ಶ್ಲೋಕ ಪಠಣದಿಂದ ಮಕ್ಕಳಲ್ಲಿ ಏಕಾಗ್ರತೆ, ನೆನಪು, ಉಚ್ಚರಣಾ ಶಕ್ತಿ ವೃದ್ಧಿ: ರಾಜಶ್ರೀ ಎಸ್. ನಟ್ಟೋಜ
ಪುತ್ತೂರು: ಎಳವೆಯಲ್ಲಿ ಮಕ್ಕಳಿಗೆ ಮನೆಯಲ್ಲಿ ಸಂತೋಷದ ವಾತಾವರಣವನ್ನು ಕಲ್ಪಿಸಿಕೊಡಬೇಕು. ಸಣ್ಣ ವಯಸ್ಸು ಅವರಿಗೆ ಏನೂ ತಿಳಿಯುವುದಿಲ್ಲ ಎಂದು ನಿರ್ಲಕ್ಷಿಸದೇ, ಉತ್ತಮ ವಿಚಾರಗಳನ್ನು ಕಲಿಸಬೇಕು. ಸಣ್ಣ ವಯಸ್ಸಿನಲ್ಲಿ ಮಕ್ಕಳಿಗೆ ಹೇಳಿಕೊಟ್ಟದ್ದನ್ನೆಲ್ಲವನ್ನು ನೆನಪಿನಲ್ಲಿ ಇಟ್ಟುಕೊಳ್ಳುವ ಶಕ್ತಿ ಇರುತ್ತದೆ. ಹಾಗಾಗಿ ಮಕ್ಕಳಿಗೆ ಸಣ್ಣದರಿಂದಲೇ ಎಷ್ಟಾಗುವುದೋ ಅಷ್ಟು ಶ್ಲೋಕಗಳನ್ನು, ಧಾರ್ಮಿಕ ವಿಚಾರಗಳನ್ನು ಹೇಳಿಕೊಡಬೇಕು. ಇದರಿಂದ ಮಕ್ಕಳ ಏಕಾಗ್ರತೆ ನೆನಪಿನ ಶಕ್ತಿ, ಉಚ್ಚಾರಣೆ ಎಲ್ಲವೂ ವೃದ್ಧಿಸುತ್ತದೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹಾಗೂ ಕೋಶಾಧಿಕಾರಿ ರಾಜಶ್ರೀ ಎಸ್. ನಟ್ಟೋಜ ಹೇಳಿದರು.

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ ಸಂಸ್ಥೆಯಲ್ಲಿ ಮೂರು, ನಾಲ್ಕು ಹಾಗೂ ಐದು ವರ್ಷದ ಮಕ್ಕಳಿಗೆ ಆಯೋಜಿಸಿದ್ದ ’ಶ್ಲೋಕ ಭಾರತೀ’ ಎಂಬ ಶ್ಲೋಕ ಕಂಠಪಾಠ ಸ್ಪರ್ಧೆಯಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಹುಟ್ಟಿದ ದಿನದಿಂದ ಮನುಷ್ಯನ ಬೆಳವಣಿಗೆ ವಿವಿಧ ಹಂತಗಳನ್ನು ಒಳಗೊಂಡಿದೆ. ಈ ಸಂದರ್ಭದಲ್ಲಿ ಮನುಷ್ಯನ ದೇಹದ ಬಾಹ್ಯ ಹಾಗೂ ಆತರಿಕ ಬೆಳವಣಿಗೆಗೆಗಳು ನಡೆಯುತ್ತವೆ. ಮುಖ್ಯವಾಗಿ ಮಾನವ ದೇಹದ 5 ಕೋಶಗಳಾದ ಅನ್ನಮಯ, ಪ್ರಾಣಮಯ, ಮನೋಮಯ, ಆನಂದಮಯ ಕೋಶಗಳ ಬೆಳವಣಿಗೆ ನಡೆಯುತ್ತದೆ. ಒಂದರಿಂದ ಐದು ವರ್ಷದ ಒಳಗಿನ ಮಕ್ಕಳ ಪೋಷಣೆಯನ್ನು ಅತ್ಯಂತ ಜಾಗರೂಕತೆಯಿಂದ ಮಾಡಬೇಕು. ಅವರಿಗೆ ಸಾತ್ವಿಕವಾದ ಆಹಾರವನ್ನು ನೀಡಬೇಕು. ಅದರ ಜೊತೆ ಜೊತೆಗೆ ಒಳ್ಳೆಯ ಮೌಲ್ಯಗಳನ್ನು ಕಲಿಸುವುದು ಅಗತ್ಯ ಎಂದು ಕಿವಿ ಮಾತು ಹೇಳೀದರು.
ಮಕ್ಕಳನ್ನು ಮೊಬೈಲ್‌ನಂತಹಾ ಮಾಧ್ಯಮದಿಂದ ದೂರ ಇರಿಸಿ, ಸಹಜ ಪರಿಸರದಲ್ಲಿ ಅವರ ದೈಹಿಕ ಬೆಳವಣಿಗೆಗೆ ಪೂರಕವಾದ ಆಟಗಳಿಗೆ ಮಕ್ಕಳನ್ನು ತೊಡಗಿಸಿಕೊಳ್ಳುವಂತೆ ಮಾಡಬೇಕು. ಇದರಿಂದ ದೇಹದ ಆನಂದಮಯ ಕೋಶ ಚುರುಕುಗೊಳ್ಳುತ್ತದೆ. ಹೀಗೇ ಐದೂ ಕೋಶಗಳು ವಿವಿಧ ಅಂಶಗಳನ್ನು ಪರಿಪೂರ್ಣವಾಗಿ ಗಳಿಸಿದ ವ್ಯಕ್ತಿ ಸಮಾಜದಲ್ಲಿ ಉತ್ತಮ ವ್ಯಕ್ತಿತ್ವ, ಹುದ್ದೆ, ಹಾಗೂ ನಾಗರಿಕನಾಗಿ ಬೆಳವಣಿಗೆ ಹೊಂದಲು ಸಹಕಾರಿಯಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ, ಇಂದಿನ ಪೀಳಿಗೆಗೆ ಧಾರ್ಮಿಕ ಶಿಕ್ಷಣ ಅತ್ಯಂತ ಅವಶ್ಯಕ. ಹಿಂದೂ ಸನಾತನ ಸಂಸ್ಕೃತಿಯನ್ನು ಮಕ್ಕಳಲ್ಲಿ ಬೆಳೆಸುವುದು ಪೋಷಕರ ಕರ್ತವ್ಯ. ತಂದೆ, ತಾಯಿಯ ನಡೆ, ನುಡಿಯನ್ನು ಅನುಸರಿಸಿ ಮಗು ವಿಚಾರಗಳನ್ನು ಕಲಿಯುತ್ತದೆ ಹಾಗಾಗಿ ಪೋಷಕರಲ್ಲಿ ಸಂಸ್ಕೃತಿಯ ಅರಿವು ಇರಬೇಕು. ಶಿಕ್ಷಣ ಸಂಸ್ಥೆಗಳಲ್ಲೂ ಧಾರ್ಮಿಕ ಶಿಕ್ಷಣವನ್ನು ನೀಡುವುದು ಅತ್ಯಂತ ಮುಖ್ಯ. ಮಗುವಿಗೆ ಸಂಸ್ಕಾರದ ಅರಿವು ಮನೆಯಲ್ಲಿಯೇ ಮೂಡಿದಾಗ ಹೆಚ್ಚು ಪರಿಣಾಮಕಾರಿಯಾಗುತ್ತದೆ. ಅದೇ ಸಂಸ್ಕಾರ ಬೆಳೆದ ಬಳಿಕವೂ ಅವರ ಬಳಿ ಇರುತ್ತದೆ ಎಂದರು. ಶ್ಲೋಕ ಭಾರತಿ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಪುಟಾಣಿಗಳಿಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು.
ಶ್ಲೋಕ ಭಾರತಿ ಬಿರುದು:
ಶ್ಲೋಕ ಕಂಠಪಾಠ ಸ್ಪರ್ಧೆಯಲ್ಲಿ ಮೂರು, ನಾಲ್ಕು ಹಾಗೂ ಐದು ವರ್ಷದ ಮಕ್ಕಳಿಗೆ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಸಿದ್ದಿ ವಿಜೇತರಾದವರಿಗೆ ಪ್ರಶಸ್ತಿ ಫಲಕ ಹಾಗೂ ಪ್ರಥಮ ಸ್ಥಾನ ವಿಜೇತರಿಗೆ 5 ಸಾವಿರ ರೂ., ದ್ವಿತೀಯ ಸ್ಥಾನ ವಿಜೇತರಿಗೆ 3 ಸಾವಿರ ರೂ., ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ 1 ಸಾವಿರ ರೂ. ವಿತರಿಸಲಾಯಿತು. ಅಂಬಿಕಾ ಸಮೂಹ ಸಂಸ್ಥೆಗಳು 25 ವರ್ಷ ಪೂರ್ಣಗೊಳಿಸಿ ರಜತ ಮಹೋತ್ಸವ ಆಚರಿಸುತ್ತಿರುವ ಹಿನ್ನೆಲೆ ಶೃಂಗೇರಿಯ ಗುರುಗಳು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣಕ್ಕೆ ಆಗಮಿಸುವ ಸಂದರ್ಭದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ “ಶ್ಲೋಕ ಭಾರತಿ” ಬಿರುದು ನೀಡುವುದಾಗಿ ಸಂಸ್ಥೆ ಘೋಷಣೆ ಮಾಡಿದೆ.
ಮೂರು ವರ್ಗಗಳಲ್ಲಿ ಬಹುಮಾನ:
ವರ್ಗ ಒಂದರಲ್ಲಿ ರವಿರಾಜ್ ಬರ್ಲಾಯ ಹಾಗೂ ಪಲ್ಲವಿ ದಂಪತಿಯ ಪುತ್ರ ಶಿವ್ ಸ್ವರೂಪ್ ಬರ್ಲಾಯ ಪ್ರಥಮ ಸ್ಥಾನವನ್ನು, ಶರತ್ ಕೆ. ಎಸ್. ಹಾಗೂ ಆಶಾ ದೇವಿ ಟಿ. ದಂಪತಿಯ ಪುತ್ರಿ ಶರಧಿ ಎಸ್. ಇವರು ದ್ವಿತೀಯ ಸ್ಥಾನ, ಉದಯ್ ಕುಮಾರ್ ಎಮ್. ಹಾಗೂ ರಂಜಿನಿ ಕೆ. ಬಿ. ದಂಪತಿ ಪುತ್ರ ಇಶಾನ್ ರೈ. ಎಂ. ತೃತೀಯ ಸ್ಥಾನ ಪಡೆದರು.
ವರ್ಗ ಎರಡರಲ್ಲಿ ಸ್ವಸ್ತಿಕ್ ಎ.ಆರ್. ಹಾಗೂ ಉಮಾ ಸಿ.ಎಚ್. ದಂಪತಿಯ ಪುತ್ರಿ ತನ್ವಿ ಎಸ್. ಭಟ್ ಪ್ರಥಮ, ಮೋಹನ್ ಸಿ.ಬಿ. ಹಾಗೂ ಮಮತಾ ಎ. ದಂಪತಿಯ ಪುತ್ರಿ ನಿಹಾನ ಸಿ.ಎಮ್. ದ್ವಿತೀಯ, ಎ. ಪ್ರವೀಣ ನಾಯಕ್ ಹಾಗೂ ಅಕ್ಷತಾ ಬಿ. ದಂಪತಿಯ ಪುತ್ರ ಅಪ್ರಮೇಯ ಪಿ.ಎನ್. ತೃತೀಯ ಸ್ಥಾನ ಪಡೆದರು.
ವರ್ಗ ಮೂರರಲ್ಲಿ ಶಾಮ್ ಪ್ರಶಾಂತ ಕೆ. ಹಾಗೂ ಕೀರ್ತನಾ ಸಾವಿತ್ರಿ ಡಿ. ದಂಪತಿಗಳ ಪುತ್ರ ವಿಧಾತ ಖಂಡಿಗೆ ಪ್ರಥಮ, ನೇಮಿಚಂದ್ರ ಪಿ. ಹಾಗೂ ಶಿಲ್ಪಾ ದಂಪತಿಯ ಪುತ್ರಿ ನಿಶಿಕಾ ಎನ್. ದ್ವಿತೀಯ, ರಾಘವೇಂದ್ರ ಕೆ. ಎಸ್. ಹಾಗೂ ಉಮಾ ಸಿ. ದಂಪತಿಯ ಪುತ್ರ ಶ್ರೀ ಕೃಷ್ಣ ಬನ್ನಿಂನ್ತಯ ತೃತೀಯ ಸ್ಥಾನ ಪಡೆದರು.
ವೇದಿಕೆಯಲ್ಲಿ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇಯ ಪ್ರಚಾರ್ಯರಾದ ಮಾಲತಿ ಡಿ. ತೀರ್ಪುಗಾರರಾದ ವೇಣುಗೋಪಾಲ ಕೃಷ್ಣ ಭಟ್, ಟಿ. ಪ್ರೇಮಲತಾ ರಾವ್, ವತ್ಸಲಾ ರಜನಿ, ಕಶೆಕೋಡಿ ಸುಧಾ ಸೂರ್ಯನಾರಾಯಣ ಭಟ್ಟ್, ವೇದಮೂರ್ತಿ ಸುದರ್ಶನ ಭಟ್ಟ್, ನಾರಾಯಣ ವೈಲಾಯ ಉಪಸ್ಥಿತರಿದ್ದರು. ಅಂಬಿಕಾ ವಿದ್ಯಾಲಯದ ಶಿಕ್ಷಕಿ ಗೌರಿ ಹಾಗು ಅನುಪಮಾ ಪ್ರಶಸ್ತಿ ಪತ್ರವನ್ನು ವಾಚಿಸಿದರು. ಶಿಕ್ಷಕಿ ಪ್ರಿಯಾಶ್ರೀ ಕೆ.ಎಸ್. ಸ್ವಾಗತಿಸಿ, ವಂದಿಸಿ, ನಿರ್ವಹಿಸಿದರು.