ್ವಜನಿಕರಿಗೆ ದಂಡ ವಿಧಿಸಲು ಹಾಗೂ ಏಕ ಬಳಕೆ ಪ್ಲಾಸ್ಟಿಕ್‌ನ್ನು ನಿಷೇಧಿಸಲು ಮಾರ್ಷೆಲ್‌ಗಳನ್ನು ಎನ್‌ಜಿಒ ಮೂಲಕ ಹೊರಗುತ್ತಿಗೆ ಆಧಾರದಲ್ಲಿ ನೇಮಿಸಲು ಏಪ್ರಿಲ್ 22ರಂದು ಯೋಜನಾ ನಿರ್ದೇಶಕರ ಸಭೆಯಲ್ಲಿ ಸೂಚಿಸಲಾಗಿದೆ ಎಂದು ಪ್ರಸ್ತಾಪಿಸಿದ ಪೌರಾಯುಕ್ತ ಮಧು ಎಸ್.ಮನೋಹರ್ ಅವರು,ಈ ಕುರಿತು ಕ್ರಮಕೈಗೊಳ್ಳುವರೇ ಅನುಮೋದನೆಗಾಗಿ ಸಭೆಯ ಗಮನಕ್ಕೆ ತಂದರು.ಜೊತೆಗೆ ಮೂರು ಮಂದಿಯ ತಂಡ ರಚಿಸಿ, ಅವರಿಗೆ ದಂಡ ವಿಧಿಸುವ ಅಧಿಕಾರ ನೀಡುವುದು ಮತ್ತು ದಂಡದ ಮೊತ್ತದಲ್ಲಿ ಅವರಿಗೆ ಗೌರವ ಧನ ನೀಡುವುದು.ಇದಕ್ಕಾಗಿ ನಿವೃತ್ತ ಸೈನಿಕರು ಮತ್ತು ಆರೋಗ್ಯ ಇಲಾಖೆಯ ನಿವೃತ್ತ ಅಧಿಕಾರಿಗಳನ್ನು ನೇಮಿಸಲು ಅವಕಾಶವಿದೆ ಎಂದವರು ಹೇಳಿದರು.ಈ ಕುರಿತು ಜಿಲ್ಲಾಧಿಕಾರಿಯವರಿಗೆ ಬರೆದು ಮುಂದಿನ ಪ್ರಕ್ರಿಯೆಗಳಿಗಾಗಿ ಸಭೆ ಅನುಮೋದನೆ ನೀಡಿತು.
ಕೂರ್ನಡ್ಕದಲ್ಲಿ ರಿಕ್ಷಾ ತಂಗುದಾಣ ಶಲ್ಟರ್ ನಿರ್ಮಾಣಕ್ಕೆ ಸದಸ್ಯರಿಬ್ಬರ ಫೈಟ್:
ನಗರಸಭೆ ವ್ಯಾಪ್ತಿಯ ವಾರ್ಡ್ ಸಂಖ್ಯೆ 22ರ ಕೂರ್ನಡ್ಕದಲ್ಲಿ ಕೆಮ್ಮಿಂಜೆಗೆ ಹೋಗುವ ರಸ್ತೆ ಬದಿಯಲ್ಲಿ ಖಾಸಗಿ ಜಾಹೀರಾತು ಸಂಸ್ಥೆಯ ಸಹಯೋಗದೊಂದಿಗೆ ಆಟೋ ರಿಕ್ಷಾ ತಂಗುದಾಣವು ನಿರ್ಮಾಣ ಹಂತದಲ್ಲಿದ್ದು ಇದೀಗ ರಿಕ್ಷಾ ತಂಗುದಾಣಕ್ಕೆ ಎನ್‌ಒಸಿ ಸಿಗದಿರುವ ಹಿಂದೆ ರಾಜಕೀಯ ಕೈವಾಡ ಇದೆ ಎಂದು ಆ ವಾರ್ಡ್‌ನ ಬಿಜೆಪಿ ಸದಸ್ಯೆ ಶಶಿಕಲಾ ಸಿ.ಎಸ್ ಅವರು ಆರೋಪಿಸಿದ ಮತ್ತು ಅಲ್ಲೇ ಪಕ್ಕದಲ್ಲಿ ಅಂಗನವಾಡಿಯ ಬಳಿ ಶಾಸಕರ ಅನುದಾನದಿಂದ ರಿಕ್ಷಾ ತಂಗುದಾಣ ನಿರ್ಮಾಣ ಆಗಲಿದೆ ಎಂದು ಕಾಂಗ್ರೆಸ್ ಸದಸ್ಯ ಯೂಸುಫ್ ‘ಡ್ರೀಮ್’ ಅವರು ಪ್ರಸ್ತಾಪಿಸಿದರು.ಸದಸ್ಯೆ ಶಶಿಕಲಾ ಸಿ.ಎಸ್ ಅವರು ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಕೂರ್ನಡ್ಕದಲ್ಲಿ ರಿಕ್ಷಾ ತಂಗುದಾಣವಿದೆ.ಆ ಬಡ ರಿಕ್ಷಾ ಚಾಲಕರ ಬೇಡಿಕೆಯಂತೆ ಅವರಿಗೆ ರಿಕ್ಷಾ ತಂಗುದಾಣದ ಶಲ್ಟರ್ ಕಾಮಗಾರಿ ನಡೆಯುತ್ತಿದೆ.ಆದರೆ ಇದೀಗ ನಗರಸಭೆಯಿಂದ ಅದಕ್ಕೆ ಎನ್‌ಒಸಿ ಕೊಡುತ್ತಿಲ್ಲ ಎಂದು ಪ್ರಸ್ತಾಪಿಸಿದರು.ಉತ್ತರಿಸಿದ ಪೌರಾಯುಕ್ತ ಮಧು ಎಸ್ ಮನೋಹರ್ ಅವರು, ರಿಕ್ಷಾ ನಿಲ್ದಾಣ ನಿರ್ಮಾಣ ಸ್ಥಳದ ಹಿಂದೆ ಖಾಸಗಿ ಸ್ಥಳವೊಂದರಲ್ಲಿ ಕಟ್ಟಡ ಎದ್ದು ನಿಲ್ಲುತ್ತಿದೆ.ಅವರು ಅನುಮತಿಯನ್ನು ಪಡೆದುಕೊಂಡಿದ್ದು, ರಿಕ್ಷಾ ತಂಗುದಾಣಕ್ಕೆ ಅವರಿಂದ ಆಕ್ಷೇಪಣೆ ಬಂದಿದೆ.ನಗರಸಭೆ ಮತ್ತು ಲೋಕೋಪಯೋಗಿ ಇಲಾಖೆಗೆ ಅವರು ಲಿಖಿತ ರೂಪದಲ್ಲಿ ಆಕ್ಷೇಪಣೆ ಸಲ್ಲಿಸಿದ್ದಾರೆ ಎಂದರು.40 ವರ್ಷದಿಂದ ಅಲ್ಲಿ ರಿಕ್ಷಾಗಳು ನಿಂತಿರುವಾಗ ಅಲ್ಲಿ ಯಾರದ್ದೂ ಆಕ್ಷೇಪಣೆ ಇಲ್ಲ.ಈಗ ಒಂದು ಶೆಲ್ಟರ್ ಮಾಡುತ್ತೇವೆ ಎಂದಾಗ ಯಾಕೆ ಆಕ್ಷೇಪ ಎಂದು ಶಶಿಕಲಾ ಅವರು ಪ್ರಶ್ನಿಸಿದರು.ಉಪಾಧ್ಯಕ್ಷ ಬಾಲಚಂದ್ರ ಅವರು ಮಾತನಾಡಿ, ಆ ಭಾಗದಲ್ಲಿ ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿ ಇದೆ.ಆದ್ದರಿಂದ ಆ ಸ್ಥಳಕ್ಕೆ ನಗರಸಭೆಯಿಂದ ಇಂಜಿನಿಯರ್ ಸಹಿತ ನಾವೆಲ್ಲ ಹೋಗಿ ಲೋಕೋಪಯೋಗಿ ಇಲಾಖೆಯ ವರದಿ ಪಡೆಯುವ ಕುರಿತು ತಿಳಿಸಿದರು.ಸದಸ್ಯ ಯುಸೂಫ್ ಅವರು ಮಾತನಾಡಿ, ರಿಕ್ಷಾ ನಿಲ್ದಾಣಕ್ಕೆ ಈ ಹಿಂದೆ ಶಾಸಕರ ಮೂಲಕ ಅನುದಾನ ಇರಿಸಿದ್ದೆ.ಆಗಲೂ ಆಕ್ಷೇಪ ಬಂದಿತ್ತು.ಹಾಗಾಗಿ ನಾವು ಕೈ ಬಿಟ್ಟಿದ್ದೆವು.ಅದಲ್ಲದೆ ಈಗ ರಿಕ್ಷಾ ನಿಲ್ದಾಣ ಮಾಡುವಲ್ಲಿ ಶಲ್ಟರ್ ಚರಂಡಿಯ ಮೇಲಿದೆ ಎಂದರು.ಆಕ್ಷೇಪಿಸಿದ ಸದಸ್ಯರಾದ ಗೌರಿ ಬನ್ನೂರು,ಮೋಹಿನಿ ವಿಶ್ವನಾಥ್ ಅವರು,ಬನ್ನೂರು ಮೆಸ್ಕಾಂ ಇಲಾಖೆಯ ಆವರಣಗೋಡೆಯ ಪಕ್ಕದಲ್ಲಿ ಚರಂಡಿಯ ಮೇಲೆಯೇ ರಿಕ್ಷಾ ತಂಗುದಾಣ ಶಲ್ಟರ್ ಇದೆ ಎಂದು ಸಭೆಯ ಗಮನಕ್ಕೆ ತಂದರು.ಭಾಮಿ ಅಶೋಕ್ ಶೆಣೈ ಅವರು ಮಾತನಾಡಿ, ಅಲ್ಲಿ ಕೆಮ್ಮಿಂಜೆ ದೇವಸ್ಥಾನಕ್ಕೆ ಹೋಗುವ ರಸ್ತೆ ಇರಬಹುದು.ನಗರಸಭೆಯಿಂದ ಒಮ್ಮೆ ಪರಿಶೀಲನೆ ನಡೆಸಿ ಮುಗಿಸಿ ಎಂದರು.ಸದಸ್ಯ ಯೂಸೂಫ್ ಅವರು ಮಾತನಾಡಿ ಈಗಾಗಲೇ ಅಲ್ಲೇ ಅಂಗನವಾಡಿ ಪಕ್ಕದಲ್ಲಿ ರಿಕ್ಷಾ ತಂಗುದಾಣ ರಚನೆ ಮಾಡುವ ಕುರಿತು ಶಾಸಕರ ರೂ.5 ಲಕ್ಷ ಅನುದಾನ ಮಂಜೂರಾಗಿದೆ.ಹಾಗಾಗಿ ಎರಡೆರಡು ರಿಕ್ಷಾ ತಂಗುದಾಣ ಮಾಡಬಹುದಾ ಎಂದು ಪ್ರಶ್ನಿಸಿದರು.ಎರಡು ರಿಕ್ಷಾ ನಿಲ್ದಾಣ ಮಾಡಬಹುದು ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು ಹೇಳಿದರಲ್ಲದೆ ಇಲ್ಲಿ ನಗರಸಭೆಯಿಂದ ಆಗುವಾಗ ಎಮ್‌ಎಲ್‌ಎ ಅನುದಾನ ಯಾಕೆ ಎಂದು ಪ್ರಶ್ನಿಸಿದರು.ಮಹಮ್ಮದ್ ರಿಯಾಜ್ ಅವರು ಮಾತನಾಡಿ ಅನುದಾನವನ್ನು ಮಿಸ್‌ಯೂಸ್ ಮಾಡಬೇಡಿ ಎಂದರು.ಸದಸ್ಯ ಯೂಸೂಫ್ ಅವರು ಮಾತನಾಡಿ ನಮ್ಮ ಮನೆಯ ಎದುರು ಯಾರಾದರೂ ಬಸ್‌ಸ್ಟ್ಯಾಂಡ್ ಹಾಕುವುದಾರರೆ ನಾವು ಬಿಡುತ್ತೇವಾ.?, ಅದೇ ರೀತಿ ಅಲ್ಲಿ ಖಾಸಗಿ ಕಟ್ಟಡ ಎದ್ದು ನಿಲ್ಲುವಾಗ ಅದರ ಎದುರು ರಿಕ್ಷಾ ತಂಗುದಾಣ ಆದರೆ ಹೇಗೆ ಇರುತ್ತದೆ ಎಂದು ಚಿಂತಿಸಬೇಕು.ನಾವೇನು ಅಭಿವೃದ್ಧಿಯ ವಿರೋಧ ಅಲ್ಲ.ನನಗೂ ಅಲ್ಲಿ ಅಭಿವೃದ್ಧಿ ಆಗಬೇಕೆಂಬ ಆಸೆ ಇದೆ.ಆದರೆ ಅಲ್ಲಿ ಆಕ್ಷೇಪಣೆ ಇದ್ದ ಕಾರಣ ನಾವು ಅಲ್ಲಿ ಮಾಡಿಲ್ಲ ಎಂದರು.೨೨ನೇ ವಾರ್ಡ್ ನನ್ನ ವ್ಯಾಪ್ತಿಗೆ ಬರುತ್ತದೆ.ಅಲ್ಲಿ ಯೂಸೂಫ್ ಅವರ ಓಟರ್ ಇದ್ದಾರೆ ಎಂದು ಅವರ ಪರವಾಗಿ ಮಾತನಾಡುತ್ತಿದ್ದಾರೆ ಎಂದು ಶಶಿಕಲಾ ಹೇಳಿದರು.ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಅವರು ಮಧ್ಯಪ್ರವೇಶಿಸಿ, ಆ ವಾರ್ಡ್‌ನ ಕೌನ್ಸಿಲರ್ ಹೇಗೆ ನಿರ್ಣಯ ಮಾಡುತ್ತಾರೆ ಹಾಗೆ ಮಾಡೋಣ ಎಂದು ಹೇಳಿ ಚರ್ಚೆಗೆ ತೆರೆ ಎಳೆದರಾದರೂ ಸದಸ್ಯ ಯೂಸೂಫ್ ಅವರು ಮಾತನಾಡಿ ಅಭಿವೃದ್ಧಿಗೆ ನಮ್ಮ ಬೆಂಬಲ ಇದೆ.ನಾವು ಅಭಿವೃದ್ಧಿ ವಿಚಾರದಲ್ಲಿ ವಾರ್ಡ್ ನೋಡುವುದಿಲ್ಲ ಎಂದರು.
ಎ.ಬಿ.ಖಾತೆಗಳ ಗೊಂದಲ – ಪತ್ರಿಕಾ ಮಾಹಿತಿ ನೀಡುವಂತೆ ಸದಸ್ಯರ ಆಗ್ರಹ:
ಎ ಮತ್ತು ಬಿ ಖಾತೆಗಳ ಕುರಿತು ಸಾರ್ವಜನಿಕರಲ್ಲಿ ಇನ್ನೂ ಗೊಂದಲವಿದೆ.ಅನಧಿಕೃತವನ್ನು ಬಿ ಖಾತೆ ಮಾಡಲು ಹೇಳುತ್ತೀರಿ.ಆದರೆ ಅವರಿಗೆ ಪ್ರಯೋಜನ ಏನು? ಬಿ ಖಾತೆಯಲ್ಲಿ ಸೈಟ್ ಸೇಲ್ ಮಾಡಬಹುದು.ಆದರೆ ಪಡೆದುಕೊಂಡವ ಮತ್ತೆ ಸಿಕ್ಕಿ ಹಾಕಿಕೊಳ್ಳುವ ಪರಿಸ್ಥಿತಿ ಇದೆ.ಬಿ ಖಾತೆ ಮಾಡಿಯೂ ಸಿಂಗಲ್ ಸೈಟ್ ಮಾಡಲು ಆಗುವುದಿಲ್ಲ.ಹೀಗೆ ಅನೇಕ ಸಮಸ್ಯೆಗಳಿವೆ ಅದನ್ನು ಸಾರ್ವಜನಿಕರಿಗೆ ತಿಳಿಸುವ ಕೆಲಸ ಆಗಬೇಕೆಂದು ಸದಸ್ಯರು ಆಗ್ರಹಿಸಿದರು. ಪ್ರಾರಂಭದಲ್ಲಿ ಅಧ್ಯಕ್ಷರು ಮಾತನಾಡಿ, ಖಾತೆ ಪೆಂಡಿಂಗ್ ಕುರಿತು ಪ್ರಶ್ನಿಸಿದರು.ಸೈಟ್ ಪರಿಶೀಲನೆ ಬಾಕಿ ಆಗುತ್ತದೆ.ಸ್ಕ್ಯಾನಿಂಗ್‌ಗೆ ಅರ್ಧರ್ಧ ಗಂಟೆ ಸಮಯ ಹೋಗುತ್ತದೆ ಎಂದು ಸಿಬ್ಬಂದಿ ಉತ್ತರಿಸಿದರು.ಉಪಾಧ್ಯಕ್ಷ ಬಾಲಚಂದ್ರ ಅವರು ಇತರ ಸಿಬ್ಬಂದಿಗಳನ್ನು ನಿಮ್ಮ ಕೆಲಸಕ್ಕೆ ಜೋಡಣೆ ಮಾಡುವಂತೆ ಸೂಚಿಸಿದರು.ಪೌರಾಯುಕ್ತರು ಮಾತನಾಡಿ ಈಗಾಗಲೇ ಸಿಬ್ಬಂದಿಗಳನ್ನು ಜೋಡಣೆ ಮಾಡಿದ್ದೇವೆ.ಇಲ್ಲಿನ ತನಕ ಬಿ ಖಾತೆ 113 ಆಗಿದೆ.ಸುಮಾರು 250 ಅರ್ಜಿ ಬಂದಿವೆ.ಆದರೆ ನಗರಸಭೆ ವ್ಯಾಪ್ತಿಯಲ್ಲಿ ಡಬಲ್ ಟ್ಯಾಕ್ಸ್ ಕಟ್ಟುವವರು ಸುಮಾರು 624 ಮಂದಿ ಇದ್ದಾರೆ.ಅವರು ಯಾರೂ ಅರ್ಜಿ ಹಾಕಿಲ್ಲ.ಬಿ ಖಾತೆಗೆ ಅರ್ಜಿ ಹಾಕಿದರೆ 7 ದಿನದೊಳಗೆ ಮಾಡಿ ಕೊಡಲಾಗುತ್ತದೆ ಎಂದರು.ಭಾಮಿ ಅಶೋಕ್ ಶೆಣೈ ಅವರು ಮಾತನಾಡಿ ಬಿ ಖಾತೆಯಿಂದ ಜನರಿಗೆ ಯಾವುದೇ ಪ್ರಯೋಜನವಿಲ್ಲ.ಸೈಟ್ ಸೇಲ್ ಮಾಡಲು ಅವಕಾಶ ಇದ್ದರೆ ಆ ಸೈಟ್ ಪಡೆದವರಿಗೆ ತೊಂದರೆ ಆಗುತ್ತದೆ.ಸಿಂಗಲ್ ಲೇ ಔಟ್ ಮಾಡಲು ಆಗುವುದಿಲ್ಲ ಎಂದರು.ಇಲ್ಲಿ ಡಬಲ್ ಟ್ಯಾಕ್ಸ್ ಇದ್ದವರಿಗೆ ಸಿಂಗಲ್ ಟ್ಯಾಕ್ಸ್ ಆಗುವುದೇ ಪ್ರಯೋಜನ ಎಂದರು.ಉಪಾಧ್ಯಕ್ಷ ಬಾಲಚಂದ್ರ ಅವರು ಈ ಹಿಂದೆ ೯೪ಸಿ ಮತ್ತು ಸಿಸಿ ಸಮಸ್ಯೆಯ ಕುರಿತು ಪ್ರಸ್ತಾಪಿಸಿದರು.ಸದಸ್ಯ ಜೀವಂಧರ್ ಜೈನ್ ಅವರು ಮಾತನಾಡಿ ಎ ಮತ್ತು ಬಿ ಖಾತೆಯ ಕುರಿತು ಸಮಗ್ರವಾಗಿ ಪತ್ರಿಕೆಯಲ್ಲಿ ಮಾಹಿತಿ ನೀಡುವಂತೆ ಪ್ರಸ್ತಾಪಿಸಿದರು.ಪೌರಾಯುಕ್ತರು ಮಾಹಿತಿ ಕೊಡುತ್ತೇನೆಂದರು.
ಉದ್ಯಮ ಪರವಾನಿಗೆ ಸರ್ವೇಯಾಗಿಲ್ಲ:
ಜೀವಂಧರ್ ಜೈನ್ ಅವರು ಮಾತನಾಡಿ ಉದ್ಯಮ ಪರವಾನಿಗೆ ಕಳೆದ ಬಾರಿ ಸರ್ವೆ ಕಾರ್ಯಕ್ಕೆ ನಿರ್ಣಯ ಆಗಿದೆ.ಆದರೆ ಇನ್ನೂ ಸರ್ವೇ ಆಗಿಲ್ಲ ಯಾಕೆಂದು ಪ್ರಶ್ನಿಸಿದರು.ಉತ್ತರಿಸಿದ ಪೌರಾಯುಕ್ತರು ನಗರಸಭೆ ವ್ಯಾಪ್ತಿಯಲ್ಲಿ 3344 ಉದ್ದಿಮೆಗಳಿವೆ.ಅನಽಕೃತವಾಗಿ ಸುಮಾರು ೨೫೦ ಉದ್ದಿಮೆ ಇದೆ.ಈ ಕುರಿತು ಬೇರೆ ಬೇರೆ ರೀತಿಯಲ್ಲಿ ಪರಿಶೀಲನೆ ಮಾಡುತ್ತೇವೆ ಎಂದರು.ಮೆಸ್ಕಾಂ ಇಲಾಖೆಯಿಂದ ರಸ್ತೆ ಬದಿಯಲ್ಲಿ ಕಂಬ ಅಳವಡಿಸುವ ಮೊದಲು ಅವರು ನಗರಸಭೆಗೆ ಪತ್ರ ಬರೆದು, ಕಂಬ ಅಳವಡಿಸುವಂತೆ ಸೂಚಿಸಬೇಕು.ಇಲ್ಲಾಂದ್ರೆ ಒಟ್ಟು ಕಂಬ ಅಳವಡಿಸುತ್ತಾರೆ ಎಂದು ಜೀವಂಧರ್ ಜೈನ್ ಪ್ರಸ್ತಾಪಿಸಿದರು.
ನಗರಸಭೆ ವಾರ್ಡ್‌ಗಳ ಒಳರಸ್ತೆಗಳ ಪ್ಯಾಚ್‌ವರ್ಕ್ ಡಾಮರೀಕರಣ ಮಾಡುವಾಗ ಸಾರ್ವಜನಿಕರು ಗುಂಡಿಗೆ ಮಣ್ಣು ತುಂಬಿಸಿ ಶ್ರಮದಾನ ಮಾಡಿರುವುದನ್ನು ಮುಟ್ಟದೆ ಕೇವಲ ಗುಂಡಿ ಭಾಗವನ್ನು ಮುಚ್ಚುವ ಕೆಲಸ ಆಗುತ್ತಿದೆ ಎಂದು ದೂರುಗಳು ಬಂದಿವೆ.ಈ ಕುರಿತು ಗುತ್ತಿಗೆದಾರರಿಗೆ ಸರಿಯಾದ ಸೂಚನೆ ನೀಡಬೇಕು ಎಂದು ಉಪಾಧ್ಯಕ್ಷ ಬಾಲಚಂದ್ರ ಅವರು ಪೌರಾಯುಕ್ತರಿಗೆ ತಿಳಿಸಿದರು.ನಗರಸಭೆ ಸದಸ್ಯೆ ಗೌರಿ ಬನ್ನೂರು ಅವರ ಮನೆಯ ಸಮೀಪ ಮಣ್ಣು ತುಂಬಿದ ಗುಂಡಿಯನ್ನು ತೆರವು ಮಾಡಿ ಡಾಮರೀಕರಣ ಮಾಡದೆ ಹೋಗಿದ್ದಾರೆ ಎಂದು ಸಭೆಯಲ್ಲಿ ಪ್ರಸ್ತಾಪವಾಯಿತು.ಕೆಲವೊಂದು ಕಡೆ ಕಾಂಕ್ರೀಟ್ ರಸ್ತೆಯಲ್ಲಿನ ದುರಸ್ತಿಗೆ ಕಾಂಕ್ರೀಟ್ ಮೂಲಕ ಅಥವಾ ಡಾಮರೀಕರಣದ ಮೂಲಕವಾದರೂ ಮುಕ್ತಿ ನೀಡಬೇಕು.ಇಲ್ಲಾಂದ್ರೆ ಸಮಸ್ಯೆ ಆಗುತ್ತದೆ ಎಂದರು.
ನೆಲ್ಲಿಕಟ್ಟೆ ಡ್ರೈನೇಜ್ ಸಮಸ್ಯೆ ಪರಿಹರಿಸಿ:
ನೆಲ್ಲಿಕಟ್ಟೆ ಡ್ರೈನೇಜ್ ಸಮಸ್ಯೆ ಪರಿಹರಿಸಿ ಇಲ್ಲಾಂದ್ರೆ ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣ ಮುಳುಗಡೆಯಾಗುತ್ತದೆ ಎಂದು ಸದಸ್ಯ ರಮೇಶ್ ರೈ ಪ್ರಸ್ತಾಪಿಸಿದರು.ಪ್ರತಿ ವಾರ್ಡ್‌ಗೆ ರೂ.5 ಲಕ್ಷ ಅನುದಾನ ನೀಡಿದೆ.ಅದರ ಕ್ರಿಯಾಯೋಜನೆ ಕೊಡದ ಸದಸ್ಯರು ಕೊಡುವಂತೆ ಅಧ್ಯಕ್ಷರು ಹೇಳಿದಾಗ ರಮೇಶ್ ರೈ ನಗರೋತ್ಥಾನದ ಮೂಲಕ ನೆಲ್ಲಿಕಟ್ಟೆ ಡ್ರೈನೇಜ್ ಸಮಸ್ಯೆ ಪರಿಹರಿಸುವ ಕಾರ್ಯ ನಡೆಯುತ್ತಿಲ್ಲ.ಈ ನಿಟ್ಟಿನಲ್ಲಿ ನನ್ನ ವಾರ್ಡ್ ಅಭಿವೃದ್ಧಿಗೆ ನೀಡುವ ರೂ.5 ಲಕ್ಷವನ್ನು ಡ್ರೈನೇಜ್ ಸಮಸ್ಯೆ ಪರಿಹಾರಕ್ಕೆ ಇಡುವಂತೆ ತಿಳಿಸಿದರು.ಪ್ರತಿ ವರ್ಷ ಮಳೆಯಲ್ಲಿ ನೆಲ್ಲಿಕಟ್ಟೆ ಖಾಸಗಿ ಬಸ್‌ನಿಲ್ದಾಣದ ರಸ್ತೆ ಮುಳುಗಡೆಯಾಗುತ್ತದೆ.ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ನಡೆದುಕೊಂಡು ಹೋಗಲು ತೊಂದರೆ ಆಗುತ್ತಿದೆ ಎಂದು ರಮೇಶ್ ರೈ ಗಮನ ಸೆಳೆದರು.
ಹೋಟೇಲ್ ಅಡುಗೆ ಹೊಗೆ ವೃದ್ಧ, ವಿಕಲಚೇತನರ ಆರೋಗ್ಯದ ಮೇಲೆ ಪರಿಣಾಮ:
ಬೊಳುವಾರಿನಲ್ಲಿರುವ ಮೆಟ್ರೋ ಡೈನ್ ಹೊಟೇಲ್ ತಡ ರಾತ್ರಿಯೂ ತೆರೆದಿರುತ್ತಿದೆ.ಜೊತೆಗೆ ವಿಪರೀತ ಅಡುಗೆ ಹೊಗೆ ಪಕ್ಕದ ಮನೆಯಲ್ಲಿರುವವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.ಆ ಮನೆಯಲ್ಲಿ ವೃದ್ದ ಮತ್ತು ವಿಶೇಷಚೇತನರಿದ್ದಾರೆ.ಕಾನೂನು ಬಾಹಿರವಾಗಿ ರಾತ್ರಿಯೂ ಹೋಟೆಲ್ ವ್ಯವಹರಿಸುತ್ತಿದೆ ಎಂದು ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಅವರು ಪ್ರಸ್ತಾಪಿಸಿದರು.ಉತ್ತರಿಸಿದ ಉಪಾಧ್ಯಕ್ಷ ಬಾಲಚಂದ್ರ ಅವರು ಈ ವಿಚಾರ ನನ್ನ ಗಮನಕ್ಕೂ ಬಂದಿದೆ ಎಂದರು.ಪೌರಾಯುಕ್ತರು ಮಾತನಾಡಿ ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಲ್ಲಾರೆ ಸಾಮೆತ್ತಡ್ಕ ಅಡ್ಡರಸ್ತೆಯಲ್ಲಿ ಹಲವು ವರ್ಷಗಳಿಂದ ಸಾರ್ವಜನಿಕ ಬಳಕೆಯ ರಸ್ತೆಯಿದೆ.ಅದನ್ನು ಅಭಿವೃದ್ಧಿ ಪಡಿಸುವಂತೆ ಸದಸ್ಯ ಮನೋಹರ್ ಕಲ್ಲಾರೆ ಪ್ರಸ್ತಾಪಿಸಿದರು.ಪೌರಾಯುಕ್ತರು ಮಾತನಾಡಿ ಈ ಕುರಿತು ಪರಿಶೀಲನೆ ಮಾಡಲಾಗಿದೆ.ಆ ರಸ್ತೆ ಖಾಸಗಿ ವ್ಯಕ್ತಿಯೊಬ್ಬರ ವರ್ಗ ಜಾಗ ಆಗಿದೆ.ಅವರಲ್ಲಿ ಮಾತನಾಡಿದಾಗ ಅವರು ಬಿಟ್ಟು ಕೊಡುವುದಿಲ್ಲ.ಹಾಗಾಗಿ ಅದನ್ನು ಏನೂ ಮಾಡಲು ಆಗುವುದಿಲ್ಲ ಎಂದರು.ಅಪಾಯಕಾರಿ ತಿರುವಿನಲ್ಲಿ ಮಿರರ್ ಅಳವಡಿಸುವ ಕಾರ್ಯ ಆಗಬೇಕೆಂದು ವಿದ್ಯಾ ಗೌರಿ ಪ್ರಸ್ತಾಪಿಸಿದರು.
ಮೇ ೧ಕ್ಕೆ ಮುಳಿಯದಿಂದ ಕಾರ್ಮಿಕರು, ನೌಕರರನ್ನು ಗೌರವಿಸುವ ಕಾರ್ಯಕ್ರಮ:
ಮೇ ೧ಕ್ಕೆ ಬೆಳಿಗ್ಗೆ ಗಂಟೆ ೧೦.೩೦ಕ್ಕೆ ನಗರಸಭೆ ಪೌರ ಕಾರ್ಮಿಕರು, ನೌಕರರು, ಸದಸ್ಯರು, ಅಽಕಾರಿ ವರ್ಗದವರನ್ನು ಗೌರವಿಸುವ ವಿಶೇಷ ಕಾರ್ಯಕ್ರಮ ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್ ಸಂಸ್ಥೆಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಡಾ|ರಾಜೇಶ್ ಬೆಜ್ಜಂಗಳ ಸಾಮಾನ್ಯ ಸಭೆಯ ಆರಂಭದಲ್ಲಿ ಮಾಹಿತಿ ನೀಡಿದರು.
ಸಭೆಯಲ್ಲಿ ನಗರಸಭೆ ಸದಸ್ಯರಾದ ದೀಕ್ಷಾ ಪೈ, ಬಿ.ಶೈಲಾ ಪೈ,ದಿನೇಶ್ ಶೇವಿರೆ, ವಸಂತ ಕಾರೆಕ್ಕಾಡು, ಗೌರಿ ಬನ್ನೂರು, ಕೆ.ಫಾತಿಮತ್ ಝೊಹರಾ, ಮೋಹಿನಿ ವಿಶ್ವನಾಥ ಗೌಡ, ರೋಬಿನ್ ತಾವ್ರೋ, ಪದ್ಮನಾಭ ಪಡೀಲು, ಪ್ರೇಮಲತಾ ಜಿ, ಕೆ.ಸಂತೋಷ್ ಕುಮಾರ್, ನವೀನ್ ಕುಮಾರ್ ಎಮ್, ಯಶೋಧ ಹರೀಶ್ ಪೂಜಾರಿ,ಇಂದಿರಾ ಪಿ, ರೋಹಿಣಿ ಕೇಶವ ಪೂಜಾರಿ,ಮಹಮ್ಮದ್ ರಿಯಾಝ್, ಪೂರ್ಣಿಮಾ ಕೋಡಿಯಡ್ಕ, ಶರೀಫ್ ಪಿ ಬಲ್ನಾಡು, ಬಶೀರ್ ಅಹಮ್ಮದ್, ರೋಶನ್ ರೈ ಬನ್ನೂರು ಮತ್ತು ನಗರಸಭೆ ಸಹಾಯಕ ಕಾರ್ಯಪಾಲಾಕ ಅಭಿಯಂತರ ಶಬರೀನಾಥ್, ಇಂಜಿನಿಯರ್ ಕೃಷ್ಣಮೂರ್ತಿ, ಇತರ ಅಽಕಾರಿಗಳು ಉಪಸ್ಥಿತರಿದ್ದರು.
ವರ್ಷ ಕಳೆದರೂ ದುರಸ್ತಿಯಾಗದ ಆಸನ
ನಗರಸಭೆ ಸಭಾಂಗಣದ ಒಳಗೆ ಪತ್ರಕರ್ತರು ಕುಳಿತುಕೊಳ್ಳುವಲ್ಲಿ ಕಿತ್ತು ಹೋಗಿರುವ ಆಸನವೊಂದು ಕಳೆದ ಹಲವು ವರ್ಷಗಳಿಂದ ಇದ್ದು ಅದಕ್ಕೆ ಇನ್ನೂ ದುರಸ್ತಿ ಭಾಗ್ಯ ಬಂದಿಲ್ಲ.ಪತ್ರಕರ್ತರು ಹಲವು ಸಭೆ ಕಾರ್ಯಕ್ರಮ ವರದಿಗೆ ಹೋದಾಗ ಸರ್ಕಸ್ ಮಾದರಿಯಲ್ಲಿ ಅದರಲ್ಲಿ ಕೂತು ವರದಿ ಮಾಡುವ ಪ್ರಸಂಗ ಆಗುತ್ತಿದೆ.ಪತ್ರಕರ್ತರು ಕೂತುಕೊಳ್ಳುವಾಗ ಪದೇ ಪದೇ ಸೀಟ್ ಬಿದ್ದು ಹೋಗುತ್ತಿದ್ದು, ಅದನ್ನು ಎತ್ತಿ ಮತ್ತೆ ಸರಿ ಮಾಡಿ ಕೂತುಕೊಳ್ಳುವ ಅನಿವಾರ್ಯತೆ ಪತ್ರಕರ್ತರದಾಗಿತ್ತು.ಈ ವಿಚಾರ ನಗರಸಭೆಯಲ್ಲಿ ಗಮನದಲ್ಲಿದ್ದು ಇವತ್ತಲ್ಲ ನಾಳೆ ದುರಸ್ತಿ ಮಾಡಿಯಾರು ಎಂಬ ಭರವಸೆಯಿಂದ ಪತ್ರಕರ್ತರು ಇಷ್ಟರ ತನಕ ಸುಮ್ಮನಿದ್ದರು.ಆದರೆ ಇವತ್ತು ಹಿರಿಯ ಪತ್ರಕರ್ತರೊಬ್ಬರು ಕೂತು ಕೊಳ್ಳುವಾಗ ಮತ್ತೆ ಆಸನದ ಸೀಟ್ ಕೆಳಗೆ ಬಿದ್ದು ಹೋಗಿತ್ತು.ಸಭಾಂಗಣದೊಳಗಿನ ಸೀಟ್‌ಅನ್ನು ನಗರಸಭೆ ಇನ್ನಾದರೂ ಸರಿ ಮಾಡಲಿ ಎಂಬ ಆಗ್ರಹ ಪತ್ರಕರ್ತರದ್ದಾಗಿದೆ.

ನಗರಸಭೆ ಸದಸ್ಯರಿಗೆ ಅಧ್ಯಯನ ಪ್ರವಾಸ
ನಗರಸಭೆ ಸದಸ್ಯರಿಗೆ ಅಧ್ಯಯನ ಪ್ರವಾಸ ಕೈಗೊಳ್ಳಲು ಬಂದಿರುವ ಅನುದಾನವನ್ನು ಬಳಸಿಕೊಳ್ಳಬೇಕು.ಇಲ್ಲವಾದ್ರೆ ಅದು ಸಿಗುವುದಿಲ್ಲ.ವೇಸ್ಟ್ ಮ್ಯಾನೇಜ್‌ಮೆಂಟ್ ಟ್ರೀಟ್‌ಮೆಂಟ್ ಪ್ಲ್ಯಾನಿಂಗ್ ಸಹಿತ ಇತರ ಘಟಕಗಳ ಕುರಿತು ಅಧ್ಯಯನ ಮಾಡಲು ಉಡುಪಿ ಮತ್ತು ಗೋವಾಗೆ ಪ್ರವಾಸ ಕೈಗೊಳ್ಳಲಾಗುವುದು ಎಂದು ಪೌರಾಯುಕ್ತರು ಮಾಹಿತಿ ನೀಡಿದರು.ಸದಸ್ಯರು ಮೇ ೧೬, ೧೭, ೧೮ಕ್ಕೆ ಮೂರು ದಿನದ ಅಧ್ಯಯನ ಪ್ರವಾಸಕ್ಕೆ ದಿನ ನಿಗದಿ ಮಾಡಿದರು.