ಪುತ್ತೂರು: ಕರ್ನಾಟಕದ ಗಡಿಭಾಗ ಕೇರಳದ ವಾಣಿನಗರದಲ್ಲಿ ನಡೆದ ಕೋಳಿ ಅಂಕದ ವಿಚಾರವಾಗಿ ಯುವಕರೋರ್ವರಿಗೆ ಕೇರಳ ಭಾಗದಿಂದ ಬಂದ ಇಬ್ಬರು ಅರ್ಧಮೂಲೆ ಬಾರೊಂದರ ಬಳಿ ಬಾಟಲಿಯಿಂದ ಹಲ್ಲೆ ನಡೆಸಿದ ಬಗ್ಗೆ ವರದಿಯಾಗಿದೆ. ಮೇ 25ರಂದು ರಾತ್ರಿ ಘಟನೆ ನಡೆದಿದೆ. ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರ್ಲಪದವು ನಿವಾಸಿ ಪ್ರಕಾಶ್ (28 ವ) ಹಲ್ಲೆಗೊಳಗಾದವರು. ಧನಂಜಯ ಮತ್ತು ಪುನೀತ್ ಎಂಬವರು ಆರೋಪಿಗಳು. ಮೇ.24ರಂದು ಕೇರಳ ಭಾಗದಲ್ಲಿ ಕೋಳಿ ಅಂಕ ನಡೆದ ವಿಚಾರದಲ್ಲಿ ಪ್ರಕಾಶ್ ಎಂಬವರು ಗಲಾಟೆ ಮಾಡಿದ್ದಾರೆಂದು ಆರೋಪಿಸಿ, ಧನಂಜಯ ಮತ್ತು ಪುನೀತ್ ಮೇ.25ರಂದು ಪಾಣಾಜೆ ಗ್ರಾಮದ ಅರ್ಧಮೂಲೆಯಲ್ಲಿರುವ ವೈನ್ ಶಾಪ್ ಬಳಿ ರಾತ್ರಿ ಅಲ್ಲಿದ್ದ ಪ್ರಕಾಶ್ ಅವರಿಗೆ ಏಕಾಏಕಿ ಬೈದು, ಬಿಯರ್ ಬಾಟಲಿಯಿಂದ ಪ್ರಕಾಶ್ ಅವರ ತಲೆಗೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯ ಕುರಿತು ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಪ್ರಕಾಶ್ ಅವರ ಅಣ್ಣ, ಗಾಯಾಳು ಪ್ರಕಾಶ್ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಬಗ್ಗೆ ಗಾಯಾಳು ಪ್ರಕಾಶ್ ಅವರು ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಕಲಂ: 115(2), 118(1), 352 3 3(5) ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.