ಕಡಬ: ಪಿಜಕ್ಕಳ ಸಮೀಪ ಪಾಲೋಳಿ ಸೇತುವೆ ಬಳಿ ಎರಡು ದಿನಗಳಿಂದ ನಡೆಯುತ್ತಿದ್ದ ಕೋಳಿ ಅಂಕವು ಸುಬ್ರಹ್ಮಣ್ಯ ಪೊಲೀಸರ ಆಗಮನದಿಂದ ಸ್ಥಗಿತಗೊಂಡ ಘಟನೆ ಮೇ 23 ರಂದು ನಡೆದಿದೆ.
ಪಾಲೋಳಿ ಸೇತುವೆಯ ಬಳಿ ತೋಟವೊಂದರ ಮಧ್ಯೆ ಶೀಟು ಅಳವಡಿಸಿ ಚಪ್ಪರ ಹಾಕಿ ಅದ್ದೂರಿ ವ್ಯವಸ್ಥೆ ಮಾಡಲಾಗಿತ್ತು. ಪತ್ತನಾಜೆ ಹಿನ್ನೆಲೆ ದೈವದ ತಂಬಿಲ ಸೇವೆ ಬಳಿಕ ಈ ಕೋಳಿ ಅಂಕ ಆಯೋಜಿಸಲಾಗಿತ್ತು ಎನ್ನಲಾಗಿದೆ. ಸೇತುವೆ ಬಳಿ ಅಕ್ರಮ ಕೋಳಿ ಅಂಕಕ್ಕೆ ಬಂದವರು ರಸ್ತೆಯಲ್ಲೇ ಅಡ್ಡಾದಿಡ್ಡಿ ವಾಹನ ನಿಲ್ಲಿಸಿ ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ವಾಹನಗಳನ್ನು ಪಾರ್ಕ್ ಮಾಡಿದ್ದರು. ಹೀಗಾಗಿ ಸಾರ್ವಜನಿಕ ದೂರಿನ ಮೇರೆಗೆ ಕೋಳಿ ಅಂಕ ನಡೆಯುತ್ತಿದ್ದ ಸ್ಥಳಕ್ಕೆ ಸುಬ್ರಹ್ಮಣ್ಯದ 112 ಪೊಲೀಸರು ಆಗಮಿಸಿದ್ದು ಸ್ಥಗಿತಗೊಳಿಸಲು ಸೂಚಿಸಿದ್ದರು ಎಂದು ತಿಳಿದು ಬಂದಿದೆ.
ಪೊಲೀಸರ ಎಂಟ್ರಿಯಿಂದ ಕೋಳಿ ಅಂಕ ಸ್ಥಗಿತವಾಗಿದ್ದು ಆಯೋಜಕರು ತರಾತುರಿಯಲ್ಲಿ ಶೀಟ್ ಅಳವಡಿಸಿ ಹಾಕಿದ್ದ ಚಪ್ಪರವನ್ನು ತೆರವು ಮಾಡಿದ್ದಾರೆ. ಕಡಬ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೋಳಿ ಅಂಕಕ್ಕೆ ಸುಬ್ರಹ್ಮಣ್ಯ ಪೊಲೀಸರು ಎಂಟ್ರಿಕೊಟ್ಟ ಕಾರಣ ಆಯೋಜಕರು ತಬ್ಬಿಬ್ಬುಗೊಂಡಿರುವುದಾಗಿ ತಿಳಿದು ಬಂದಿದೆ.