ಕೂಡಲೇ ಆರೋಪಿಯನ್ನು ಬಂಧಿಸಿ ಇಲ್ಲದಿದ್ದರೆ ಪ್ರತಿಭಟನೆ ಅನಿವಾರ್ಯ-ಪತ್ರಿಕಾಗೋಷ್ಠಿಯಲ್ಲಿ ಗೋಪಾಲ್ ನಾಯ್ಕ್
ಕಡಬ: ಪುತ್ತೂರಿನಲ್ಲಿ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ನಾಪತ್ತೆಯಾಗಿರುವ ಆರೋಪಿಯನ್ನು ಕೂಡಲೇ ಬಂಧಿಸಿ, ಸಂತ್ರಸ್ಥ ಯುವತಿಗೆ ಸೂಕ್ತ ನ್ಯಾಯ ಒದಗಿಸಿಕೊಡಬೇಕು ಇಲ್ಲದಿದ್ದಲ್ಲಿ ಪ್ರತಿಭಟನೆ ಅನಿವಾರ್ಯ ಎಂದು ರಾಮಸೇನಾ ಪುತ್ತೂರು ಜಿಲ್ಲಾಧ್ಯಕ್ಷ ಗೋಪಾಲ್ ನಾಯ್ಕ್ ಮೇಲಿನ ಮನೆ ಅವರು ಹೇಳಿದ್ದಾರೆ.
ಅವರು ಜು.3 ರಂದು ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪುತ್ತೂರು ಪಿ.ಜಿ. ಜಗನ್ನಿವಾಸ ರಾವ್ ಅವರ ಮಗ ಯುವತಿಗೆ ವಂಚನೆ ನಡೆಸಿದ್ದು, ಇದನ್ನು ಅತ್ಯಾಚಾರ ಪ್ರಕರಣವೆಂದೇ ಹೇಳಬೇಕಾಗುತ್ತದೆ ಯಾಕೆಂದರೆ ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ತನ್ನ ಮನೆಗೆ ಕರೆದೊಯ್ದು ಅತ್ಯಾಚಾರ ನಡೆಸಿದ ಪರಿಣಾಮ ಆಕೆ ಗರ್ಭಿಣಿಯಾಗಿ ಇದೀಗ ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ ಈ ಘಟನೆ ತಿಳಿದ ಕೂಡಲೇ ಅವಳನ್ನು ಮದುವೆಯಾಗುತ್ತೇನೆ ಎಂದೂ ಮಾತು ಕೊಟ್ಟು, ಇದೀಗ ಮದುವೆ ಆಗುವುದಿಲ್ಲ ಎಂದು ಹೇಳಿ ಆತ ನಾಪತ್ತೆಯಾಗಿರುತ್ತಾನೆ. ಈ ಘಟನೆ ನಿಜಕ್ಕೂ ನಾಚಿಗೇಡಿನ ಸಂಗತಿ ಒಂದು ಕಡೆಯಾದರೆ, ಇಂತಹ ಘಟನೆ ನಡೆದರೂ ಮಾತನಾಡಬೇಕಾದವರು ಮೌನವಹಿಸಿರುವುದು ಮಾತ್ರ ಸಂಶಯಕ್ಕೆ ಕಾರಣವಾಗಿದೆ.
ರಾಮಸೇನೆ ಸಂಘಟನೆ ಈ ಘಟನೆಯನ್ನು ಉಗ್ರವಾಗಿ ಖಂಡಿಸುವುದು ಮಾತ್ರವಲ್ಲದೆ ಕೂಡಲೇ ಆರೋಪಿಯನ್ನು ಬಂಧಿಸಿ ಕಾನೂನು ರೀತಿಯಲ್ಲಿ ತಕ್ಕ ಶಿಕ್ಷೆ ನೀಡಬೇಕು ಎಂದು ಆಗ್ರಹ ಮಾಡುತ್ತಿದ್ದೇವೆ. ಹಿಂದೂ ಸಮಾಜದ ಹೆಣ್ಣು ಮಗಳಿಗೆ ಪ್ರತಿಷ್ಠಿತ ವ್ಯಕ್ತಿಯೆಂದು ಹೇಳಿಕೊಳ್ಳುತ್ತಿದ್ದ ಪಿ.ಜಿ. ಜಗನ್ನಿವಾಸ ರಾವ್ ಅವರ ಪುತ್ರ ಕೃಷ್ಣ ಜೆ ರಾವ್ ಅವರಿಂದ ಅನ್ಯಾಯವಾಗಿದೆ. ಈ ಬಗ್ಗೆ ಹಿಂದೂ ಸಮಾಜದ ಸಂಘಟನೆಗಳು ಮುಖಂಡರು ಯಾಕೆ ವಿರೋಧಿಸುತ್ತಿಲ್ಲ, ಒಂದು ವೇಳೆ ಆ ಹೆಣ್ಣು ಮಗಳಿಗೆ ಇತರ ಧರ್ಮದವರಿಂದ ಅನ್ಯಾಯ ಆಗುತ್ತಿದ್ದರೆ ಸುಮ್ಮನೆ ಇರುತ್ತಿದ್ದರೆ. ಸಣ್ಣ ಸಣ್ಣ ವಿಷಯಕ್ಕೂ ಉಗ್ರ ಹೋರಾಟ ಮಾಡುವ ಮುಖಂಡರುಗಳು ಈಗ ಎಲ್ಲಿ ಹೋಗಿದ್ದಾರೆ. ಹಿಂದೂ ಸಮಾಜದ ಹೆಣ್ಣು ಮಗಳಿಗೆ ಅನ್ಯಾಯ ಆದಾಗ ಅನ್ಯಾಯ ಮಾಡಿದವನ್ನು ಯಾವನೇ ಆಗಿರಲಿ ಆತನಿಂದ ನ್ಯಾಯ ಒದಗಿಸಿ ಕೊಡಬೇಕಾಗಿರುವುದು ಇವರ ಧರ್ಮವಲ್ಲವೇ. ಆ ಹೆಣ್ಣು ಮಗಳ ತಾಯಿ ಬೀದಿಗೆ ಬಂದು ನ್ಯಾಯ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ ಇದಕ್ಕೆ ಯಾರು ಕಾರಣ? ದೂರದ ದೆಹಲಿಯಲ್ಲಿ ಅತ್ಯಾಚಾರ ಘಟನೆಗಳು ಆದಾಗ ಇಲ್ಲಿ ಆಕಾಶವೇ ಕಳಚಿ ಬಿದ್ದ ಹಾಗೆ ಮಾಡುವ, ಪ್ರತಿಭಟಿಸುವ ನಾಯಕರು ಇವಾಗ ಎಲ್ಲಿ ಹೋಗಿದ್ದಾರೆ. ಇದು ಹಿಂದೂ ಧರ್ಮಕ್ಕೆ ಮಾಡಿರುವ ದ್ರೋಹವಲ್ಲವೆ? ಪೊಲೀಸ್ ಇಲಾಖೆ ಕೂಡ ಅಪರಾಧಿಯನ್ನು ಬಂಧಿಸುವ ಬದಲು ಯಾರ ಮಾತನ್ನು ಕೇಳಿ ಕುಳಿತಿದೆ ಎನ್ನುವ ನೂರಾರು ಪ್ರಶ್ನೆಗಳು ಉದ್ಬವಿಸಿದೆ. ಕೂಡಲೇ ಆರೋಪಿಯನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಆ ಹೆಣ್ಣು ಮಗಳಿಗೆ ನ್ಯಾಯ ಒದಗಿಸಿಕೊಡಬೇಕೆಂದು ರಾಮಸೇನೆ ವತಿಯಿಂದ ಆಗ್ರಹಿಸುತ್ತಿದ್ದೇವೆ. ಇಲ್ಲದಿದ್ದರೆ ಸಮಾನ ಮನಸ್ಕರೊಂದಿಗೆ ಸೇರಿ ಪ್ರತಿಭಟನೆ ಮಾಡಲಿದ್ದೇವೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರಾಮಸೇನೆಯ ಕಡಬ ತಾಲೂಕು ಅಧ್ಯಕ್ಷ ಶಶಿಧರ ದೇವಸ್ಯ ಉಪಸ್ಥಿತರಿದ್ದರು.