ಪುಣಚ: ವಿಟ್ಲ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಪರಿಯಾಲ್ತಡ್ಕ ಜಂಕ್ಷನ್’ನಲ್ಲಿ ಜನಜಾಗೃತಿ ಸಭೆ

0

ಪುಣಚ: ಬಿಜೆಪಿಯು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಸರಕಾರದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಜನರಿಗೆ ತಪ್ಪು ಮಾಹಿತಿ ನೀಡಿದ್ದು ನಿಜಾಂಶವನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ವಿಟ್ಲ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಪುಣಚ ವಲಯ ಕಾಂಗ್ರೆಸ್ ಸಹಭಾಗಿತ್ವದಲ್ಲಿ ‘ಬಿಜೆಪಿಯ ಸುಳ್ಳಿಗೆ ಕಾಂಗ್ರೆಸ್ ಉತ್ತರ’ ಜನಜಾಗೃತಿ ಸಭೆಯ ಜೂ.29ರಂದು ಪುಣಚ ಪರಿಯಾಲ್ತಡ್ಕ ಜಂಕ್ಷನ್ ನಲ್ಲಿ ನಡೆಯಿತು.


ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಬಿಜೆಪಿಯವರು ಕಳೆದ ಐದು ವರ್ಷದಲ್ಲಿ ಅಧಿಕಾರದಲ್ಲಿರುವಾಗ ಯಾರಿಗಾದರೂ ನಿವೇಶನ ಕೊಟ್ಟಿದ್ದಾರೆಯೇ, ಅಕ್ರಮ-ಸಕ್ರಮ, 94ಸಿ, ವಿದ್ಯುತ್, ಕುಡಿಯುವ ನೀರು ಸೌಲಭ್ಯ ನೀಡಿದ್ದಾರಾ? ಎಂದು ಪ್ರಶ್ನಿಸಿದರು. ಆದರೆ ನಾವು ಎರಡು ವರ್ಷದಲ್ಲಿ 12 ಗ್ರಾ. ಪಂ.ಗಳಲ್ಲಿ 300 ಎಕ್ರೆ ಜಾಗವನ್ನು ಬಡವರಿಗೆ ಮನೆ ನಿವೇಶನಕ್ಕಾಗಿ ಕಾದಿರಿಸಿದ್ದೇವೆ. ನಾನು ಶಾಸಕನಾಗಿ ಆಯ್ಕೆಯಾಗುವ ಸಮಯದಲ್ಲಿ ಸುಮಾರು 800 ಮನೆಗಳಿಗೆ ಕರೆಂಟು ಇಲ್ಲದಿತ್ತು. ನಾನು ಒಂದು ಲೆಟರ್ ನೀಡುವ ಮೂಲಕ ಸುಮಾರು 850 ಮನೆಗಳಿಗೆ ಕರೆಂಟು ನೀಡಿದ್ದೇವೆ. ನಮ್ಮ ಅಭಿವೃದ್ಧಿಯನ್ನು ನೋಡಿ ಅವರಿಗೆ ಸಹಿಸಲಾಗುತ್ತಿಲ್ಲ. ಇನ್ನು ಮುಂದಿನ ದಿನಗಳಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ನಿವೇಶನ, ಕರೆಂಟು, ನೀರು ಇಲ್ಲದೆ ಯಾರೂ ಇರಬಾರದು ಎಂಬುದೇ ನಮ್ಮ ಧ್ಯೇಯ. ಬಿಜೆಪಿಯವರು ನಾವು ಮಾಡುವ ಅಭಿವೃದ್ಧಿ, ಬಡವರ ಸೇವೆಯನ್ನು ನೋಡಿ ಕಲಿಯಬೇಕು. ಅಭಿವೃದ್ಧಿಯಲ್ಲಿ ಸಾಗುವುದೇ ನಮ್ಮ ಗುರಿ. ನಿಮ್ಮ ಸುಳ್ಳಿನ ಮಾತನ್ನು ಇನ್ನಾದರೂ ನಿಲ್ಲಿಸಿ ನಮ್ಮೊಂದಿಗೆ ಅಭಿವೃದ್ಧಿಗೆ ನೀಡುವಂತೆ ತಿಳಿಸಿದರು.


ಸಭಾಧ್ಯಕ್ಷತೆ ವಹಿಸಿದ್ದ ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಪಿ.ಸಿ.ಸಿ ಜಿಲ್ಲಾ ವಕ್ತಾರರಾದ ಎಂ ಜಿ ಹೆಗ್ಡೆ, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್ ಮಹಮ್ಮದ್, ಜಿಲ್ಲಾ ಪಂಚಾಯತ್ ರಾಜ್ ಘಟಕದ ಜಿಲ್ಲಾಧ್ಯಕ್ಷ ಸುಭಾಷ್ ಚಂದ್ರ ಶೆಟ್ಟಿ ಕೊಲ್ನಾಡು ಸಂದರ್ಭೋಚಿತವಾಗಿ ಮಾತನಾಡಿದರು.

ದ.ಕ. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಪ್ರವೀಣ್ ಚಂದ್ರ ಅಳ್ವ, ಮುರಳೀಧರ ರೈ ಮಠಂತಬೆಟ್ಟು, ದ.ಕ. ಜಿಲ್ಲಾ ಕಾಂಗ್ರೆಸ್ ಸದಸ್ಯ ರಮಾನಾಥ ವಿಟ್ಲ, ವಿಟ್ಲ ಮೆಸ್ಕಾ ಸಲಹಾ ಸಮಿತಿ ಸದಸ್ಯ ಕರೀಂ ಕುದ್ದುಪದವು, ಬ್ಲಾಕ್ ಎಸ್.ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ, ಪುಣಚ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಸಂತೋಷ್ ರೈ ಬೈಲುಗುತ್ತು, ಕ್ಸೇವಿಯರ್ ಡಿ.ಸೋಜಾ, ಕಾರ್ಯದರ್ಶಿ ಸಿರಾಜ್ ಮಣಿಲಾ, ಗ್ರಾ.ಪಂಚಾಯತ್ ಸದಸ್ಯರಾದ ಲಲಿತ, ಗಿರಿಜಾ ಸೇರಿದಂತೆ ಪಕ್ಷದ ಪ್ರಮುಖರು, ಬೂತ್ ಅಧ್ಯಕ್ಷರು, ವಲಯ ಕಾಂಗ್ರೆಸ್ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.‌ವಿಟ್ಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಬಾಲಕೃಷ್ಣ ಪೂಜಾರಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here