ಪುತ್ತೂರು: ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿ ಬಳಿಕ ಪಾಕಿಸ್ತಾನದ ಜೊತೆ ಹೆಚ್ಚುತ್ತಿರುವ ಯುದ್ಧ ಉದ್ದಿಗ್ನತೆ ನಡುವೆ 1971ರ ಬಾಂಗ್ಲಾ ವಿಮೋಚನಾ ಯುದ್ಧದ ಬಳಿಕ ದೇಶದಲ್ಲಿ ಮೊದಲ ಬಾರಿಗೆ ನಾಳೆ ಮೇ.7ರಂದು ದೇಶದ 259 ಸ್ಥಳಗಳಲ್ಲಿ ಪೂರ್ಣಪ್ರಮಾಣದ ನಾಗರಿಕ ರಕ್ಷಣಾ ಅಣಕು ಕಾರ್ಯಾಚರಣೆ ಕವಾಯತು (ಮೊಕ್ ಡ್ರಿಲ್) ನಡೆಯಲಿದೆ.
ನಾಗರಿಕರ ರಕ್ಷಣಾ ಸಂಬಂಧ ಅಣುಕು ಕವಾಯತು ನಡೆಸುವಂತೆ ಕೇಂದ್ರ ಗೃಹಸಚಿವಾಲಯ ಮೇ.5ರಂದು ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರಬರೆದು ಸೂಚನೆ ನೀಡಿದ್ದು, ನಾಗರಿಕ ರಕ್ಷಣಾ ತಾಲೀಮು ಆಯೋಜಿಸಲು ಗೃಹಸಚಿವಾಲಯ ನಿರ್ಧರಿಸಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಯಾವುದೇ ಸಂಭಾವ್ಯ ಪ್ರತಿಕೂಲ ದಾಳಿ ಅಥವಾ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಾಗರಿಕ ರಕ್ಷಣಾ ಯಂತ್ರೋಪಕರಣಗಳ ಸನ್ನದ್ಧತೆಯನ್ನು ಮೌಲ್ಯಮಾಪನ ಮಾಡುವುದು ಮತ್ತು ಸಂಖ್ಯೆಯನ್ನು ಹೆಚ್ಚಿಸುವುದು ಈ ಅಣಕು ಕವಾಯತ್ತಿನ ಮುಖ್ಯ ಉದ್ಧೆಶವಾಗಿದೆ. ಈ ತಾಲೀಮಿನ ವೇಳೆ ವಾಯುದಾಳಿ ಎಚ್ಚರಿಕೆ ಸೈರನ್ ಗಳನ್ನು ಸಕ್ರಿಯಗೊಳಿಸುವ ಮೂಲಕ ನಾಗರಿಕರು ಮತ್ತು ವಿದ್ಯಾರ್ಥಿಗಳಿಗೆ ಪ್ರತಿಕೂಲ ದಾಳಿಯ ಸಂದರ್ಭದಲ್ಲಿ ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬೇಕೆಂದು ಮಾಹಿತಿ ನೀಡಲಾಗುತ್ತದೆ.
ಅಣಕು ಕವಾಯತು ಕುರಿತಂತೆ ಜನರು ಆತಂಕಗೊಳ್ಳುವ ಅವಶ್ಯಕತೆ ಇಲ್ಲ. ಇದು ಕೇವಲ ತರಬೇತಿ ವ್ಯಾಯಾಮವಾಗಿದೆ.