ಯುವವಾಹಿನಿಯಿಂದ ಸಾಂಸ್ಕೃತಿಕ ವೈಭವ ‘ಡೆನ್ನಾನ ಡೆನ್ನನ’ ಉದ್ಘಾಟನೆ

0

ಯುವಸಮುದಾಯದ ಪ್ರತಿಭೆಗೆ ಯುವವಾಹಿನಿ ವೇದಿಕೆ-ಸತೀಶ್ ಕೆಡೆಂಜಿ

ಪುತ್ತೂರು: ಯುವವಾಹಿನಿ ಕೇಂದ್ರ ಸಮಿತಿ ಹಾಗೂ ಆಯಾ ಯುವವಾಹಿನಿ ಘಟಕಗಳು ಹಲವಾರು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡು ಕರ್ನಾಟಕ ರಾಜ್ಯವು ಗುರುತಿಸುವಂತಹ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ. ಅದರಂತೆ ಯುವವಾಹಿನಿ ಸಂಘಟನೆಯು ಯುವಸಮುದಾಯದ ಪ್ರತಿಭೆಯನ್ನು ತೋರ್ಪಡಿಸಿಕೊಳ್ಳುವಂತಹ ವೇದಿಕೆಯಾಗಿದೆ ಎಂದು ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿರವರು ಹೇಳಿದರು.


ವಿದ್ಯೆ, ಉದ್ಯೋಗ, ಸಂಪರ್ಕ ಎಂಬ ಧ್ಯೇಯವಾಕ್ಯದಡಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ, ಯುವವಾಹಿನಿ ಪುತ್ತೂರು ಘಟಕದ ಆತಿಥ್ಯದಲ್ಲಿ, ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಇದರ ಸಹಯೋಗದಲ್ಲಿ ಮೇ.25ರಂದು ನೆಹರುನಗರ ಸುದಾನ ವಿದ್ಯಾಸಂಸ್ಥೆಗಳ ಆವರಣದಲ್ಲಿ ನಡೆದ ಸಾಂಸ್ಕೃತಿಕ ವೈಭವ “ಡೆನ್ನಾನ ಡೆನ್ನನ” ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಯುವವಾಹಿನಿ ಪುತ್ತೂರು ಘಟಕ ಹಾಗೂ ಪುತ್ತೂರು ಬಿಲ್ಲವ ಸಂಘಕ್ಕೆ ನಿಕಟ ಸಂಬಂಧವಿದೆ. ಪುತ್ತೂರು, ಕಡಬ, ಉಪ್ಪಿನಂಗಡಿ ಯುವವಾಹಿನಿ ಘಟಕಗಳು ಪುತ್ತೂರು ಬಿಲ್ಲವ ಸಂಘದ ವ್ಯಾಪ್ತಿಯಲ್ಲಿ ಬರುತ್ತವೆ. ಯುವವಾಹಿನಿ ಹಮ್ಮಿಕೊಂಡ ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಾಗುವುದಕ್ಕಿಂತ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವುದು ಬಹಳ ಮುಖ್ಯವಾಗಿದೆ ಎಂದರು.


ಮಂಜಲ್ಪಡ್ಪು ಸುದಾನ ಸಮೂಹ ವಿದ್ಯಾಸಂಸ್ಥೆಗಳ ಸಂಚಾಲಕ ರೆ|ವಿಜಯ ಹಾರ್ವಿನ್ ಮಾತನಾಡಿ, ಸುದಾನ ವಿದ್ಯಾಸಂಸ್ಥೆಯ ಪರಿಸರವು ವಿದ್ಯಾರ್ಥಿಗಳಿಗೆ ಹಾಗೂ ಯುವಜನರಿಗೆ ಪ್ರಯೋಜನಕಾರಿಯಾದಂತಹ ಸ್ಥಳವಾಗಿದೆ. ನಾರಾಯಣ ಗುರುಸ್ವಾಮಿಗಳ ಆದರ್ಶ ಬದುಕನ್ನು ನಾವು ಬದುಕಿ ತೋರಿಸಿದಾಗ ನಮ್ಮಲ್ಲಿ ಯಾವುದೇ ಘರ್ಷಣೆ, ತೊಂದರೆಗಳು ಉದ್ಭವಿಸದು. ನಾರಾಯಣ ಗುರುಗಳ ಒಂದೇ ಜಾತಿ, ಒಂದೇ ಕುಲ, ಒಂದೇ ದೇವರು ಎಂಬಂತೆ ಬಾಳಿದಾಗ ನಮ್ಮಲ್ಲಿ ಮನುಷ್ಯತ್ವದ ಅನಾವರಣದ ಜೊತೆಗೆ ಸಮಾಜದಲ್ಲಿ ಪರಿವರ್ತನೆಯ ಕಾಲಘಟ್ಟ ನಿರ್ಮಾಣವಾಗುವುದು ಎಂದರು.


ಘಟಕಗಳಲ್ಲಿ ಸದಸ್ಯತನಕ್ಕೆ ಒತ್ತು ನೀಡಿ ಮಾತೃಸಂಘವನ್ನು ಬಲಪಡಿಸೋಣ-ಅಣ್ಣಿ ಪೂಜಾರಿ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಯುವವಾಹಿನಿ ಪುತ್ತೂರು ಘಟಕದ ಅಧ್ಯಕ್ಷ ಅಣ್ಣಿ ಪೂಜಾರಿ ಮಾತನಾಡಿ, ಯುವವಾಹಿನಿ ಕೇಂದ್ರ ಸಮಿತಿಯಲ್ಲಿ 35 ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಈ ಘಟಕಗಳು ಮುಂದಿನ ದಿನಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ರಾಜ್ಯ ಪ್ರಶಸ್ತಿಯನ್ನು ತನ್ನದಾಗಿಸಿಕೊಳ್ಳಬೇಕು. ಮಾತೃ ಸಂಘದ ಅಡಿಯಲ್ಲಿ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿಯೊಂದು ಘಟಕಗಳಲ್ಲಿ ಸದಸ್ಯತನಕ್ಕೆ ಹೆಚ್ಚಿನ ಒತ್ತು ನೀಡಿ ಮಾತೃಸಂಘವನ್ನು ಬಲಪಡಿಸೋಣ ಎಂದರು.


ನಾರಾಯಣ ಗುರುಗಳ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ-ಬಿ.ಎಸ್ ಸತೀಶ್ ಕುಮಾರ್:
ದ.ಕ ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ಬಿ.ಎಸ್ ಸತೀಶ್ ಕುಮಾರ್ ಮಾತನಾಡಿ, ಸರಕಾರ ಮಾಡಬೇಕಾದ ಕೆಲಸ ಕಾರ್ಯಗಳು ಯುವವಾಹಿನಿ ಸಂಘಟನೆಯು ಯುವಜನರಿಗೆ ಮಾಡುತ್ತಿದೆ. ನಾವು ಮಾಡುವ ಕಾರ್ಯಕ್ರಮಗಳು ಒಳ್ಳೆಯ ರೀತಿಯಲ್ಲಿರಬೇಕು, ಜನಸಮುದಾಯಕ್ಕೆ ತಲುಪುವಂತಿರಬೇಕು ಜೊತೆಗೆ ಅಭಿವೃದ್ಧಿ ನೆಲೆಯಲ್ಲಿ ಸಾಗಬೇಕು. ನಾರಾಯಣ ಗುರುಗಳು ವಿದ್ಯೆ, ಉದ್ಯೋಗ, ಸಂಪರ್ಕ ಎಂಬ ತತ್ವವನ್ನು ಬೋಧಿಸಿದ್ದು, ಈ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ನಮ್ಮಲ್ಲಿನ ಪ್ರತಿಭೆಯ ಅನ್ವೇಷಣೆಯಾಗುವುದು ಎಂದರು.


ಯುವವಾಹಿನಿಯು ಶಿಸ್ತುಬದ್ಧವಾದ ಸಂಘಟನೆಗೆ ಹೆಸರುವಾಸಿ-ವಿಜಯಕುಮಾರ್ ಸೊರಕೆ:
ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ವಿಜಯಕುಮಾರ್ ಸೊರಕೆ ಮಾತನಾಡಿ, ವಿದ್ಯೆ, ಉದ್ಯೋಗ, ಸಂಪರ್ಕ ಎಂಬ ಧ್ಯೇಯದೊಂದಿಗೆ ಯುವವಾಹಿನಿ ಕಾರ್ಯ ನಿರ್ವಹಿಸುತ್ತಿದೆ. ವಿದ್ಯೆಗೆ ಪ್ರೋತ್ಸಾಹ ಕೊಟ್ಟಾಗ ಉದ್ಯೋಗ ಸಿಗುತ್ತದೆ. ಒಳ್ಳೆಯ ಉದ್ಯೋಗವಿದ್ದಾಗ ನಮಗೆ ಸಮಾಜದಲ್ಲಿ ಗುರುತರವಾದ ಸಂಪರ್ಕ ಕೂಡ ಇರುತ್ತದೆ. ಯುವವಾಹಿನಿ ಯುವಸಮುದಾಯದ ಏಳಿಗೆಗೆ ನಿರ್ವಹಿಸಿದ ಸಮಾಜಮುಖಿ ಕಾರ್ಯಕ್ರಮಗಳಿಗೆ ಸರಕಾರವು ಎರಡನೇ ಬಾರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿರುತ್ತದೆ. ಯುವವಾಹಿನಿಯು ಶಿಸ್ತುಬದ್ಧವಾದ ಸಂಘಟನಗೆ ಬಹಳ ಹೆಸರುವಾಸಿಯಾಗಿದೆ ಎಂದರು.


ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷ ಲೋಕೇಶ್ ಕೋಟ್ಯಾನ್, ಪುತ್ತೂರು ಸ್ನೇಹ ಸಿಲ್ಕ್ಸ್ ಮತ್ತು ರೆಡಿಮೇಡ್ ಇದರ ಮಾಲಕ ಸತೀಶ್ ಬಿ, ಕರ್ನಾಟಕ ಪೊಲೀಸ್ ಇಲಾಖೆಯ ನಿವೃತ್ತ ಎ.ಎಸ್.ಐ ಪುಷ್ಪಲತಾ, ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಸಾಂಸ್ಕೃತಿಕ ನಿರ್ದೇಶಕ ಸುಶಾಂತ್ ಕರ್ಕೇರಾ, ಸಂಘಟನಾ ಕಾರ್ಯದರ್ಶಿ ಕೃಷ್ಣಪ್ಪ ಅಮೈ, ಸಾಂಸ್ಕೃತಿಕ ನಿರ್ದೇಶಕ ಮೋಹನ್ ಶಿಬರರವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಮೌನ ಪ್ರಾರ್ಥನೆ:
ರಾಜ್ಯದ ಪ್ರತಿಭೆ, ನಟ ಹಾಗೂ ಕಾಮಿಡಿ ಕಿಲಾಡಿಗಳು ಶೋನಲ್ಲಿ ಸದಾ ನಗಿಸುತ್ತಿದ್ದ ಯುವ ಪ್ರತಿಭೆ, ಬೆಂಗಳೂರು ಘಟಕದ ಕಲೆ, ಸಾಹಿತ್ಯ ವಿಭಾಗದ ನಿರ್ದೇಶಕರಾಗಿದ್ದು ಇತ್ತೀಚೆಗೆ ಅಗಲಿದ ರಾಕೇಶ್ ಪೂಜಾರಿರವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕ ಅಶೋಕ್ ಕುಮಾರ್ ರೈಯವರನ್ನು ಸಂಘಟನೆಯ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು. ಶ್ರೀ ನಾರಾಯಣಗುರು ವೈದಿಕ ಸಮಿತಿ ಮಂಗಳೂರು ಇದರ ಅಧ್ಯಕ್ಷ ಹರೀಶ ಶಾಂತಿ ಪ್ರಾರ್ಥಿಸಿದರು. ಕಾರ್ಯಕ್ರಮದ ಸಂಚಾಲಕ ಪ್ರಭಾಕರ ಸಾಲಿಯಾನ್ ಬಾಕಿಲಗುತ್ತುರವರು ಸ್ವಾಗತಿಸಿದರು. ಲೋಹಿತ್ ಸುಳ್ಯ, ರವಿ ಕಲ್ಕಾರು, ಜಯರಾಮ ಪೂಜಾರಿ ಪುತ್ತೂರು, ಲೋಹಿತ್ ಕಲ್ಕಾರ್, ಸಮಿತ್ ಪರ್ಪುಂಜ, ಶಿವಪ್ರಸಾದ್ ಕುಂಬ್ರ, ಗೌತಮ್, ರಶ್ಮಿ ಸಿ.ಕರ್ಕೇರಾ, ಉಮೇಶ್ ಬಾಯಾರು, ಸುನಿಲ್ ಅಂಚನ್, ಅವಿನಾಶ್ ಹಾರಾಡಿ, ಭಾಸ್ಕರ್ ಸಸಿಹಿತ್ಲು, ಸರಸ್ವತಿರವರು ಅತಿಥಿಗಳಿಗೆ ಹೂಗುಚ್ಛ ನೀಡಿ, ಶಾಲು ಹೊದಿಸಿ ಸ್ವಾಗತಿಸಿದರು. ಯುವವಾಹಿನಿ ಪುತ್ತೂರು ಘಟಕದ ಕಾರ್ಯದರ್ಶಿ ಶರತ್ ಕೈಪಂಗದೋಳ ವಂದಿಸಿದರು. ಸುಧಾಕರ ಕಾರ್ಕಳ ಹಾಗೂ ಡಾ.ರಾಜೇಶ್ ಬೆಜ್ಜಂಗಳರವರು ಕಾರ್ಯಕ್ರಮ ನಿರೂಪಿಸಿದರು.



35 ಘಟಕಗಳು..
ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ 35 ಘಟಕಗಳಾದ ಮಂಗಳೂರು, ಸುರತ್ಕಲ್, ಬಂಟ್ವಾಳ, ಪುತ್ತೂರು, ಪಣಂಬೂರು ಕುಳಾಯಿ, ಹಳೆಯಂಗಡಿ, ಹೆಜಮಾಡಿ, ಸಸಿಹಿತ್ಲು, ಪಡುಬಿದ್ರೆ, ಕಟಪಾಡಿ, ಉಪ್ಪಿನಂಗಡಿ, ಮಂಗಳೂರು ಮಹಿಳಾ, ಉಡುಪಿ, ಮೂಲ್ಕಿ, ಯಡ್ತಾಡಿ, ಅಡ್ವೆ, ಬಜಪೆ, ಬೆಳ್ತಂಗಡಿ, ಕಂಕನಾಡಿ, ಮಾಣಿ, ಸುಳ್ಯ, ವೇಣೂರು, ಕುಪ್ಪೆಪದವು, ಕಡಬ, ಪೆರ್ಮಂಕಿ, ಗ್ರಾಮ ಚಾವಡಿ ಕೊಣಾಜೆ, ಕಾಪು, ವಿಟ್ಲ, ಕೂಳೂರು, ಮೂಡಬಿದ್ರೆ, ಕೊಲ್ಯ, ಶಕ್ತಿನಗರ, ಕಾರ್ಕಳ, ಕೆಂಜಾರು ಕರಂಬಾರು, ಬೆಂಗಳೂರು ಘಟಕಗಳು ಭಾಗವಹಿಸಿದ್ದವು.

ಧ್ವಜಾರೋಹಣ/ಆಶೀರ್ವಾದ..
ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನಬಿತ್ತಿಲು ಇದರ ಯಜಮಾನರಾದ ಶ್ರೀಧರ ಪೂಜಾರಿರವರು ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಭಾ ಕಾರ್ಯಕ್ರಮದ ಆರಂಭದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ಅತಿಥಿ ಗಣ್ಯರು ನಮಸ್ಕರಿಸುವ ಮೂಲಕ ನಾರಾಯಣ ಗುರುಗಳ ಆಶೀರ್ವಾದವನ್ನು ಪಡೆದುಕೊಳ್ಳಲಾಯಿತು.

ಯುವವಾಹಿನಿಗೆ ದೇಶ ಕಟ್ಟುವ ಶಕ್ತಿಯಿದೆ..
ದ.ಕ, ಉಡುಪಿ ಜಿಲ್ಲೆಗೆ ಸಂಬಂಧಪಟ್ಟಂತೆ ಈ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ ಮಾತ್ರವಲ್ಲ ಉತ್ತಮ ಸಂದೇಶದೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಿರುವುದು ಶ್ಲಾಘನೀಯ. ಧರ್ಮ, ಧರ್ಮ ಒಡೆಯುವ ಕೆಲಸ ಮಾಡುವ ಬದಲು ನಾವೆಲ್ಲಾ ಭಾರತಾಂಬೆಯ ಮಕ್ಕಳು, ಈ ದೇಶವನ್ನು ಯಾರು ವಿರೋಧ ಮಾಡುತ್ತಾರೆ ಅವರನ್ನು ಜಾತಿ, ಧರ್ಮ ಬಿಟ್ಟು ನಾವು ಇಂದು ವಿರೋಧಿಸಿದಾಗ ದೇಶ ವಿಶ್ವಗುರುವಾಗಲು ಸಾಧ್ಯ. ಯುವವಾಹಿನಿಗೆ ದೇಶ ಕಟ್ಟುವಂತಹ ಶಕ್ತಿ ಇದೆ. ನಾವೆಲ್ಲಾ ಮುಂದಿನ ಪ್ರಜೆಗಳು. ದೇಶವನ್ನು ಹೇಗೆ ಕಟ್ಟಬೇಕು, ಬೆಳೆಸಬೇಕು ಎನ್ನುವುದು ನಮಗೆ ಗೊತ್ತಿದೆ. ಒಂದೇ ತಾಯಿಯ ಮಕ್ಕಳು ಎಂಬಂತೆ ಈ ಯುವವಾಹಿನಿ ಸಂಘಟನೆಯು ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಜೊತೆಗೆ ಪ್ರತಿಭೆಯ ಅನಾವರಣಕ್ಕೆ ವೇದಿಕೆಯನ್ನು ನಿರ್ಮಾಣ ಮಾಡಿದೆ. ಸಂಘಟನೆಯು ಮುಂದಿನ ದಿನಗಳಲ್ಲಿ ಉತ್ತಮವಾಗಿ ಬೆಳೆಯಲಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಆಸರೆಯಾಗಿ ಬೆಳೆಯಲಿ.
-ಅಶೋಕ್ ಕುಮಾರ್ ರೈ, ಶಾಸಕರು, ಪುತ್ತೂರು

ಯುವಜನತೆಯ ಆದರ್ಶ ಯುವವಾಹಿನಿ..
1987ರಲ್ಲಿ ಸ್ಥಾಪನೆಯಾದ ಸಂಘ ಯುವವಾಹಿನಿಯಾಗಿದ್ದು ವಿದ್ಯೆ, ಉದ್ಯೋಗ, ಸಂಪರ್ಕ ಎಂಬ ಧ್ಯೇಯದೊಂದಿಗೆ ಅನೇಕ ಸಮಾಜಮುಖಿ ಸೇವೆಗಳನ್ನು ನೀಡುತ್ತಿದೆ. ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶಗಳನ್ನು ಬೋಧಿಸುವುದು, ನಾಯಕತ್ವ ಮತ್ತು ರಾಜಕೀಯ ಪ್ರಜ್ಞೆಯನ್ನು ಮೂಡಿಸುವುದು, ಸಮಾಜದ ಯುವಜನರಲ್ಲಿ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ವೈದ್ಯಕೀಯ, ಸಾಹಿತ್ಯ ಮತ್ತು ಕ್ರೀಡೆ ಇವುಗಳ ಬಗ್ಗೆ ಅರಿವನ್ನು ಮೂಡಿಸುವುದು. ಸಮಾಜದಲ್ಲಿನ ಪ್ರತಿಭಾವಂತರನ್ನು ಗುರುತಿಸಿ ಅವರನ್ನು ಸನ್ಮಾನಿಸುವುದು, ಅವರ ನೆರವಿಗೆ ಧಾವಿಸುವುದು, ಖಾಸಗಿ ಅಥವಾ ಸರಕಾರಿ ರಂಗದಲ್ಲಿ ಉದ್ಯೋಗದ ಬಗ್ಗೆ ಮಾಹಿತಿಯನ್ನು ನೀಡುವುದು ಯುವವಾಹಿನಿಯ ಉದ್ದೇಶವಾಗಿದೆ. ಮಂಗಳೂರಿನ ಯುವವಾಹಿನಿ ಕೇಂದ್ರ ಸಮಿತಿಯ ಅಡಿಯಲ್ಲಿ 35ಘಟಕಗಳು, 4600 ಸದಸ್ಯರನ್ನು ಒಳಗೊಂಡು ಯಶಸ್ವಿಯಾಗಿ ಕಾರ್ಯ ನಿರ್ವಹಿಸಿ ಕರ್ನಾಟಕ ರಾಜ್ಯೋತ್ಸವವನ್ನು ಪಡೆದಿರುವ ಹೆಮ್ಮೆಯ ಸಂಸ್ಥೆಯಾಗಿದ್ದು ಯುವಜನತೆಯ ಆದರ್ಶ ಯುವವಾಹಿನಿಯಾಗಿದೆ.
ಪ್ರಭಾಕರ ಸಾಲಿಯಾನ್ ಬಾಕಿಲಗುತ್ತು, ಕಾರ್ಯಕ್ರಮದ ಸಂಚಾಲಕರು

LEAVE A REPLY

Please enter your comment!
Please enter your name here