ಪುತ್ತೂರು: ಮಾಯಿದೆ ದೇವುಸ್ ಚರ್ಚ್ ವ್ಯಾಪ್ತಿಗೊಳಪಟ್ಟ ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿ(ಸಿ.ಎಲ್.ಸಿ) ವತಿಯಿಂದ ಸಂಘದ ಆಧ್ಯಾತ್ಮಿಕ ನಿರ್ದೇಶಕ ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್ ರವರ ಮಾರ್ಗದರ್ಶನದಲ್ಲಿ, ಸಿಎ ಆಲ್ವಿನ್ ರೊಡ್ರಿಗಸ್ ಮಂಗಳೂರು ಹಾಗೂ ಲ್ಯಾನ್ಸಿ ರೊಡ್ರಿಗಸ್ ಪುತ್ತೂರು ಸಹೋದರರ ಪ್ರಾಯೋಜಕತ್ವದಲ್ಲಿ ಸಂಸ್ಥೆಯ “ಎಜ್ಯುಕೇರ್” ಸಹಾಯನಿಧಿಯಡಿಯಲ್ಲಿ ಜೂ.24ರಂದು 8 ಶಾಲೆಗಳ 58 ಫಲಾನುಭವಿ ವಿದ್ಯಾರ್ಥಿಗಳಿಗೆ ಸುಮಾರು ರೂ.1.96 ಲಕ್ಷ ಹಣ ಶೈಕ್ಷಣಿಕ ಶುಲ್ಕ ಹಾಗೂ ನೋಟ್ ಬುಕ್ಸ್ ಗೆ ನೆರವಿನ ಹಸ್ತ ವಿತರಿಸಲಾಯಿತು.

ಮಾಯಿದೆ ದೇವುಸ್ ಹಿರಿಯ ಪ್ರಾಥಮಿಕ ಶಾಲೆ, ಸಂತ ವಿಕ್ಟರ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ, ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆ, ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ, ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆ, ಪಾಂಗ್ಲಾಯಿ ಬೆಥನಿ ಆಂಗ್ಲ ಮಾಧ್ಯಮ ಶಾಲೆ, ದರ್ಬೆ ಲಿಟ್ಲ್ ಫ್ಲವರ್ ಶಾಲೆ, ಕೊಂಬೆಟ್ಟು ಸರಕಾರಿ ಜ್ಯೂನಿಯರ್ ಪ್ರೌಢಶಾಲೆ ಇಲ್ಲಿನ ಪುತ್ತೂರು, ಮರೀಲು, ಬನ್ನೂರು ವ್ಯಾಪ್ತಿಯ ಕ್ರೈಸ್ತ ಫಲಾನುಭವಿ ವಿದ್ಯಾರ್ಥಿಗಳಿಗೆ ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿ ಅಧ್ಯಕ್ಷ ಡಾ|ಎಲ್ಯಾಸ್ ಪಿಂಟೊ, ಕಾರ್ಯದರ್ಶಿ ಹೆರಾಲ್ಡ್ ಡಿ’ಸೋಜ, ಕೋಶಾಧಿಕಾರಿ ಸಿಪ್ರಿಯಾನ್ ಮೊರಾಸ್, ನಿಕಟಪೂರ್ವ ಕಾರ್ಯದರ್ಶಿ ರುಡೋಲ್ಫ್ ಪಿಂಟೊರವರು ಆಯಾ ಶಾಲೆಗಳಿಗೆ ತೆರಳಿ ವಿದ್ಯಾರ್ಥಿ ವೇತನವನ್ನು ವಿತರಿಸಿದರು. ವಿದ್ಯಾರ್ಥಿ ವೇತನ ವಿತರಿಸಿದ ಸಂದರ್ಭದಲ್ಲಿ ಆಯಾ ಶಾಲೆಯ ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು.