ಪುತ್ತೂರು: ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಹಾರಾಡಿ ಇಲ್ಲಿನ ಈ ವರ್ಷದ ಶೈಕ್ಷಣಿಕ ಸಾಲಿನ ವಿವಿಧ ಕಲಾ ತರಗತಿಗಳ ಉದ್ಘಾಟನಾ ಕಾರ್ಯಕ್ರಮವು ಶಾಲಾ ಸಭಾಂಗಣದಲ್ಲಿ ನಡೆಯಿತು.
ಶಾಲಾ ಎಸ್ ಡಿಎಂಸಿ ಅಧ್ಯಕ್ಷರಾದ ಸುಲೋಚನಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಕಲೆ ಒಬ್ಬರ ಸೊತ್ತಲ್ಲ, ನಾವು ಕಲಿತರೆ ಕರಗತ ಮಾಡಿಕೊಳ್ಳಬಹುದು. ವಿದ್ಯಾರ್ಥಿಗಳು ಮುಂದೆ ಕಲಾವಿದರಾಗಿ ಬೆಳಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ವಿವಿಧ ಕಲಾ ಪ್ರಕಾರಗಳ ಗುರುಗಳು ಉಪಸ್ಥಿತರಿದ್ದರು. ಭರತ ನಾಟ್ಯ ಗುರುಗಳಾದ ವಿದುಷಿ ರಶ್ಮಿ ದಿಲೀಪ್ ಕುಮಾರ್, ಯಕ್ಷಗಾನ ಗುರುಗಳಾದ ಸುಬ್ಬು ಸಂಟ್ಯಾರು, ಸಂಗೀತ ಶಿಕ್ಷಕಿ ವಿದುಷಿ ನಂದಿನಿ ವಿನಾಯಕ್, ಚಿತ್ರ ಕಲಾವಿದ ಯೋಗೀಶ್ ಕಡಂದೇಲು, ಕರಾಟೆ ಗುರುಗಳಾದ ಶೇಖರ ಮಾಡಾವು ಅವರು ವಿದ್ಯಾರ್ಥಿಗಳಿಗೆ ಸಂದರ್ಭೋಚಿತ ಮಾತುಗಳ ಮೂಲಕ ಶುಭ ಹಾರೈಸಿದರು. ತದ ನಂತರ ವಿವಿಧ ತರಗತಿಗಳು ಆರಂಭಗೊಂಡವು.
ಮುಖ್ಯಗುರುಗಳಾದ ಕೆ.ಕೆ ಮಾಸ್ತರ್ ಅವರು ಪ್ರಾಸ್ತಾವಿಕ ನುಡಿಗಳೊಂದಿಗೆ ಕಲೆಗಳನ್ನು ಕಲಿಯುವ ಅಗತ್ಯತೆಯ ಬಗ್ಗೆ ಮಕ್ಕಳಿಗೆ ಮನವರಿಕೆ ಮಾಡಿ ಸ್ವಾಗತಿಸಿದರು. ಶಿಕ್ಷಕಿ ಧನ್ಯಕುಮಾರಿ ಅವರು ಕಾರ್ಯಕ್ರಮವನ್ನು ನಿರೂಪಿಸಿ ವಂದನಾರ್ಪಣೆ ಗೈದರು.