ಮರ್ದಾಳ: ಕಡಬ ತಾಲೂಕಿನ ಮರ್ದಾಳ ಪೇಟೆಯ ಪರಿಸರದ ರಸ್ತೆಗಳಲ್ಲಿ ಕಳೆದ ಕೆಲ ದಿನಗಳಿಂದ ಬೆಳಗ್ಗಿನಿಂದ ಸಂಜೆ ತನಕ ಆಡುಗಳು ಓಡಾಟ ಹೆಚ್ಚಾಗಿದ್ದು ವಾಹನ ಸವಾರರು ಆತಂಕದಲ್ಲೇ ಸವಾರಿ ಮಾಡಬೇಕಾದ ಪರಿಸ್ಥಿತಿ ಒದಗಿ ಬಂದಿದೆ.
ಕಳೆದ ಕೆಲ ದಿನಗಳಿಂದ 20ಕ್ಕೂ ಹೆಚ್ಚು ಆಡುಗಳು ಬೆಳಿಗ್ಗೆಯಿಂದ ಸಂಜೆ ತನಕವೂ ಮರ್ದಾಳ ಪೇಟೆಯ ಸುತ್ತ ರಾಜ್ಯ ಹೆದ್ದಾರಿಗಳಲ್ಲೇ ಸುತ್ತಾಡುತ್ತಿರುತ್ತವೆ. ಇದರಿಂದಾಗಿ ರಸ್ತೆಯಲ್ಲಿ ಸಂಚರಿಸುವ ಪಾದಚಾರಿಗಳು, ವಾಹನ ಸವಾರರು ಪರದಾಟ ನಡೆಸುವ ಪರಿಸ್ಥಿತಿ ಉಂಟಾಗಿದೆ. ದ್ವಿಚಕ್ರ ವಾಹನ ಸವಾರರಂತೂ ಇಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಟ ನಡೆಸುತ್ತಾರೆ. ಮರ್ದಾಳ ಪೇಟೆ ಸದಾ ವಾಹನಗಳ ದಟ್ಟಣೆಯಿಂದ ಕೂಡಿರುತ್ತದೆ. ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ಸಂಚಾರ ಮಾಡುವ ವಾಹನಗಳು ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯನ್ನು ಮರ್ದಾಳದಲ್ಲಿ ಸಂಪರ್ಕಿಸುತ್ತವೆ.
ದಿನದಲ್ಲಿ ಸಾವಿರಕ್ಕೂ ಮಿಕ್ಕಿ ವಾಹನಗಳು ಇಲ್ಲಿ ಓಡಾಟ ನಡೆಸುತ್ತವೆ. ಸದಾ ವಾಹನ ದಟ್ಟಣೆಯಿಂದ ಕೂಡಿರುವ ಇಲ್ಲಿ ಇತ್ತೀಚೆಗೆ ಆಡು, ಜಾನುವಾರುಗಳ ಓಡಾಟವೂ ಹೆಚ್ಚಾಗ ತೊಡಗಿವೆ. ಇಲ್ಲಿ ಆಡು, ಜಾನುವಾರುಗಳಿಗೆ ಡಿಕ್ಕಿಯಾಗಿ ಬೈಕ್ ಸವಾರರೂ ಬಿದ್ದು ಗಾಯಗೊಂಡಿರುವ ಘಟನೆಯೂ ನಡೆದಿದೆ. ಆದ್ದರಿಂದ ಆಡು ಸಾಕಾಣಿಕೆ ಮಾಡುವವರು ತಮ್ಮ ಆಡುಗಳನ್ನು ರಸ್ತೆಗೆ ಬಿಡುವ ಮುನ್ನ ಯೋಚನೆ ಮಾಡಬೇಕಾಗಿದೆ. ಅಪಾಯ ಸಂಭವಿಸುವ ಮುನ್ನ ಸಂಬಂಧಪಟ್ಟ ಇಲಾಖೆಯವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.