ಬೆಟ್ಟಂಪಾಡಿ: ವರ್ಷದ ಆದಿ ಮತ್ತು ಅಂತ್ಯ ಜಾತ್ರೋತ್ಸವ ಎಂದೇ ಹೆಸರು ಪಡೆದಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವಗಳ ಕಡೆಯ ಜಾತ್ರೆಯಾದ ʻಬೆಟ್ಟಂಪಾಡಿ ಶ್ರೀ ಕ್ಷೇತ್ರದ ಪತ್ತನಾಜೆ ಜಾತ್ರೆಯು ಮೇ 24 ರಂದು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಜರಗಿತು.
ಮೇ 23 ರಂದು ಬಲಿವಾಡು ಶೇಖರಣೆ ನಡೆದು, ಮೇ 24 ರಂದು ಬೆಳಿಗ್ಗೆ ನವಕ ಕಲಶಾಭಿಷೇಕ, ತುಲಾಭಾರ ಸೇವೆ ನಡೆದು ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ಜರಗಿತು. ರಾತ್ರಿ ಶ್ರೀ ಮಹಾಲಿಂಗೇಶ್ವರ ಭಜನಾ ಸಂಘದವರಿಂದ ಭಜನಾ ಕಾರ್ಯಕ್ರಮ, ಮಹಾಪೂಜೆಯಾಗಿ ಶ್ರೀ ದೇವರ ಉತ್ಸವ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣದಲ್ಲಿ ಮಹಾಪ್ರಸಾದ ವಿತರಣೆ, ಅನ್ನಸಂತರ್ಪಣೆ ನೆರವೇರಿತು. ಮಧ್ಯಾಹ್ನ ಮತ್ತು ರಾತ್ರಿ ಸಾವಿರಕ್ಕೂ ಮಿಕ್ಕಿ ಭಕ್ತಾಭಿಮಾನಿಗಳು ಅನ್ನಪ್ರಸಾದ ಸ್ವೀಕರಿಸಿದರು. ಭಕ್ತಾಭಿಮಾನಿಗಳು ಜಾತ್ರೋತ್ಸವ ಸಂದರ್ಭ ಸಂಕಲ್ಪ ಸಹಿತ ವಿಶೇಷ ಅನ್ನದಾನ ಸೇವೆ ನಡೆಸಿದರು.
ಈ ಸಂದರ್ಭ ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್, ಮೊಕ್ತೇಸರ ವಿನೋದ್ ಕುಮಾರ್ ರೈ ಗುತ್ತು, ಅಭಿವೃದ್ಧಿ ಸಮಿತಿ ಅಧ್ಯಕ್ಷ ಮನಮೋಹನ ರೈ ಚೆಲ್ಯಡ್ಕ, ಸಂಚಾಲಕ ವೇ. ಮೂ. ದಿನೇಶ್ ಮರಡಿತ್ತಾಯ ಗುಮ್ಮಟೆಗದ್ದೆ, ಪ್ರಧಾನ ಅರ್ಚಕ ವೇ.ಮೂ. ವೆಂಕಟ್ರಮಣ ಭಟ್ ಕಾನುಮೂಲೆ, ಆಡಳಿತ ಮಂಡಳಿ ಸದಸ್ಯರು, ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು ಹಾಗೂ ಸದಸ್ಯರು ಸೇರಿದಂತೆ ಊರ ಪರವೂರ ಭಕ್ತಾಭಿಮಾನಿಗಳು ಪಾಲ್ಗೊಂಡು ಶ್ರೀ ದೇವರ ಪ್ರಸಾದ ಸ್ವೀಕರಿಸಿದರು.