ಕೆಂಪು ಕಲ್ಲು ತೆಗೆಯುವ ಸಂಘದವರ ಮೂರೂ ಬೇಡಿಕೆಗಳ ಈಡೇರಿಕೆ

0

ಯಾರೂ ಲೈಸೆನ್ಸ್ ಪಡೆದು ಕೆಂಪು ಕಲ್ಲಿನ ವ್ಯವಹಾರ ನಡೆಸಬಹುದು-ಶಾಸಕ ಅಶೋಕ್ ಕುಮಾರ್ ರೈ

ರಾಯಲ್ಟಿ 245 ರೂ.ನಿಂದ 100 ರೂ.ಗೆ ಇಳಿಕೆ
ಲೈಸೆನ್ಸ್ ಅವಧಿ 6 ತಿಂಗಳಿನಿಂದ 1 ವರ್ಷಕ್ಕೆ ಏರಿಕೆ
ಕೃಷಿ ಇಲಾಖೆಯಿಂದ ಎನ್‌ಒಸಿ ರಹಿತವಾಗಿ ಕೊರೆಯಲು ಅನುಮತಿ

ಪುತ್ತೂರು:ಕೆಂಪು ಕಲ್ಲಿನ ವಿಚಾರದಲ್ಲಿ ಜನರಿಗೆ ಗೊಂದಲಗಳಿತ್ತು.ಸರಕಾರದ ಮಟ್ಟದಲ್ಲಿ ಚರ್ಚೆ ಮಾಡಿ, ಕೆಂಪು ಕಲ್ಲು ತೆಗೆಯುವ ಎಲ್ಲಾ ಸಂಘದ ಪ್ರಮುಖ ಮೂರು ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಡೇರಿಸಿದೆ.ಹೊಸ ಲೈಸನ್ಸ್ ಹಾಗೂ ಲೈಸನ್ಸ್‌ಗಳ ನವೀಕರಣವೂ ಮಾಡಲಾಗುತ್ತಿದೆ.ಇನ್ನು ಮುಂದೆ ಯಾರು ಕೂಡ ಲೈಸನ್ಸ್ ಪಡೆದು ಕೆಂಪು ಕಲ್ಲಿನ ವ್ಯವಹಾರ ನಡೆಸಬಹುದು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.


ಕೆಂಪು ಕಲ್ಲಿನ ಸಮಸ್ಯೆ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿದ ನಂತರ ಕೆಂಪು ಕಲ್ಲು ತೆಗೆಯುವವರ ಸಂಘಗಳ ಸದಸ್ಯರ ಸಭೆಯನ್ನು ಕರೆದಾಗ ಅವರು ಮೂರು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದರು.ರಾಯಲ್ಟಿ ಕಡಿಮೆ ಮಾಡುವುದು ಅವರ ಮುಖ್ಯ ಬೇಡಿಕೆಯಾಗಿತ್ತು.ಪ್ರತಿ ಟನ್‌ಗೆ 245 ರೂ. ಇರುವ ರಾಯಲ್ಟಿಯನ್ನು 100 ರೂಪಾಯಿಗೆ ಇಳಿಸಬೇಕು ಎಂದು ಮನವಿ ಮಾಡಿದ್ದರು.ಇದನ್ನು ಸರ್ಕಾರ ಮಾಡಿದೆ ಎಂದರು.


6 ತಿಂಗಳ ಲೈಸನ್ಸ್ ಅವಧಿಯನ್ನು 2 ವರ್ಷಗಳಿಗೆ ಏರಿಸಬೇಕು ಎಂಬುದು ಅವರ ಎರಡನೇ ಬೇಡಿಕೆಯಾಗಿತ್ತು.ಎರಡು ವರ್ಷ ಭೂಮಿ ಅಗೆಯುತ್ತಾ ಹೋದಂತೆ ಬೃಹತ್ ಹೊಂಡವಾಗಿ ಸಾವು ನೋವುಗಳು ಸಂಭವಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸರ್ಕಾರ ಲೈಸನ್ಸ್ ಅವಧಿಯನ್ನು ಆರು ತಿಂಗಳಿಗೆ ಸೀಮಿತಗೊಳಿಸಿತ್ತು.ಇದೀಗ ಕಲ್ಲು ತೆಗೆಯುವವರ ಸಂಘದವರ ಬೇಡಿಕೆಯಂತೆ ಲೈಸೆನ್ಸ್ ಅವಽಯನ್ನು ಆರು ತಿಂಗಳಿನಿಂದ ಒಂದು ವರ್ಷಕ್ಕೆ ಏರಿಸಿದೆ ಎಂದರು.


ಕಲ್ಲು ಕೊರೆತಕ್ಕೆ ಕೃಷಿ ಇಲಾಖೆಯಿಂದ ಅನುಮತಿ ಪಡೆದುಕೊಳ್ಳಬೇಕು.ಮೂರು ಮೀಟರ್ ಅಗೆಯಲು ಮಾತ್ರ ಅನುಮತಿ ಇದೆ.ಕೃಷಿ ಇಲಾಖೆಯಿಂದ ಎನ್‌ಒಸಿ ಪಡೆಯುವ ವೇಳೆ ವಿಳಂಬವಾಗಿ ತೊಂದರೆಯಾಗುವುದರಿಂದ ಎನ್‌ಒಸಿ ಪಡೆಯುವುದನ್ನು ಕೈಬಿಡಬೇಕು ಎಂಬುದು ಅವರ ಇನ್ನೊಂದು ಬೇಡಿಕೆಯಾಗಿತ್ತು.ಇದಕ್ಕೂ ಒಪ್ಪಿದ ಸರ್ಕಾರ ಒಪ್ಪಿದ್ದು,ಷರತ್ತಿನಲ್ಲಿ ಅದನ್ನು ಸೇರಿಸಲಾಗಿಲ್ಲ.ಒಟ್ಟಾರೆಯಾಗಿ ಕಲ್ಲು ತೆಗೆಯುವರ ಸಂಘಗಳ ಒಕ್ಕೂಟದ ಮೂರೂ ಬೇಡಿಕೆಗಳನ್ನು ಸರಕಾರ ಈಡೇರಿಸಿದೆ.ಮುಂದೆ ಯಾರು ಕೂಡ ಲೈಸೆನ್ಸ್ ಪಡೆದುಕೊಂಡು ಕೆಂಪು ಕಲ್ಲಿನ ವ್ಯವಹಾರ ಮಾಡಬಹುದಾಗಿದೆ ಎಂದು ಶಾಸಕರು ಹೇಳಿದ್ದಾರೆ.


ಮರಳು ಲೈಸೆನ್ಸ್ ನವೀಕರಣ: ಮರಳು ಲೈಸನ್ಸನ್ನು ಈ ಹಿಂದೆ ಯಾವ ರೀತಿ ಪಿಡಬ್ಲ್ಯುಡಿಯಲ್ಲಿ ಕೊಡುತ್ತಿದ್ದರೋ ಅದೇ ರೀತಿಯಲ್ಲಿ ಪಡೆಯಬಹುದಾಗಿದೆ.ಈಗಾಗಲೇ ನೀಡಿರುವ ಎಲ್ಲ ಲೈಸೆನ್ಸ್‌ಗಳನ್ನು ನವೀಕರಣ ಮಾಡಿಕೊಳ್ಳಬಹುದಾಗಿದೆ.ಆಪ್‌ನಲ್ಲಿ ಮರಳು ತೋರಿಸುತ್ತಿತ್ತು.ಆದರೆ ವಾಸ್ತವದಲ್ಲಿ ಮರಳು ಖಾಲಿಯಾಗಿತ್ತು.ಇದಕ್ಕೆ ಬೇರೆ ಬೇರೆ ಕಾರಣಗಳಿದ್ದವು ಎಂದರು.

ಕಲ್ಲಿನ ದರ ಏರಿಸಿದ್ದು ಟ್ರೇಡರ್‌ಗಳು
ಕೆಂಪು ಕಲ್ಲಿನ ದರದಲ್ಲಿ ಏರಿಕೆಯಾಗಿದೆ.ಇದರ ಹಿಂದೆ ಸರ್ಕಾರದ ಪಾತ್ರ ಇಲ್ಲ.ಕೆಂಪು ಕಲ್ಲಿನ ದರ ಏರಿಕೆ ಮಾಡಿದ್ದು ನಮ್ಮ ಟ್ರೇಡರ್‌ಗಳು,ಕಲ್ಲು ಸಪ್ಲೈ ಮಾಡುವವರೇ ಹೊರತು ಸರಕಾರವಲ್ಲ.ಈಗಲೂ ಕಲ್ಲು ತೆಗೆಯಲಾಗುತ್ತಿದೆ.ಬೇರೆ ಕಡೆಗಳಿಂದಲೂ ತಂದು ಹೆಚ್ಚಿನ ಬೆಲೆಗೆ ಪೂರೈಕೆ ಮಾಡುತ್ತಿದ್ದಾರೆ.ನಾನು ಒಬ್ಬ ಬಿಲ್ಡರ್.ನಾನೇ ೬೦ ರೂ. ನೀಡಿ ಖರೀದಿಸಿದ್ದೇನೆ.ಪೂರೈಕೆ ಮಾಡುವವರೇ ಈ ರೀತಿ ದರ ಏರಿಸಿದ್ದಾರೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

LEAVE A REPLY

Please enter your comment!
Please enter your name here