ಪುತ್ತೂರು: ಗಿಡ ಬೆಳೆಸಿ-ಹುಟ್ಟುಹಬ್ಬ ಹೊಸ ಪೀಳಿಗೆಯ ಉಸಿರಾಗಲಿ ಎಂಬ ಧ್ಯೇಯ ವಾಕ್ಯ ಹೊಂದಿರುವ ಕೇಶವ ರಾಮಕುಂಜ ಅವರ ನೇತೃತ್ವದ ಕಸ್ವಿ ಹಸಿರು ದಿಬ್ಬಣ ತಂಡದ ವತಿಯಿಂದ ಮೇ.1ರಂದು ಮಂಗಳೂರು ಬೆಂಗೆರೆ ತಣ್ಣೀರುಬಾವಿಯಲ್ಲಿ ಕಾರ್ಮಿಕ ದಿನಾಚರಣೆ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪರಿಸರ ಪ್ರೇಮಿ ಜೀತ್ ಮಿಲನ್ ರೊಚೆ ಅವರು ಗಿಡ ನೆಡುವವರ ಬಗ್ಗೆ ತಾತ್ಸಾರ ಬೇಡ ಯಾರಾದರೂ ಸಾರ್ವಜನಿಕ ಸ್ಥಳದಲ್ಲಿ ನಿಸ್ವಾರ್ಥ ಸೇವೆಯ ದೃಷ್ಟಿಯಿಂದ ಗಿಡ ನೆಡುತ್ತಿರುವವರು ಕಂಡಲ್ಲಿ ಅವರ ಕಾರ್ಯಕ್ಕೆ ಗೌರವ ಕೊಡಿ ಹಾಗೂ ಯುವ ಜನತೆ ಗಿಡ ನೆಡುವಲ್ಲಿ ಯೋಚಿಸಬೇಕಿದೆ ಎಂದರು.
ಇನ್ನೋರ್ವ ಅತಿಥಿ ಗ್ರೀನ್ ವಾರಿಯರ್ ಹನಿ ಮಾತನಾಡಿ, ನೆಟ್ಟ ಗಿಡ ಮಗು ಇದ್ದಂತೆ. ಗಿಡ ನೆಡೋದು ಮಾತ್ರವಲ್ಲ ಪೋಷಿಸುವುದು ಅತ್ಯಂತ ಮುಖ್ಯ ಇದರ ಬಗ್ಗೆ ಯುವ ಪೀಳಿಗೆ ಜಾಗೃತಿ ಆಗಬೇಕಿದೆ ಎಂದರು.
ಇನ್ನೋರ್ವ ಅತಿಥಿ ಪ್ರಖರ ನ್ಯೂಸ್ ಇದರ ಪ್ರಧಾನ ಸಂಪಾದಕರಾದ ಪ್ರಜ್ವಲ್ ಅತ್ತಾವರ ಮಾತನಾಡಿ, ಈಗಾಗಲೇ ನಮ್ಮೊಂದಿಗೆ ಇರುವ ಪರಿಸರ ಪ್ರೇಮಿಗಳು ಅದೆಷ್ಟೋ ಲಕ್ಷ ಮರಗಳನ್ನು ನೆಟ್ಟು ಪೋಷಿಸುತ್ತಿದ್ದು ಮುಂದಿನ ಪೀಳಿಗೆಗೆ ಒಂದು ದೊಡ್ಡ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ. ನಾವು ಕೂಡ ಇವರೊಂದಿಗೆ ಸೇರಿ ಒಂದು ಸಣ್ಣ ಅಳಿಲು ಸೇವೆಯಂತೆ ನಮ್ಮಿಂದ ಆದಷ್ಟು ಗಿಡಗಳನ್ನು ನೆಟ್ಟು ಹಾಗೂ ಇತರರನ್ನು ಪ್ರೇರೇಪಿಸಿ ಪರಿಸರ ಪ್ರೇಮಿಗಳೊಂದಿಗೆ ಕೈಜೋಡಿಸಬೇಕು ಎಂದು ನುಡಿದರು.
ಸನ್ಮಾನ:
ಅರಣ್ಯ ಇಲಾಖೆ ಸಿಬ್ಬಂದಿ ಪಿ.ಪ್ರಿನ್ಸ್ ಅವರು 31 ವರುಷ ಸುದೀರ್ಘ ಸೇವೆ ಸಲ್ಲಿಸಿದ್ದು ಈ ಅವಧಿಯಲ್ಲಿ 5 ಲಕ್ಷಕ್ಕಿಂತಲೂ ಹೆಚ್ಚು ಗಿಡವನ್ನು ನೆಟ್ಟು ಪೋಷಿಸಿದ ಅವರ ಪ್ರಕೃತಿ ಪ್ರೇಮಕ್ಕೆ ಸನ್ಮಾನಿಸಲಾಯಿತು.
ಕೇಶವ ರಾಮಕುಂಜ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕಸ್ವಿ ಹಸಿರು ದಿಬ್ಬಣ – ಹುಟ್ಟು ಹಬ್ಬ ಹೊಸ ಪೀಳಿಗೆಯ ಉಸಿರಾಗಲಿ ಎಂಬ ಧ್ಯೇಯವಾಖ್ಯದೊಂದಿಗೆ ಹುಟ್ಟುಹಬ್ಬಕ್ಕೆ ಗಿಡ ನೆಡುವ ಸಹೃದಯರಿಗೆ ಉಚಿತ ಪ್ರಮಾಣ ಪತ್ರ ನೀಡುತ್ತಾ ಬರುತ್ತಿದ್ದು, ಕಳೆದ ವರುಷ ಕಾರ್ಮಿಕರ ದಿನಾಚರಣೆಯ ಪ್ರಯುಕ್ತ ಪೌರ ಕಾರ್ಮಿಕ ಹಾಗೂ ಮನೆ ಮನೆಗೆ ಪೇಪರ್ ಹಾಕುವ ಹಿರಿಯರನ್ನು ಗುರುತಿಸಿದರೆ ಈ ವರುಷ ಕಸ್ವಿ ಹಸಿರು ದಿಬ್ಬಣ ನಿರ್ಮಾಣದ ಪ್ರಕೃತಿ ಕಾಳಜಿಯ ಕಥಾ ಹಂದರವನ್ನು ಹೊತ್ತ ವಿಭಿನ್ನ ರೀತಿಯ ನ್ಯಾಷನಲ್ ಅವಾರ್ಡ್ ವಿಜೇತ ಕನ್ನಡ ಕಿರುಚಿತ್ರ “ಹರಿದ್ವರ್ಣ” ಬಿಡುಗಡೆಗೆ ಸಿದ್ಧವಾಗಿರುವ ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯಲ್ಲಿ ಪ್ರಕೃತಿಗೆ ನಿಸ್ವಾರ್ಥ ಸೇವೆ ಸಲ್ಲಿಸಿದ ಪಿ ಪ್ರಿನ್ಸ್ ಅವರನ್ನು ಆಯ್ಕೆ ಮಾಡಲಾಯಿತು ಎಂದರು.
ಕಾರ್ಯಕ್ರಮದಲ್ಲಿ ಕಾಪಿಗುಡ್ಡ ನ್ಯೂ ಫ್ರೆಂಡ್ಸ್‌ನ ರಾಜೇಶ್ ದೇವಾಡಿಗ, ಗಸ್ತು ಅರಣ್ಯ ಪಾಲಕ ಗಂಗಾಧರ್ ಕೆ ಎನ್, ಪರಿಸರ ಪ್ರೇಮಿ ದಿನೇಶ್ ಕೊಡಿಯಾಲ್ ಬೈಲ್ ಇನ್ನಿತರ ಗಣ್ಯರು ಉಪಸ್ಥಿರಿದ್ದರು. ಕಸ್ವಿ ಹಸಿರು ದಿಬ್ಬಣದ ಅಧ್ಯಕ್ಷರಾದ ಶ್ರದ್ಧಾ ಕೇಶವ ರಾಮಕುಂಜ ವಂದಿಸಿದರು.