ಸಂತ ವಿಕ್ಟರ್‌ ಬಾಲಿಕಾ ಪ್ರೌಢ ಶಾಲಾ ರಕ್ಷಕ-ಶಿಕ್ಷಕ ಸಂಘದ ಮಹಾಸಭೆ

0

ವಿದ್ಯಾರ್ಜನೆ ಗದ್ದೆಯಲ್ಲಿ ಬೆಳೆಯುವ ಭತ್ತದಂತೆ ಇರಬೇಕು- ವಂ. ಅರುಣ್ ವಿಲ್ಸನ್ ಲೋಬೊ

ಮಕ್ಕಳ ಮೇಲಿನ ಅತಿಯಾದ ಪ್ರೀತಿ ಅನಾಹುತಕ್ಕೆ ಕಾರಣವಾಗುತ್ತದೆ-ವಂ. ಲಾರೆನ್ಸ್ ಮಸ್ಕರೇನ್ಹಸ್‌

ಪುತ್ತೂರು: ಸಂತ ವಿಕ್ಟರ್‌ ಬಾಲಿಕಾ ಪ್ರೌಢ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಮಹಾಸಭೆ ಮಾಯ್‌ ದೆ ದೇವುಸ್‌ ಚರ್ಚ್‌ ಸಭಾಂಗಣದಲ್ಲಿ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾದ ಮಂಗಳೂರು ಪದುವಾ ಕಾಲೇಜಿನ ಪ್ರಾಂಶುಪಾಲರಾದ ವಂ. ಅರುಣ್ ವಿಲ್ಸನ್ ಲೋಬೊ ಮಾತನಾಡಿ ಮಕ್ಕಳು ಸಂತೋಷವಾಗಿರಬೇಕು, ಆ ಸಂತೋಷ ವಿದ್ಯಾರ್ಜನಗೆ ಪೂರಕವಾಗಬೇಕು. ವಿದ್ಯಾರ್ಜನೆ ಗೋಣಿಯಲ್ಲಿ ತುಂಬುವ ಭತ್ತವಾಗಬಾರದು, ಗದ್ದೆಯಲ್ಲಿ ಬೆಳೆಯುವ ಭತ್ತವಾಗಬೇಕು. ಇದಕ್ಕೆಕಾರಣ ಶಿಕ್ಷಕರು, ಪೋಷಕರು ಹಾಗೂ ಮಕ್ಕಳು. ಶಾಲೆಯಲ್ಲಿ ಕುಟುಂಬದ ವಾತಾವರಣವಿದ್ದಾಗ ಮಗು ಖುಷಿಯಿಂದ ಕಲಿಯುತ್ತದೆ. ವಿದ್ಯಾರ್ಥಿನಿಯರಲ್ಲಿ ಶಿಸ್ತು ಇರಬೇಕು, ಶಿಸ್ತು ಇಲ್ಲದಿದ್ದರೆ ಏನು ಸಾಧಿಸಲು ಸಾಧ್ಯವಿಲ್ಲ. ಶಿಸ್ತನ್ನು ಕಲಿಸಲು ಶಿಕ್ಷಕರೇ ಆಗಬೇಕೆಂದುದಿಲ್ಲ. ಅದನ್ನು ತಂದೆ ತಾಯಿ ಕಲಿಸಬೇಕು.ತಂದೆ ತಾಯಿ ಗಾಳಿಪಟದ ದಾರದ ಹಾಗೇ ಇರಬೇಕು, ಮಗು ಗಾಳಿಪಟದಂತೆ ಹಾರಬೇಕು. ಮಗು ದಾರಿ ತಪ್ಪಿದಾಗ ಮಗುವನ್ನು ಸರಿದಾರಿಗೆ ತರಬೇಕು. ಮನೆ ಶಾಲೆಯಾಗಲಿ, ಶಾಲೆ ಮನೆಯಾಗಲಿ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮಾಯ್‌ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂ. ಲಾರೆನ್ಸ್ ಮಸ್ಕರೇನ್ಹಸ್‌ರವರು ಮಾತನಾಡಿ ಪ್ರೌಢಾವಸ್ಥೆ ಹಂತದಲ್ಲಿ ವಿದ್ಯಾರ್ಥಿನಿಯರು ಮಾನಸಿಕ, ದೈಹಿಕ ಹಾಗೂ ಭಾವನಾತ್ಮಕವಾಗಿ ಬದಲಾಗುತ್ತಿರುತ್ತಾರೆ. ಈ ಸಮಯದಲ್ಲಿ ತಂದೆ ತಾಯಿಯರು ಅವರಿಗೆ ಅಧಾರವಾಗಿದ್ದು ಅವರನ್ನು ಸರಿದಾರಿಗೆ ತರುವಲ್ಲಿ ಶ್ರಮಿಸಬೇಕು. ಮಕ್ಕಳು ನಿಮ್ಮ ಜೀವನದ ಭರವಸೆ. ನಿಮ್ಮ ಮಕ್ಕಳನ್ನು ಪ್ರೀತಿಸಿ, ಆದರೆ ಅತಿಯಾದ ಪ್ರೀತಿ ಅನಾಹುತಕ್ಕೆ ಕಾರಣವಾಗುತ್ತದೆ ಎಂಬುದನ್ನು ಮರೆಯದಿರಿ. ಮಕ್ಕಳ ಮನಸನ್ನು ಕೂಡ ಒಳ್ಳೆಯ ವಿಚಾರಗಳಿಂದ ಪೋಷಿಸಬೇಕು ಎಂದು ಹೇಳಿದ ಅವರು ಕಳೆದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ ತರಲು ಶ್ರಮಿಸಿದ ಮುಖ್ಯ ಶಿಕ್ಷಕರಿಗೆ ಹಾಗೂ ಎಲ್ಲಾ ಶಿಕ್ಷಕರಿಗೂ ಅಭಿನಂದಿಸಿದರು.

ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ಪಿ. ಎಂ ಅಶ್ರಫ್‌ ಮಾತನಾಡಿ ಈ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟ ಶಾಲಾ ಆಡಳಿತ ಮಂಡಳಿಗೆ ವಂದಿಸಿ ಶಾಲೆಯಲ್ಲಿ ವಿದ್ಯಾರ್ಥಿ ಸ್ನೇಹಿ ಕಾರ್ಯಕ್ರಮಗಳನ್ನು ಕೈಗೊಂಡು ನಮ್ಮ ಮಕ್ಕಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುವ ಮುಖ್ಯ ಶಿಕ್ಷಕರನ್ನು ಹಾಗೂ ಶಿಕ್ಷಕರನ್ನು ಅಭಿನಂದಿಸಿದರು.

ಶಾಲಾ ಮುಖ್ಯೋಪಾಧ್ಯಾಯಿನಿ ರೋಸಲಿನ್ ಲೋಬೊ ಸ್ವಾಗತಿಸಿ ಮಾತನಾಡಿ ತಂತ್ರಜ್ಞಾನ ಮುಂದುವರಿದಂತೆ ಮಕ್ಕಳಲ್ಲಿ ಕೆಡುಕುಗಳು ಹೆಚ್ಚಾಗುತ್ತದೆ. ಆ ಕೆಡುಕುಗಳಿಂದ ಮಕ್ಕಳನ್ನು ರಕ್ಷಿಸಿ ಅವರಲ್ಲಿ ಮಾನವೀಯತೆಯ ಗುಣಗಳನ್ನು ಬೆಳೆಸಿ, ಸಮಾಜದಲ್ಲಿ ಪ್ರಜ್ಞಾವಂತ ನಾಗರಿಕರಾಗಿ ಬದುಕಲು ಕಲಿಸಬೇಕು. ಮಕ್ಕಳ ಮನಸ್ಸಿನಲ್ಲಿ ದ್ವೇಷ ಬಿತ್ತದೆ, ಪ್ರೀತಿಯ ಭಾವನೆಯನ್ನು ಬಿತ್ತಬೇಕು ಎಂದು ತಿಳಿಸಿ ವ್ಯಾಪಕ ಮತ್ತು ನಿರಂತರ ಮೌಲ್ಯಮಾಪನ, ಶಾಲಾ ನಿಯಮಾವಳಿ, ಪೋಷಕರ ಜವಬ್ದಾರಿಗಳು ಹಾಗೂ ಹಾಜರಾತಿಯ ಬಗ್ಗೆ ಮಾಹಿತಿ ನೀಡಿದರು.

ಸದಸ್ಯರ ಆಯ್ಕೆ:
2025-26ನೇ ಸಾಲಿನ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಮತ್ತು ತಾಯಂದಿರ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡಲಾಯಿತು. ನೂತನ ಉಪಾಧ್ಯಾಕ್ಷೆಯಾಗಿ ಶ್ವೇತಾ, ಜೊತೆ ಕಾರ‍್ಯದರ್ಶಿಯಾಗಿ ಸುಜಾತ ಅವಿರೋಧವಾಗಿ ಆಯ್ಕೆಯಾದರು.

ವೇದಿಕೆಯಲ್ಲಿ ಚರ್ಚ್‌ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆರಾಲ್ಡ್‌ ಡಿಕೋಸ್ಟ ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ಭವ್ಯ ೨೦೨೪-೨೫ನೇ ಸಾಲಿನ ರಕ್ಷಕ-ಶಿಕ್ಷಕ ಸಂಘದ ಮಹಾಸಭೆ ಹಾಗೂ ೨೦೨೫-೨೬ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ವರದಿ ವಾಚಿಸಿದರು. ಶಿಕ್ಷಕಿ ಹರಿಣಾಕ್ಷಿ ಜಮೆ ಖರ್ಚಿನ ವಿವರ ಮಂಡಿಸಿದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಿಕ್ಷಕಿ ರೂಪ ಡಿ’ಕೋಸ್ಟ ಕಾರ‍್ಯಕ್ರಮ ನಿರೂಪಿಸಿದರು. ಶಿಕ್ಷಕಿ ರೀನಾ ರೆಬೆಲ್ಲೊ ವಂದಿಸಿದರು. ಶಿಕ್ಷಕರು ಸಹಕರಿಸಿದರು.

ಶೇ. 100 ಫಲಿತಾಂಶ ಕ್ಕಾಗಿ ನಗದು ಪುರಸ್ಕಾರ, ಸ್ಮರಣಿಕೆ
2024-25ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶಾಲೆಗೆ ಶೇ.100 ಫಲಿತಾಂಶ ಲಭಿಸಿದ ಪ್ರಯುಕ್ತ ಮಂಗಳೂರು ಉಪನಿರ್ದೇಶಕರ ಕಛೇರಿಯಿಂದ ನೀಡಿದ 25,೦೦೦/- ನಗದು ಪುರಸ್ಕಾರವನ್ನು ಹಾಗೂ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರ ಹಾಗೂ ಪ.ಪೂ ಕಾಲೇಜು ಪ್ರಾಂಶುಪಾಲರ ಸಂಘ ಮಂಗಳೂರು ದ.ಕ ಇವರು ನೀಡಿದ ಸ್ಮರಣಿಕೆಯನ್ನು ಶಾಲಾ ಸಂಚಾಲಕರಾದ ವಂ. ಲಾರೆನ್ಸ್ ಮಸ್ಕರೇನ್ಹಸ್‌ರವರು ಮುಖ್ಯಶಿಕ್ಷಕರಿಗೆ ನೀಡಿ ಗೌರವಿಸಿ ಆರ್ಶೀವದಿಸಿದರು.

LEAVE A REPLY

Please enter your comment!
Please enter your name here