ನೆಲ್ಯಾಡಿ: ತೋಟದೊಳಗೆ ಇಟ್ಟಿದ್ದ ಡೆಕ್ಕನ್ ಕಂಪನಿಯ ಮೂರು ಸಬ್ಮರ್ಸಿಬಲ್ ಪಂಪ್ಸೆಟ್ ಕಳವುಗೊಂಡಿರುವ ಘಟನೆ ಕಡಬ ತಾಲೂಕಿನ ಶಿರಾಡಿ ಗ್ರಾಮದಲ್ಲಿ ನಡೆದಿದೆ.
ಶಿರಾಡಿ ’ಶ್ರೀ ಲಕ್ಷ್ಮೀ ಗಣೇಶ’ ಮನೆಯ ದಿವಾಕರ ಎಸ್.ಎ.ಎಂಬವರಿಗೆ ಸೇರಿದ ಮೂರು ಸಬ್ಮರ್ಸಿಬಲ್ ಪಂಪುಸೆಟ್ ಕಳ್ಳತನಗೊಂಡಿದ್ದು ಈ ಬಗ್ಗೆ ಅವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಇವರು ಅಡಿಕೆ, ತೆಂಗು, ರಬ್ಬರ್ ಕೃಷಿಕರಾಗಿದ್ದು, ಗುಂಡ್ಯ ಹೊಳಗೆ ಪಂಪುಸೆಟ್ ಅಳವಡಿಸಿ ಅದರಿಂದ ಕೃಷಿಗೆ ನೀರು ಉಪಯೋಗಿಸುತ್ತಿದ್ದರು. ಮಳೆಗಾಲದಲ್ಲಿ ನದಿ ತುಂಬಿ ಹರಿಯುವ ಕಾರಣ ಪ್ರತಿ ವರ್ಷ ಪಂಪುಸೆಟ್ ಅನ್ನು ನದಿಯಿಂದ ಮೇಲಕ್ಕೆತ್ತಿ ತೋಟದೊಳಗಡೆ ಇಡುತ್ತಿದ್ದರು. ದಿವಾಕರ ಅವರು ಅ.20ರಂದು ಬೆಳಿಗ್ಗೆ ತೋಟಕ್ಕೆ ಹೋದಾಗ ತೋಟದೊಳಗಡೆ ಇಟ್ಟಿದ್ದ 7.5 ಹೆಚ್ಪಿ ಸಬ್ ಮರ್ಸಿಬಲ್ ಪಂಪು ಸೆಟ್-2 ಮತ್ತು 5 ಹೆಚ್ಪಿ ಸಬ್ಮರ್ಸಿಬಲ್ ಪಂಪು ಸೆಟ್-01 ಇರುವುದನ್ನು ನೋಡಿದ್ದಾರೆ. ನ.17ರಂದು ಬೆಳಿಗ್ಗೆ ತೋಟಕ್ಕೆ ಹೋದಾಗ ತೋಟದಲ್ಲಿ ಇಟ್ಟಿದ್ದ 3 ಪಂಪು ಸೆಟ್ಗಳು ಕಳ್ಳತನಗೊಂಡಿರುವುದು ಬೆಳಕಿಗೆ ಬಂದಿದೆ. ಕಳವಾದ ಮೂರು ಪಂಪುಸೆಟ್ಗಳ ಒಟ್ಟು ಮೌಲ್ಯ 1.15 ಲಕ್ಷ ರೂ.ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ದಿವಾಕರ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
