ನೆಲ್ಯಾಡಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ : ಸ್ಕೂಟರ್ ಸಹಿತ ಬೆಲೆ ಬಾಳುವ ಸೊತ್ತುಗಳು ಬೆಂಕಿಗಾಹುತಿ

0

ನೆಲ್ಯಾಡಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಮನೆಗೆ ಬೆಂಕಿ ತಗುಲಿ ಸ್ಕೂಟರ್ ಸಹಿತ ಬೆಲೆ ಬಾಳುವ ಸೊತ್ತುಗಳು ಬೆಂಕಿಗಾಹುತಿಯಾಗಿರುವ ಘಟನೆ ನ.19ರಂದು ಮಧ್ಯಾಹ್ನ ನೆಲ್ಯಾಡಿ ಗ್ರಾಮದ ಕೊಪ್ಪ-ಮಾದೇರಿ ಎಂಬಲ್ಲಿ ನಡೆದಿದೆ.


ಕೊಪ್ಪ ಮಾದೇರಿ ನಿವಾಸಿ, ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕರಾಗಿರುವ ಜೋಸ್‌ಪ್ರಕಾಶ್‌ರವರ ಮನೆಯಲ್ಲಿ ಈ ಅವಘಡ ನಡೆದಿದೆ. ಜೋಸ್ ಪ್ರಕಾಶ್, ಅವರ ಪತ್ನಿ ಬೆಥನಿ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕಿಯಾಗಿರುವ ಅನುಪ್ರಕಾಶ್ ಹಾಗೂ ಇಬ್ಬರು ಮಕ್ಕಳು ಬೆಳಿಗ್ಗೆ ಮನೆಗೆ ಬೀಗ ಹಾಕಿ ಶಾಲೆಗೆ ಬಂದಿದ್ದು ಮಧ್ಯಾಹ್ನ 12 ಗಂಟೆ ವೇಳೆಗೆ ಸ್ಥಳೀಯರು ಜೋಸ್ ಪ್ರಕಾಶ್ ಅವರಿಗೆ ಕರೆ ಮಾಡಿ ಮನೆಗೆ ಬೆಂಕಿ ತಗುಲಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ವಾಷಿಂಗ್ ಮಿಷನ್‌ಗಾಗಿ ಮನೆಯ ಹಿಂಬದಿ ಗೋಡೆಗೆ ಸಂಪರ್ಕ ಕಲ್ಪಿಸಿದ್ದ ಪ್ಲಗ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಹೊತ್ತಿಕೊಂಡಿದೆ. ಘಟನೆಯಲ್ಲಿ ವಾಷಿಂಗ್‌ಮಿಷನ್, ಅಲ್ಲೇ ಪಕ್ಕದಲ್ಲಿದ್ದ ಆರು ತಿಂಗಳ ಹಿಂದೆಯಷ್ಟೇ ಹೊಸದಾಗಿ ಖರೀದಿಸಿದ್ದ ಜುಪಿಟರ್ ಸ್ಕೂಟರ್, ಮನೆಯ ಹಿಂಬದಿ ಸಿಮೆಂಟ್ ಶೀಟ್ ಹಾಕಿ ಮಾಡಿದ್ದ ಶೆಡ್ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಅಲ್ಲದೇ ಮನೆಯ ಬಾಗಿಲು, ಕಿಟಕಿ ಬಾಗಿಲು, ಕಿಟಕಿ ಗಾಜು ಸಹಿತ ಬೆಲೆ ಬಾಳುವ ಗೃಹೋಪಯೋಗಿ ಸಾಮಾಗ್ರಿಗಳು ಬೆಂಕಿಗಾಹುತಿಯಾಗಿವೆ. ಇದರಿಂದಾಗಿ ಮನೆಯವರಿಗೆ ಸುಮಾರು ರೂ.4 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಸ್ಥಳೀಯರ ಸಹಕಾರ;
ಘಟನೆ ಬಗ್ಗೆ ಮನೆಯವರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದರೂ ಸಂಪರ್ಕಕ್ಕೆ ಸಿಗಲಿಲ್ಲ. ಸ್ಥಳೀಯರೇ ನೀರು ಹಾಕಿ ಬೆಂಕಿ ನಂದಿಸಿದ್ದಾರೆ. ಆದರೆ ಆ ವೇಳೆಗಾಗಲೇ ಮನೆಯಲ್ಲಿನ ಬೆಲೆಬಾಳುವ ಸೊತ್ತುಗಳು ಸುಟ್ಟುಹೋಗಿವೆ. ಬೆಂಕಿ ನಂದಿಸಿದ ಬಳಿಕ ಸ್ಥಳೀಯರ ಸಹಕಾರದಿಂದ ಮನೆಯನ್ನು ಸ್ವಚ್ಛಗೊಳಿಸಲಾಗಿದೆ. ಘಟನಾ ಸ್ಥಳಕ್ಕೆ ನೆಲ್ಯಾಡಿ ಬೆಥನಿ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ರೆ.ಫಾ.ವರ್ಗಿಸ್ ಕೈಪನಡ್ಕ, ನೆಲ್ಯಾಡಿ ಅಲ್ಫೋನ್ಸಾ ಚರ್ಚ್‌ನ ಧರ್ಮಗುರು ರೆ.ಫಾ.ಶಾಜಿ ಮ್ಯಾಥ್ಯು, ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್, ಸಿಬ್ಬಂದಿ ಶಿವಪ್ರಸಾದ್, ನೆಲ್ಯಾಡಿ ಹೊರಠಾಣೆ ಹೆಡ್‌ಕಾನ್ಸ್‌ಸ್ಟೇಬಲ್ ಪ್ರವೀಣ್, ಗ್ರಾಮಸಹಾಯಕ ಚರಣ್ ಸೇರಿದಂತೆ ಹಲವು ಮಂದಿ ಭೇಟಿ ನೀಡಿದ್ದಾರೆ.

LEAVE A REPLY

Please enter your comment!
Please enter your name here