ಉಪ್ಪಿನಂಗಡಿ: ಆಡು ತರಲೆಂದು ರಾಜಸ್ಥಾನಕ್ಕೆ ಹೋದವರು ಅಲ್ಲಿನವರ ಬ್ಲ್ಯಾಕ್‌ಮೇಲ್‌ಗೆ ಒಳಗಾಗಿ ಮತ್ತೆ ಲಕ್ಷಾಂತರ ರೂ. ಹಣವನ್ನು ಮನೆಯವರಿಂದ ಬ್ಯಾಂಕ್ ಖಾತೆ ಮೂಲಕ ಹಾಕಿಸಿಕೊಂಡಿದ್ದಲ್ಲದೆ, ನಮಗಿಲ್ಲ ಹೆಚ್ಚಿನ ಹಣದ ಬೇಡಿಕೆ ಇಡುತ್ತಿದ್ದಾರೆ. ಕೊಡದಿದ್ದಲ್ಲಿ ಪ್ರಾಣ ಬೆದರಿಕೆಯನ್ನೂ ಹಾಕುತ್ತಿದ್ದಾರೆ ಎಂದು ತಿಳಿಸಿ ಆ ಬಳಿಕ ಪೋನ್ ಸಂಪರ್ಕಕ್ಕೂ ಸಿಗದೇ ನಾಪತ್ತೆಯಾಗಿರುವ ಘಟನೆ ನಡೆದಿದ್ದು, ಇದರಿಂದಾಗಿ ಮನೆಯವರು ಏನು ಮಾಡಬೇಕೆಂದು ತೋಚದೇ ಚಿಂತೆಗೀಡಾಗಿರುವ ಘಟನೆ ನಡೆದಿದೆ.
34 ನೆಕ್ಕಿಲಾಡಿಯ ಮುಹಮ್ಮದ್ ಝಬೈರ್ ಆರೀಸ್ ಎಂಬವರು ತನ್ನ ಸ್ನೇಹಿತನೊಂದಿಗೆ ಮುಂಬರುವ ಬಕ್ರೀದ್ ಹಬ್ಬಕ್ಕಾಗಿ ಆಡುಗಳನ್ನು ತರಲು ರಾಜಸ್ಥಾನಕ್ಕೆ ತೆರಳಿದ್ದರು. ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರ ತಂದೆ ಇಬ್ರಾಹೀಂ, ಮಗ ಹಾಗೂ ಆತನ ಸ್ನೇಹಿತ ಆಡುಗಳನ್ನು ತರಲೆಂದು ಕಳೆದ ಸೋಮವಾರ ರಾಜಸ್ಥಾನಕ್ಕೆ ತೆರಳಿದ್ದರು. ಮೊದಲು ಲಾರಿ ಬಾಡಿಗೆ ಎರಡು ಲಕ್ಷ ರೂ.ವನ್ನು ನೀಡುವುದು. ಆಡು ಇಲ್ಲಿ ತಲುಪಿದ ಬಳಿಕ ಉಳಿದ ಹಣವನ್ನು ನೀಡುವುದು ಎಂದು ಅಲ್ಲಿಯವನೊಂದಿಗೆ ಇವರಿಗೆ ಒಪ್ಪಂದ ಆಗಿತ್ತು. ಅಲ್ಲಿ ಹೋದ ಬಳಿಕ ಆತ 10 ಲಕ್ಷ ರೂ. ಕೊಡದಿದ್ದಲ್ಲಿ ಆಡುಗಳನ್ನು ಕೊಡಲು ಸಾಧ್ಯವಿಲ್ಲವೆಂದು ಹೇಳಿದ್ದಾನೆ. ಅದಕ್ಕಾಗಿ 10 ಲಕ್ಷ ರೂ.ವನ್ನು ಅವನಿಗೆ ತಲುಪಿಸಲು ತನ್ನ ಮಗ ನಮಗೆ ಫೋನ್ ಮಾಡಿ ಹೇಳಿದ್ದಾನೆ. ಅದರಂತೆ 10 ಲಕ್ಷ ರೂ.ವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಲಾಯಿತು. 10 ಲಕ್ಷ ರೂ. ತಲುಪಿದ ಕೂಡಲೇ ಆಡುಗಳನ್ನು ಲಾರಿಯಲ್ಲಿ ಲೋಡ್ ಮಾಡಲಾಗಿದೆ ಎಂದು ತನ್ನ ಮಗ ಫೋನ್ ಮಾಡಿ ತಿಳಿಸಿದ್ದು, ಲಾರಿಯಲ್ಲಿ ಆಡುಗಳನ್ನು ಲೋಡ್ ಮಾಡಿರುವ ಪೋಟೋವನ್ನು ಕಳುಹಿಸಿದ್ದ. ಆದರೆ ಬಳಿಕ ಫೋನ್ ಮಾಡಿದ ಆತ ಇಲ್ಲಿ ಇನ್ನು 20 ಲಕ್ಷ ರೂ. ಅಕೌಂಟ್‌ಗೆ ಹಾಕಿಸಲು ಬೇಡಿಕೆ ಇಡುತ್ತಿದ್ದಾರೆ. ಮಧ್ಯಾಹ್ನದೊಳಗೆ ಹಣ ಕೊಡದಿದ್ದರೆ ಆಡು ಇಲ್ಲ. ನಿಮ್ಮನ್ನು ಹೋಗಲು ಬಿಡುವುದಿಲ್ಲ ಎಂದು ಬೆದರಿಸುತ್ತಿದ್ದಾರೆ ಎಂದು ಫೋನ್ ಮಾಡಿ ತಿಳಿಸಿದ್ದ. ಬಳಿಕ ಆತನಿಗೆ ಸಂಪರ್ಕ ಮಾಡಲು ಯತ್ನಿಸಿದಾಗ ಆತನ ಫೋನ್ ಕರೆ ಸ್ವಿಚ್ ಆಫ್ ಆಗಿದೆ. ನನ್ನ ಪತ್ನಿ ಇಲ್ಲಿನ ಪೊಲೀಸ್ ಕಂಟ್ರೋಲ್ ರೂಂ ಅನ್ನು ಸಂಪರ್ಕಿಸಿದಾಗ ಅವರು ಅಲ್ಲಿನ ಪೊಲೀಸ್ ಕಂಟ್ರೋಲ್ ರೂಂನ ನಂಬರ್ ನೀಡಿದ್ದಾರೆ. ಅದಕ್ಕೆ ಫೋನ್ ಮಾಡಿ ವಿಚಾರ ತಿಳಿಸಿದಾಗ, ಅಲ್ಲಿನ ಪೊಲೀಸರು ಇವರು ಇರುವ ಲೊಕೇಶನ್ ಪತ್ತೆ ಮಾಡಿ ಅವರನ್ನೆಲ್ಲಾ ಪೊಲೀಸ್ ಠಾಣೆಗೆ ಕರೆ ತರಲಾಗಿದೆ ಎಂಬ ಮಾಹಿತಿ ಅಲ್ಲಿನ ಪೊಲೀಸ್ ಅಧಿಕಾರಿಯೊಬ್ಬರಿಂದ ಸಿಕ್ಕಿದೆ. ಆದರೆ ಮಗನ ಫೋನ್ ಸಂಪರ್ಕ ಸಿಕ್ಕಿಲ್ಲ. ಈಗ ಮತ್ತೆ ಆ ಪೊಲೀಸ್ ಅಧಿಕಾರಿಗೆ ಕರೆ ಮಾಡಿದರೆ, ಆತ ಸರಿಯಾಗಿ ಉತ್ತರ ನೀಡದೇ ತಪ್ಪಿಸಿಕೊಳ್ಳಲು ಯತ್ನಿಸಿ, ಕರೆ ಕಡಿತ ಮಾಡುತ್ತಾನೆ. ಅಲ್ಲಿ ಇವರಿಗೆ ಏನಾಗಿದೆ? ಅಲ್ಲಿಯವರೊಂದಿಗೆ ಪೊಲೀಸರೂ ಶಾಮೀಲಾಗಿದ್ದಾರಾ ಎಂಬುದು ತಿಳಿಯುತ್ತಿಲ್ಲ. ಒಟ್ಟಿನಲ್ಲಿ ನಮಗೇನು ಮಾಡಬೇಕು ಎಂದು ದಿಕ್ಕೇ ತೋಚುತ್ತಿಲ್ಲ ಎಂದು ಮನೆಯವರು ತಿಳಿಸಿದ್ದಾರೆ.