ಪುತ್ತೂರು: ಸಂತ ಫಿಲೋಮಿನಾ ಕಾಲೇಜು(ಸ್ವಾಯತ್ತ) ಇದರ ದೈಹಿಕ ಶಿಕ್ಷಣ ವಿಭಾಗದಡಿಯಲ್ಲಿ ಸಂತ ಫಿಲೋಮಿನಾ ಕಾಲೇಜು ಪ್ರೀಮಿಯರ್ ಲೀಗ್(ಎಸ್.ಪಿ.ಎಲ್) 2025- ಸೀಸನ್ 5 ಕ್ರಿಕೆಟ್ ಪಂದ್ಯಾಟದ ಉದ್ಘಾಟನೆಯು ಮೇ 5 ರಂದು ಸಂತ ಫಿಲೋಮಿನಾ ಕ್ರೀಡಾಂಗಣದಲ್ಲಿ ಜರಗಿತು.
ಕ್ರೀಡೆಗೆ ಒತ್ತು ಕೊಟ್ಟಾಗ ಶೈಕ್ಷಣಿಕ ಕ್ಷೇತ್ರವೂ ಬೆಳೆಯಬಲ್ಲುದು-ಮಾಮಚ್ಚನ್ ಎಂ:
ಪಂದ್ಯಾಟದ ಉದ್ಘಾಟನೆಯನ್ನು ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಅಸೋಸಿಯೇಷನ್ ಇದರ ಕಾರ್ಯಾಧ್ಯಕ್ಷರಾದ ಮಾಮಚ್ಚನ್ ಎಂ.ರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ರಾಜ್ಯ, ರಾಷ್ಟ್ರ ಮತ್ತು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾಪಟುಗಳನ್ನು ಪರಿಚಯಿಸಿದ ಕ್ರೀಡಾಂಗಣ ಫಿಲೋಮಿನಾ ಕ್ರೀಡಾಂಗಣವಾಗಿದ್ದು ನಾಳೆಯ ದಿನ ಪ್ರಸಕ್ತ ಕ್ರೀಡಾಪಟುಗಳ ಕನಸು ಕೂಡ ಈಡೇರಲಿ. ಕ್ರೀಡೆಗೆ ಯಾರು ಹೆಚ್ಚಿನ ಒತ್ತು ಕೊಡುತ್ತಾರೋ ಆಗ ಶೈಕ್ಷಣಿಕ ಕ್ಷೇತ್ರವೂ ಬೆಳೆಯಬಲ್ಲುದು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರ ಪುತ್ರ ಕ್ರಿಸ್ ಏಂಜೆಲೊರವರು ಇತ್ತೀಚೆಗೆ ಮಂಗಳೂರು ವಲಯ ಮಟ್ಟದ ಅಂಡರ್ 16 ರ ವಯೋಮಿತಿಯ ಕ್ರಿಕೆಟ್ ನಲ್ಲಿ ಶತಕ ಬಾರಿಸಿರುವುದು ನಮಗೆಲ್ಕಾ ಸ್ಫೂರ್ತಿದಾಯಕವಾಗಿದೆ. ಕ್ರೀಡಾಪಟುಗಳು ಕ್ರೀಡಾಸ್ಫೂರ್ತಿಯಿಂದ ಆಡಿ ಸಂಸ್ಥೆಯನ್ನು ಬೆಳಗಿಸಿ ಎಂದರು.
ಕ್ರೀಡಾಪಟುಗಳು ಮೆಟ್ಟಿರುವ ಈ ಭೂಮಿ ಅದು ಪುಣ್ಯಭೂಮಿ-ಡಾ|ನೋರ್ಬರ್ಟ್ ಮಸ್ಕರೇನ್ಹಸ್:
ಸಂತ ಫಿಲೋಮಿನಾ ಕಾಲೇಜು(ಸ್ವಾಯತ್ತ) ಇದರ ಅಕಾಡೆಮಿಕ್ ರಿಜಿಸ್ಟ್ರಾರ್ ಡಾ|ನೋರ್ಬರ್ಟ್ ಮಸ್ಕರೇನ್ಹಸ್ ಮಾತನಾಡಿ, ಕ್ರೀಡಾಪಟುಗಳು ಮೆಟ್ಟಿರುವ ಈ ಭೂಮಿ ಅದು ಪುಣ್ಯಭೂಮಿಯಾಗಿದೆ. ಈ ಪುಣ್ಯ ಭೂಮಿಯಲ್ಲಿ ಅದೆಷ್ಟೋ ಕ್ರೀಡಾಪಟುಗಳು ಬಿದ್ದು, ಎದ್ದು, ಮಣ್ಣು ಮಾಡಿಕೊಂಡು ಜೀವನದಲ್ಲಿ ಉತ್ತುಂಗದಲ್ಲಿರುವ ಉದಾಹರಣೆಗಳು ಇವೆ. ಈ ಕ್ರೀಡಾಂಗಣದ ಹಿನ್ನಲೆ ನೋಡಿದಾಗ ಇಲ್ಲಿ ಹಲವಾರು ವ್ಯಕ್ತಿಗಳ ತ್ಯಾಗ, ಬಲಿದಾನವಿದೆ. ಮೇಜರ್ ವೆಂಕಟ್ರಾಮಯ್ಯ, ದೈಹಿಕ ಶಿಕ್ಣಣ ನಿರ್ದೇಶಕರು, ದಾನಿಗಳು ಇದರ ಹಿಂದೆ ಪರೋಕ್ಷವಾಗಿ ದುಡಿದಿದ್ದಾರೆ.ಸೋಲಿಗೆ ದುಃಖಿಸದೆ, ಗೆಲುವಿಗೆ ಉಬ್ಬದೆ ಎಲ್ಲವನ್ನು ಸಮಾನವಾಗಿ ಸ್ವೀಕರಿಸಿ ಎಂದರು.
ಕ್ರೀಡಾಪಟುಗಳು ಕ್ರೀಡಾಸ್ಫೂರ್ತಿಯಿಂದ ಆಡಿ, ವೈಮನಸ್ಸು ಬೇಡ-ಡಾ|ವಿಜಯಕುಮಾರ್ ಮೊಳೆಯಾರ್:
ಅಧ್ಯಕ್ಷತೆ ವಹಿಸಿದ ಕಾಲೇಜಿನ ಉಪ ಪ್ರಾಂಶುಪಾಲ ಡಾ|ವಿಜಯಕುಮಾರ್ ಮೊಳೆಯಾರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕ್ರೀಡಾಸ್ಫೂರ್ತಿ ತುಂಬಿಸಲು ಕಾಲೇಜು ಕಳೆದ ನಾಲ್ಕು ವರ್ಷಗಳಿಂದ ಎಸ್.ಪಿ.ಎಲ್ ಹೆಸರಿನಲ್ಲಿ ಕ್ರೀಡೆಯನ್ನು ಆಯೋಜಿಸುತ್ತಿದೆ. ಈ ಕ್ರೀಡಾಂಗಣದಲ್ಲಿ ಸಹಸ್ರಾರು ಕ್ರಿಕೆಟಿಗರು ಬೆಳಗಿದ್ದಾರೆ ಆದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳಗುವ ಭಾಗ್ಯ ಸಿಕ್ಕಿಲ್ಲ. ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ರವರು ಯಾವ ರೀತಿ ಬೆಳೆದಿದ್ದಾರೆ ಎನ್ನುವುದನ್ನು ನಾವು ನೋಡಿ ಕಲಿಯಬೇಕು. ಕ್ರೀಡಾಪಟುಗಳು ಕ್ರೀಡಾಸ್ಫೂರ್ತಿಯಿಂದ ಆಡಿ, ವೈಮನಸ್ಸು ಕಟ್ಟಿಕೊಳ್ಳಬೇಡಿ. ಕ್ರಿಕೆಟ್ ಬಳಿಕ ಪರಸ್ಪರ ಹಸ್ತಲಾಘವ ಮಾಡುವುದು ನಮ್ಮಲ್ಲಿ ವೈಮನಸ್ಯ ಮೂಡದಿರಲಿ ಎಂಬುದಾಗಿದೆ ಎಂದರು.
ಕಬಡ್ಡಿ ತರಬೇತುದಾರ ಹಬೀಬ್ ಮಾಣಿ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಹೆಕ್ಸನ್ ಫೆರ್ನಾಂಡೀಸ್, ಕ್ರೀಡಾ ಕಾರ್ಯದರ್ಶಿ ಅನ್ವೇಶ್ ರೈರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಡಾ|ಎಲ್ಯಾಸ್ ಪಿಂಟೊರವರು ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.
10 ತಂಡಗಳು..
*ಟೀಮ್ ಹೀಟ್ ವೇವ್ಸ್
*ದಿ ಗೋಟ್ಸ್
*ಟೀಮ್ ಅಗಸ್ತ್ಯ
*ಅಗ್ನಿ ಬ್ರದರ್ಸ್
*ಸ್ಕ್ವಾಡ್ರನ್ ಎಕ್ಸ್ ಡಿಕ್ರೋಜ್
*ಫಿಲೋ ಹಾಕ್ಸ್
*ಆಸ್ಟ್ರೋ ಮೋಂಕ್ಸ್
*ಕಾಲ್ ಡ್ರಾಕ್ಸ್
*ಟಿಎಂ ಟಿಎಕ್ಸ್ಎಂ
*ಕಾಲೇಜು ಉಪನ್ಯಾಸಕರ ಬಳಗ
ಐಪಿಎಲ್ ಮಾದರಿ..
ಕಾಲೇಜು ಕಳೆದ ನಾಲ್ಕು ವರ್ಷಗಳಿಂದ ಕ್ರೀಡಾಪಟುಗಳ ಉತ್ಸುಕತೆಗೆ ಬೆಂಬಲವಾಗಿ ಕಾಲೇಜು ದೈಹಿಕ ಶಿಕ್ಷಣ ವಿಭಾಗಡಿಯಲ್ಲಿ ಐಪಿಎಲ್ ಮಾದರಿ ಕ್ರಿಕೆಟ್ ಅನ್ನು ಸಂಘಟಿಸುತ್ತಾ ಬಂದಿದೆ. ಒಟ್ಟು ಹತ್ತು ತಂಡಗಳು, ಹತ್ತು ತಂಡಗಳಿಗೆ ಮಾಲಕರು ಜೊತೆಗೆ ಐಕಾನ್ ಆಟಗಾರರನ್ನು ಕ್ರೀಡಾಕೂಡವು ಹೊಂದಿದೆ. ಈ ಹತ್ತು ತಂಡಗಳಿಗೆ ಬೇಕಾದ ಆಟಗಾರರನ್ನು ಬಿಡ್ಡಿಂಗ್ ಮೂಲಕ ಆಯ್ಕೆ ಮಾಡಲಾಗಿತ್ತು. ಕಾಲೇಜಿನ ವಿದ್ಯಾರ್ಥಿಗಳೇ ತಂಡಗಳ ಮಾಲಕರು, ಐಕಾನ್ ಆಟಗಾರರು, ಆಟಗಾರರು ಆಗಿದ್ದು ಕಾಲೇಜು ಪ್ರಾಂಶುಪಾಲ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೊರವರ ಮಾರ್ಗದರ್ಶನದಲ್ಲಿ ದೈಹಿಕ ಶಿಕ್ಷಣ ನಿರ್ದೇಶಕ ಡಾ|ಎಲ್ಯಾಸ್ ಪಿಂಟೊರವರು ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಡಿದ್ದರು.