ಅಂಗನವಾಡಿ ಕಾರ್ಯಕರ್ತೆ ಮಗುವಿನ ಎರಡನೇ ತಾಯಿ: ಶಾಸಕ ಅಶೋಕ್ ರೈ
ಪುತ್ತೂರು: ಅಂಗನವಾಡಿ ಕಲ್ಪನೆಯೇ ಬಹಳ ಅದ್ಬುತವಾಗಿದೆ, ಅಂಗನವಾಡಿ ಕಾರ್ಯಕರ್ತೆ ಮಗುವಿನ ಎರಡನೇ ತಾಯಿಯಾಗಿ ತನ್ನ ಕರ್ತವ್ಯವನ್ನು ಬಹಳ ಶಿಸ್ತಿನಿಂದ ನಿರ್ವಹಿಸುತ್ತಿರುವುದು ಮಕ್ಕಳ ಬೆಳವಣಿಗೆಯ ಪಾಲಿಗೂ ವರದಾನವಾಗಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.

ಅವರು ಪಾಣಾಜೆ ಗ್ರಾಮದ ದೇವಸ್ಯ ಅಂಗನವಾಡಿ ಕೇಂದ್ರದ ನೂತನ ಕಟ್ಟಡವನ್ನು ಲೋಕಾರ್ಪಣೆಗೈದು ಮಾತನಾಡಿದರು. ಅಂಗನವಾಡಿಯಲ್ಲಿಯೂ ಎಲ್ಕೆಜಿ ಯುಕೆಜಿ ತರಗತಿ ಪ್ರಾರಂಭಕ್ಕೆ ಸರಕಾರ ಚಿಂತನೆ ನಡೆಸಿದ್ದು ಈಗಾಗಲೇ ತಾಲೂಕಿನಿಂದ ಕೆಲವೊಂದು ಅಂಗನವಾಡಿ ಕೇಂದ್ರಗಳನ್ನು ಆಯ್ಕೆ ಮಾಡಿದೆ. ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ಮಕ್ಕಳ ಶಿಕ್ಷಣಕ್ಕೆ ವಿವಿಧ ವ್ಯವಸ್ಥೆಗಳಿದೆ ಆದರೆ ಗ್ರಾಮೀಣ ಮಕ್ಕಳು ಇದರಿಂದ ವಂಚಿತರಾಗಬಾರದು ಎಂದು ಸರಕಾರ ಅಂಗನವಾಡಿ ಕೇಂದ್ರ ಎಂಬ ಯೋಜನೆಯನ್ನು ಜಾರಿ ಮಾಡಿದೆ ಎಂದು ಹೇಳಿದರು. ಪುತ್ತೂರು ವಿಧಾನಸಭಾ ಕ್ಷೇತ್ರದ ಬಹುತೇಕ ಅಂಗನವಾಡಿಗಳಿಗೆ ಹೊಸ ಕಟ್ಟಡಗಳೇ ಇದೆ. ಪುಟ್ಟ ಮಕ್ಕಳು ಮಾತ್ರವಲ್ಲದೆ ತಾಯಂದಿರುವ ಗರ್ಭವತಿಯಾದ ಬಳಿಕ ಮಗುವಿನ ಹೆರಿಗೆತಕನವೂ ಅಂಗನವಾಡಿ ಸಂಪರ್ಕ ಇರಿಸಿಕೊಳ್ಳಬೇಕಾಗುತ್ತದೆ. ಬಾಣಂತಿಯರಿಗೆ ಸರಕಾರ ಪೌಷ್ಠಿಕ ಆಹಾರವನ್ನು ನೀಡುತ್ತಿದ್ದು, ತಾಯಿ ಹಾಗೂ ಮಗುವಿನ ಆರೋಗ್ಯದ ಕಡೆಗೂ ಸರಕಾರ ಈ ಕೇಂದ್ರದ ಮೂಲಕ ವ್ಯವಸ್ಥೆಯನ್ನು ಕಲ್ಪಿಸುತ್ತಿದೆ ಎಂದು ಹೇಳಿದರು.
ಪುತ್ತೂರು ತಾಲೂಕು ಶಿಶು ಅಭಿವೃದ್ದಿ ಯೋಜನಾಧಿಕಾರಿ ಪ್ರಿಯಾ ಅಗ್ನೇಶ್ ಮಾತನಾಡಿ ಪುತ್ತೂರು ತಾಲೂಕಿನ 199 ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವ ಪ್ರಕ್ರಿಯೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಅಂಗನವಾಡಿ ಕೆಂದ್ರದಲ್ಲಿ ಟಿ ವಿ ಹಾಗೂ ಮಕ್ಕಳಿಗೆ ಯುನಿಫಾರಂ ನ್ನು ವಿತರಿಸುವ ಕೆಲಸವೂ ನಡೆಯಲಿದೆ. ತಾಲೂಕಿನ ಅಂಗನವಾಡಿ ಕೇಂದ್ರದಲ್ಲಿ ಎಲ್ಕೆಜೆ, ಯುಕೆಜಿ ತರಗತಿ ಆರಂಭವಾಗಲಿದೆ. ಪ್ರಾರಂಭಿಕ ಹಂತದಲ್ಲಿ ಈ ತರಗತಿ ಪ್ರಾರಂಭವಾಗಲಿದ್ದು ಪುತ್ತೂರು ಶಾಸಕರ ಸಹಕಾರದಿಂದ ಪುತ್ತೂರು ತಾಲೂಕಿನ ಅಂಗನವಾಡಿ ಕೇಂದ್ರಕ್ಕೆ ಹೊಸ ಕಟ್ಟಡಕ್ಕೆ ಅನುದಾನಗಳು ಬರುತ್ತಿದೆ ಇದು ಅಭಿನಂದನಾರ್ಹವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಾಣಾಜೆ ಗ್ರಾಪಂ ಅಧ್ಯಕ್ಷೆ ಮೈಮೂನತುಲ್ ಮೆಹ್ರಾ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗ್ರಾಪಂ ಪಿಡಿಒ ಆಶಾ, ಗ್ರಾಪಂ ಸದಸ್ಯ ಸುಬಾಶ್ ರೈ ಸಿ ಎಚ್, ಗ್ರಾಪಂ ಉಪಾಧ್ಯಕ್ಷೆ ಜಯಶ್ರೀ, ಗ್ರಾಪಂ ಮಾಜಿ ಉಪಾಧ್ಯಕ್ಷರಾದ ಅಬೂಬಕ್ಕರ್, ಮೋಹನ್ ನಾಯ್ಕ, ವಿಮಲಾ ಮಹಾಲಿಂಗ ನಾಯ್ಕ, ಸದಾನಂದ ನಾಯ್ಕ ಭರಣ್ಯ, ಸದಾಶಿವ ರೈ ಸೂರಂಬೈಲು, ಹಿರಿಯರಾದ ವಿಶ್ವನಾಥ ರೈ, ಸುಧಾಕರ ರೈ ಗಿಳಿಯಾರು, ನಿವೃತ್ತ ಶಿಕ್ಷಕಿ ಗ್ರೇಸಿ, ಬಾಬು ರೈ ಕೋಟೆ ಮೊದಲಾದವರು ಇದ್ದರು.
ಶ್ರೀಪ್ರಸಾದ್ ಪಾಣಾಜೆ ಸ್ವಾಗತಿಸಿ, ಅಂಗನವಾಡಿ ಕಾರ್ಯಕರ್ತೆ ಸವಿತಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ದೇವಸ್ಯ ಅಂಗನವಾಡಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಕಾರ್ಯಕರ್ತೆ ಗ್ರೇಸಿ ಯವರನ್ನು ಸನ್ಮಾನಿಸಿ ಗೌರವಿಸಲಾಯಿತು.