ಉಪವಿಭಾಗದ ಮರಳು ಸಮಿತಿ ಸಭೆ

0

ಪುತ್ತೂರು: ಉಪ್ಪಿನಂಗಡಿ ನೇತ್ರಾವತಿ-ಕುಮಾರಧಾರಾ ಮರಳು ಬ್ಲಾಕ್‌ನ ವಿಚಾರದಲ್ಲಿ ಜಂಟಿ ಸಮೀಕ್ಷೆ ನಡೆಸಿದ ಇಲಾಖೆಗಳು ಸಮರ್ಪಕವಾಗಿ ಕೆಲಸ ಮಾಡದೇ ಇರುವ ಕಾರಣ ಇದನ್ನು ಮಂಜೂರು ಮಾಡದೇ, ಅಧಿಕಾರಿಗಳಿಗೆ ಕಡತ ಸರಿ ಮಾಡಿಕೊಂಡು ಬರಲು 2 ದಿನಗಳ ಸಮಯಾವಕಾಶವನ್ನು ನೀಡಲಾದ ಘಟನೆ ಪುತ್ತೂರು ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಮರಳು ಸಮಿತಿ ಸಭೆಯಲ್ಲಿ ನಡೆದಿದೆ.


ಪುತ್ತೂರು ಸಹಾಯಕ ಆಯುಕ್ತರ ನ್ಯಾಯಾಲಯ ಸಭಾಂಗಣದಲ್ಲಿ ಪುತ್ತೂರು ಉಪ ವಿಭಾಗ ಮಟ್ಟದ (ಬೆಳ್ತಂಗಡಿ, ಸುಳ್ಯ, ಕಡಬ, ಪುತ್ತೂರು)ಮರಳು ಸಮಿತಿ ಸಭೆ ಸಹಾಯಕ ಕಮಿಷನರ್ ಸ್ಟೆಲ್ಲಾ ವರ್ಗೀಸ್ ಅವರ ಅಧ್ಯಕ್ಷತೆಯಲ್ಲಿ ಜು.1ರಂದು ನಡೆಯಿತು.ಅಧಿಕಾರಿಗಳು ಸರಿಯಾಗಿ ಕೆಲಸ ಕಾರ್ಯ ಮಾಡಲಿಲ್ಲವೆಂದು ಎಸಿಯವರು ಅವರನ್ನು ತರಾಟೆಗೆತ್ತಿಕೊಂಡರು.ಸುಳ್ಯ ತಾಲೂಕಿನಲ್ಲಿ ಕೇವಲ ಮರಳು ಬ್ಲಾಕ್ ಇದ್ದರೂ ಅರಣ್ಯ ಇಲಾಖೆಯ ಆಕ್ಷೇಪದ ಹಿನ್ನೆಲೆಯಲ್ಲಿ ಬಾಕಿ ಇರಿಸಲಾಯಿತು.ಕಡಬ ತಾಲೂಕಿನಲ್ಲಿ ಗುರುತಿಸಲಾದ 4 ಬ್ಲಾಕ್‌ಗಳ ಪೈಕಿ ಮೂರನ್ನು ಮಂಜೂರು ಮಾಡಿ ಜಿಲ್ಲಾ ಮಟ್ಟದ ಮರಳು ಸಮಿತಿಗೆ ಕಳಿಸಿಕೊಡಲಾಯಿತು.ಬೆಳ್ತಂಗಡಿ ತಾಲೂಕಿನ 5 ಬ್ಲಾಕ್‌ಗಳ ಪೈಕಿ ನಾಲ್ಕನ್ನು ಅಂಗೀಕರಿಸಿ ಜಿಲ್ಲಾಮಟ್ಟಕ್ಕೆ ಕಳುಹಿಸಲಾಯಿತು.ಅಂಗೀಕರಿಸಲ್ಪಟ್ಟ ಬ್ಲಾಕ್‌ಗಳು ಜಿಲ್ಲಾ ಸಮಿತಿಯಿಂದ ಮರಳು ಟೆಂಡರ್ ಕರೆಯಲು ಅರ್ಹತೆ ಪಡೆದುಕೊಂಡಿವೆ.ಬಾಕಿ ಇರುವ ಬ್ಲಾಕ್‌ಗಳಿಗೆ ಸಂಬಂಧಿಸಿ ಜಂಟಿ ಸಮೀಕ್ಷೆಗೆ ಸಂಬಂಧಪಟ್ಟ ಇಲಾಖೆಗಳು ಉಳಿಕೆ ಕೆಲಸಗಳನ್ನು ಮುಗಿಸಿದ ಬಳಿಕ ಮತ್ತೊಮ್ಮೆ ಮರಳು ಸಮಿತಿ ಸಭೆಗೆ ಮಂಡಿಸಲಾಗುತ್ತದೆ.ಸುಳ್ಯದ ಒಂದು ಬ್ಲಾಕ್‌ಗೆ ಅರಣ್ಯ ಇಲಾಖೆಯ ಅಡ್ಡಿಯಿದ್ದು, ಇದನ್ನು ಮುಂದುವರಿಸಲಾಗುವುದಿಲ್ಲ. ಪುತ್ತೂರು ವ್ಯಾಪ್ತಿಯಲ್ಲಿ ಒಂದೇ ಸ್ಥಳ ಗುರುತಿಸಲಾಗಿದ್ದು, ದಾಖಲೆಯಲ್ಲಿರುವ ಸಮಸ್ಯೆಯನ್ನು ಎರಡು ದಿನದಲ್ಲಿ ಸರಿಪಡಿಸಿ ಜಿಲ್ಲಾಡಳಿತಕ್ಕೆ ಕಳುಹಿಸಲಾಗುವುದು.ಕಡಬದ ನಾಲ್ಕು ಕಡತದಲ್ಲಿ ಒಂದರಲ್ಲಿ ಸಮಸ್ಯೆಯಿದ್ದು, ಮೂರು ಕಡತ ಜಿಲ್ಲಾ ಸಮಿತಿಗೆ ಸಲ್ಲಿಕೆ ಮಾಡಲಾಗುವುದು.ಬೆಳ್ತಂಗಡಿಯ ಐದು ಕಡತದಲ್ಲಿ ಒಂದು ಸಮಸ್ಯೆಯಿದ್ದು, ನಾಲ್ಕು ಕಡತವನ್ನು ಜಿಲ್ಲಾಡಳಿತಕ್ಕೆ ಕಳುಹಿಸಲಾಗುವುದು. ಮರಳಿನ ಅಭಾವ ಇದೆ ಎಂಬ ಕಾರಣಕ್ಕೆ ಹಿಂದೆ ಗುರುತಿಸಿದ ಸಂಪಾಜೆ, ಚಿಬಿದ್ರಿ ಕಡತವನ್ನು ಪುಟಪ್ ಮಾಡಿ ಮುಂದಿನ ಸಭೆಯಲ್ಲಿ ನೀಡಬೇಕು ಎಂದರು.


ನೂಜಿಬಾಳ್ತಿಲ ಗೊಂದಲಕ್ಕೆ ಜಂಟಿ ಸಮೀಕ್ಷೆ:
ನೂಜಿಬಾಳ್ತಿಲ ಗಣಿಗಾರಿಕೆಗೆ ನಾನು ಶಿಫಾರಸು ಕೊಡಲಾಗದು.ಅದು ಸುಬ್ರಹ್ಮಣ್ಯ ವಲಯಕ್ಕೆ ಬರುತ್ತದೆ ಎಂದು ಪಂಜ ಆರ್‌ಎಫ್‌ಓ ಸಂಧ್ಯಾಸಚಿನ್ ಹೇಳಿದರು.ಖಾಸಗಿ ಮರಳುದಾರರ ಪ್ರತಿನಿಧಿ ದಿನೇಶ್ ಮೆದು ಮಾತನಾಡಿ, ಅಲ್ಲಿನ ಹೊಳೆ ಸರಕಾರಿ.ಒಂದು ಭಾಗ ಪಂಜ ವಲಯ, ಇನ್ನೊಂದು ಭಾಗ ಸುಬ್ರಹ್ಮಣ್ಯ ವಲಯಕ್ಕೆ ಬರುವ ಕಾರಣ ಇಬ್ಬರು ಆರ್‌ಎಫ್‌ಓಗಳು ಜಂಟಿ ಸಮೀಕ್ಷೆ ನಡೆಸುವುದು ಉತ್ತಮ ಎಂದರು.ಇದಕ್ಕೆ ಸಮ್ಮತಿಸಿದ ಸಹಾಯಕ ಆಯುಕ್ತರು ಸಮೀಕ್ಷೆ ಮಾಡಲು ಸೂಚಿಸಿದರು.ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹದೇಶ, ವಸುಧಾ, ಪುತ್ತೂರು ತಹಶೀಲ್ದಾರ್ ನಾಗರಾಜ್, ಕಡಬ ತಹಸೀಲ್ದಾರ್ ಪ್ರಭಾಕರ ಕಜುರೆ,ಬೆಳ್ತಂಗಡಿ ತಹಸಿಲ್ದಾರ್ ಪೃಥ್ವಿ ಸಾನಿಕಮ್, ಗ್ರೇಡ್-2 ತಹಸೀಲ್ದಾರ್ ಮಂಜುನಾಥ್, ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿ ನವೀನ್ ಭಂಡಾರಿ, ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕಾಽಕಾರಿ ರಾಜಣ್ಣ, ಪುತ್ತೂರು ವಲಯಾರಣ್ಯಾಧಿಕಾರಿ ಕಿರಣ್ ಬಿ.ಎಂ.,ಸಂಧ್ಯಾ, ಮಂಜುನಾಥ ಎನ್., ತ್ಯಾಗರಾಜ್ ಎನ್., ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಸ್ತಾ ಶೆಟ್ಟಿ, ಪೊಲೀಸ್ ನಿರೀಕ್ಷಕ ಜಾನ್ಸನ್ ಡಿ’ಸೋಜ ಮತ್ತಿತರ ಉಪವಿಭಾಗ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ತಳ ಹಂತದಲ್ಲಿ ಏನು ಮಾಡುತ್ತಿದ್ದೀರಿ?
ಗುರುತಿಸುವ ಜಾಗ ಒಂದು, ನಕ್ಷೆಯಲ್ಲಿ ಮತ್ತೊಂದು, ವರದಿಯಲ್ಲಿ ಒಂದು ಸರ್ವೆ ನಂಬರ್ ಆಗಿದ್ದನ್ನು ಸಹಿ ಮಾಡುವಾಗ ಗಮನಿಸುತ್ತಿಲ್ಲವಾ?ಕಡತಗಳಲ್ಲಿ ಸಮಸ್ಯೆಗಳಿರುವುದನ್ನು ಯಾರೂ ಗಮನಿಸುವುದಿಲ್ಲವಾ? ಸಮಿತಿಯವರೆಗೆ ಯಾಕೆ ಈ ಸಮಸ್ಯೆಯ ಕಡತಗಳನ್ನು ತರುವುದು?ತಪ್ಪುಗಳನ್ನು ನನ್ನ ಹಂತದ ವರೆಗೆ ತರುವುದಾದರೆ ತಳ ಹಂತದಲ್ಲಿ ಏನು ಮಾಡುತ್ತಿದ್ದೀರಿ? ಸಂಬಂಧಪಟ್ಟ ಅಽಕಾರಿಗಳು ಸರಿಯಾಗಿ ಜವಾಬ್ದಾರಿಯನ್ನು ತೆಗೆದುಕೊಳ್ಳದಿದ್ದರೆ, ಕಡತಗಳನ್ನು ವಿಲೇವಾರಿ ಮಾಡಲು ಸಾಧ್ಯವಿಲ್ಲ ಎಂದು ಗರಂ ಗೊಂಡ ಸಹಾಯಕ ಆಯುಕ್ತರು ಸುಳ್ಯ ತಹಸೀಲ್ದಾರ್‌ಗೆ ನೋಟೀಸ್ ನೀಡಲು ಆದೇಶಿಸಿದರು. ಪುತ್ತೂರು ತಾಲೂಕಿನ ಉಪ್ಪಿನಂಗಡಿ ಮರಳು ಬ್ಲಾಕ್‌ಗೆ ಸಂಬಂಧಪಟ್ಟ ಜಂಟಿ ಸಮೀಕ್ಷೆ ವರದಿಯಲ್ಲಿ ತಪ್ಪಿದೆ.ಸರ್ವೆ ನಂಬರ್ ತಪ್ಪಾಗಿದೆ,ಯಾವ ಶ್ರೇಣಿಯ ಬ್ಲಾಕ್ ಎಂದು ಉಲ್ಲೇಖಿಸಿಲ್ಲ.ಮರಳು ಪ್ರಮಾಣ ಉಲ್ಲೇಖದಲ್ಲೂ ಸ್ಪಷ್ಟತೆಯಿಲ್ಲ.ಯಾವುದಕ್ಕೂ ಸರಿಯಾದ ವಿವರಣೆ ದಾಖಲಿಸಿಲ್ಲ.ಎಲ್ಲವನ್ನೂ ಸರಿಯಾಗಿ ವಿವರಿಸಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಽಕಾರಿ ೨ ದಿನದಲ್ಲಿ ವರದಿ ಕೊಡಬೇಕೆಂದು ಎ.ಸಿ.ಆದೇಶಿಸಿದರು.ತಳಮಟ್ಟದಲ್ಲಿ ಅಧ್ಯಯನ ಮಾಡದೆ, ಬ್ಲಾಕ್ ವೀಕ್ಷಣೆ ಮಾಡದೆ ವರದಿ ಬರೆದ ಇಲಾಖೆಗಳನ್ನು ತರಾಟೆಗತ್ತಿಕೊಂಡರು.

LEAVE A REPLY

Please enter your comment!
Please enter your name here