ಕೌಟುಂಬಿಕ ಒಗ್ಗಟ್ಟಿನ ತಾಣವೇ ತರವಾಡು: ಶ್ರೀ ಶ್ರೀಕೃಷ್ಣ ಗುರೂಜಿ ಕುಕ್ಕಾಜೆ
ಪುತ್ತೂರು: ತಿಂಗಳಾಡಿಯ ಬೊಲ್ಪುಗುಡ್ಡೆಯಲ್ಲಿ ಕಿದೆವೂರು ಬಾರಿಕೆ ತರವಾಡಿನಲ್ಲಿ ನಾಗ ಸಾನಿಧ್ಯ ಪ್ರತಿಷ್ಠೆ, ಧರ್ಮದೈವ ಧೂಮಾವತಿ ಪುನರ್ ಪ್ರತಿಷ್ಠೆ, ನೂತನ ತರವಾಡು ಗೃಹಪ್ರವೇಶ ಮತ್ತು ಸಪರಿವಾರ ದೈವಗಳ ಪುನರ್ ಪ್ರತಿಷ್ಠೆ ಕಾರ್ಯಕ್ರಮಗಳು ಮೇ.9ರಿಂದ 11ರವರೆಗೆ ವಿಜ್ರಂಭಣೆಯಿಂದ ನಡೆಯಿತು. ಕುಟುಂಬಸ್ಥರು, ಗ್ರಾಮಸ್ಥರು ಸೇರಿದಂತೆ ನೂರಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಸಾದ , ಅನ್ನಪ್ರಸಾದ ಸ್ವೀಕರಿಸಿದರು.

ಕುಕ್ಕಾಜೆ ಶ್ರೀ ಕಾಳಿಕಾಂಬಾ ಆಂಜನೇಯ ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀ ಶ್ರೀಕೃಷ್ಣ ಗುರೂಜಿ ಅವರ ನೇತೃತ್ವದಲ್ಲಿ ಪುನರ್ ಪ್ರತಿಷ್ಠಾ ವಿಧಿಗಳು ನಡೆದವು. ಮೇ ೯ರಂದು ತಂತ್ರಿವರ್ಯರ ಆಗಮನ, ನಾಗ ಸಾನಿಧ್ಯದಲ್ಲಿ ವಾಸ್ತು ಹೋಮ, ವಾಸ್ತುಬಲಿ, ಆಶ್ಲೇಷ ಬಲಿ ಸೇವೆ ನಡೆಯಿತು. ಮೇ 10ರಂದು ಬೆಳಗ್ಗೆ ಗಣಪತಿ ಹೋಮ, ನಾಗ ಪ್ರತಿಷ್ಠೆ, ನಾಗ ತಂಬಿಲ, ಮಹಾಪೂಜೆ, ಅನ್ನಸಂತರ್ಪಣೆ ನಡೆಯತು. ರಾತ್ರಿ ಧೂಮಾವತಿ ದೈವಸ್ಥಾನ ಮತ್ತು ತರವಾಡು ಮನೆಯಲ್ಲಿ ವಾಸ್ತು ಹೋಮ, ವಾಸ್ತು ಬಲಿ ನಡೆಯಿತು. ಮೇ 11ರಂದು ಬೆಳಿಗ್ಗೆ ಗಣಪತಿ ಹೋಮ, ತರವಾಡು ಮನೆಯ ಗೃಹ ಪ್ರವೇಶ, ಧರ್ಮದೈವ ಧೂಮಾವತಿ ಪ್ರತಿಷ್ಠೆ, ಕುಪ್ಪೆ ಪಂಜುರ್ಲಿ- ಕಲ್ಲುರ್ಟಿ, ವರ್ಣರ ಪಂಜುರ್ಲಿ, ಕೊರತಿ, ಕಲ್ಲಾಲ್ದ ಗುಳಿಗ, ಮೂಕಾಂಬಿ ಗುಳಿಗ ದೈವಗಳ ಪ್ರತಿಷ್ಠೆ, ಕುಟುಂಬದ ಮುಡಿಪು ಸೇವೆ, ದೈವಗಳಿಗೆ ತಂಬಿಲ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಪಂಜಿಗುಡ್ಡೆ ಈಶ್ವರ ಭಟ್, ಮಾಜಿ ಶಾಸಕ ಸಂಜೀವ ಮಠಂದೂರು, ಹಿಂದೂ ಸಂಘಟನೆ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ, ರಾಜಕೀಯ ಮುಖಂಡರಾದ ದಯಾನಂದ ಶೆಟ್ಟಿ ಉಜಿರೆಮಾರ್, ಪ್ರಸನ್ನ ಮಾರ್ತ, ಉಮೇಶ್ ಕೋಡಿಬೈಲ್ ಸೇರಿದಂತೆ ನೂರಾರು ಮಂದಿ ಭೇಟಿ ನೀಡಿದರು. ಕಿದೆವೂರು ಬಾರಿಕೆ ತರವಾಡಿನ ಹಿರಿಯರಾದ ಕೃಷ್ಣಪ್ಪ ಪೂಜಾರಿ, ನಾರಾಯಣ ಪೂಜಾರಿ ಅವರ ನೇತೃತ್ವದಲ್ಲಿ ಕುಟುಂಬಸ್ಥರು ಧಾರ್ಮಿಕ ವಿಧಿ ವಿಧಾನಗಳಲ್ಲಿ ಪಾಲ್ಗೊಂಡರು.
ಕೌಟುಂಬಿಕ ಒಗ್ಗಟ್ಟಿನ ತಾಣವೇ ತರವಾಡು
ಹಿರಿಯರ ಕಾಲದಿಂದ ಆರಾಧಿಸಿಕೊಂಡು ಬಂದ ದೈವಗಳನ್ನು ತರವಾಡಿನಲ್ಲಿ ಕುಟುಂಬಸ್ಥರೆಲ್ಲರೂ ಸೇರಿ ಆರಾಧಿಸುತ್ತೇವೆ. ತರವಾಡು ಎಂಬುದು ಕೇವಲ ದೈವಾರಾಧನೆ ಸ್ಥಳ ಮಾತ್ರವಲ್ಲ, ಅದು ಕುಟುಂಬದವರೆಲ್ಲರೂ ಒಗ್ಗಟ್ಟಿನಿಂದ ಸೇರುವ ಪವಿತ್ರ ತಾಣ ಎಂದು ಕುಕ್ಕಾಜೆ ಶ್ರೀ ಕಾಳಿಕಾಂಬಾ ಆಂಜನೇಯ ದೇವಸ್ಥಾನದ ಧರ್ಮದರ್ಶಿಗಳೂ, ಕಿದೆವೂರು ಬಾರಿಕೆ ತರವಾಡಿನ ತಂತ್ರಿವರ್ಯರೂ ಆದ ಶ್ರೀ ಶ್ರೀಕೃಷ್ಣ ಗುರೂಜಿ ಹೇಳಿದರು. ಪುನರ್ ಪ್ರತಿಷ್ಠಾ ಮಹೋತ್ಸವದ ಕೊನೆಯಲ್ಲಿ ನಡೆದ ಕುಟುಂಬಸ್ಥರ ಸಭೆಯಲ್ಲಿ ಅವರು ಮಾತನಾಡಿದರು.
ತರವಾಡಿನ ಮೂಲಕ ಕೌಟುಂಬಿಕ ಸಾಮರಸ್ಯ ಬೆಳೆಸುತ್ತಾ ಉತ್ತಮ ಸಂಸ್ಕೃತಿ, ಪರಂಪರೆ ಮುಂದುವರಿಸಬೇಕು. ದೈವಾರಾಧನೆಯ ವಿಧಿಗಳನ್ನು ಈಗಿನ ತಲೆಮಾರು ಕಲಿತುಕೊಳ್ಳುವಂತೆ ಹಿರಿಯರು ಪ್ರೇರೇಪಿಸಬೇಕು. ಇದರ ಜತೆಗೆ ನಮ್ಮ ಪಾರಂರಿಕ ಮೌಲ್ಯಗಳು ಹಾಳಾಗದಂತೆ ತರವಾಡುಗಳು ಮಾರ್ಗದರ್ಶನ ನೀಡಬೇಕು. ಮದುವೆ ಮನೆ, ಮಂಟಪಗಳಲ್ಲಿ ಆಚರಣೆ ಹೆಸರಿನಲ್ಲಿ ನಡೆಯುವ ಅನಾಚಾರಗಳಿಗೆ ಕಡಿವಾಣ ಹಾಕಬೇಕು. ಮದುವೆಗಳಲ್ಲಿ ಮಾಂಸಾಹಾರದ ಊಟ ದೂರ ಮಾಡಬೇಕು. ತರವಾಡುಗಳಲ್ಲಿ ಕುಟುಂಬಸ್ಥರೆಲ್ಲ ಸೇರಿ ಭಜನೆ, ದೀಪಾವಳಿ ಆಚರಣೆ ಇತ್ಯಾದಿ ಮಾಡಬೇಕು ಎಂದವರು ಕಿವಿಮಾತು ಹೇಳಿದರು.